ಉಪ್ಪಿಟ್ಟಿನ ಉಪಾಖ್ಯಾನ

Update: 2020-06-08 17:20 GMT

ಈ ದಿನಗಳಲ್ಲಿ ನಗರ-ಹಳ್ಳಿಗಳಲ್ಲಿ ಬದುಕುತ್ತಿರುವ ಜನರ ಬೆಳಗಿನ ಮೊತ್ತ ಮೊದಲ ಯೋಚನೆ ತಿಂಡಿಗೆ ಏನು ಮಾಡಬೇಕು ಎಂಬುದು. ಈ ಮೊದಲು ಇದೆಲ್ಲಾ ಬರೀ ನಗರದ ಬದುಕಿಗೆ ಸೀಮಿತ ಎಂಬ ನಂಬುಗೆ ಇದ್ದುವು. ಆಹಾರದ ಕ್ರಮಗಳಲ್ಲಿ ಅಂತಹ ಹೆಚ್ಚು ವ್ಯತ್ಯಾಸ ಈಗ ಹಳ್ಳಿ ಮತ್ತು ನಗರಗಳ ನಡುವೆ ಇಲ್ಲ. ಎಲ್ಲರಿಗೂ ಬೆಳಗ್ಗೆಯ ತಿಂಡಿಯ ಚಿಂತೆ ಇದ್ದೇ ಇರುತ್ತದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ನಾಲ್ಕೈದು ತಿಂಡಿ ಬಿಟ್ಟರೆ ಇನ್ನೇನು ಇಲ್ಲವೇನೋ ಅನ್ನುವಷ್ಟು ಪ್ರಸಿದ್ಧ್ದಿ ಪಡೆದವು ಇಡ್ಲಿ, ದೋಸೆ, ಚಿತ್ರಾನ್ನ/ ರೈಸ್ ಬಾತ್, ಪುಳಿಯೋಗರೆ ಮತ್ತು ಉಪ್ಪಿಟ್ಟು.

ಉಪ್ಪಿಟ್ಟು ಎಂಬ ಶಬ್ದ ಕೇಳಿದೊಡನೆ ಜನರ ಮುಖವೆಲ್ಲಾ ಕಿವುಚಿಟ್ಟಂತಾಗುತ್ತದೆ. ಮುಷ್ಟಿಗಳು ಬಿಗಿಯಾಗಿ ಗುದ್ದಿಬಿಡೋಣ ಎನ್ನುವಷ್ಟು ರೇಗು ಹತ್ತುವುದು ಉಂಟು ಕೆಲವರಿಗೆ. ಇನ್ನೂ ಕೆಲವರಿಗೆ ಜೀವನವೇ ಜಿಗುಪ್ಸೆ ಬಂದು ಬಿಡುತ್ತದೆ. ಆದರೆ ಅಂತಹ ಕೆಟ್ಟದೇನು ಇದೆ ಈ ಉಪ್ಪಿಟ್ಟಿನಲ್ಲಿ ಎಂದು ಹುಡುಕಿದರೆ ಏನೂ ಇಲ್ಲ. ಉಳಿದ ತಿಂಡಿಗಳಿಗೆ, ಉಪಾಹಾರಗಳಿಗೆ ಬಳಸುವ ಈರುಳ್ಳಿ, ಟೊಮೇಟೊ, ಕರಿಬೇವಿನ ಒಗ್ಗರಣೆ, ರವೆ ಅಥವಾ ನುಚ್ಚು ಇಂಥವೇ ಇರುತ್ತವೆ. ಆದರೂ ಯಾಕೋ ಉಪ್ಪಿಟ್ಟಿನ ಮೇಲೆ ಮಾತ್ರ ಒಲವು ತುಂಬುವುದಿಲ್ಲ, ಅದಾಗ್ಯೂ ಉಳಿದ ತಿಂಡಿಗಳಿಗೆ ಪೈಪೋಟಿ ಕೊಡುತ್ತಲೇ ಇವತ್ತಿಗೂ ಸಮಾನ ಸ್ಥಾನಮಾನ ಕಾಪಾಡಿಕೊಂಡಿದೆ. ಹತ್ತು ಜನರ ಬೆಳಗಿನ ತಿಂಡಿಯ ಸಮೀಕ್ಷೆ ನಡೆಸಿದರೆ ಕನಿಷ್ಠ 2-3 ಮನೆಯ ತಿಂಡಿ ಉಪ್ಪಿಟ್ಟೇ ಆಗಿರುತ್ತೆ. ಅದು ಒಂದೇ ತೆರನಾದ ಉಪ್ಪಿಟ್ಟು ಅಲ್ಲ ವಿಭಿನ್ನ ಮಿಶ್ರಣಗಳ ತಯಾರಿಗಳ ಉಪ್ಪಿಟ್ಟು. ಕಿರಿಯರು ಮುಖ ಕಿವುಚಿದಷ್ಟು ಹಿರಿಯರು ಇನ್ನಷ್ಟು ರುಚಿಯಾಗಿ ಮಾಡುವ ಉಪ್ಪಿಟ್ಟಿನ ವೆರೈಟಿ ಜಾಸ್ತಿಯಾಗುತ್ತಲೇ ಇದೆ.

