ಮಹಾರಾಷ್ಟ್ರಕ್ಕೆ ನಿಸರ್ಗ ಚಂಡಮಾರುತದ ಭೀತಿ, ಹೈ ಅಲರ್ಟ್ ಘೋಷಣೆ
ಮುಂಬೈ, ಜೂ.2: ನಿಸರ್ಗ ಚಂಡಮಾರುತ ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಬುಧವಾರ ಅಪ್ಪಳಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಹಾಗೂ ನೆರೆಯ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ವೀಡಿಯೊ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರೊಂದಿಗೆ ಮಾತನಾಡಿದ್ದಾರೆ. ಚಂಡಮಾರುತವನ್ನು ಎದುರಿಸಲು ರಾಜ್ಯದ ತಯಾರಿಯನ್ನು ಅವಲೋಕಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಚಂಡಮಾರುತದ ಭೀತಿಯಿರುವ ಜಿಲ್ಲೆಗಳಲ್ಲಿ 9 ತಂಡಗಳನ್ನು ತಯಾರಿಗೊಳಿಸಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ತಿಳಿಸಿದೆ. ಮುಂಬೈಗೆ ಮೂರು, ಪಾಲ್ಘರ್‌ಗೆ ಎರಡು, ಥಾಣೆ, ರಾಯಗಢ, ರತ್ನಗಿರಿ ಹಾಗೂ ಸಿಂಧುದುರ್ಗ ಜಿಲ್ಲೆಗಳಿಗೆ ತಲಾ ಒಂದು ತಂಡಗಳನ್ನು ಸಿದ್ಧಪಡಿಸಲಾಗಿದೆ.
ಎನ್‌ಡಿಆರ್‌ಎಫ್ ಮಹಾರಾಷ್ಟ್ರ ಸರಕಾರದ ಪರಿಹಾರ ಹಾಗೂ ಪುನರ್ವಸತಿ ಇಲಾಖೆ, ಹವಾಮಾನ ಕಚೇರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದೊಂದಿಗೆ ನಿಕಟ ಸಂಪರ್ಕದಲ್ಲಿದೆ. ಎನ್‌ಡಿಆರ್‌ಎಫ್ ಸ್ಥಳೀಯ ಅಧಿಕಾರಿಗಳ ಜೊತೆಗೆ ಕರಾವಳಿ ಜಿಲ್ಲೆಗಳಲ್ಲಿ ಸರ್ವೆಯನ್ನು ನಡೆಸಿದೆ.