ಕೊರೋನ ಸೋಂಕಿತರ ಸಂಖ್ಯೆ 1.5 ಲಕ್ಷದತ್ತ ದಾಪುಗಾಲು

Update: 2020-05-27 03:48 GMT

ಹೊಸದಿಲ್ಲಿ, ಮೇ 27: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.5 ಲಕ್ಷದ ಸನಿಹಕ್ಕೆ ಬಂದಿದೆ. ಮಂಗಳವಾರ 5,502 ಹೊಸ ಪ್ರಕರಣಗಳು ದೇಶಾದ್ಯಂತ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,47,758ಕ್ಕೇರಿದೆ. ಅಂತೆಯೇ ಮಂಗಳವಾರ 172 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಈ ಮಹಾಮಾರಿಗೆ ಬಲಿಯಾದವರ ಒಟ್ಟು ಸಂಖ್ಯೆ 4,345ಕ್ಕೇರಿದೆ. ಇದುವರೆಗೆ 64,239 ಮಂದಿ ಗುಣಮುಖರಾಗಿದ್ದಾರೆ ಎಂದು ಸರ್ಕಾರ ಪ್ರಕಟಿಸಿದೆ.

ಮತ್ತಷ್ಟು ಪ್ರಕರಣಗಳು ಮುಂಬೈನಲ್ಲಿ ಮಂಗಳವಾರ ವರದಿಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಮಾಸ್ಕೊ, ಸಾವೊ ಪೋಲೊ ಮತ್ತು ನ್ಯೂಯಾರ್ಕ್ ನಗರಗಳನ್ನು ಹೊರತುಪಡಿಸಿದರೆ ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ದಾಖಲಾಗುತ್ತಿರುವ ಮಹಾನಗರ ಎಂಬ ಕುಖ್ಯಾತಿಗೆ ಭಾರತದ ವಾಣಿಜ್ಯ ರಾಜಧಾನಿ ಪಾತ್ರವಾಗಿದೆ.

ದೇಶದಲ್ಲೇ ಅತಿಹೆಚ್ಚು ಸೋಂಕುಪೀಡಿತ ನಗರ ಎನಿಸಿಕೊಂಡ ಮುಂಬೈನಲ್ಲಿ ಮಂಗಳವಾರ 1,065 ಪ್ರಕರಣಗಳು ವರದಿಯಾಗಿವೆ. 39 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಒಟ್ಟು 97 ಮಂದಿ ಸೋಂಕಿಗೆ ಬಲಿಯಾಗುವುದರೊಂದಿಗೆ ರಾಜ್ಯದಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 1,792ಕ್ಕೇರಿದೆ. ಈ ಪೈಕಿ 62 ಸಾವುಗಳು ಕಳೆದ ವಾರ ಸಂಭವಿಸಿದ್ದು, ಮರಣ ವಿಮರ್ಶೆ ಸಮಿತಿ ಮಂಗಳವಾರ ದೃಢಪಡಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಂಗಳವಾರ ಮಹಾರಾಷ್ಟ್ರದಲ್ಲಿ 2,091 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಮಖ್ಯೆ 54,758ಕ್ಕೇರಿದೆ.

ಅತಿಹೆಚ್ಚು ಬಾಧಿತವಾದ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ದಿಲ್ಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಹಿಂದಿನ ದಿನಕ್ಕೆ ಹೋಲಿಸಿದರೆ ಮಂಗಳವಾರ ಕಡಿಮೆ ಪ್ರಕರಣಗಳು ವರದಿಯಾಗಿವೆ. ಆದರೆ ಬಿಹಾರ (231), ಅಸ್ಸಾಂ (95) ಮತ್ತು ಕೇರಳ (67) ರಾಜ್ಯಗಳಲ್ಲಿ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಜಮ್ಮು ಕಾಶ್ಮೀರದಲ್ಲಿ 91, ಉತ್ತರಾಖಂಡದಲ್ಲಿ 44 ಹಾಗೂ ಹಿಮಾಚಲ ಪ್ರದೇಶದಲ್ಲಿ 24 ಹೊಸ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News