ಉಪ್ಪಿಟ್ಟು, ಉಪ್ಪುಮಾವು, ಉಪ್ಮ, ಖಾರಬಾತು, ಸಿಹಿಯ ಜೊತೆಗೆ ‘ಚೌ ಚೌ ಬಾತು’ ಅಂತೆಲ್ಲಾ ಕರೆಯಿಸಿಕೊಳ್ಳುವ ಈ ತಿಂಡಿಯು ಬಹಳ ಹಳೆಯ ಪರಿಚಯಸ್ಥ ಅಡುಗೆಯೇ ಆಗಿದೆ. ಆದರೆ ಮಾಡುವವರಿಗೆ ಸುಲಭ, ತಿನ್ನುವವರಿಗೆ ಕಷ್ಟ ಅಂತಲೋ ಯಾರೋ ಹಬ್ಬಿಸಿದ ಪುಕಾರು ಹಾಗೆ ಉಳಿದುಕೊಂಡು ಅದು ರುಚಿಯಾಗಿದ್ದರೂ ಒಗ್ಗದ ಆಹಾರವಾಗಿ ಕಗ್ಗಂಟಾಗಿ ನಮ್ಮ ನಡುವೆ ಉಳಿದುಕೊಂಡಿದೆ. ಉಪ್ಪಿಟ್ಟಿಗೆ ಬಳಸುವ ಮುಖ್ಯವಾದ ಪದಾರ್ಥ ನುಚ್ಚು ಅಥವಾ ರವೆ. ಇದನ್ನು ಗೋಧಿಯಿಂದ ಮತ್ತು ಅಕ್ಕಿಯಿಂದ ಎರಡರಿಂದಲೂ ಮಾಡಬುದು. ಮಾರುಕಟ್ಟೆಯಲ್ಲಿ ನಮಗೆ ದೊರಕುವುದು ಹೆಚ್ಚಿಗೆ ಗೋಧಿಯ ರವೆ ಅಥವಾ ನುಚ್ಚೆ. ಹೊಟೇಲ್ ಮತ್ತು ದರ್ಶಿನಿಗಳಲ್ಲಿ ಸಹ ರವೆಯಿಂದ ಮಾಡಿದ ಉಪ್ಪಿಟ್ಟೇ ಹೆಚ್ಚು ಬಿಕರಿಯಾಗುವುದು. ರವೆಯು ಬೆಂದು ಅಂಟಿಕೊಳ್ಳುವ ಕಾರಣದಿಂದ ಇದನ್ನು ‘ ಕಾಂಕ್ರಿಟ್’ ಎಂದು ಅಪಹಾಸ್ಯ ಮಾಡುತ್ತಾ, ತಿನ್ನುವ ಬಗ್ಗೆ ಅಪಾರವಾದ ನಿರ್ಲಕ್ಷವನ್ನು ಮಕ್ಕಳಿದ್ದಾಗಲಿಂದಲೂ ನಾವು ಬೆಳೆಸಿಕೊಂಡು ಬಂದಿದ್ದೇವೆ.

ರವೆ/ಗೋಧಿ ಉಪ್ಪಿಟ್ಟು:             
ಇವತ್ತು ಹೆಚ್ಚು ಪ್ರಚಲಿತವಿರುವ ಉಪ್ಪಿಟ್ಟು ಇದೆ. ಚೂರು ಬೆಂದರೂ ಸಾಕು ಕಾಂಕ್ರಿಟ್ ಆಗುವುದೂ ಇದೆ. ಆದರೆ ಹದವಾಗಿ ಹುರಿದು ಅಗತ್ಯದ ನೀರು, ತುಪ್ಪ, ಎಣ್ಣೆ ಹಾಕಿ ಮಾಡಿದರೆ ಬೆಣ್ಣೆಯ ಹಾಗೆ ಬಾಯಿಗಿಟ್ಟರೆ ಕರಗಿ ಹೋಗುತ್ತದೆ. ತುಪ್ಪ ಅಥವಾ ಎಣ್ಣೆಯಲ್ಲಿ ಹುರಿದ ದಪ್ಪ ಅಥವಾ ಮಧ್ಯಮ ಗಾತ್ರ ರವೆಯನ್ನು ಅಗತ್ಯದಷ್ಟು ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೇಟೊ ಮತ್ತು ಕರಿಬೇವಿನ ಒಗ್ಗರಣೆಯಲ್ಲಿ ಬೇಯಿಸಿಕೊಂಡು ಅದಕ್ಕೆ ನೀರು ಸೇರಿಸಿ ಕುದಿಸಿ ರವೆ ಸೇರಿಸಿ ಬಾಡಿಸಿ ಅರಳಲು ಬಿಟ್ಟರೆ ರವೆ ಉಪ್ಪಿಟ್ಟು ಸಿದ್ಧ. ಇದನ್ನು ಹುಡಿಹುಡಿಯಾಗಿ ಬೇಕು ಎನ್ನುವರು ನೀರಿನ ಪ್ರಮಾಣದಲ್ಲಿ ಎಚ್ಚರಿಕೆ ವಹಿಸಿ ಬೇಯಿಸಿ ಬಾಡಿಸಬೇಕು. ಇಲ್ಲವಾದರೆ ಪಾಯಸವಾಗಿಬಿಡುತ್ತದೆ. ಬಿಸಿಯಲ್ಲೇ ತಿನ್ನಬೇಕು ಆರಿದರೆ ಅವಲಕ್ಷಣವಾಗಿ ಬಿಡುತ್ತದೆ. ಇದಕ್ಕೆ ಒಳ್ಳೆಯ ಕಾಯಿಚಟ್ನಿ ಕಲಸಿ ತಿನ್ನಬಹುದು. ಹಾಗೆಯೇ ತುಪ್ಪ ಕೂಡ. ಇಂತಹದು ದರ್ಶಿನಿ ಹೊಟೇಲ್‌ಗಳಲ್ಲಿ ಬಹಳ ಜನಪ್ರಿಯ.

ಅಕ್ಕಿನುಚ್ಚಿನ ಉಪ್ಪಿಟ್ಟು:              
ಮನೆಗಳಲ್ಲಿ ಹೆಚ್ಚು ಪ್ರಚಲಿತ. ಇದನ್ನು ಮಾಡಲು ಅಕ್ಕಿಯನ್ನು ತೊಳೆದು ನೆನೆಸಿ ನಂತರ ಬಿಸಿಲಿನಲ್ಲಿ ಒಣಗಿಸಿ ರಾಗಿಕಲ್ಲಿನಲ್ಲಿ ತಿರುವಿ ನುಚ್ಚು ಮಾಡಿ ಜರಡಿ ಹಿಡಿದು ಮಧ್ಯಮಗಾತ್ರದ ನುಚ್ಚನ್ನು ಉಪ್ಪಿಟ್ಟಿಗೆ ಬಳಸಬೇಕು. ಥೇಟ್ ರವೆಯಂತೆ ಹುರಿದು ಮೊದಲಿಗೆ ಒಗ್ಗರಣೆ, ಈರುಳ್ಳಿ ಮತ್ತು ಸಣ್ಣಗೆ ಹಚ್ಚಿದ ತರಕಾರಿಗಳನ್ನು ಹಾಕಿ ಚೆನ್ನಾಗಿ ಬೇಯಿಸಿ ನಂತರ ನೀರು ಹಾಕಿ ಕುದಿಸಿ ಆಮೇಲೆ ಅಕ್ಕಿತರಿಯನ್ನು ಸುರುವಬೇಕು. ಆಮೇಲೆ ಕೂಡ ಸಣ್ಣ ಉರಿಯಲ್ಲಿ ಬೇಯಿಸಿ ನಂತರ ಅಕ್ಕಿ ಪಂಗಲು ಬಿಡಬೇಕು. ಇಲ್ಲವಾದರೆ ಅಕ್ಕಿ ಪೂರ್ತಿ ಬೇಯುವುದಿಲ್ಲ. ಇದಂತೂ ಬಹಳ ರುಚಿಯಾದ ಶುಚಿಯಾದ ಮತ್ತು ಬಿಸಿ ಆರಿದ ನಂತರವೂ ತಿನ್ನಬಹುದಾದ ಉಪ್ಪಿಟ್ಟು. ನಮ್ಮ ಮಂಡ್ಯದ ಕಡೆಯ ಮದುವೆ, ತಿಥಿ ಇತ್ಯಾದಿ ಕಾರ್ಯಕ್ರಮಗಳ ದಿನ ಬೆಳಗ್ಗೆಯ ತಿಂಡಿ ಬಹುತೇಕ ಅಕ್ಕಿ ಉಪ್ಪಿಟ್ಟೇ ಆಗಿರುತ್ತಿತ್ತು. ಇದಕ್ಕೆ ಕೆಲವೊಮ್ಮೆ ಅರಿಶಿನ ಸೇರಿಸಿ ಬಣ್ಣದ ಉಪ್ಪಿಟ್ಟು ಕೂಡ ಮಾಡುತ್ತಿದ್ದರು. ಅಂತಹ ರುಚಿಗಟ್ಟಾದ ಉಪ್ಪಿಟ್ಟು ಮತ್ತೆ ನಾನು ತಿಂದಿಲ್ಲ. ಅಂದ ಹಾಗೆ ಈ ಅಕ್ಕಿನುಚ್ಚಿಗೆ ತೊಗರಿ ಅಥವಾ ಹೆಸರು ಬೇಳೆಯ ನುಚ್ಚು/ತರಿಯನ್ನು ಬೇಯಿಸಿ ಸೇರಿಸಿದರೆ ರುಚಿಯು ಮುಪ್ಪಟ್ಟು ಜಾಸ್ತಿಯಾಗುತ್ತದೆ. ಹಾಗೆಯೇ ಅದಕ್ಕೆ ಬೆಣ್ಣೆ ಅಥವಾ ತುಪ್ಪದ ಪ್ರಮಾಣವು ಕೊಂಚ ಧಾರಾಳವಾಗಿ ಹಾಕಬೇಕಾಗುತ್ತದೆ.

