ಅವಲಕ್ಕಿಯ ‘‘ಮಡಿ ಮತ್ತು ಬಿಳಿ’’ ಅವಾಂತರಗಳು

Update: 2020-05-12 05:17 GMT

ದಪ್ಪ, ಸಣ್ಣ, ಉದ್ದ, ಗಿಡ್ಡ ಎನ್ನುವ ಗಾತ್ರ, ರುಚಿ ಮತ್ತು ವಾಸನೆಯ ಆಧಾರದ ಮೇಲೆ ಹಲವು ಬಗೆಯ ಅಕ್ಕಿಗಳು ಜಗತ್ತಿನ ಹಲವೆಡೆ ನಮಗೆ ಸಿಗುತ್ತವೆ. ಅದರಲ್ಲೂ ಪೂರ್ವ ದೇಶಗಳಲ್ಲಿ ಭತ್ತ ಮುಖ್ಯವಾದ ಜೊತೆಗೆ ವೈವಿಧ್ಯಪೂರ್ಣವಾದ ಆಹಾರ ಬೆಳೆ. ಅಕ್ಕಿಯ ರೊಟ್ಟಿ, ವಿವಿಧ ಬಗೆಯ ಅನ್ನ, ವೈನು, ನೂಡಲ್ಸ್, ಶಾವಿಗೆ, ಹಬೆಯಲ್ಲಿ ಬೇಯಿಸಿದ ಕೇಕುಗಳು (ಇಡ್ಲಿ ತೆರೆನಾದವು) ಸಾವಿರಾರು ಬಗೆಯ ಆಹಾರ ಪದಾರ್ಥಗಳನ್ನು ಭಾರತ ಸೇರಿದಂತೆ ಪೂರ್ವದೇಶಗಳಲ್ಲಿ ದಿನನಿತ್ಯವೂ ಆಹಾರಕ್ಕಾಗಿ ಶತಮಾನಗಳಿಂದ ಬಳಸಲಾಗುತ್ತಿದೆ. ಬೆಳೆಯ ವೈವಿಧ್ಯತೆಯಂತೆಯೇ ಅದರಲ್ಲಿ ತಯಾರಿಸುವ ಆಹಾರವೂ ವೈವಿಧ್ಯಪೂರ್ಣವಾಗಿದೆ. ದಿನ ಕಳೆದಂತೆ ಇಂತಹ ಪದಾರ್ಥಗಳಲ್ಲಿ ಹೊಸ ಬಗೆಯ ಅನ್ವೇಷಣೆಗಳು, ರುಚಿಗಳು ಮತ್ತು ಪರಸ್ಪರ ಕಸಿ ಮಾಡಿದ ಆಹಾರ ಕ್ರಮಗಳು ಸುದ್ದಿಯಾಗುತ್ತಲೇ ಇರುತ್ತವೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಬಳಸುವ ಆಹಾರ ವಸ್ತು ಅಕ್ಕಿಯೇ ಆಗಿದೆ. ಆದರೆ ಭತ್ತವಾಗಿರುವ ಹೊತ್ತಿನಲ್ಲೇ ಅದನ್ನು ಪಳಗಿಸಿ ಸಂಸ್ಕರಿಸಿ ಅಕ್ಕಿ ಬದಲು ಅವಲಕ್ಕಿ, ಮಂಡಕ್ಕಿ ತಯಾರಿಸಿದವರಲ್ಲಿ ನಾವೇ ಮೊದಲಿಗರು ಮತ್ತು ಇವತ್ತಿಗೂ ಹೆಚ್ಚು ಬಳಸುತ್ತಿರುವವರು. ಅವಲಕ್ಕಿ ಹಳೆಯ ಕಾಲದ ಒಂದು ಫಾಸ್ಟ್ ಫುಡ್ ಆಗಿದೆ. ದಿಢೀರನೆ ಅಡುಗೆ ಮಾಡಬೇಕಾದ ಪರಿಸ್ಥಿತಿ ಒದಗಿ ಬಂದರೆ ಮೊದಲು ಸಹಾಯಕ್ಕೆ ಬರುವುದೇ ಅವಲಕ್ಕಿ. ಒಂದೈದು ನಿಮಿಷ ನೀರಿನಲ್ಲಿ ನೆನೆಸಿ ತೊಳೆದು ಒಗ್ಗರಣೆ ಕೊಟ್ಟು ಉಪ್ಪು ಹಾಕಿ ಬಿಟ್ಟರೆ ಮುಗಿಯಿತು, ಆ ಕ್ಷಣದ ಹಸಿವಿಗೆ ತಿಂಡಿ ಸಿದ್ಧ್ದ. ಬರಿ ಇಂತಹ ತುರ್ತು ಪರಿಸ್ಥಿತಿಯ ಅಡುಗೆ ಅಂತ ಮಾತ್ರವಲ್ಲ, ನಾವು ಬಳಸಿದಂತೆಲ್ಲ ಅದರ ಬಳಕೆ ಹೆಚ್ಚುತ್ತಲೇ ಹೋಗುತ್ತದೆ. ಇವತ್ತು ಬಹುತೇಕ ಬೆಳಗಿನ ತಿಂಡಿಯ ಪಟ್ಟಿಗಳಲ್ಲಿ ಅವಲಕ್ಕಿಯ ಅಡುಗೆ ಇದ್ದೇ ಇರುತ್ತದೆ. ಮೊಸರು ಜೊತೆಗೆ ಉಪ್ಪು ಅಥವಾ ಸಕ್ಕರೆ ಬೆರೆಸಿ ಅವಲಕ್ಕಿ ಜೊತೆಗೆ ಕಲಸಿ ತಿನ್ನುವ ಮೊಸರು ಅವಲಕ್ಕಿ, ಪುಳಿಯೋಗರೆ ಅಂದದ ಗೊಜ್ಜವಲಕ್ಕಿ/ ಕುಟ್ಟವಲಕ್ಕಿ, ಜನಪ್ರಿಯವಾದ ಅವಲಕ್ಕಿ ಚಿತ್ರಾನ್ನ, ಬಾಳೆಹಣ್ಣಿನ ಅವಲಕ್ಕಿ ರಸಾಯನ, ಖಾರ ಅವಲಕ್ಕಿ ಸೇವ್ , ಅವಲಕ್ಕಿ ವಡೆ ಹೀಗೆ ಹಲವು ತಿನಿಸುಗಳ ಪಟ್ಟಿಯೇ ಸಿದ್ಧವಾಗುತ್ತದೆ. ಆದರೆ ಇಲ್ಲೊಂದು ಅವಾಂತರ ಸೃಷ್ಟಿಯಾಗಿಬಿಟ್ಟಿದೆ. ಅವಲಕ್ಕಿಯನ್ನು ಜನ ‘‘ಬ್ರಾಹ್ಮಣರ ಮಡಿ’’ ಆಹಾರವಾಗಿ ಪರಿವರ್ತಿಸಿಬಿಟ್ಟಿದ್ದಾರೆ. ಉಪವಾಸ, ವ್ರತ, ಹಬ್ಬ ಹರಿದಿನಗಳಲ್ಲಿ ಕಡ್ಡಾಯವಾಗಿ ಅವಲಕ್ಕಿಯ ಅಡುಗೆ ಇರುತ್ತದೆ ಮತ್ತು ಹೆಚ್ಚಾಗಿ ಇದನ್ನು ಸಸ್ಯಹಾರಿಗಳು ಮಾತ್ರ ಬಳಸುತ್ತಾರೆ ಎಂಬ ಅಪನಂಬಿಕೆಗಳು ಜನರ ಮನಸ್ಸೊಳಗೆ ಗುಪ್ತಗಾಮಿನಿಯಾಗಿ ಸೇರಿಕೊಂಡಿವೆ. ಅವಲಕ್ಕಿಗೆ ಅಪ್ಪಿತಪ್ಪಿಯೂ ಮಾಂಸ, ಮೊಟ್ಟೆ ಬೆರೆಸುವುದಿಲ್ಲ. ( ಇದಕ್ಕೆ ಅಪವಾದವೆಂಬಂತೆ ಮಹಾರಾಷ್ಟ್ರದ ಕಡೆ ಎಗ್ ಪೋಹ ಮಾಡುತ್ತಾರೆ, ಎಗ್ ಫ್ರೈಡ್ ರೈಸ್ ತರಹ ) ಹಾಗೆ ಮಾಂಸದಡುಗೆ ಮಾಡುವ ವಿಧಾನಗಳೂ ಚಾಲ್ತಿಯಲ್ಲಿಲ್ಲ. ಹೋಗಲಿ, ಮಾಡುವ ಧೈರ್ಯವನ್ನು ಯಾರೂ ತೋರುವುದಿಲ್ಲ. ಸಂಪ್ರದಾಯ ಶರಣತೆ ಮತ್ತು ಅಪನಂಬಿಕೆಗಳು ಉಪಖಂಡದ ಆಹಾರ ವಿಚಾರಗಳಲ್ಲಿ ಎಸಗಿರುವ ಘೋರ ಅಪರಾಧಗಳನ್ನು ಪ್ರಪಂಚದ ಬೇರೆ ಎಲ್ಲಿಯೂ ನಾವು ಕಾಣಲು ಸಾಧ್ಯವಿಲ್ಲವೇನೋ. ಅವಲಕ್ಕಿ ಮತ್ತು ಮಂಡಕ್ಕಿಗಳನ್ನೂ ಪಾರಂಪರಿಕವಾಗಿ ಹಳ್ಳಿಯ ಅಕ್ಕಿಗಿರಣಿಗಳ ತೆರನಾದ ‘ಭಟ್ಟಿ ಅಥವಾ ಮಂಡಿ’ಗಳಲ್ಲಿ ತಯಾರಿಸಲಾಗುತ್ತಿತ್ತು. ಇವುಗಳ ಬೇಡಿಕೆ ಮತ್ತು ಬಳಕೆ ಹೆಚ್ಚಿದಂತೆ ಇವಾಗ ಇದಕ್ಕಾಗಿಯೇ ಪ್ರತ್ಯೇಕ ಅಧುನಿಕ ಗಿರಣಿಗಳು, ಅದಕ್ಕಾಗಿ ಯಂತ್ರಗಳು ಎಲ್ಲವೂ ಹುಟ್ಟಿಕೊಂಡಿವೆ. ಟನ್ನು ಗಟ್ಟಲೆ ಅವಲಕ್ಕಿಯನ್ನು ಸಿದ್ಧಪಡಿಸಿ ಪ್ಯಾಕ್ ಮಾಡಿ ಸರಬರಾಜು ಮಾಡುತ್ತವೆ. ನಿಗದಿತ ಪ್ರಮಾಣದ ಒಳ್ಳೆಯ ಭತ್ತವನ್ನು ಆರಿಸಿಕೊಂಡು 16 ರಿಂದ 18 ಗಂಟೆಗಳ ಕಾಲ ಅದನ್ನು ನೀರಿನಲ್ಲಿ ನೆನೆಸಿ ನಂತರ ಬಿಸಿ ಮರಳಿನಲ್ಲಿ ಹುರಿಯಲಾಗುತ್ತದೆ. ಹುರಿದ ನಂತರ ಅದನ್ನು ತಿರುಗುವ ಒತ್ತು ಕಲ್ಲಿಗೆ ಹಾಕಿ ಅದುಮಿ ಅಕ್ಕಿ ಕಾಳನ್ನು ಚಪ್ಪಟೆಯ ರೂಪಕ್ಕೆ ತರಲಾಗುತ್ತದೆ. ಈಗಾಗಲೇ ನೆನೆಸಿ, ಹುರಿದು, ತಿರುಗಿಸಿ, ಚಪ್ಪಟೆಯಾಗಿಸಿದ ಕಾರಣ ಸಿದ್ಧ ಆಹಾರದ ಸ್ಥಿತಿಯಲ್ಲಿ ಅವಲಕ್ಕಿ ಚೀಲ, ಪೊಟ್ಟಣಗಳಲ್ಲಿ ಪ್ಯಾಕ್ ಆಗುತ್ತದೆ. ಪಾರಂಪರಿಕವಾದ ವಿಧಾನದಲ್ಲಿ ಅವಲಕ್ಕಿಯ ಬಣ್ಣ ಬದಲಾಗುವುದಿಲ್ಲ. ಅಕ್ಕಿಯ ಬಣ್ಣವೆನಿತ್ತೋ ಅದೇ ಬಣ್ಣ ಅವಲಕ್ಕಿಗೂ ಇರುತ್ತದೆ. ಆದರೆ ಹೊಸಕಾಲದ ಜನರ ಬೇಡಿಕೆ ಹೆಚ್ಚು ಬಿಳಿಯ ಬಣ್ಣದ ಅವಲಕ್ಕಿಗೆ. ಅಂತಹದ್ದು ಶುದ್ಧ್ದವಾಗಿರುತ್ತದೆ ಮತ್ತು ರುಚಿಯಾಗಿರುತ್ತದೆ ಎಂಬ ಅಪನಂಬಿಕೆ. ಇಲ್ಲಿಯೇ ಆಹಾರ ಪದಾರ್ಥ ಕೆಡಲು ಶುರುವಾಗುವುದು. ಪಾರಂಪರಿಕ ವಿಧಾನದ ಅವಲಕ್ಕಿಗೆ ಏನನ್ನ್ನೂ ಬೆರಸಲಾಗುವುದಿಲ್ಲ ಮತ್ತು ಅದರ ಆಕಾರವು ಬದಲಾಗುವುದಿಲ್ಲ. ಆದರೆ ಬಿಳಿ ಅವಲಕ್ಕಿಗೆ ಬಣ್ಣವನ್ನು ಸೇರಿಸಲಾಗುತ್ತದೆ, ಅದರ ಆಕಾರ ಕೂಡ ತೆಳುವಾಗಿ ಪುಡಿ ಪುಡಿಯಾಗಿ ಬರುತ್ತದೆ. ಇದನ್ನು ಹೆಚ್ಚು ಕಳಪೆ ಅಕ್ಕಿಯಿಂದ ತಯಾರಿಸಿರುತ್ತಾರೆ. ನಮ್ಮ ಮೋಹವು ಆರೋಗ್ಯಕ್ಕಿಂತಲೂ ಬಿಳಿಯ ಬಣ್ಣಕ್ಕೆ ಮೀಸಲಾಗಿರುವುದರಿಂದ ಹೆಚ್ಚು ಮಾರಾಟ ‘ಬಿಳಿ ಅವಲಕ್ಕಿ’ ಯದೇ ಆಗಿದೆ. ಕರ್ನಾಟಕದಲ್ಲಿ ಅವಲಕ್ಕಿಯ ಬಳಕೆ ಅಷ್ಟಕ್ಕಷ್ಟೇ. ಇದಕ್ಕೆ ಹೋಲಿಸಿದರೆ ಮಂಡಕ್ಕಿಯ ಬಳಕೆಯೇ ವಿಪರೀತವಾಗಿದೆ. ಉತ್ತರ ಕರ್ನಾಟಕದ ಕಡೆಗೆ ಒಗ್ಗರಣೆ ಮಂಡಕ್ಕಿ-ಮಿರ್ಚಿ, ಸೂಸಲ ಪ್ರಸಿದ್ಧವಾದರೆ ದಕ್ಷಿಣ ಕರ್ನಾಟಕದಲ್ಲಿ ಕಡ್ಲೆಪುರಿಯೇ (ಮಂಡಕ್ಕಿ) ಹಳ್ಳಿ, ನಗರ, ಜಾತಿ, ಧರ್ಮಗಳನ್ನು ಮೀರಿ ಜನಪ್ರಿಯವಾದ ತಿನಿಸು. ಮೊದಲೇ ಹೇಳಿದಂತೆ ದೇವಸ್ಥಾನಗಳಲ್ಲಿ, ಮಡಿವಂತರ ಮನೆಗಳಲ್ಲಿ ಮಾತ್ರ ಅವಲಕ್ಕಿ ಹೆಚ್ಚು ಕಾಣಿಸುತ್ತಿತ್ತು. ಆಹಾರ ಪದಾರ್ಥಗಳ ವ್ಯಾಪಾರೀಕರಣ ಬಹುಬಗೆಯಾಗಿ ನಡೆಯುತ್ತಿರುವ ಕಾರಣ ಅವುಗಳ ಲಭ್ಯತೆ, ಬಳಕೆ ಈಗ ಸಾಮಾನ್ಯವಾಗಿ ಬಿಟ್ಟಿದೆ. ನಾನಾ ಕಾರಣಗಳ ದೆಸೆಯಿಂದ ಅವಲಕ್ಕಿ ದಿನನಿತ್ಯದ ಆಹಾರದ ಜೊತೆಗೆ ಸೇರಿಕೊಂಡಿದೆ. ಆರೋಗ್ಯಕರವಾದ ಅವಲಕ್ಕಿಯನ್ನು ಆರಿಸಿಕೊಂಡು ಆಹಾರಕ್ಕೆ ಬಳಸುವುದು ಒಳ್ಳೆಯದು. ಮಡಿ ಮತ್ತು ಬಿಳಿ ಬಣ್ಣದ ಅವಾಂತರಗಳಿಂದ ಅವಲಕ್ಕಿಯನ್ನು ಬಿಡಿಸಿಕೊಂಡು ಹೊಸ ಹೊಸ ರೀತಿಯ ಆಹಾರ ಪದಾರ್ಥಗಳ ಬಳಕೆ ಮಾಡಲು ರೂಢಿ ಮಾಡಿಕೊಳ್ಳಬೇಕು. ಕಳೆದ ಐದಾರು ವರ್ಷಗಳಿಂದ ನಾನು ಚಿಕನ್ ಅವಲಕ್ಕಿ, ಮೊಟ್ಟೆ ಅವಲಕ್ಕಿ, ಅಣಬೆ ಅವಲಕ್ಕಿ ತರಹದ ಹೊಸ ಪ್ರಯೋಗಗಳನ್ನು ಮಾಡಿದ್ದೆ. 1. ಚಿಕನ್ ಪುಲಾವ್ ಮಸಾಲೆ ಸಿದ್ಧಪಡಿಸಿ ಮಾಂಸ ಮತ್ತು ಕಡಿಮೆ ಮಸಾಲೆ ಬೇಯಿಸಿಕೊಂಡು ಅದಕ್ಕೆ ನೆನೆಸಿದ ಅವಲಕ್ಕಿ ಬೆರೆಸಿ ಐದು ನಿಮಿಷ ಧಮ್ ಕಟ್ಟಿ ಬೇಯಿಸಿದರೆ ಸಾಕು ಒಳ್ಳೆಯ ಚಿಕನ್ ಅವಲಕ್ಕಿ ಪುಲಾವ್ ಆಗುತ್ತದೆ. ಅಕ್ಕಿ ಬೇಯಲು ತಗಲುವ ಸಮಯ ಉಳಿಯುತ್ತದೆ. ಮತ್ತು ಪುಲಾವ್ ಕೂಡ ಅಗುಳು ಅಗುಳಾಗಿ ಬರುತ್ತದೆ. ಹೊಸ ರೀತಿಯ ನೋಟ ಮತ್ತು ರುಚಿ ಒದಗಿಸುತ್ತದೆ. 