ಶ್ರಮಿಕ್ ವಿಶೇಷ ರೈಲಲ್ಲೇ ಪ್ರಾಣ ಬಿಟ್ಟ ವಲಸೆ ಕಾರ್ಮಿಕ!
Update: 2020-05-12 17:11 GMT
ಪುಣೆ: ಪುಣೆಯಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಹೊರಟಿದ್ದ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 34 ವರ್ಷದ ವಲಸೆ ಕಾರ್ಮಿಕರೊಬ್ಬರು ರೈಲಿನಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ಪುಣೆಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಖಿಲೇಶ್ ಕುಮಾರ್ ಎಂಬುವವರು ಹುಟ್ಟೂರು ಉತ್ತರ ಪ್ರದೇಶದ ಗೊಂಡಾಗೆ ರೈಲಿನಲ್ಲಿ ಹೊರಟಿದ್ದರು. ಪ್ರಯಾಣದ ವೇಳೆ ಅವರು ಮೃತಪಟ್ಟಿದ್ದು, ಅವರ ದೇಹವನ್ನು ಮಧ್ಯಪ್ರದೇಶದ ಮಜ್‌ಗವಾನ್ ಎಂಬಲ್ಲಿ ರೈಲಿನಿಂದ ತೆಗೆಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಆ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಆರ್‌ಪಿಎಫ್ ಡಿಜಿ ಅರುಣ್ ಕುಮಾರ್ ಹೇಳಿದ್ದಾರೆ.
ಈ ವ್ಯಕ್ತಿಗೆ ಕೊರೋನ ವೈರಸ್ ಸೋಂಕು ತಗುಲಿತ್ತೇ ಎನ್ನುವುದು ದೃಢಪಟ್ಟಿಲ್ಲ. ಮೇ 1ರಿಂದ ರೈಲ್ವೆ 542 ಶ್ರಮಿಕ್ ಸ್ಪೆಷಲ್ ರೈಲುಗಳನ್ನು ಓಡಿಸಿದ್ದು, ವಿವಿಧೆಡೆ ಸಿಕ್ಕಿಹಾಕಿಕೊಂಡ 6.48 ಲಕ್ಷ ಮಂದಿಯನ್ನು ತಮ್ಮ ಊರುಗಳಿಗೆ ಕರೆದೊಯ್ದಿದೆ.