ಮನೆಗೆ ಮರಳಲು ಗ್ರಾಮಸ್ಥರ ಅಡ್ಡಿ: ಒಂದು ವಾರ ಗುಡ್ಡದಲ್ಲಿ ಕಳೆದ ಕ್ವಾರಂಟೈನ್‍ಗೊಳಗಾದ ಕಾರ್ಮಿಕ

Update: 2020-05-18 11:50 GMT

ಚೆನ್ನೈ: ತಮಿಳುನಾಡಿನ ತಿರುಪೊರೂರ್ ಎಂಬಲ್ಲಿನ ಕನ್ನಗಪಟ್ಟು ಎಂಬಲ್ಲಿನ ನಿವಾಸಿ, 28 ವರ್ಷದ ಶಮೀಮ್ ಅಲಿ ತನ್ನ ಕುಟುಂಬದಿಂದ ದೂರ ಉಳಿದು ಗ್ರಾಮದ ಹೊರವಲಯದ ಗುಡ್ಡವೊಂದರಲ್ಲಿ ಒಂದು ವಾರ ಕಳೆದಿದ್ದಾರೆ.

ಉತ್ತರ ಪ್ರದೇಶದ ಕನೌಜ್ ಮೂಲದ ಈತ ವಲಸಿಗ ಕಾರ್ಮಿಕ. ಗುಜರಿ ವರ್ತಕನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಆ ಕೆಲಸ ಕಳೆದುಕೊಂಡ ನಂತರ ಲೋಡಿಂಗ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಮೇ ಮೊದಲ ವಾರದಲ್ಲಿ ಅವರನ್ನು ಕೋವಿಡ್-19 ತಪಾಸಣೆಗೊಳಪಡಿಸಲಾಗಿತ್ತು ಹಾಗೂ ನಂತರ ಗೃಹ ಕ್ವಾರಂಟೈನ್‍ನಲ್ಲಿರಲು ಸೂಚಿಸಲಾಗಿತ್ತು. ಆದರೆ ಗ್ರಾಮಸ್ಥರು ಮಾತ್ರ ಅವರು ಕಳೆದ ನಾಲ್ಕು ವರ್ಷಗಳಿಂದ ವಾಸಿಸುತ್ತಿದ್ದ ಗ್ರಾಮ ಪ್ರವೇಶಿಸಲು ಅನುಮತಿಸಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಅವರು ಹತ್ತಿರದ ಗುಡ್ಡ ಪ್ರದೇಶದಲ್ಲಿನ ದೇವಸ್ಥಾನದ ಸಮೀಪ ಆಶ್ರಯ ಪಡೆದಿದ್ದರು. ಅವರ ಪತ್ನಿಯ ಭೇಟಿಗೂ ಗ್ರಾಮಸ್ಥರು ಅವಕಾಶ ನೀಡಿಲ್ಲ.

ಅವರ ಕಿರಿಯ ಸೋದರ ಖಲೀಲ್ ಅಲಿ ಕೂಡ ಹತ್ತಿರದಲ್ಲಿಯೇ ವಾಸಿಸುತ್ತಿರುವುದರಿಂದ ಅಣ್ಣನಿಗೆ ಆಹಾರ ಸರಬರಾಜು ಮಾಡುತ್ತಿದ್ದ. ಆದರೆ ಆ ಗುಡ್ಡ ಪ್ರದೇಶದಲ್ಲಿ ಏಕಾಂಗಿಯಾಗಿರಲು ಮನಸ್ಸು ಬಾರದೆ ಶಮೀಮ್ ತನ್ನ ಸ್ನೇಹಿತ ಚಾಂದ್ ಎಂಬಾತನ ಸಹಾಯ ಕೋರಿದ್ದ. ಚಾಂದ್ ಇತರರ ಸಹಾಯ ಪಡೆದು ಅಧಿಕಾರಿಗಳನ್ನು ಸಂಪರ್ಕಿಸಿದ ನಂತರ ಶನಿವಾರ ಬೆಳಿಗ್ಗೆ ತಿರುಪೊರೂರ್‍ನ ಕಂದಾಯ ಇನ್‍ಸ್ಪೆಕ್ಟರ್ ಎನ್ ಪುಷ್ಪಾ ರಾಣಿ ಪೊಲೀಸ್ ಅಧಿಕಾರಿಗಳ ಜಗೆ ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರನ್ನು ಭೇಟಿಯಾಗಿ ಅವರಿಗೆ ಗೃಹ ಕ್ವಾರಂಟೈನ್ ನಿಯಮಗಳ ಬಗ್ಗೆ ವಿವರಿಸಿದರು. ನಂತರ ಶಮೀಮ್ ತನ್ನ ಮನೆಗೆ ವಾಪಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News