ಕೊರೋನ ಸೋಂಕಿತರಿಗೆ ಚಿಕಿತ್ಸೆ: ಕೇಜ್ರಿವಾಲರ ಎರಡು ಆದೇಶಗಳನ್ನು ರದ್ದುಗೊಳಿಸಿದ ಲೆ. ಗವರ್ನರ್

Update: 2020-06-08 18:44 GMT

ಹೊಸದಿಲ್ಲಿ, ಜೂ.8: ಕೊರೋನ ಸೋಂಕಿನ ಲಕ್ಷಣವಿರುವವರನ್ನು ಮಾತ್ರ ದಿಲ್ಲಿಯ ಆಸ್ಪತ್ರೆಗಳಲ್ಲಿ ಪರೀಕ್ಷೆ ನಡೆಸಬೇಕು ಹಾಗೂ ದಿಲ್ಲಿ ನಿವಾಸಿಗಳಿಗೆ ಆಸ್ಪತ್ರೆಗಳಿಗೆ ಪ್ರವೇಶ ನಿರ್ಬಂಧಿಸಬೇಕು ಎಂಬ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲರ ಆದೇಶಗಳನ್ನು ಸೋಮವಾರ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ತಳ್ಳಿಹಾಕಿದ್ದಾರೆ.

ಇದರೊಂದಿಗೆ ಕೇಂದ್ರ ಸರಕಾರ ಮತ್ತು ಅರವಿಂದ್ ಕೇಜ್ರಿವಾಲ್ ನಡುವಿನ ಸಂಷರ್ಘಕ್ಕೆ ಮತ್ತೆ ಚಾಲನೆ ದೊರಕಿದಂತಾಗಿದೆ. ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿನ ಲಕ್ಷಣ ಇಲ್ಲದವರಿಗೂ ಚಿಕಿತ್ಸೆ ನೀಡಬೇಕು ಮತ್ತು ಕೊರೋನ ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವ ಅಪಾಯದಲ್ಲಿರುವವರಿಗೂ ಚಿಕಿತ್ಸೆ ಒದಗಿಸಬೇಕು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಸೂಚಿಸಿರುವ ಪರೀಕ್ಷೆಯ ನಿಯಮವನ್ನು ಉಲ್ಲಂಘಿಸಿದರೆ ರಾಜಧಾನಿಯಲ್ಲಿ ಕೊರೋನ ಸೋಂಕು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಹರಡಲಿದೆ ಎಂದು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹೇಳಿದ್ದಾರೆ.

ರಾಜ್ಯದಲ್ಲಿ ಕೊರೋನ ಸೋಂಕು ತೀವ್ರವಾಗಿ ಹರಡುತ್ತಿರುವ ಮಧ್ಯೆಯೇ, ದಿಲ್ಲಿ ಸರಕಾರದ ಅಧೀನದ ಹಾಗೂ ಕೆಲವು ಖಾಸಗಿ ಆಸ್ಪತ್ರೆಗಳನ್ನು ದಿಲ್ಲಿಯ ನಿವಾಸಿಗಳಿಗೆ ಮೀಸಲಿರಿಸುವ ಕೇಜ್ರೀವಾಲರ ನಿರ್ಧಾರಕ್ಕೂ ತಡೆ ನೀಡಲಾಗಿದೆ. ದಿಲ್ಲಿಯಲ್ಲಿ ಯಾವುದೇ ಭೇದಭಾವವಿಲ್ಲದೆ ಎಲ್ಲರಿಗೂ ಚಿಕಿತ್ಸೆ ನೀಡಲಾಗುವುದು. ನಿವಾಸಿಯಲ್ಲ ಎಂಬ ಕಾರಣಕ್ಕೆ ಯಾವುದೇ ವ್ಯಕ್ತಿಗೆ ಚಿಕಿತ್ಸೆ ನಿರಾಕರಿಸಬಾರದು ಎಂದು ತಿಳಿಸಿರುವ ಲೆಫ್ಟಿನೆಂಟ್ ಗವರ್ವರ್, ಆರೋಗ್ಯದ ಹಕ್ಕು ಸಂವಿಧಾನದಲ್ಲಿ ನೀಡಲಾಗಿರುವ ಬದುಕುವ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂದಿದ್ದಾರೆ.

ದಿಲ್ಲಿ ಜನರಿಗೆ ಭಾರೀ ಸಮಸ್ಯೆ ತರಲಿರುವ ನಿರ್ಧಾರ: ಕೇಜ್ರೀವಾಲ್ ಟ್ವೀಟ್

ದಿಲ್ಲಿ ಸರಕಾರದ ಅಧೀನದಲ್ಲಿರುವ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಬೇಕೆಂಬ ಲೆಫ್ಟಿನೆಂಟ್ ಗವರ್ನರ್ ಅವರ ನಿರ್ಧಾರ ದಿಲ್ಲಿಯ ಜನತೆಗೆ ಭಾರೀ ಸಮಸ್ಯೆ ಮತ್ತು ಸವಾಲಿಗೆ ಕಾರಣವಾಗಲಿದೆ ಎಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಪ್ರತಿಕ್ರಿಯಿಸಿದ್ದಾರೆ.

ಬಹುಷಃ ತಾನು ಇಡೀ ದೇಶದ ಜನತೆಗೆ ಸೇವೆ ಸಲ್ಲಿಸಬೇಕೆಂದು ದೇವರು ಸಂಕಲ್ಪಿಸಿರಬೇಕು ಎಂದವರು ಟ್ವೀಟ್ ಮಾಡಿದ್ದಾರೆ. ಲೆ. ಗವರ್ನರ್ ಆದೇಶವನ್ನು ಟೀಕಿಸಿರುವ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಬಿಜೆಪಿಯ ಕುಮ್ಮಕ್ಕಿನಿಂದ ಈ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ. ಬಿಜೆಪಿ ಈ ಹಿಂದೆ ಪಿಪಿಐ ಮತ್ತು ವೆಂಟಿಲೇಟರ್ ಹಗರಣದಲ್ಲಿ ನಿರತವಾಗಿತ್ತು. ದಿಲ್ಲಿಯು ಕೊರೋನ ವಿಪತ್ತನ್ನು ಜಾಣ್ಮೆಯಿಂದ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಲು ಪ್ರಯತ್ನಿಸುತ್ತಿದೆ. ಆದರೆ ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಲೆಫ್ಟಿನೆಂಟ್ ಗವರ್ನರ್ ಮೇಲೆ ಒತ್ತಡ ಹಾಕಿದೆ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News