‘ಮಲಬಾರ್ ಟ್ರೀ ಟೋಡ್’ ಕಪ್ಪೆಗಳ ಅಧ್ಯಯನಕ್ಕಾಗಿ ಅಭಿಯಾನ

Update: 2020-06-15 04:14 GMT

ಉಡುಪಿ: ಭಾರತದ ಪಶ್ಚಿಮಘಟ್ಟಗಳಲ್ಲಿ ಮಳೆ ಬಿದ್ದ ಮೂರು ವಾರಗಳ ಕಾಲ ಮಾತ್ರ ಕಂಡುಬರುವ ಎಂಡೆಮಿಕ್(ಸ್ಥಳೀಯ) ಮತ್ತು ಅಳಿವಿನ ಅಂಚಿನಲ್ಲಿರುವ ಅತ್ಯಂತ ವಿಶಿಷ್ಟ ಕಪ್ಪೆ ಪ್ರಬೇಧ ‘ಮಲಬಾರ್ ಟ್ರೀ ಟೋಡ್’ ಕುರಿತು ಈಗಾಗಲೇ ಅಧ್ಯಯನವನ್ನು ಕೈಗೆತ್ತಿಕೊಳ್ಳಲಾಗಿದೆ. ಇದರ ಭಾಗವಾಗಿ ನಡೆಸಲಾಗುತ್ತಿರುವ ಅಭಿಯಾನದಿಂದ ಕಳೆದ 5 ವರ್ಷಗಳಲ್ಲಿ ಸುಮಾರು 110 ಕಡೆಗಳಲ್ಲಿ ಈ ಕಪ್ಪೆ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಮೆಟಸ್ಟ್ರಿಂಗ್ ಫೌಂಡೇಶನ್ ಮುನ್ನಡೆಸುತ್ತಿರುವ ಇಂಡಿಯಾ ಬಯೋ ಡೈವರ್ಸಿಟಿ ಪೋರ್ಟಲ್‌ನಲ್ಲಿರುವ ‘ಫ್ರಾಗ್ ವಾಚ್’ ಮೂಲಕ ‘ಮ್ಯಾಪಿಂಗ್ ಮಲಬಾರ್ ಟ್ರೀ ಟೋಡ್’ ಎಂಬ ಅಭಿಯಾನವನ್ನು 2015ರಿಂದ ನಡೆಸಲಾಗುತ್ತಿದೆ. ಇದಕ್ಕೆ ಬೆಂಗಳೂರು ಸೃಷ್ಟಿ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಡಿಸೈನ್ ಆ್ಯಂಡ್ ಟೆಕ್ನಾಲಜಿ ಸಹಯೋಗ ನೀಡುತ್ತಿದೆ. ಇದನ್ನು ಕಪ್ಪೆ ಸಂಶೋಧಕರಾದ ಡಾ.ಗುರುರಾಜ ಕೆ.ವಿ., ಡಾ.ಹರಿಕೃಷ್ಣ, ಡಾ.ರವಿ ಚೆಲ್ಲಮ್ ಮುನ್ನಡೆಸುತ್ತಿದ್ದಾರೆ.

ಕಪ್ಪೆಯ ಇತಿಹಾಸ:  ಸುಮಾರು 1875ರಲ್ಲಿ ವಿಜ್ಞಾನಿ ಗುನ್ಸಾರ್ ಈ ಕಪ್ಪೆಯನ್ನು ಮೊದಲ ಬಾರಿಗೆ ಪರಿಚಯಿಸಿದ್ದರು. ಆಗ ಅವರು ಆ ಜಾಗದ ಹೆಸರನ್ನು ಮಲಬಾರ್ ಎಂಬುದಾಗಿ ನಮೂದಿಸಿದ್ದರು. ಬಳಿಕ ಆ ಕಪ್ಪೆಗೆ ‘ಪಿಡೊ ಸ್ಟೈಬ್ಸ್ ಟ್ಯುಬರ್‌ಕ್ಯುಲೋಸಸ್’ ಎಂಬ ವೈಜ್ಞಾನಿಕ ಹೆಸರನ್ನು ನೀಡಲಾಗಿತ್ತು. ಮುಂದೆ 105 ವರ್ಷಗಳ ನಂತರ ಅಂದರೆ 1980 ಮತ್ತೊಬ್ಬರು ಈ ಕಪ್ಪೆಯನ್ನು ಕೇರಳದಲ್ಲಿ ನೋಡಿದ್ದರೆಂಬುದಾಗಿ 1985ರಲ್ಲಿ ಪಿಳ್ಳೈ ಎಂಬವರು ವರದಿ ಮಾಡಿದ್ದರು. ಅದರ ಮಧ್ಯೆ ಆ ಕಪ್ಪೆಯನ್ನು ಯಾರೂ ನೋಡಿರಲಿಲ್ಲ. 110 ವರ್ಷಗಳ ಬಳಿಕ ಭಾರತದಲ್ಲಿ ಎರಡನೇ ಬಾರಿಗೆ ಈ ಕಪ್ಪೆಯ ಬಗ್ಗೆ ವರದಿ ಬಂತು. ಅದರ ನಂತರ ಗೋವಾ ಮತ್ತು ಕೇರಳ(ಎರಡನೇ ಬಾರಿಗೆ)ದಿಂದ ವರದಿ ಯಾಗಿತ್ತು. ಆದರೆ ಕರ್ನಾಟಕದಲ್ಲಿ ಈ ಕಪ್ಪೆಯನ್ನು ನೋಡಿರುವ ಬಗ್ಗೆ ಯಾವುದೇ ವರದಿ ಆಗಿರಲಿಲ್ಲ.

