‘ಕೆಲವೇ ಸೆಕೆಂಡ್‌ಗಳಲ್ಲಿ ಎಲ್ಲವೂ ಮುಗಿದು ಹೋಯಿತು’: ಕರಾಳ ರಾತ್ರಿಯ ಅನುಭವ

Update: 2020-05-09 17:55 GMT

ಔರಂಗಾಬಾದ್: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ದುರಂತದಲ್ಲಿ ಉಳಿದುಕೊಂಡ ವಲಸೆ ಕಾರ್ಮಿಕರೊಬ್ಬರು, ತಮ್ಮ ಕಣ್ಣೆದುರಿಗೇ ಸಹವರ್ತಿಗಳು ಶವವಾದ ಭಯಾನಕ ಘಟನೆಯನ್ನು ವಿವರಿಸುವುದೂ ಅಸಾಧ್ಯ ಎಂದು ಹೇಳಿದ್ದಾರೆ.

16 ಮಂದಿ ಸಹಚರರ ಶವದೊಂದಿಗೆ ಮಧ್ಯಪ್ರದೇಶದಲ್ಲಿರುವ ತಮ್ಮ ಹುಟ್ಟೂರಿಗೆ ವಾಪಸ್ಸಾಗುತ್ತಿರವ ಶಿವಮಾನ್‌ಸಿಂಗ್, ಈ ದುರಂತದ ಬಳಿಕ ನಿದ್ದೆ ಬರುತ್ತಿಲ್ಲ. ಕಣ್ಣು ಮುಚ್ಚಿದರೆ ಆ ಭಯಾನಕ ದುರಂತದ ಚಿತ್ರಣವೇ ಕಣ್ಣಿಗೆ ಕಟ್ಟುತ್ತದೆ ಎಂದು ಹೇಳಿದರು.

ಶುಕ್ರವಾರ ಮುಂಜಾನೆ ಈ ದುರಂತ ಸಂಭವಿಸಿದ ಬಳಿಕ ಹಲವು ಘಟನೆಗಳಾಗಿವೆ. ನಾನು ಸಂಪೂರ್ಣ ಬಳಲಿದ್ದರೂ, ರಾತ್ರಿ ನಿದ್ದೆ ಬರುತ್ತಿಲ್ಲ. ಆ ಭಯಾನಕ ಘಟನೆಯ ಚಿತ್ರಗಳೇ ಚಿತ್ತಪಟದಲ್ಲಿ ತುಂಬಿವೆ. ನನ್ನ ಕಣ್ಣೆದುರೇ ಅನಾವರಣಗೊಂಡ ದುರಂತವನ್ನು ಮರೆಯಲು ಸಾಧ್ಯವಿಲ್ಲ

ರೈಲು ದುರಂತದ ಸುದ್ದಿ ತಿಳಿದ ತಕ್ಷಣ ಕುಟಂಬದವರು ನನಗೆ ಪದೇ ಪದೇ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಚಾರ್ಜ್ ಮುಗಿದಿದ್ದರಿಂದ ಫೋನ್ ಆಫ್ ಆಗಿತ್ತು. ಘಟನೆ ಬಳಿಕ ಅಧಿಕಾರಿಗಳಿಗೆ ಮೃತಪಟ್ಟವರನ್ನು ಗುರುತಿಸುವಲ್ಲಿ ಮತ್ತು ಪ್ರಶ್ನೆಗಳಿಗೆ ಉತ್ತರಿಸುವಲ್ಲೇ ನಿರತನಾಗಿದ್ದೆ ಎಂದು ವಿವರಿಸಿದರು.

ಔರಂಗಾಬಾದ್‌ನ ಪಕ್ಕದ ಜಲ್ನಾ ಜಿಲ್ಲೆಯ ಉಕ್ಕು ಸ್ಥಾವರವೊಂದರಲ್ಲಿ ಸಿಂಗ್ ಹಾಗೂ 19 ಮಂದಿ ಕಾರ್ಮಿಕರು ಉದ್ಯೋಗದಲ್ಲಿದ್ದರು. ಲಾಕ್‌ಡೌನ್ ಕಾರಣದಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಇವರು 36 ಕಿಲೋಮೀಟರ್ ನಡೆದು ಕರ್ಮಡ್ ಸಮೀಪ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದರು. ನಿದ್ದೆಯಲ್ಲಿದ್ದ ಇವರ ಮೇಲೆ ಸರಕು ಸಾಗಾಣಿಕೆ ರೈಲು ಹರಿದು 16 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ನಾಲ್ಕು ಮಂದಿ ಪಾರಾಗಿದ್ದರು.

ನನಗೆ ಕಾಲು ನೋವು ಇದ್ದುದರಿಂದ ಇತರರಿಗಿಂತ ನಿಧಾನವಾಗಿ ನಡೆಯುತ್ತಿದ್ದೆ. ಘಟನೆಯ ಸ್ಥಳಕ್ಕೆ ನಾವು ಬಂದಾಗ ಅಲ್ಲೇ ನಿದ್ದೆ ಮಾಡಲು ನಿರ್ಧರಿಸಿದೆವು. ನಾನು ಸ್ವಲ್ಪ ದೂರದಲ್ಲಿ ಮಲಗಿದ್ದೆ. ವೇಗವಾಗಿ ಬರುವ ರೈಲಿನ ಸದ್ದು ಕೇಳಿಸಿದಾಗ ಎಚ್ಚರವಾಯಿತು. ಕೂಗಿಕೊಳ್ಳಲು ಪ್ರಯತ್ನಿಸಿದೆ. ಆದರೆ ಕೆಲವೇ ಸೆಕೆಂಡ್‌ಗಳಲ್ಲಿ ಎಲ್ಲವೂ ಮುಗಿದು ಹೋಗಿತ್ತು

ತವರು ರಾಜ್ಯಕ್ಕೆ ಮರಳಲು ಪಾಸ್‌ಗಾಗಿ ನಾವು ಪ್ರಯತ್ನಿಸಿದ್ದೆವು. ಆದರೆ ಯಾವುದೇ ಪ್ರತಿಕ್ರಿಯೆ ಸಿಕ್ಕಲಿಲ್ಲ. ಪತ್ನಿ ಹಾಗೂ ಮಕ್ಕಳು ಊರಿನಲ್ಲಿದ್ದು, ಕಾಲ್ನಡಿಗೆಯಲ್ಲೇ ಊರಿಗೆ ಮರಳಲು ನಿರ್ಧರಿಸಿದೆವು ಎಂದು ಘಟನೆಯಲ್ಲಿ ಉಳಿದುಕೊಂಡ ವೀರೇಂದ್ರ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News