ಅವರೇಕಾಳು ಉಪ್ಪಿಟ್ಟು:     
 ಅವರೆಕಾಯಿ ಸೀಜನ್ ಬಂತು ಎಂದರೆ ಸಕಲ ಅಡುಗೆಗಳೆಲ್ಲವೂ ಅವರೆಕಾಯಿ ಮಯವಾಗುತ್ತವೆ. ಅದರಲ್ಲಿ ಹಸಿಅವರೆಕಾಯಿ ಅಥವಾ ಅವರೆ ಬೇಳೆ ಹಾಕಿದ ಉಪ್ಪಿಟ್ಟಿಗೆ ಅದರದ್ದೇ ಅಭಿಮಾನಿಗಳ ದೊಡ್ಡ ಬಳಗವಿದೆ. ಸೀಜನ್ ಶುರುವಾಗಿದ್ದೇ ತಡ ಸೊಗಡಿನ ಅವರೆಕಾಯಿ ತಂದು ಬಿಡಿಸಿ ಹಿಸುಕಿ ಅವರೆಬೇಳೆ ಮಾಡಿ ಅದರಲ್ಲಿ ಉಪ್ಪಿಟ್ಟು ಮಾಡುವುದು ವಾರ್ಷಿಕ ಸಂಪ್ರದಾಯ. ಇದನ್ನು ದಪ್ಪ ರವೆ ಅಥವಾ ಅಕ್ಕಿನುಚ್ಚು ಎರಡರಲ್ಲೂ ಮಾಡಬಹುದು. ಧಾರಾಳವಾಗಿ ತುಪ್ಪ ಮತ್ತು ತೀರ ಸಣ್ಣಗೆ ಹಚ್ಚಿದ ತರಕಾರಿ ಬೆರೆಸಿದರೆ ವೈವಿಧ್ಯಮಯವಾಗಿರುತ್ತದೆ. ಇದು ಸಂಕ್ರಾಂತಿ ಕಾಲದ ವಿಶೇಷ ಉಪ್ಪಿಟ್ಟು.

