ವಲಸೆ ಕಾರ್ಮಿಕರ ಕುರಿತ ನಿರ್ಲಕ್ಷ್ಯ ವಿರೋಧಿಸಿ ರಾಜ್ ಘಾಟ್ ನಲ್ಲಿ ಅಮರಣಾಂತ ಉಪವಾಸ ಕುಳಿತ ಪ್ರವೀಣ್ ಕಾಶಿ

Update: 2020-05-12 08:03 GMT
ಫೋಟೊ : thewire.in

ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್‌ಡೌನ್‌ನಿಂದ ವಲಸೆ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದ್ದು, ದೇಶದ ವಿವಿಧೆಡೆಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಹಲವು ಕಡೆಗಳಲ್ಲಿ ಸಾಕಷ್ಟು ಆಹಾರ ಕೂಡಾ ಸಿಗುತ್ತಿಲ್ಲ; ಎಷ್ಟೋ ಕಡೆಗಳಲ್ಲಿ ಅಪಾಯಕಾರಿ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹಲವು ಮಂದಿ ಉದ್ಯೋಗವಿಲ್ಲದೇ ಹತಾಶರಾಗಿ ಹುಟ್ಟೂರಿಗೆ ಕಾಲ್ನಡಿಗೆಯಲ್ಲಿ ತೆರಳುವ ಪ್ರಯತ್ನದಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರ ಭವಿಷ್ಯದ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಆಪಾದಿಸಿ ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಕಾಶಿ ಹೊಸದಿಲ್ಲಿಯ ರಾಜ್ ಘಾಟ್ ನಲ್ಲಿ ಗಾಂಧಿಸ್ಮಾರಕದ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಕಾರ್ಮಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಸೇರಿದಂತೆ ಸುರಕ್ಷಾ ಸಾಧನಗಳನ್ನು ವಿತರಿಸಬೇಕು, ಸಾಕಷ್ಟು ದಿನಸಿ ಮತ್ತು ಆಹಾರ ಪೂರೈಕೆ ಮಾಡಬೇಕು ಮತ್ತು ನಿರುದ್ಯೋಗಿಗಳಾಗಿರುವವರಿಗೆ ದಿನಕ್ಕೆ 250 ರೂ. ಪರಿಹಾರ ನೀಡಬೇಕು ಎಂಬ ಮೂರು ಬೇಡಿಕೆ ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ವಲಸೆ ಕಾರ್ಮಿಕರು ಏಕೆ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣ ಬೆಳೆಸುತ್ತಿದ್ದಾರೆ ? ಏಕೆಂದರೆ ಅವರಿಗೆ ಸಾಕಷ್ಟು ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಎಂದು ದ ವೈರ್ ಜತೆ ಮಾತನಾಡಿದ ಕಾಶಿ ಹೇಳಿದರು. ಸಾಂಕ್ರಾಮಿಕದಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸಿದ್ದು, ಈ ಮಂದಿಗೆ ಆಹಾರ, ಆರೋಗ್ಯ ಸೌಲಭ್ಯ ಕೂಡಾ ಇಲ್ಲ ಎಂದು ವಿವರಿಸಿದರು.

ಲಕ್ಷಾಂತರ ಮಂದಿ ಬೀದಿಗೆ ಬಿದ್ದಿದ್ದಾರೆ. ಪುಟ್ಟ ಮಕ್ಕಳ ಜತೆ ಖಾಲಿ ಹೊಟ್ಟೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ. ಅವರ ಕೂಗು ಏಕೆ ಸರ್ಕಾರಗಳಿಗೆ ಕೇಳಿಸುತ್ತಿಲ್ಲ ? ದೇಶದಲ್ಲಿ ಇತರ ಎಷ್ಟೋ ಮಂದಿಗೆ ಸಾಕಷ್ಟು ಆಹಾರ ಹಾಗೂ ಸಂಪತ್ತು ಇದೆ. ಆದರೆ ಜೀವನ ಸಾಗಿಸಲು ದೈನಂದಿನ ಗಳಿಕೆಯೇ ಆಧಾರವಾಗಿರುವ ಇವರ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ ಎನ್ನುವುದು ಅವರ ಪ್ರಶ್ನೆ.

ಈ ವರದಿ ಪ್ರಕಟವಾದ ತಕ್ಷಣ ದರ್ಯಾಗಂಜ್ ಠಾಣೆ ಪೊಲೀಸರು ರಾಜ್ ಘಾಟ್ಗೆ ತೆರಳಿ ಕಾಶಿಯನ್ನು ವಶಕ್ಕೆ ಪಡೆದು, ಪ್ರತಿಭಟನೆ ನಡೆಸಲು ಅವರಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಆದರೆ ತಮ್ಮ ನಿರ್ಧಾರ ಅಚಲ; ವಲಸೆ ಕಾರ್ಮಿಕರಿಗೆ ಅರ್ಹವಾಗಿ ಸಲ್ಲಬೇಕಾದ ಸೌಲಭ್ಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News