ದೇಶದಲ್ಲಿ ಒಂದೇ ದಿನ 11,929 ಕೊರೋನ ವೈರಸ್ ಪ್ರಕರಣಗಳು ದೃಢ

Update: 2020-06-14 07:26 GMT

ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 11,929 ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,20,922ಕ್ಕೇರಿದೆ. ಇದೇ ಅವಧಿಯಲ್ಲಿ 311 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಅರೋಗ್ಯ ಸಚಿವಾಲಯ ಪ್ರಕಟಿಸಿದೆ.

ಇದುವರೆಗೆ ದೇಶದಲ್ಲಿ ಮೃತಪಟ್ಟ ಕೋವಿಡ್-19 ಸೋಂಕಿತರ ಸಂಖ್ಯೆ 9195ಕ್ಕೇರಿದೆ. ಸತತ ಎರಡನೇ ದಿನ ಭಾರತದಲ್ಲಿ 11 ಸಾವಿರಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗಿವೆ. ಕಳೆದ ವಾರದಿಂದೀಚೆಗೆ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಅಮೆರಿಕ, ಬ್ರೆಝಿಲ್ ಮತ್ತು ರಷ್ಯಾವನ್ನು ಹೊರತುಪಡಿಸಿದರೆ ಗರಿಷ್ಠ ಸಂಖ್ಯೆಯ ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ.

ಮಹಾರಾಷ್ಟ್ರದಲ್ಲಿ ಕೇವಲ ಒಂದು ವಾರದಲ್ಲಿ 70 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿದ್ದರೆ, 2000ಕ್ಕೂ ಅಧಿಕ ಸಾವು ಈ ಅವಧಿಯಲ್ಲಿ ಸಂಭವಿಸಿದೆ. ತಮಿಳುನಾಡು, ಗುಜರಾತ್ ಹಾಗೂ ದೆಹಲಿಯಲ್ಲಿ ಪರಿಸ್ಥಿತಿ ಚಿಂತಾಜಕನವಾಗಿದೆ.

ಈ ಮಧ್ಯೆ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಇತರ ಸಚಿವರನ್ನು, ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಪ್ರಕರಣಗಳು ಏರಿಕೆಯಾಗುತ್ತಿರುವ ರಾಜ್ಯಗಳ ಸ್ಥಿತಿಗತಿ ಬಗ್ಗೆ ಪರಿಶೀಲಿಸಿದರು.

ಕೋವಿಡ್-19 ರೋಗಲಕ್ಷಣದಲ್ಲಿ ವಾಸನೆ ಮತ್ತು ರುಚಿ ಕಳೆದುಕೊಳ್ಳುವ ಅಂಶವನ್ನು ಕೂಡಾ ಹೊಸದಾಗಿ ಸೇರಿಸಲಾಗಿದೆ. ದೆಹಲಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 38 ಸಾವಿರ ದಾಟಿದ್ದು, ಜುಲೈ 31ರ ವೇಳೆಗೆ 5 ಲಕ್ಷವನ್ನು ದಾಟುವ ಸಾಧ್ಯತೆ ಇದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಹೊಸದಾಗಿ 3493 ಪ್ರಕರಣ ದಾಖಲಾಗಿದ್ದು, 127 ಸಾವು ಸಂಭವಿಸಿದೆ. ರಾಜ್ಯದಲ್ಲಿ ಇದುವರೆಗೆ 3717 ಮಂದಿ ಜೀವ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News