ಶಾವಿಗೆ ಉಪ್ಪಿಟ್ಟು:       
 ಒತ್ತು ಶಾವಿಗೆಯಿಂದ ಪಾಯಸ ಮಾಡಬಹುದು ಆದರೆ ಉಪ್ಪಿಟ್ಟು ಮಾಡಲಾಗದು. ಉಪ್ಪಿಟ್ಟಿಗೆ ಒಣ ಶಾವಿಗೆಯೇ ಆಗಬೇಕು. ರವೆ ಉಪ್ಪಿಟ್ಟು ಮಾಡಿದ ತರವೇ ಆದರೂ ಇಲ್ಲಿ ಒಗ್ಗರಣೆ ಈರುಳ್ಳಿ ಒಂದು ಪಾತ್ರೆಯಲ್ಲಿ ಮಾಡಿಕೊಂಡು, ಶಾವಿಗೆಯನ್ನು ಹದವಾಗಿ ಮತ್ತೊಂದು ಪಾತ್ರೆಯಲ್ಲಿ ಬೇಯಿಸಿಕೊಂಡು ತೆಗೆದು ನೀರು ಸೋಸಿ ನಂತರ ಒಗ್ಗರಣೆ ಪಾತ್ರೆಗೆ ಸುರುವಿ ಕಲಸಿ ಒಂದೈದು ನಿಮಿಷ ಬೇಯಿಸಬೇಕು. ಸಣ್ಣ ಕ್ಯಾರೆಟಿನ ತುಂಡುಗಳು, ಹಸಿ ಬಟಾಣಿ ಮತ್ತು ಧಾರಾಳವಾಗಿ ಹುರಿದು ಸೇರಿಸಿದ ಗೋಡಂಬಿ ಶಾವಿಗೆ ಉಪ್ಪಿಟ್ಟಿನ ನೆನಪನ್ನು ನಾಕವಾಗಿಸುತ್ತವೆ.

ಜೋಳದ ಉಪ್ಪಿಟ್ಟು:          
ಇದು ಹಲವರಿಗೆ ಪರಿಚಯವೇ ಇಲ್ಲ. ಯಾಕೆಂದರೆ ಮುಸುಕಿನ ಜೋಳದ ಬಳಕೆ ಕಡಿಮೆ. ಅದು ಹಿಟ್ಟಾಗಿ ಅಥವಾ ಪಶು ಮೇವಾಗಿ ಬಳಸಿದಷ್ಟು ನೆರವಾದ ಅಡುಗೆಗಳಿಗೆ ಬಳಸಿದ್ದು ಕಡಿಮೆಯೇ.. ಪೂರ್ವಾತ್ಯ ದೇಶಗಳ ಅಡುಗೆಗಳ ಪ್ರಭಾವದಿಂದ ಎಳೆಯ ಜೋಳ (Babycorn) ವನ್ನು ಕೆಲವು ಪಲ್ಯಗಳಿಗೆ ಬಳಸಲು ಶುರು ಮಾಡಿದ್ದಾರೆ. ಹಾಗೆಯೇ ಒಣಗಿದ ಮುಸುಕಿನ ಜೋಳವನ್ನು ನುಚ್ಚು ಮಾಡಿ ಅದರಿಂದ ಉಪ್ಪಿಟ್ಟು ಮಾಡಬಹುದು. ಥೇಟ್ ಅಕ್ಕಿನುಚ್ಚಿನ ಉಪ್ಪಿಟ್ಟಿನ ಹಾಗೆ. ರುಚಿ ಉಳಿದವುಗಳ ಹಾಗೆ ಒದಗಿಬರುವುದಿಲ್ಲ. ಆದರೆ ಇದು ಪೌಷ್ಟಿಕಾಂಶಗಳುಳ್ಳ ಆಹಾರ ಎಂಬುದರಲ್ಲಿ ಅನುಮಾನವಿಲ್ಲ. ಇದೊಂದು ತರಹದ ವಿಭಿನ್ನ ರುಚಿ. ಮಾಂಸದ ಉಪ್ಪಿಟ್ಟು??: ಅಯ್ಯೋ ಸಾಧ್ಯವೇ? ಉಂಟೇ? ಎಂದೆಲ್ಲ ಉದ್ಗರಿಸುವ ಅಗತ್ಯವೇ ಇಲ್ಲ. ನೀವು ಅಡುಗೆಯಲ್ಲಿ ಸೃಜನಶೀಲರಾಗಿದ್ದಲ್ಲಿ ಎಲ್ಲ ಬಗೆಯ ರುಚಿಗಳ ಆವಿಷ್ಕಾರ ಸಾಧ್ಯ. ಹಾಗೆಯೇ ಮಾಂಸದ ಉಪ್ಪಿಟ್ಟು ಕೂಡ. ಇದನ್ನು ಅಕ್ಕಿ ನುಚ್ಚಿನ ಉಪ್ಪಿಟ್ಟಿನ ಜೊತೆಯಲ್ಲಿ ಆಸಕ್ತರು ಪ್ರಯೋಗ ಮಾಡಬಹುದು.

