ಮಳೆಗಾಲಕ್ಕೆ ಬೇಕಾದ ಬಾಳಕಗಳು

Update: 2020-06-01 17:32 GMT

ಮುಂಗಾರು, ಹಿಂಗಾರು ಮಳೆಗಳು ಶುರುವಾದವುವೆಂದರೆ ಸಾಕು, ಎಲ್ಲರ ಹೊಟ್ಟೆಗಳು ತಾಳ ಹಾಕಲು ಶುರು ಮಾಡುತ್ತವೆ. ಬಿಸಿಲು ಇಳಿದು ಮೋಡ ಕಟ್ಟಿ ಹಗಲು-ಸಂಜೆ ಎಂಬ ವ್ಯತ್ಯಾಸವಿಲ್ಲದೆ ಮಬ್ಬು ಕವಿದ ಹೊತ್ತಲ್ಲಿ ಬೀಸುವ ಗಾಳಿಗೆ ಜನರು ಉಂಡು ಅರ್ಧಗಂಟೆಯಾಗಿರುವುದಿಲ್ಲ, ಆಗಲೇ ಸಣ್ಣ ಹಸಿವು ಏನಾದರೂ ಬಿಸಿಯಾದ, ಖಾರವಾದ ಕುರುಕಲು ಬೇಕು ಅನ್ನಿಸುತ್ತದೆ. ಬೆಚ್ಚಗಿನ ಟೀ, ಕಾಫಿ, ಸೂಪು ಕುಡಿಯಬೇಕು ಅನ್ನಿಸುತ್ತದೆ. ಕೆಲಸ ಮಾಡುವ ಮನಸ್ಸು ಹೋಗಿ ಮಳೆಯನ್ನೂ ದಿಟ್ಟಿಸುತ್ತಾ ಕೂರಬೇಕು ಅಥವಾ ಮಳೆಯಲ್ಲಿ ನೆನೆದು ಆಟವಾಡಬೇಕು ಎಂದೆನಿಸುತ್ತದೆ. ಇದು ಮಕ್ಕಳಿಗೆ ಮಾತ್ರವಲ್ಲ ವಯಸ್ಕರಿಗೂ ಕೂಡ. ಹೀಗೆಂದುಕೊಳ್ಳುವ ಹೊತ್ತಿನಲ್ಲೇ ಮಳೆ ಮನುಷ್ಯನಿಗೆ ಮಾತ್ರವಲ್ಲ ಪ್ರಾಣಿ, ಸಸ್ಯ, ನೆಲ ಸಕಲ ಜೀವರಾಶಿಗಳಿಗೂ ಚೈತನ್ಯಶಾಲಿಯಾದ ಸೃಷ್ಟಿ ಕ್ರಿಯೆ. ಆಹಾರವು ಕೂಡ ಈ ಸೃಷ್ಟಿ ಕ್ರಿಯೆಯ ಜೊತೆಗೆ ಬೆಸೆದು ಬಂದಿರುವ ಮತ್ತೊಂದು ಪ್ರಕ್ರಿಯೆ. ಹಾಗಾಗಿಯೇ ಒಂದು ಘಟಿಸಿದಾಗ ಮತ್ತೊಂದು ಕೂಡ ಪ್ರತಿಕ್ರಿಯಿಸಲು ಶುರು ಮಾಡುತ್ತದೆ. ಈ ಸೃಷ್ಟಿ ವಿಲಾಸಕ್ಕೆ ಕೊನೆಯಿಲ್ಲ.

