ಕೊರೋನ: ಸರ್ಕಾರಿ ಆಸ್ಪತ್ರೆಗಳ 70% ಬೆಡ್ ಮೀಸಲಿದ್ದರೂ ರೋಗಿಗಳ ಅಲೆದಾಟ

Update: 2020-06-11 03:58 GMT

ಹೊಸದಿಲ್ಲಿ, ಜೂ.11: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಒಂದೇ ಸಮನೆ ಏರುತ್ತಿದ್ದು, ಆಸ್ಪತ್ರೆ ಬೆಡ್‌ಗಾಗಿ ರೋಗಿಗಳು ಪರದಾಡುವಂತಾಗಿದೆ. ಸರ್ಕಾರಿ ಆಸ್ಪತ್ರೆಗಳ ಶೇಕಡ 70ರಷ್ಟು ಬೆಡ್‌ಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಟ್ಟಿರುವುದಾಗಿ ಸರ್ಕಾರ ಹೇಳಿದ್ದರೂ, ವಾಸ್ತವವಾಗಿ ಜನತೆ ಕೋವಿಡ್ ಚಿಕಿತ್ಸೆಗಾಗಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಮೂಲಸೌಕರ್ಯ ಹಾಗೂ ಶುಚಿತ್ವ ಇಲ್ಲ. ಸಿಬ್ಬಂದಿ ಕೊರತೆಯಿಂದಾಗಿ ರೋಗಿಗಳನ್ನು ನಿರ್ಲಕ್ಷಿಸಲಾಗುತ್ತದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಬಲವಾಗಿ ಬೇರೂರಿರುವುದು ಇದಕ್ಕೆ ಕಾರಣ ಎಂದು ಆರೋಗ್ಯ ತಜ್ಞರು ಮತ್ತು ವೈದ್ಯರು ಅಭಿಪ್ರಾಯಪಡುತ್ತಾರೆ.

ದಿಲ್ಲಿ ಸರ್ಕಾರ ಲೋಕನಾಯಕ ಆಸ್ಪತ್ರೆಯಲ್ಲಿ 2,000, ಗುರು ತೇಜ್‌ ಬಹದ್ದೂರ್ ಆಸ್ಪತ್ರೆಯಲ್ಲಿ 1,500, ರಾಜೀವ್‌ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 500, ದೀಪ್‌ಚಂದ್ ಬಂಧು ಆಸ್ಪತ್ರೆಯಲ್ಲಿ 176, ರಾಜಾ ಹರೀಶ್‌ಚಂದ್ರ ಆಸ್ಪತ್ರೆಯಲ್ಲಿ 168 ಹಾಗೂ ಜಗ್ ಪರ್ವೇಶ್ ಚಂದ್ರ ಆಸ್ಪತ್ರೆಯಲ್ಲಿ 16 ಬೆಡ್‌ಗಳನ್ನು ಮೀಸಲಿಟ್ಟಿದೆ ಎಂದು ದಿಲ್ಲಿ ಕೊರೋನ ಆ್ಯಪ್‌ನ ಅಂಕಿಅಂಶಗಳಿಂದ ತಿಳಿದು ಬರುತ್ತದೆ. ಬುಧವಾರವರೆಗೆ ಲೋಕನಾಯಕ ಆಸ್ಪತ್ರೆಯ ಶೇಕಡ 61ರಷ್ಟು ಬೆಡ್ ಖಾಲಿ ಇವೆ. ಅಂತೆಯೇ ತೇಜ್‌ಬಹದ್ದೂರ್ ಆಸ್ಪತ್ರೆಯಲ್ಲಿ 89%, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಶೇಕಡ 49, ದೀಪ್‌ಚಂದ್ ಆಸ್ಪತ್ರೆಯಲ್ಲಿ 53%, ರಾಜಾ ಹರೀಶ್‌ಚಂದ್ರ ಆಸ್ಪತ್ರೆಯಲ್ಲಿ ಶೇಕಡ 87 ಮತ್ತು ಪರ್ವೇಶ್‌ಚಂದ್ರ ಆಸ್ಪತ್ರೆಯಲ್ಲಿ ಶೇಕಡ 100ರಷ್ಟು ಬೆಡ್‌ಗಳು ಖಾಲಿ ಇವೆ.

ಕೇಂದ್ರ ಸರ್ಕಾರ ನಿರ್ವಹಿಸುವ ಆಸ್ಪತ್ರೆಗಳ 1,470 ಬೆಡ್‌ಗಳ ಪೈಕಿ ಶೇಕಡ 84ರಷ್ಟು ಭರ್ತಿಯಾಗಿವೆ. ಲೇಡಿ ಹರ್ಡಿಂಗ್ ಆಸ್ಪತ್ರೆಯಲ್ಲಿ ಬೆಡ್‌ಗಳು ಖಾಲಿ ಇಲ್ಲ. ರಾಮ್‌ಮನೋಹರ ಲೋಹಿಯಾ, ಸಪ್ಧರ್‌ಜಂಗ್, ಎಐಐಎಂಎಸ್- ದಿಲ್ಲಿ ಹಾಗೂ ಎಐಐಎಂಎಸ್ ಝಜ್ಜಾರ್ ಆಸ್ಪತ್ರೆಗಳಲ್ಲಿ ಕ್ರಮವಾಗಿ 2, 6, 63 ಹಾಗೂ 164 ಬೆಡ್‌ಗಳು ಖಾಲಿ ಇವೆ.

ಖಾಸಗಿ ಆಸ್ಪತ್ರೆಗಳ 3,349 ಬೆಡ್‌ಗಳ ಪೈಕಿ ಶೇಕಡ 29 ಮಾತ್ರ ಖಾಲಿ ಇವೆ. ಆದ್ದರಿಂದ ಒಟ್ಟು 9,000 ಬೆಡ್‌ಗಳು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಲಭ್ಯವಿದ್ದರೂ, ರೋಗಿಗಳ ಅಲೆದಾಟ ಮಾತ್ರ ತಪ್ಪಿಲ್ಲ ಎಂದು ಆರೋಗ್ಯ ಕಾರ್ಯಕರ್ತ ಅಶೋಕ್ ಅಗರ್‌ವಾಲ್ ಹೇಳುತ್ತಾರೆ. ಮೂಲಸೌಕರ್ಯ ಮತ್ತು ನೈರ್ಮಲ್ಯ ಕೊರತೆಯಿಂದಾಗಿ ಜನ ಸರ್ಕಾರಿ ಆಸ್ಪತ್ರೆಗಳನ್ನು ಇಷ್ಟಪಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News