2. ಅಣಬೆಯನ್ನು ಎಣ್ಣೆಯಲ್ಲಿ ಹುರಿದು ಅದಕ್ಕೆ ಚೂರು ಕರಿಮೆಣಸಿನ ಪುಡಿ ಅಥವಾ ಉಪ್ಸಾರಿನ ಖಾರ, ಕೆಲವು ಲಭ್ಯ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಬಾಡಿಸಿ, ಕಡೆಯಲ್ಲಿ ತೊಳೆದು ನೆನೆಸಿದ ಅವಲಕ್ಕಿ ಕಲಸಿ ಒಂದೈದು ನಿಮಿಷ ಬಾಡಿಸಿದರೆ ರುಚಿ ರುಚಿಯಾದ ಅಣಬೆ ಅವಲಕ್ಕಿ ಸಿದ್ಧ್ದ. ಅದಕ್ಕೆ ಚೂರು ನಿಂಬೆ ಹುಳಿಹಿಂಡಿ ತಿನ್ನಬಹುದು. 3.ಚಿತ್ರಾನ್ನದ ಗೊಜ್ಜು ಮಾಡಿ ಅದಕ್ಕೆ ಬಯಲುಸೀಮೆಯಲ್ಲಿ ಸಿಗುವ ಸಿಹಿನೀರಿನ ಸಣ್ಣ ಸಿಗಡಿಗಳನ್ನು ಹುರಿದು ಸೇರಿಸಿ ಅವಲಕ್ಕಿಯ ಜೊತೆಗೆ ಬಾಡಿಸಿದರೆ ಸಿಗಡಿ ಅವಲಕ್ಕಿ ಸಿದ್ದ. 4. ಕುರಿ ಮಾಂಸವನ್ನು ಸಣ್ಣಗೆ ತುಂಡು ಮಾಡಿಕೊಂಡು ಅರಿಶಿಣ, ಉಪ್ಪು, ಈರುಳ್ಳಿ, ಬೆಳ್ಳುಳ್ಳಿ, ಕರಿಮೆಣಸಿನ ಪುಡಿಯಲ್ಲಿ ಚೆನ್ನಾಗಿ ಹುರಿದು ಕೊನೆಯಲ್ಲಿ ಅವಲಕ್ಕಿ ಸೇರಿಸಿ ಬಾಡಿಸಿ ಕೊತ್ತಂಬರಿ ಸೊಪ್ಪುಹಾಕಿದರೆ ಮಟನ್ ಫ್ರೈಡ್ ಅವಲಕ್ಕಿ ತಿನ್ನಬಹುದು.

5. ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಮೆಣಸಿನಪುಡಿ, ಉಪ್ಪು, ಕೊತ್ತಂಬರಿಸೊಪ್ಪು ಮತ್ತು ಮೊಟ್ಟೆಯನ್ನು ಒಡೆದು ಹಾಕಿ ಆಮ್ಲೆಟ್ ಹದಕ್ಕೆ ಕಲಸಿಕೊಳ್ಳಿ. ಅದಕ್ಕೆ ನೆನೆಸಿದ ಅವಲಕ್ಕಿ ಸೇರಿಸಿ. ತವಾದ ಮೇಲೆ ರೊಟ್ಟಿಯ ಹಾಗೆ ಬಳಿದು ಕೆಂದಾಗುವವರೆಗೆ ಬೇಯಿಸಬೇಕು. ನಂತರ ಬಡಿಸಿಕೊಂಡು ತಿನ್ನಿರಿ. ಈ ತರಹದ ಆಮ್ಲೆಟ್ ನೇಪಾಳದಲ್ಲಿ ಬಳಕೆಯಲ್ಲಿದೆ.

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News