‘ಪಾರಂಪರಿಕ ಹೆಗ್ಗುರುತು ನಾಶ’: ಸೆಂಟ್ರಲ್ ವಿಸ್ಟಾ ವಿರೋಧಿಸಿ ಪ್ರಧಾನಿಗೆ ನಿವೃತ್ತ ಸರಕಾರಿ ಅಧಿಕಾರಿಗಳ ಪತ್ರ
ಹೊಸದಿಲ್ಲಿ, ಮೇ. 17: ನೂತನ ಸಂಸತ್ ಭವನ ನಿರ್ಮಾಣ ಹಾಗೂ ಕೇಂದ್ರ ಸರಕಾರಗಳ ಕಚೇರಿಗೆ ನೂತನ ಕಟ್ಟಡ ನಿರ್ಮಿಸುವ ಉದ್ದೇಶದ 20,000 ಕೋಟಿ ರೂ. ಮೊತ್ತದ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಸ್ಥಗಿತಗೊಳಿಸುವಂತೆ 60 ನಿವೃತ್ತ ಸರಕಾರಿ ಅಧಿಕಾರಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಸೆಂಟ್ರಲ್ ವಿಸ್ಟಾ ಮತ್ತು ಸಂಸತ್ತಿನ ಪುನರ್‌ನಿರ್ಮಾಣ ಕಾರ್ಯದ ಗುತ್ತಿಗೆಯನ್ನು ಗುಜರಾತ್ ಮೂಲದ ಎಚ್‌ಸಿಪಿ ಡಿಸೈನ್, ಪ್ಲಾನಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಎಂಬ ಸಂಸ್ಥೆ ಪಡೆದಿದೆ. ಸೆಂಟ್ರಲ್ ವಿಸ್ಟಾ ಪ್ರದೇಶ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ 3 ಕಿ.ಮೀ ವ್ಯಾಪ್ತಿಯಲ್ಲಿದೆ. 2020ರ ನವೆಂಬರ್‌ನೊಳಗೆ ಸೆಂಟ್ರಲ್ ವಿಸ್ಟಾದ ಮರುವಿನ್ಯಾಸ, ಮುಂದಿನ 4 ವರ್ಷದಲ್ಲಿ ಸಂಸತ್‌ಭವನ ಮತ್ತು ಸರಕಾರಿ ಕಚೇರಿಗಳ ಮರು ನಿರ್ಮಾಣದ ಯೋಜನೆಯಿದೆ.
ಹೊಸದಿಲ್ಲಿಯಲ್ಲಿರುವ ಅಪ್ರತಿಮ ಸಾಂಪ್ರದಾಯಿಕ ಪರಂಪರೆಯ ಹೆಗ್ಗುರುತಾದ ಸೆಂಟ್ರಲ್ ವಿಸ್ಟಾದ ಮರುವಿನ್ಯಾಸ ಯೋಜನೆಯ ಬಗ್ಗೆ ತೀವ್ರ ಆತಂಕದಿಂದ ಈ ಪತ್ರ ಬರೆಯುತ್ತಿದ್ದೇವೆ. ಸಾರ್ವಜನಿಕರ ವ್ಯಾಪಕ ವಿರೋಧ ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ಹಲವಾರು ದೋಷಗಳ ಹೊರತಾಗಿಯೂ ಪೂರ್ವಭಾವಿ ಅನುಮತಿ ನೀಡಲಾಗಿದೆ. ಸೆಂಟ್ರಲ್ ವಿಸ್ಟಾ ಬ್ರಿಟಿಷ್ ಆಡಳಿತದ ಸಂದರ್ಭ ನಿರ್ಮಾಣಗೊಂಡಿದ್ದರೂ ಇದರ ಆರೈಕೆಯನ್ನು ಸ್ವಾತಂತ್ರ್ಯ ದೊರೆತ ಬಳಿಕ ಉತ್ತಮವಾಗಿ ನಿರ್ವಹಿಸಲಾಗಿದೆ. ಈ ಪ್ರದೇಶದಲ್ಲಿ ಯಾವುದೇ ಬದಲಾವಣೆ ತರುವ ಮುನ್ನ ಇದರ ಇತಿಹಾಸವನ್ನು ಮರೆಯಬಾರದು. ಮರುನಿರ್ಮಾಣ ಯೋಜನೆಯಲ್ಲಿ ರೂಪಿಸಲಾಗಿರುವ ವಿನ್ಯಾಸವು ಖಂಡಿತಾ ಈ ಪ್ರದೇಶದ ಪಾರಂಪರಿಕ ಮಹತ್ವಕ್ಕೆ ಕುಂದು ಉಂಟುಮಾಡುತ್ತದೆ ಮತ್ತು ಶಾಶ್ವತವಾಗಿ ನಾಶಗೊಳಿಸುತ್ತದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಅಲ್ಲದೆ ಇದರಿಂದ ಪರಿಸರಕ್ಕೂ ಸಾಕಷ್ಟು ಹಾನಿಯಾಗಲಿದೆ. ಈ ಪ್ರದೇಶದಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣದಿಂದ ಜನಸಂದಣಿ ಹೆಚ್ಚಲಿದೆ. ಸಂಸತ್ತಿನಲ್ಲಿ ಚರ್ಚೆ ನಡೆಸದೆ ಈ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಯಾವುದೇ ತಜ್ಞರ ಸಲಹೆ ಪಡೆಯದೆ ಅನುಮೋದನೆ ನೀಡಲಾಗಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಒಬ್ಬ ನಾಯಕನ ಛಾಪನ್ನು ಚಿರಸ್ಥಾಯಿಯಾಗಿಸಲು ಮತ್ತು ಅವರ ಸರಕಾರ ದಿಲ್ಲಿಯ ಪುನನಿರ್ಮಾಣದ ಶಿಲ್ಪಿ ಎಂದು ಬಿಂಬಿಸಿಕೊಳ್ಳುವ ಉದ್ದೇಶದಿಂದ ತರಾತುರಿಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ. ಅದರ ಬದಲು ಈಗಿರುವ ಸಂಸತ್ ಭವನವನ್ನೇ ಮರುರೂಪಿಸಿ ವಿಸ್ತರಣೆ ಮತ್ತು ನವೀಕರಣ ಕಾರ್ಯ ನಡೆಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.