ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಕಾಂಗ್ರೆಸ್ ನಾಯಕ ಪುನಿಯಾ ಬಂಧನ
ಚಂಡೀಗಢ,ಮೇ 21: ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಬರಹಗಳನ್ನು ಪೋಸ್ಟ್ ಮಾಡಿದ ಆರೋಪಕ್ಕೆ ಸಂಬಂಧಿಸಿ ಹರ್ಯಾಣದ ಕಾಂಗ್ರೆಸ್ ನಾಯಕ ಪಂಕಜ್ ಪುನಿಯಾ ಅವರನ್ನು ಬಂಧಿಸಲಾಗಿದೆಯೆಂದು ಗುರುವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿಯೂ ಆದ ಪುನಿಯಾ ಅವರನ್ನು ಬುಧವಾರ ತಡರಾತ್ರಿ ಬಂಧಿಸಲಾಗಿದೆೆ. ಪುನಿಯಾ ಅವರು ತನ್ನ ಟ್ವೀಟ್‌ಗಳ ಮೂಲಕ ಜನತೆಯ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಹಾಗೂ ಧರ್ಮದ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ಶತ್ರುತ್ವವನ್ನು ಪ್ರಚೋದಿಸಿದ್ದಾರೆಂದು ಅವರು ಹೇಳಿದ್ದಾರೆ.
ಪಂಕಜ್ ಪುನಿಯಾ ಅವರನ್ನು ಚಂಡೀಗಢದ ಮಧುಬನ್ ಪ್ರದೇಶದಲ್ಲಿ ಬಂಧಿಸಲಾಯಿತೆಂದು ಪೊಲೀಸ್ ಅಧಿಕಾರಿ ತಾರ್‌ಸೇಮ್ ಚಂದ್ ಹೇಳಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯನೂ ಆಗಿರುವ ಪುನಿಯಾ ವಿರುದ್ಧ ಇದೇ ಆರೋಪಕ್ಕೆ ಸಂಬಂಧಿಸಿ ಉತ್ತರಪ್ರದೇಶ ಲಕ್ನೋದಲ್ಲಿಯೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆಂದು ತಿಳಿದುಬಂದಿದೆ.
ಪುನಿಯಾ ವಿರುದ್ಧ ವಿವಿಧ ಗುಂಪುಗಳ ನಡುವೆ ಶತ್ರುತ್ವವನ್ನು ಪ್ರಚೋದಿಸಿದ, ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದ, ಸಾರ್ವಜನಿಕ ಕಿಡಿಗೇಡಿತನದ ಅಪರಾಧಗಳಿಗೆ ಸಂಬಂಧಿಸಿದ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳು ಮತ್ತು 2008ರ ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಲಸೆ ಕಾರ್ಮಿರನ್ನು ಸಾಗಿಸಲು ಕಾಂಗ್ರೆಸ್ ಪಕ್ಷವು ಬಸ್‌ಗಳ ಏರ್ಪಾಟು ಮಾಡಿರುವುದರ ವಿಷಯದಲ್ಲಿ ಆದಿತ್ಯನಾಥ್ ಸರಕಾರವು ರಾಜಕೀಯ ಮಾಡುತ್ತಿದೆಯೆಂದು ಪಂಕಜ್ ಪುನಿಯಾ ಬುಧವಾ ಟ್ವೀಟ್ ಮಾಡಿದ್ದರಾದರೂ, ಆನಂತರ ಅವರು ಅದನ್ನು ಅಳಿಸಿಹಾಕಿದ್ದರು.