ಕಾರ್ಯಕ್ರಮದಲ್ಲಿ ಸತತ ಸೀನಿದ ಸಚಿವ: ಕೊರೋನ ಪರೀಕ್ಷೆ ನಡೆಸಿ ಎಂದ ಟ್ವಿಟರಿಗರು !

Update: 2020-05-12 11:39 GMT

ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ ಕಾರ್ಯಾಧ್ಯಕ್ಷ, ರಾಜ್ಯ ಐಟಿ ಸಚಿವ ಹಾಗೂ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ಕೆ ಟಿ ರಾಮ ರಾವ್ ಸೋಮವಾರ ರಾಜನ್ನ-ಸಿರಿಸಿಲ್ಲಾ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಸತತ ಸೀನುತ್ತಿದ್ದುದು ಹಲವರ ಗಮನ ಸೆಳೆದಿದೆ. ತಮ್ಮ ಕೈಯಲ್ಲಿದ್ದ ಕರವಸ್ತ್ರ ಅಡ್ಡ ಹಿಡಿದು ಅವರು ಆಗಾಗ ಸೀನುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಜಿಲ್ಲೆಯಲ್ಲಿ ಸರಣಿ ಕಾರ್ಯಕ್ರಮಗಳು ಹಾಗೂ ಅಧಿಕಾರಿಗಳ ಜತೆ ಸಂವಹನ ನಡೆಸಿದ್ದ ಸಚಿವರು ಎಂದಿನಂತಿರಲಿಲ್ಲ. ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳೂ ಹೆಚ್ಚುತ್ತಿರುವುದರಿಂದ ಸಚಿವರ ಆರೋಗ್ಯದ ಕುರಿತೂ ಹಲವು ಜನರು ವಿಚಾರಿಸಲಾರಂಭಿಸಿದ್ದರು.

ನಿಯಮದಂತೆ ಸಚಿವರು ಹತ್ತಿರದ ಆಸ್ಪತ್ರೆಗೆ ಹೋಗಿ ಕೋವಿಡ್-19 ಪರೀಕ್ಷೆಗೊಳಗಾಗಬೇಕೆಂಬ ಸಲಹೆಯನ್ನೂ ಹಲವರು ನೀಡಿದ್ದಾರೆ. ತಮ್ಮ ಬಗೆಗಿನ ಟ್ವೀಟ್‍ಗಳನ್ನು ಗಮನಿಸಿದ ಕೆ ಟಿ ರಾಮರಾವ್ ಟ್ವೀಟ್ ಮಾಡಿ “ನಿಮ್ಮ ಕಾಳಜಿಗೆ ಧನ್ಯವಾದಗಳು. ನಾನು ಈಗ ಚೆನ್ನಾಗಿದ್ದೇನೆ. ಸಿರಿಸಿಲ್ಲಾಗೆ ಹೋಗುವಾಗ ಅಲರ್ಜಿಕ್ ಶೀತ (ಹಲವು ವರ್ಷಗಳಿಂದ ಈ ಸಮಸ್ಯೆ ಇದೆ) ಬಳಲಿದ್ದೇನೆ. ನನ್ನ ಭೇಟಿ ರದ್ದುಗೊಳಿಸಿದರೆ ಹಲವರಿಗೆ ಅನಾನುಕೂಲವಾಗಬಹುದೆಂದು ಕಾರ್ಯಕ್ರಮ ಮುಂದುವರಿಸಿದೆ. ನಾನು ತಿಳಿಯದೆಯೇ ಯಾರಿಗಾದರೂ ತೊಂದರೆ ಉಂಟು ಮಾಡಿದ್ದರೆ ಕ್ಷಮೆಯಿರಲಿ” ಎಂದು ಉತ್ತರಿಸಿದ್ದಾರೆ.

ತಮ್ಮ ತವರು ಕ್ಷೇತ್ರದಲ್ಲಿರುವ ಸಿರಿಸಿಲ್ಲಾದ ತಂಗಲ್ಲಪಳ್ಳಿ ಬ್ಲಾಕ್‍ನಲ್ಲಿ ಸಚಿವರು ಸೋಮವಾರ ಸೆಂಟ್ರಲ್ ಲೈಟಿಂಗ್ ವ್ಯವಸ್ಥೆ, ಆಡಳಿತ ಕಚೇರಿ ಕಟ್ಟಡ, ಕ್ಯಾಂಟೀನ್, ಹೊಲಿಗೆ ತರಬೇತಿ ಕೇಂದ್ರ ಹಾಗೂ ಟೆಕ್ಸ್‍ಟೈಲ್ ಪಾರ್ಕ್ ಉದ್ಘಾಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News