ಕೊರೋನ ರೋಗಿಯ ಪ್ರಾಣವುಳಿಸಲು ತನ್ನ ಪ್ರಾಣ ಒತ್ತೆ ಇಟ್ಟು ರಕ್ಷಾ ಕವಚ ತೆಗೆದ ವೈದ್ಯ ಡಾ. ಅಬ್ದುಲ್ ಮಜೀದ್
ಹೊಸದಿಲ್ಲಿ : ಕೋವಿಡ್-19 ರೋಗಿಯೊಬ್ಬರ ಪ್ರಾಣವುಳಿಸಲು ಯುವ ವೈದ್ಯರೊಬ್ಬರು ತಾನು ಧರಿಸಿದ್ದ ರಕ್ಷಾ ಕವಚವನ್ನು ತೆಗೆದ ಘಟನೆ ನಡೆದಿದೆ.
ದಿಲ್ಲಿಯ ಏಮ್ಸ್ ಟ್ರಾಮಾ ಸೆಂಟರಿಗೆ ಕೊರೋನ ಪೀಡಿತ ರೋಗಿಯೊಬ್ಬರನ್ನು ಸ್ಥಳಾಂತರಿಸುವ ವೇಳೆ ಶ್ವಾಸನಾಳಕ್ಕೆ ಸಿಕ್ಕಿಸಲಾಗಿದ್ದ ನಳಿಕೆ ಸರಿಯಾದ ಸ್ಥಾನದಲ್ಲಿರದೇ ಇದ್ದುದರಿಂದ ರೋಗಿಗೆ ಉಸಿರಾಟ ಕಷ್ಟವಾಗುತ್ತಿತ್ತು, ಪ್ರಾಣವು ಅಪಾಯದಲ್ಲಿತ್ತು. ಆದರೆ ರಕ್ಷಾ ಕವಚದಲ್ಲಿ ಕನ್ನಡಿ ಇದ್ದ ಕಾರಣ ರೋಗಿಯನ್ನು ನೋಡಲು ವೈದ್ಯರಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ವೈದ್ಯರು ತಮ್ಮ ಜೀವದ ಹಂಗು ತೊರೆದು ತಾವು ಧರಿಸಿದ್ದ ರಕ್ಷಾ ಕವಚವನ್ನು ತೆಗೆದು ನಂತರ ರೋಗಿಯ ನಳಿಕೆಯನ್ನು ಸರಿಯಾಗಿ ಸಿಕ್ಕಿಸಿದ್ದಾರೆ.
ರೋಗಿಯ ಪ್ರಾಣವುಳಿಸಲು ಈ ಕೆಲಸ ಮಾಡಿದ ವೈದ್ಯ ಝಾಹಿದ್ ಅಬ್ದುಲ್ ಮಜೀದ್ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಡುವೆ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭ ರಕ್ಷಾ ಕವಚ ಕನ್ನಡಕ ತೆಗೆದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ವೈದ್ಯರನ್ನು ಇದೀಗ ಕ್ವಾರಂಟೈನ್‍ನಲ್ಲಿರಲು ಸೂಚಿಸಲಾಗಿದೆ.
ವೈದ್ಯ ಮಜೀದ್ ಗುರುವಾರ ತಮ್ಮ ರಮಝಾನ್ ಉಪವಾಸವನ್ನು ಇನ್ನೇನು ಅಂತ್ಯಗೊಳಿಸಬೇಕು ಎನ್ನುವಷ್ಟರಲ್ಲಿ ಕೋವಿಡ್-19 ರೋಗಿಯನ್ನು ಏಮ್ಸ್ ಆಸ್ಪತ್ರೆಯ ಮುಖ್ಯ ಕಟ್ಟಡದಿಂದ ಕೋವಿಡ್-19 ರೋಗಿಗಳಿಗೆಂದೇ ಮೀಸಲಾದ ಟ್ರಾಮಾ ಸೆಂಟರ್‍ಗೆ ವರ್ಗಾಯಿಸುವಂತೆ ಅವರಿಗೆ ಸೂಚಿಸಲಾಗಿತ್ತು. ಡಾ. ಮಜೀದ್ ಅವರು ಆ್ಯಂಬುಲೆನ್ಸ್ ಹತ್ತಿರ ಬಂದಾಗ ರೋಗಿಯ ನಳಿಕೆ ಸ್ವಸ್ಥಾನದಲ್ಲಿಲ್ಲ ಎಂದು ತಿಳಿದು ಮೇಲೆ ತಿಳಿಸಿದ ಅವರು ರಕ್ಷಣಾ ಕವಚ ತೆಗೆದಿದ್ದರು.
“ನಾನೀಗ ನನ್ನ ಕೋವಿಡ್-19 ವರದಿಗಾಗಿ ಕಾಯುತ್ತಿದ್ದೇನೆ. ವರದಿ ನೆಗೆಟಿವ್ ಆದರೆ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತೇನೆ, ಇಲ್ಲದೇ ಇದ್ದರೆ 14 ದಿನ ಕ್ವಾರಂಟೈನ್‍ನಲ್ಲಿರುತ್ತೇನೆ” ಎಂದು ಡಾ ಮಜೀದ್ ಹೇಳಿದ್ದಾರೆ.
ರೋಗಿಯ ಜೀವ ರಕ್ಷಿಸಲು ಡಾ. ಮಜೀದ್ ಮಾಡಿದ ಕಾರ್ಯವನ್ನು ಏಮ್ಸ್ ವೈದ್ಯರು ಹಾಗೂ ರೆಸಿಡೆಂಟ್ ವೈದ್ಯರ ಸಂಘ ಕೊಂಡಾಡಿದೆ.