ಮಳೆಗಾಲ ಆರಂಭವಾಗುವ ಮುನ್ನವೇ ಊರುಗಳಲ್ಲಿ ಬೇಕಾದ ಹತ್ತು ಹಲವು ಪದಾರ್ಥಗಳ ಶೇಖರಣೆ ಶುರುವಾಗಿ ಬಿಡುತ್ತದೆ. ಎಲ್ಲದಕ್ಕೂ ಮೊದಲು ಅಡುಗೆಗೆ ಬೇಕಾದ ಸೌದೆ ಆಯ್ದೋ, ಕತ್ತರಿಸಿಯೋ ತಂದು ಒಣಹಾಕಿ ಕೊಟ್ಟಿಗೆಯಲ್ಲೋ ಮನೆಯಂಗಳದಲ್ಲೋ ಸಂಗ್ರಹವಾಗುತ್ತದೆ. ಆಮೇಲೆ ಬೇಕಿರುವ ಒಣಗಿಸಿಟ್ಟು ಬಳಸಬಹುದಾದ ತರಕಾರಿ, ಸೊಪ್ಪು, ಗೆಡ್ಡೆ ಇತ್ಯಾದಿಗಳ ಹುಡುಕಾಟ. ನಂತರ ಅವುಗಳಲ್ಲಿ ಉತ್ತಮ ಗುಣಮಟ್ಟದ ಪದಾರ್ಥ ಆರಿಸಿ ತಂದು ಅವಕ್ಕೆ ಉಪ್ಪು, ಹುಳಿನೀರಿನ ಪೂರ್ವೋಚಾರ ನಡೆಸಿ ನೆನೆಸಿ, ಕುದಿಸಿ ಒಣಗಿಸಲಾಗುತ್ತದೆ. ಅವೆಲ್ಲ ಮಳೆ ಹಿಡಿದಾಗ ಸಿಗುವುದಿಲ್ಲ ಅಥವಾ ಹುಡುಕಿ ತರಲಾಗುವುದಿಲ್ಲ. ಈ ತರಹದ್ದು ಮಲೆನಾಡಿನಲ್ಲಿ ಬಹಳ ಹೆಚ್ಚು. ಅವರಿಗೆ ಮಳೆ ಹಿಡಿದರೆ ಕೆಲವು ಸಲ ಬಿಡುವು ಕೊಡದೆ ವಾರವೆಲ್ಲಾ ಸುರಿಯುತ್ತಲೇ ಇರುತ್ತದೆ, ಆಚೆಗೆ ಕಾಲಿಡುವುದೂ ಕಷ್ಟ. ಬೇಸಾಯಗಾರರು ಗೋಣಿ ಅಥವಾ ಗೊಪ್ಪೆಹಾಕಿಕೊಂಡು ಹೋಗುತ್ತಾರೆ ನಿಜ. ಆದರೆ ಆಹಾರ ಪದಾರ್ಥಗಳು ಹೆಚ್ಚು ನೀರಿನಂಶ ಬೆರೆತರೆ ಕೊಳೆಯುತ್ತವೆ. ಹಾಗಾಗಿಯೇ ಒಣಗಿಸಿ, ಉಪ್ಪು-ಹುಳಿ- ಎಣ್ಣೆಗಳಲ್ಲಿ ಸಂರಕ್ಷಿಸಿಡುವುದು ಸಾಮಾನ್ಯ. ಇದು ಬಯಲುಸೀಮೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಏನು ಬೇರೆಯಾಗಿಲ್ಲ. ಆದರೆ ಮಳೆಯ ತೀವ್ರತೆ ಈ ಪ್ರದೇಶಗಳಲ್ಲಿ ಏರುಪೇರಾಗುತ್ತದೆ ಅಷ್ಟೇ. ಕರಾವಳಿಗರಂತೂ ನಾನಾ ರೀತಿಯ ಮೀನುಗಳನ್ನು ನಿತ್ಯದ ವ್ಯವಹಾರಗಳ ನಡುವೆಯೇ ಒಣಗಿಸಿ ಸಂಗ್ರಹಿಸಿಟ್ಟಿರುತ್ತಾರೆ.

