2019ರ ನವೆಂಬರ್ ನಿಂದಲೇ ಭಾರತದಲ್ಲಿ 'ವಿಚಿತ್ರ ವೈರಸ್' ಸೋಂಕು: ವೈದ್ಯರ ಹೇಳಿಕೆ

Update: 2020-06-14 10:30 GMT

ಹೈದರಾಬಾದ್: 2019ರ ನವೆಂಬರ್ ತಿಂಗಳಲ್ಲೇ ಚೀನಾದಿಂದ ಭಾರತಕ್ಕೆ ಕೊರೋನ ವೈರಸ್ ಪ್ರವೇಶಿಸಿದೆ ಎಂಬ ವೈದ್ಯಕೀಯ ಚರ್ಚೆಯ ನಡುವೆಯೇ, ಒಣ ಕಫ ಮತ್ತು ಗಂಟಲು ಸೋಂಕಿನ ಸಮಸ್ಯೆಗಾಗಿ ಕೆಲ ರೋಗಿಗಳು ತಮ್ಮ ಬಳಿ ಬರುತ್ತಿದ್ದರು ಎಂದು ಕೆಲ ಇಎನ್‍ಟಿ ತಜ್ಞರು ಮತ್ತು ವೈದ್ಯರು ಬಹಿರಂಗಪಡಿಸಿದ್ದಾರೆ ಎಂದು Times of India ವರದಿ ಮಾಡಿದೆ.

ಅಧಿಕೃತವಾಗಿ ಭಾರತದ ಮೊಟ್ಟಮೊದಲ ಕೊರೋನ ವೈರಸ್ ಪ್ರಕರಣ 2020ರ ಜನವರಿ 30ರಂದು ಕೇರಳದಲ್ಲಿ ಪತ್ತೆಯಾಗಿದೆ. ಆದರೆ ಇದಕ್ಕೂ ಮೊದಲೇ ಇಂತಹ ಸಮಸ್ಯೆ ಹೊಂದಿದ್ದ ಕೆಲ ರೋಗಿಗಳನ್ನು ತಾವು ನೋಡಿದ್ದಾಗಿ ವೈದ್ಯರು ಹೇಳಿದ್ದಾರೆ. ಗೂಗಲ್ ಫಾರ್ಮ್ಸ್ ಮೂಲಕ ಇತರ ವೈದ್ಯರಿಂದ ಮಾಹಿತಿ ಸಂಗ್ರಹಿಸಿದ ಕಿವಿ ಮತ್ತು ಗಂಟಲು ತಜ್ಞರೊಬ್ಬರು, ಅಧಿಕೃತವಾಗಿ ಕೋವಿಡ್-19 ಪ್ರಕರಣ ಪತ್ತೆಯಾಗುವ ಮುನ್ನವೇ ಭಾರತಕ್ಕೆ ಈ ವೈರಸ್ ದಾಳಿ ಮಾಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಕೋವಿಡ್-19 ಸೋಂಕನ್ನು ಹೋಲುವ ಸೋಂಕು 2019ರ ಕೊನೆಯ ತ್ರೈಮಾಸಿಕದಲ್ಲಿ ವ್ಯಾಪಕವಾಗಿತ್ತು ಎಂದು 18 ವೈದ್ಯಕೀಯ ಸಾಧನಗಳನ್ನು ಸಂಶೋಧಿಸಿರುವ ಡಾ.ಜಗದೀಶ್ ಚತುರ್ವೇದಿ ಹೇಳಿದ್ದಾರೆ.

ಪ್ರತಿ ಇಬ್ಬರು ರೋಗಿಗಳ ಪೈಕಿ ಒಬ್ಬರಿಗೆ ತೀವ್ರ ಗಂಟಲು ನೋವು, ಒಣಕಫ, ಜ್ವರ, ಬಳಲಿಕೆ, ಉಸಿರಾಟದ ತೊಂದರೆ ಇತ್ತು. ಇಂಥ ವೈರಸ್ ಸೋಂಕು ಸಮಸ್ಯೆಯನ್ನು ನಾವು ಗಮನಿಸುತ್ತಿದ್ದೆವು. ಆದರೆ 2019ರ ನವೆಂಬರ್ ಕೊನೆಯ ವಾರದಲ್ಲಿ ಮತ್ತು 2020ರ ಜನವರಿ ಕೊನೆಯ ವಾರದಲ್ಲಿ ಅಂದರೆ ಕೊರೋನ ಬಗ್ಗೆ ಜಾಗೃತಿ ಸೀಮಿತವಾಗಿದ್ದಾಗ, ತಾವು ಹಾಗೂ ಇತರ ಕೆಲ ವೈದ್ಯರು, ವೈರಸ್‍ನಿಂದಾಗಿ ಶ್ವಾಸಕೋಶದ ಮೇಲಿನ ನಳಿಕೆ ಸೋಂಕಿಗೆ ಒಳಗಾಗಿರುವುದನ್ನು ಕಂಡಿದ್ದೆವು ಎಂದು ಪ್ರತಿಪಾದಿಸಿದ್ದಾರೆ.

ಕೊರೋನ ಪರೀಕ್ಷೆಗೆ ಸೌಲಭ್ಯಗಳು ಇಲ್ಲದ ಹಂತದಲ್ಲಿ ಒಣಕಫ ಮತ್ತು ಗಂಟಲು ತುರಿಕೆ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಡಾಕ್ಸ್‍ಡಾಕ್ಸ್ ಸಹಸಂಸ್ಥಾಪಕ ಡಾ.ಸುನೀಲ್ ಧಂಡ್ ಹೇಳಿದ್ದಾರೆ. 2020ರ ಜನವರಿ 30ರ ಮುನ್ನವೇ ದೆಹಲಿಯಲ್ಲಿ ಕೊರೋನ ವೈರಸ್ ಇದ್ದ ಬಗ್ಗೆ ಶಂಕೆ ಇತ್ತು ಎಂದು ಹಿರಿಯ ವೈದ್ಯ ಡಾ.ಅಜಯ್ ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News