ಬಿಸ್ಕೆಟ್ ಎಂದು ಭಾವಿಸಿ ಜಿಲೆಟಿನ್ ಕಡ್ಡಿ ಜಗಿದ ಬಾಲಕ ದಾರುಣ ಸಾವು

Update: 2020-06-11 03:49 GMT
ಸಾಂದರ್ಭಿಕ ಚಿತ್ರ

ತಿರುಚ್ಚಿ, ಜೂ.11: ಮನೆಯಲ್ಲಿ ಮೀನುಗಾರಿಕೆಗಾಗಿ ತಂದಿಟ್ಟಿದ್ದ ಜಿಲೆಟಿನ್ ಕಡ್ಡಿಯನ್ನು ಆರು ವರ್ಷದ ಬಾಲಕನೊಬ್ಬ ಬಿಸ್ಕೆಟ್ ಎಂದು ತಪ್ಪಾಗಿ ಭಾವಿಸಿ ಕಚ್ಚಿದಾಗ ಉಂಟಾದ ಸ್ಫೋಟಕ್ಕೆ ಬಾಲಕ ಬಲಿಯಾಗಿದ್ದಾನೆ. ತಿರುಚ್ಚಿ ಸಮೀಪದ ತೊಟ್ಟಿಯಮ್ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

ತೊಟ್ಟಿಯಮ್ ತಾಲೂಕಿನ ಅಲಗರಾಯಿ ಎಂಬ ಗ್ರಾಮದ ಭೂಪತಿ ಎಂಬುವವರ ಮಗ ವಿಷ್ಣುದೇವ್ ಸ್ಫೋಟಕ್ಕೆ ಬಲಿಯಾದ ಬಾಲಕ. ದಿನಗೂಲಿಯಾಗಿದ್ದ ಭೂಪತಿ ತನ್ನ ಅಣ್ಣ ಗಂಗಾಧರನ್ ಜತೆ ಕಾವೇರಿ ನದಿಯಲ್ಲಿ ಸ್ಫೋಟಕ ಬಳಸಿ ಮೀನು ಹಿಡಿಯತ್ತಿದ್ದರು ಎನ್ನಲಾಗಿದೆ.

ಮಂಗಳವಾರ ಗಂಗಾಧರನ್ ತನ್ನ ಸ್ನೇಹಿತರಾದ ಮೋಹನ್‌ರಾಜ್ ಮತ್ತು ತಮಿಳರಸನ್ ಎಂಬುವವರ ಜತೆ ಸ್ಥಳೀಯವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸೆಲ್ವಕುಮಾರ್ ಎಂಬುವವರನ್ನು ಭೇಟಿ ಮಾಡಿ ಕಾವೇರಿ ನದಿಯಲ್ಲಿ ಮೀನು ಹಿಡಿಯಲು ಮೂರು ಜಿಲೆಟಿಕ್ ಕಡ್ಡಿಗಳನ್ನು ತಂದಿದ್ದರೆನ್ನಲಾಗಿದೆ. (ನದಿ ನೀರಿನಲ್ಲಿ ಬಲೆಯನ್ನು ಹರಡಿ ಜಿಲೆಟಿನ್ ಕಡ್ಡಿ ಸ್ಫೋಟಿಸಿದಾಗ ಮೀನುಗಳು ಹೆದರಿ ಓಡುತ್ತಾ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ).

ಎರಡು ಜಿಲೆಟಿನ್ ಕಡ್ಡಿಗಳೊಂದಿಗೆ ಮೀನು ಹಿಡಿಯಲು ತೆರಳಿದ್ದ. ಉಳಿದ ಒಂದನ್ನು ನೋಡಿದ ವಿಷ್ಣು, ಇದನ್ನು ಬಿಸ್ಕೆಟ್ ಇರಬೇಕು ಎಂದು ತಪ್ಪಾಗಿ ಭಾವಿಸಿ ಕಚ್ಚಿದಾಗ ಸ್ಫೋಟ ಸಂಭವಿಸಿತು ಎಂದು ತಿಳಿದುಬಂದಿದೆ.

ಬಾಲಕನ ಬಾಯಲ್ಲೇ ಸ್ಫೋಟ ಸಂಭವಿಸಿದ್ದು, ದೊಡ್ಡ ಸದ್ದು ಕೇಳಿ ಭೂಪತಿ ಹಾಗೂ ಗಂಗಾಧರನ್ ತಕ್ಷಣ ಧಾವಿಸಿ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಬಾಲಕ ಕೊನೆಯುಸಿರೆಳೆದ. ಮಗುವಿನ ಸಾವಿನ ಸುದ್ದಿಯನ್ನು ಮುಚ್ಚಿಟ್ಟು, ತುರಾತುರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಾಲಕನ ಸಾವಿಗೆ ಕಾರಣರಾದ ಆರೋಪದಲ್ಲಿ ಗಂಗಾಧರನ್, ಮೋಹನ್‌ರಾಜ್, ಭೂಪತಿ ಮತ್ತು ಸೆಲ್ವಕುಮಾರ್‌ನನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News