ಬೇಸಿಗೆಯ ಕೊನೆ ಬರುವುದರೊಳಗೆ ವಿವಿಧ ಬಗೆಯ ಸಂಬಾರ ಪುಡಿಗಳು, ಹಪ್ಪಳ ಸಂಡಿಗೆಗಳು, ಬಾಳಕಗಳು ಸಿದ್ಧವಾಗುತ್ತಿರುತ್ತವೆ. ಎಲ್ಲವೂ ಆಯಾ ಭೌಗೋಳಿಕ ಪ್ರದೇಶಗಳಲ್ಲಿ ದೊರಕುವ ತರಕಾರಿ, ಮೀನು, ಮಾಂಸ, ಧಾನ್ಯಗಳ ಮೇಲೆ ಅವಲಂಬಿತವಾಗಿದೆ. ಉತ್ತರ ಒಳನಾಡು ದಕ್ಷಿಣ ಒಳನಾಡು, ಮಲೆನಾಡು, ಕರಾವಳಿಗಳು ಇಂತಹ ತಮ್ಮದೇ ಆದ ಬಾಳಕಗಳ ರಾಶಿಗಳನ್ನೇ ಹೊಂದಿವೆ. ಈಗ ಮೊದಲಿನಷ್ಟು ಸಂಖ್ಯೆಯಲ್ಲಿ ಮಾಡುವವರು ಇಲ್ಲವಾದರೂ ಈ ಬಾಳಕಗಳ ಬಳಕೆ ಏನೂ ನಿಂತಿಲ್ಲ. ವೈಯಕ್ತಿಕವಾಗಿ ಮನೆಯಲ್ಲಿ ಮಾಡಿಕೊಳ್ಳುತ್ತಿದ್ದ ಜನ, ಈಗ ಅಂಗಡಿ ಮಳಿಗೆಗಳಲ್ಲಿ ಕೊಂಡುಬಿಡುತ್ತಾರೆ. ಈಗ ಪದಾರ್ಥಗಳ ಹುಡುಕಿ ತಂದು ಅದಕ್ಕೆ ಸಿದ್ದರಾಗಿ ಕೂತು ಬಾಳಕ ಮಾಡುವ ಮಂದಿ ಕಡಿಮೆ, ಅಷ್ಟು ವ್ಯವಧಾನವನ್ನು ಇವತ್ತಿನ ಆಧುನಿಕ ಕಾಲ ನಮ್ಮಲ್ಲಿ ಉಳಿಸಿಲ್ಲ. ನಾವು ಕೂಡ ಉಳಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ.

ಹಳ್ಳಿಗಳನ್ನು ಬಿಟ್ಟು ನಗರಗಳನ್ನು ಸೇರುವವರ ಸಂಖ್ಯೆ ಹೆಚ್ಚಿದಷ್ಟು ಇಂತಹ ಆಹಾರ ಕ್ರಮಗಳು ಕಾಣೆಯಾಗಿ ಸಿದ್ಧ ಆಹಾರದ ಮೇಲೆ ಅವಲಂಬಿತರಾಗುವ ಜನರ ಪ್ರಮಾಣ ಅತಿಯಾದ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಹೀಗೊಂದು ಭರವಸೆ ಕುಂದುತ್ತಿರುವಂತೆಯೇ ಮತ್ತೊಂದು ಕಡೆ ಈಗಾಗಲೇ ಹಳ್ಳಿಗಳಲ್ಲಿ ಉಳಿದವರು ಅಲ್ಲಿಂದ ನಗರಗಳಿಗೆ ವಲಸೆ ಬಂದ ಕೆಲವರು ಇಂತಹ ನಿಗದಿತ ಆಹಾರ ಪದಾರ್ಥಗಳನ್ನು ಮಾಡಿ ಮಾರಾಟ ಮಾಡುವ ಜಾಣ್ಮೆ ಕೂಡ ತೋರಿ ಯಶಸ್ವಿ ಆಗಿದ್ದಾರೆ. ಇಂತಹ ಗುಡಿ ಕೈಗಾರಿಕೆಗಳು ಇಂದು ಬಹಳಷ್ಟು ಕಡೆಗೆ ಇವೆ. ಕೆಲವಂತೂ ಬೆಳೆದು ದೊಡ್ಡ ಬ್ರಾಂಡ್ ನೇಮ್ ಕಟ್ಟಿಕೊಂಡಿವೆ. ಆದರೂ ಮನೆಯ ಕೈರುಚಿ ಬೇರೆ ಅಲ್ಲವೇ? ಬಾಳಕ ಎಂದಾಕ್ಷಣ ನೆನಪಾಗುವುದು ಮಜ್ಜಿಗೆ ಮೆಣಸಿನಕಾಯಿ, ಸಂಡಿಗೆ ಮೆಣಸಿನಕಾಯಿ ಎಂದೆಲ್ಲಾ ಕರೆಸಿಕೊಳ್ಳುವ ಮೆಣಸಿನಕಾಯಿ ಬಾಳಕ.

ಒಳ್ಳೆಯ ಬಿಸಿಲಿರುವ ದಿನಗಳಲ್ಲಿ ಚೂರು ದಪ್ಪಉದ್ದ ಇರುವ ಖಾರ ಖಾರ ಹಸಿ ಮೆಣಸಿನಕಾಯಿಯ ಹೊಟ್ಟೆಯನ್ನು ಸೀಳಿ ಅದಕ್ಕೆ ಉಪ್ಪು, ಜೀರಿಗೆ ತುಂಬಿ ಮಜ್ಜಿಗೆಯಲ್ಲಿ ಐದಾರು ದಿನ ನೆನೆಸಿ ನಂತರ ಸಾವಕಾಶ ಬಿಸಿಲಿಗೆ ಹರಡಿ ಚೆನ್ನಾಗಿ ಒಣಸಿದರೆ ಸಾಕು. ಮಳೆಗಾಲದಲ್ಲಿ ಯಾವ ಅಡುಗೆ ಸಿಕ್ಕರೂ ಜೊತೆಗೆ ಈ ಮೆಣಸಿನಕಾಯಿ ಬಾಳಕವನ್ನು ಎಣ್ಣೆಯಲ್ಲಿ ಬಾಡಿಸಿ ಎತ್ತಿಕೊಂಡು ಕಡಿಯುತ್ತಿರಬಹುದು. ರುಚಿಗೆ ಖಾರಕ್ಕೆ ಏನೂ ಕಮ್ಮಿಯಿಲ್ಲ. ಅದರಲ್ಲೂ ಬಿಸಿಬಿಸಿ ಅನ್ನದ ಗಂಜಿ, ಉಪ್ಪಿನಕಾಯಿ ಮತ್ತು ಮೆಣಸಿನಕಾಯಿ ಬಾಳಕದ ಜೋಡಿ ಮಳೆಗಾಲದ ಸ್ವರ್ಗದ ಊಟವಿದ್ದಂತೆ. ಚಿತ್ರಾನ್ನ, ಉಪ್ಪಿಟ್ಟು, ಬಿರಿಯಾನಿ ಜೊತೆಗೂ ಇದನ್ನು ನೆಂಜಿಕೊಂಡು ತಿನ್ನಬಹುದು. ಇಂತಹದೇ ಜೊತೆಯೆಂಬ ನಿರ್ಬಂಧವೇನು ಇಲ್ಲ. ಇದಂತೂ ಎಲ್ಲಾ ಪ್ರದೇಶಗಳ ಬಾಳಕದ ರಾಜಕುಮಾರ. ಈ ಬಾಳಕ ಮಾಡುವುದಿಲ್ಲ, ತಿನ್ನುವುದಿಲ್ಲ ಎಂಬವರಿಲ್ಲ. ಹಾಗೆಯೇ ಇದನ್ನು ಒಣಗಿಸುವ ಬದಲು ಉಪ್ಪು, ಹುಳಿ ಬೆರೆಸಿದ ನೀರಿನಲ್ಲಿ ಗಾಳಿಯಾಡದಂತೆ ಬಂಧಿಸಿ ಇಟ್ಟರೆ fermentationಗೆ ಒಳಪಟ್ಟು ಬಹುಕಾಲ ಬಾಳಿಕೆ ಬರುತ್ತದೆ. ಮತ್ತು ಅಡುಗೆಗೆ ಇದೇ ಪ್ರತ್ಯೇಕವಾದ ರುಚಿಯನ್ನು ಕೊಡುತ್ತದೆ. ಈ ತರಹದ ಪದ್ಧತಿಯು ಚೀನಿಯರು ಮತ್ತು ಕೊರಿಯನ್ನರಲ್ಲಿ ಬಹಳ ಇದೆ. ಇವತ್ತಿಗೂ ಅವರೆಲ್ಲ ಅನುಸರಿಸುತ್ತಾರೆ ಕೂಡ. ಮೆಣಸಿನಕಾಯಿ ಬಾಳಕ ಬಿಟ್ಟರೆ ಹೆಚ್ಚು ಚಾಲ್ತಿಯಲ್ಲಿರುವುದು ಉಪ್ಪಿನಕಾಯಿಗಳು.