ಮಟನ್ (ಕುರಿ ಮಾಂಸ) ಇದಕ್ಕೆ ಹೆಚ್ಚು ಹೊಂದಾಣಿಕೆಯಾಗುತ್ತದೆ, ಕೋಳಿ ಮತ್ತು ಮೀನಿಗಿಂತಲೂ. ಮಟನ್ ನಲ್ಲಿ ಮಾಂಸದ ಎಳೆಎಳೆಯ ನಡುವೆ ಇರುವ ಕೊಬ್ಬಿನಂಶ ಒಳ್ಳೆಯ ರುಚಿಯನ್ನು ಕೊಡುತ್ತದೆ. ಇದಕ್ಕಾಗಿ ನೀವು ಮಾಂಸವನ್ನು ಉಪ್ಪು ಮತ್ತು ಅರಿಶಿನದೊಂದಿಗೆ ಪ್ರತ್ಯೇಕವಾಗಿ ಬೇಯಿಸಿಕೊಂಡು ನಂತರ ಅದನ್ನು ಕರಿಬೇವಿನ ಒಗ್ಗರಣೆ, ಈರುಳ್ಳಿ, ಟೊಮೇಟೊ ಜೊತೆಗೆ ಮತ್ತೊಮ್ಮೆ ಹುರಿದು ನಂತರ ಅಗತ್ಯದಷ್ಟು ನೀರು ಸೇರಿಸಿ ಕುದಿಸಿ ನಂತರ ಹುರಿದಿಟ್ಟ ಅಕ್ಕಿನುಚ್ಚು ಸೇರಿಸಿ ಹದವಾಗಿ ಸಣ್ಣ ಉರಿಯಲ್ಲಿ ಬೇಯಿಸಿ.. ನಿಧಾನಕ್ಕೆ ಪಂಗಲು ಬಿಡಬೇಕು. ಇದಕ್ಕೆ ಯಾವುದೇ ಅನಗತ್ಯ ಮಸಾಲೆ ಸೇರಿಸಬಾರದು. ಅದೆಲ್ಲ ಸೇರಿಬಿಟ್ಟರೆ ಇದು ನುಚ್ಚಿನ ಬಿರಿಯಾನಿ ಅಥವಾ ಪುಲಾವ್ ಆಗಿಬಿಡುತ್ತದೆ. ಪಂಗಿದ ಮೇಲೆ ತಟ್ಟೆಗೆ ಬಡಿಸಿಕೊಂಡು ತಿನ್ನಬಹುದು.. ಬಡಿಸುವಾಗ ಏಳುವ ಅಡುಗೆಯ ವಾಸನೆ ವರ್ಣಿಸಸದಳ. ಇನ್ನು ಹತ್ತಾರು ತರದಲ್ಲಿ ಉಪ್ಪಿಟ್ಟಿನ ಆವಿಷ್ಕಾರಗಳು ಇವೆ. ಪ್ರೀತಿಯೊಂದು ಹುಟ್ಟಿ ಬಿಟ್ಟರೆ ಸಾಕು, ಅಡುಗೆಯ ರುಚಿ ಸ್ವರ್ಗಕ್ಕೆ ದಾರಿಯನ್ನು ಹುಡುಕಿಕೊಡುತ್ತದೆ.. ಅಂತಹ ಹಲವು ಅಡುಗೆಗಳಲ್ಲಿ ಉಪ್ಪಿಟ್ಟು ಕೂಡ ಒಂದು. ಅದು ‘ಕಾಂಕ್ರಿಟ್ ‘ಅನ್ನುವುದೊಂದು ಸುಳ್ಳು ಆರೋಪ. ಅಂದ ಹಾಗೆ ಮೊನ್ನೆಯಷ್ಟೇ ನಾವು ಶತಮಾನೋತ್ಸವ ಆಚರಿಸಿದ ಶಿಕ್ಷಣ ತಜ್ಞ ಡಾ. ಎಚ್.ಎನ್.ನರಸಿಂಹಯ್ಯನವರಿಗೆ ಉಪ್ಪಿಟ್ಟು ಎಂದರೆ ಬಹಳ ಇಷ್ಟವಂತೆ. ನೀವೂ ಕೂಡ ಬಗೆಬಗೆಯಾಗಿ ಮಾಡಿ ತಿನ್ನಿ, ಒಂದಲ್ಲ ಒಂದು ಕ್ರಮ ಇಷ್ಟವಾಗಬಹುದು.

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News