ಪಿಎಂ ಕೇರ್ಸ್ ನಿಧಿಯನ್ನು‘ಸಾರ್ವಜನಿಕ ಪ್ರಾಧಿಕಾರ’ಎಂದು ಘೋಷಿಸುವಂತೆ ಕೋರಿರುವ ಅರ್ಜಿಗೆ ಪ್ರಧಾನಿ ಕಚೇರಿ ಆಕ್ಷೇಪ
ಹೊಸದಿಲ್ಲಿ,ಜೂ.11: ಕೋವಿಡ್ -19ರ ವಿರುದ್ಧ ಹೋರಾಟದ ಅಂಗವಾಗಿ ಸ್ಥಾಪಿಸಲಾಗಿರುವ ಪಿಎಂ ಕೇರ್ಸ್ ನಿಧಿಯನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ‘ಸಾರ್ವಜನಿಕ ಪ್ರಾಧಿಕಾರ’ಎಂದು ಘೋಷಿಸುವಂತೆ ಕೋರಿರುವ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ವಿಚಾರಣೆಗೆ ಅಂಗೀಕರಿಸುವದಕ್ಕೆ ಪ್ರಧಾನಿ ಕಚೇರಿ (ಪಿಎಂಒ)ಯು ಆಕ್ಷೇಪವನ್ನು ವ್ಯಕ್ತಪಡಿಸಿದೆ.
ನ್ಯಾ.ನವೀನ್ ಚಾವ್ಲಾ ಅವರು ಬುಧವಾರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಸಂದರ್ಭದಲ್ಲಿ ಈ ಆಕ್ಷೇಪವನ್ನೆತ್ತಿದ ಪಿಎಂಒ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು,ಈ ಅರ್ಜಿಯನ್ನು ಏಕೆ ವಿಚಾರಣೆಗೆ ಅಂಗೀಕರಿಸಬಾರದು ಎನ್ನುವುದಕ್ಕೆ ಉತ್ತರವನ್ನು ತಾನು ಸಲ್ಲಿಸುವುದಾಗಿ ತಿಳಿಸಿದರು.
ಉಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಆ.28ಕ್ಕೆ ನಿಗದಿಗೊಳಿಸಿದೆ.
ಪಿಎಂ ಕೇರ್ಸ್ ನಿಧಿಯು ಆರ್‌ಟಿಐ ಕಾಯ್ದೆಯಡಿ ಸಾರ್ವಜನಿಕ ಪ್ರಾಧಿಕಾರವಲ್ಲ ಎಂಬ ಕಾರಣವನ್ನು ನೀಡಿ ತಾನು ಕೋರಿದ್ದ ದಾಖಲೆಗಳನ್ನು ಒದಗಿಸಲು ನಿರಾಕರಿಸಿರುವ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ)ಯ ಜೂ.2ರ ಆದೇಶವನ್ನು ಪ್ರಶ್ನಿಸಿ ಸಮ್ಯಕ್ ಗಂಗ್ವಾಲ್ ಎನ್ನುವವರು ಸಲ್ಲಿಸಿರುವ ಅರ್ಜಿಯನ್ನು ಉಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ಸಿಪಿಐಒ ಆದೇಶವನ್ನು ತಳ್ಳಿ ಹಾಕುವಂತೆ ಮತ್ತು ಆರ್‌ಟಿಐ ಅರ್ಜಿಯಲ್ಲಿ ತಾನು ಕೇಳಿರುವ ದಾಖಲೆಗಳನ್ನು ಒದಗಿಸುವಂತೆ ನಿರ್ದೇಶವನ್ನು ನೀಡುವಂತೆ ಅರ್ಜಿದಾರರು ಕೋರಿದ್ದಾರೆ. ಪಿಎಂ ಕೇರ್ಸ್ ನಿಧಿಯ ಟ್ರಸ್ಟ್ ಡೀಡ್‌ನ ಪ್ರತಿ ಸೇರಿದಂತೆ ನಿಧಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಒದಗಿಸುವಂತೆ ಕೋರಿ ಗಂಗ್ವಾಲ್ ಅವರು ಮೇ 1ರಂದು ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದ್ದರು. ಪಿಎಂಒದ ಸಿಪಿಐಒ ಜೂ.2ರಂದು ತನ್ನ ಆದೇಶದಲ್ಲಿ ಗಂಗ್ವಾಲ್ ಕೋರಿದ್ದ ದಾಖಲೆಗಳನ್ನು ಹಂಚಿಕೊಳ್ಳಲು ನಿರಾಕರಿಸಿದ್ದರು.
ತನ್ಮಧ್ಯೆ ಪಿಎಂ ಕೇರ್ಸ್ ನಿಧಿಯ ಕುರಿತು ಆರ್‌ಟಿಐ ಕಾಯ್ದೆಯಡಿ ಮಾಹಿತಿಗಳನ್ನು ಒದಗಿಸುವಂತೆ ಕೋರಿ ವಕೀಲ ಸುರೇಂದ್ರ ಸಿಂಗ್ ಹೂಡಾ ಅವರು ಸಲ್ಲಿಸಿದ್ದ ಇನ್ನೊಂದು ಅರ್ಜಿಯು ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ನೇತೃತ್ವದ ಪೀಠದ ಎದುರು ವಿಚಾರಣೆಗೆ ಬಂದಿತ್ತಾದರೂ ಅರ್ಜಿದಾರರು ಆರ್‌ಟಿಐ ಅರ್ಜಿಯನ್ನು ಸಲ್ಲಿಸದೆ ನೇರವಾಗಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ಅದನ್ನು ವಜಾಗೊಳಿಸಲಾಗಿದೆ.