ನಾನಾ ರೀತಿಯ ಹುಳಿ ಹಣ್ಣುಗಳಿಂದ ಮಾಡಿದ ವಿವಿಧ ರುಚಿಯ ಉಪ್ಪಿನಕಾಯಿಗಳು. ಇವನ್ನೇ ನೇರ ತಿನ್ನಲು ಬರುವುದಿಲ್ಲ. ಇವೇನಿದ್ದರೂ ಊಟದ ಜೊತೆಗೆ ನೆಂಜಿಕೊಳ್ಳಬಹುದಾದವು ಅಷ್ಟೇ. ಇನ್ನು ಅಕ್ಕಿ, ಉದ್ದುಗಳಿಂದ ಮಾಡಿದ ಹಪ್ಪಳ ಸಂಡಿಗೆಗಳು. ಬೇಸಗೆಯ ದಿನಗಳು ಬಂತೆಂದರೆ ಮನೆಯ ಮಾಡುಗಳ ಮೇಲೆ, ಅಂಗಳದ ಒಳಗೆ ಸಾಲು ಸಾಲು ಬಟ್ಟೆಗಳನ್ನು ಹಾಸಿ ಬೇಯಿಸಿ, ನಾದಿದ ಹಿಟ್ಟುಗಳಿಂದ ಒತ್ತಿದ ವಿವಿಧ ಆಕಾರ ಬಣ್ಣ ವಿನ್ಯಾಸಗಳ ಹಪ್ಪಳ ಸಂಡಿಗೆಗಳು ಒಣಗುತ್ತಿದ್ದವು. ಈಗಲೂ ಹಲವರು ಈ ಅಭ್ಯಾಸಗಳನ್ನು ಬಿಟ್ಟಿಲ್ಲ. ಚೆನ್ನಾಗಿ ಒಣಗಿದ ಇವನ್ನು ದೊಡ್ಡ ಸ್ಟೀಲ್ ಬಾಕ್ಸ್‌ಗಳಲ್ಲಿ ಸಂಗ್ರಹಿಸಿಟ್ಟು ಮಳೆಗಾಲದ ದಿನಗಳಲ್ಲಿ ಊಟದ ಜೊತೆಗೆ, ಸಂಜೆಯ ವಿರಾಮದ ಸಮಯಗಳಲ್ಲಿ ಕರಿದು ತಿನ್ನುವುದು ರೂಢಿ. ಮಲೆನಾಡು ಮತ್ತು ಕರಾವಳಿ ಕಡೆಯವರಂತೂ ಇಂತಹ ಸಂಡಿಗೆಗಳ ಜೊತೆಗೆ ಹಲಸಿನ ತೊಳೆಯನ್ನು ಒಣಗಿಸಿಟ್ಟು ಕರಿದು ತಿನ್ನುವುದು ಮತ್ತು ಇದನ್ನೇ ಬೇಯಿಸಿ ಆಡಿಸಿ ಹಪ್ಪಳ ಮಾಡಿ ಸುಟ್ಟು ತಿನ್ನುವುದು ಸೇರಿದಂತೆ ಹತ್ತಾರು ಬಗೆಯ ಪ್ರಯೋಗಗಳನ್ನು ಮಾಡುತ್ತಾರೆ.

ಹಲಸಿನ ಬೀಜ ಈ ಮೇರೆಯನ್ನು ಮೀರಿ ಎಲ್ಲರ ಬಾಲ್ಯದ ಮಳೆಗಾಲದಲ್ಲೂ ಕೂತುಬಿಟ್ಟಿದೆ. ಹಲಸಿನ ಬೀಜವನ್ನು ಸುಟ್ಟು ತಿನ್ನದೇ ಉಳಿದವರ ಬಾಲ್ಯವೇ ಇಲ್ಲವೇನೋ? ಆ ಮಟ್ಟಿಗೆ ಸುಟ್ಟ ಹಲಸಿನ ಬೀಜಗಳು ಕೂಡ ಒಳ್ಳೆಯ ಬಾಳಕಗಳಾಗಿವೆ. ಹಲಸು, ಕಡಲೆಕಾಳು, ಹೆಸರು ಕಾಳು, ನೆಲಗಡಲೆ ಸೇರಿದಂತೆ ಹಲವು ಬೀಜಗಳನ್ನು ಉಪ್ಪುನೀರಲ್ಲಿ ನೆನೆಸಿ ನಂತರ ಒಣಗಿಸಿ ಬೇಕಾದಾಗ ಮೆಣಸಿನ ಪುಡಿ ಅಥವಾ ಮಸಾಲೆ ಪುಡಿಗಳ ಜೊತೆಗೆ ಎಣ್ಣೆಯಲ್ಲಿ ಕರಿದು ಬಳಸಬಹುದು. ಅದರಲ್ಲೂ ಹಲಸು ಮತ್ತು ನೆಲಗಡಲೆಯನ್ನು ನೇರವಾಗಿ ಕೆಂಡದಲ್ಲಿ ಸುಟ್ಟು ತಿನ್ನುವುದು ಬಹಳ ಮಜವಾದ್ದು.

