ನಕ್ಸಲರಿಗೆ ಟ್ರ್ಯಾಕ್ಟರ್ ನೀಡಿದ ಆರೋಪ : ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಜಗತ್ ಪೂಜಾರಿ ಸೆರೆ

Update: 2020-06-15 03:57 GMT

ದಂತೇವಾಡ : ಛತ್ತೀಸ್‌ಗಢದಲ್ಲಿ ನಕ್ಸಲಿಯರಿಗೆ ಟ್ರ್ಯಾಕ್ಟರ್ ಪೂರೈಕೆ ಮಾಡಿದ ಆರೋಪದಲ್ಲಿ ಬಿಜೆಪಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ಜಗತ್ ಪೂಜಾರಿ ಹಾಗೂ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಒಂದು ದಶಕದಿಂದ ಜಗತ್ ಪೂಜಾರಿ, ಮಾವೋವಾದಿ ಉಗ್ರರಿಗೆ ಬೇಕಾದ ಅಗತ್ಯ ಸರಕು-ಸಾಮಗ್ರಿಗಳನ್ನು ಪೂರೈಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕುಖ್ಯಾತ ಮಾವೋವಾದಿ ಮುಖಂಡ ಅಜಯ್ ಅಲಮಿ ಎಂಬಾತನಿಗಾಗಿ ಟ್ರ್ಯಾಕ್ಟರ್ ಖರೀದಿಸಿದ ಆರೋಪದಲ್ಲಿ ಒಟ್ಟು ಮೂರು ಮಂದಿಯನ್ನು ಬಂಧಿಸಲಾಗಿದೆ. 9.10 ಲಕ್ಷ ರೂ. ಮೌಲ್ಯದ ಹೊಸ ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲಾಗಿದೆ. ಕಳೆದ ಹಲವು ತಿಂಗಳಿಂದ ಅಜಯ್ ಅಲಮಿ ಹಾಗೂ ಜಗತ್ ಪೂಜಾರಿಯ ಮೊಬೈಲ್ ಸೇರಿದಂತೆ ಮಾವೋವಾದಿ ನಾಯಕರ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದೆವು. ಹಲವು ಬಾರಿ ಜಗತ್ ಪೂಜಾರಿ ವಸ್ತುಗಳನ್ನು ಪೂರೈಸಿದ್ದ. ಇತ್ತೀಚೆಗೆ ಒಂದು ಟ್ರ್ಯಾಕ್ಟರ್ ಬೇಕು ಎಂದು ಅಲಮಿ ಕೇಳಿದ್ದ, ಜಗತ್ ಪೂಜಾರಿ ಬಿಲ್ ಪಾವತಿಸಲು ಒಪ್ಪಿದ್ದ. ಆದರೆ ಖರೀದಿಸಲು ದಾಖಲೆಪತ್ರವನ್ನು ಹೊಂದಿರುವ ವ್ಯಕ್ತಿಯೊಬ್ಬಬೇಕು ಎಂದು ಕೇಳೀದ್ದ. ಆದ್ದರಿಂದ ರಮೇಶ್ ಉಸೇಂಡಿ ಎಂಬಾತನನ್ನು ಸೇರಿಸಿಕೊಂಡಿದ್ದರು. ಆತನ ಪತ್ನಿ ಅಲಮಿಯ ಗ್ರಾಮದವಳು ಎಂದು ದಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ್ ಹೇಳಿದ್ದಾರೆ.

ಖಚಿತ ಆಧಾರದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಎರಡು ಕಡೆಗಳಲ್ಲಿ ವ್ಯವಸ್ಥೆ ಮಾಡಿ, ಗೀಡ್ಯಾಮ್ ಬಳಿ ಎಲ್ಲ ಹೊಸ ಟ್ರ್ಯಾಕ್ಟರ್‌ಗಳನ್ನು ತಡೆದರು. ಬಂಧಿಸಲ್ಪಟ್ಟ ಮೂವರಲ್ಲಿ ಒಬ್ಬನಾದ ರಮೇಶ್, ಚಕ್ರದ ಹಿಂದೆ ಅವಿತಿದ್ದ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News