ಹೀಗೆಯೇ ಮುಂದುವರಿದು ಬಾಳೇಕಾಯಿ, ಗೋರಿಕಾಯಿ (ಚವಳಿ), ಹಾಗಲಕಾಯಿಗಳನ್ನು ಉಪ್ಪು, ಹುಣಸೆ ಅಥವಾ ನಿಂಬೆ ರಸ, ಖಾರದ ಪುಡಿ ಜೊತೆಗೆ ಕಲಸಿ ನೆನೆಸಿ ಒಣಗಿಸಿಟ್ಟು ಬೇಕಾದಾಗ ಎಣ್ಣೆಯಲ್ಲಿ ಕರಿದು ಅಥವಾ ಹುರಿದು ತಿನ್ನಬಹುದು. ಇದಕ್ಕೆ ಜೊತೆಯಾಗಿ ಬೂದುಗುಂಬಳ, ಸೋರೆಕಾಯಿಯ ದಪ್ಪಸಿಪ್ಪೆಗಳನ್ನೂ ಹೆರೆದು ತೆಗೆದು ಅವಕ್ಕೆ ಮಾಮೂಲಿಯಂತೆ ಉಪ್ಪು, ಹುಣಸೆ ಅಥವಾ ನಿಂಬೆ ರಸ, ಖಾರದ ಪುಡಿ ಇನ್ನಷ್ಟು ರುಚಿ ಬೇಕಿದ್ದಲ್ಲಿ ಬೆಳ್ಳುಳ್ಳಿ ಮತ್ತು ಶುಂಟಿಯ ಪೇಸ್ಟ್ ಹಾಕಿ ಕಲಸಿ ನೆನೆಸಿ ಒಣಗಿಸಿಟ್ಟು ಬಳಸಬಹುದು. ಮೂಲಂಗಿಗೆ ಉಪ್ಪು,ಮೊಸರು ಸವರಿ ಒಣಗಿಸಿಟ್ಟು ಬಳಸಬಹುದು. ಹೀಗೆಯೇ ಹಲವು ಬಗೆಯ ಮಾಂಸಗಳನ್ನು ಉಪ್ಪು ತುಂಬಿಟ್ಟು ಒಣಗಿಸಿ ತೆಳುವಾಗಿ ಹೆರೆದು ಊಟದ ಜೊತೆಗೆ ನೆಂಜಿಕೊಳ್ಳಬಹುದು ಅಥವಾ ಹುರಿದು, ಬೇಯಿಸಿ ಕೂಡ ತಿನ್ನಬಹುದು. ವಿವಿಧ ಬಗೆಯ ಮೀನುಗಳು ಮತ್ತು ಮಾಂಸ ಇದಕ್ಕೆ ಪ್ರಶಸ್ತವಾದುವು. ಬಾಳಕಗಳನ್ನು ಮಾಡುವುದು ಒಂದು ಕಲೆ. ಇದರಲ್ಲೇ ಮಾಡಬೇಕು ಅಂತೇನಿಲ್ಲ. ತರಕಾರಿ, ಕಾಳು ಅಥವಾ ಮಾಂಸದ ರುಚಿಗೆ ಹೊಂದುವ ಹಾಗೆ ಉಪ್ಪು, ಹುಳಿ ಮತ್ತು ಮಸಾಲೆ ಬಳಸಿ ಅವನ್ನು ಒಣಗಿಸುವ ಮತ್ತು ಬಳಸುವ ಪ್ರತಿಭೆ ತೋರಬೇಕು. ಮಳೆಗಾಲದಲ್ಲಿ ಎಂತಹ ಪ್ರತಿಭೆಯಾದರೂ ಪ್ರಶಂಸೆ ಗ್ಯಾರಂಟಿ!

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News