ಸೃಷ್ಟಿ ಸಂಸ್ಥೆಯ ಕಪ್ಪೆ ಸಂಶೋಧಕ ಡಾ.ಗುರುರಾಜ ಕೆ.ವಿ. 2004ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ಬಳಿ ಈ ಕಪ್ಪೆಯನ್ನು ಪತ್ತೆ ಹಚ್ಚುವ ಮೂಲಕ ಕರ್ನಾಟಕದಿಂದ ಮೊತ್ತಮೊದಲ ವರದಿಯನ್ನು ಮಾಡಿದ್ದರು. ಅಲ್ಲಿಂದ ಈ ಪ್ರಭೇದವನ್ನು ‘ಮಲಬಾರ್ ಟ್ರೀ ಟೋಡ್’ ಎಂಬುದಾಗಿ ನಾಮಕರಣ ಮಾಡಿ ಕರೆಯಲಾಯಿತು.

ಮೊಟ್ಟೆ ಇಟ್ಟು ಕಣ್ಮರೆ: ಮಳೆ ಬಿದ್ದ ಮೂರು ವಾರಗಳಲ್ಲಿ ಮತ್ತು ಮೊಟ್ಟೆ ಇಟ್ಟ ಬಳಿಕ ನಾಪತ್ತೆ ಯಾಗುವ ಈ ಕಪ್ಪೆ, ಆ ನಂತರ ಯಾರ ಕಣ್ಣಿಗೂ ಈವರೆಗೆ ಕಾಣ ಸಿಕ್ಕಿಲ್ಲ. ನೆಲದ ಮೇಲೆ ಕಂಡುಬರುವ ನೆಲಗಪ್ಪೆ ಕುಟುಂಬಕ್ಕೆ ಸೇರಿದ ಮಲಬಾರ್ ಟ್ರೀ ಟೋಡ್‌ನ ಕೈಯಲ್ಲಿರುವ ಬೆರಳ ತುದಿಯಲ್ಲಿ ಮರ, ಗೋಡೆ ಹತ್ತಲು ಸಹಾಯ ವಾಗುವ ಚಪ್ಪಟೆ ಆಕಾರದ ಡಿಸ್ಕ್ ಗಳಿರುವುದು ಅದ್ಭುತ.

 ಅದೇ ರೀತಿ ಐಯುಸಿಎನ್‌ನಲ್ಲಿ ಈ ಕಪ್ಪೆಯನ್ನು ಅಳಿವಿನ ಅಂಚಿನಲ್ಲಿರುವ ಪ್ರಭೇದಗಳ ಪಟ್ಟಿಗೆ ಸೇರಿಸಲಾಗಿದೆ. ಮೂರು ವಾರಗಳ ನಂತರ ಎಲ್ಲಿ ಹೋಗುತ್ತದೆ ಮತ್ತು ಮರವನ್ನು ಯಾಕೆ ಹತ್ತುತ್ತದೆ ಎಂಬ ಕುತೂಹಲದೊಂದಿಗೆ ಈ ಕಪ್ಪೆಯ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಆರಂಭಿಸಲಾಗಿದೆ. ಈ ಕಪ್ಪೆ ಅಳಿವಿನಂಚಿನಲ್ಲಿರುವ ಪ್ರಬೇದವೇ ಮತ್ತು ಈ ಕಪ್ಪೆ ಯಾವ ಯಾವ ಭಾಗಗಳಲ್ಲಿ ಕಂಡುಬರುತ್ತವೆ ಎಂಬುದರ ಬಗ್ಗೆ ಅಧ್ಯಯನ ನಡೆಸುವುದು ಈ ಅಭಿಯಾನದ ಉದ್ದೇಶವಾಗಿದೆ. 2015ಕ್ಕೆ ಪ್ರಾರಂಭಿಸಲಾದ ಈ ಅಭಿಯಾನ ಆರಂಭದ ಮೊದಲ 3 ವರ್ಷಗಳಲ್ಲಿ 50-55 ಕಡೆಗಳಿಂದ ಜನ ಈ ಕಪ್ಪೆಯನ್ನು ನೋಡಿರುವ ಬಗ್ಗೆ ವರದಿ ಮಾಡಿದ್ದರು. 2019ರವರೆಗೆ ಒಟ್ಟು 74 ಕಡೆಗಳಿಂದ ವರದಿಯಾಗಿತ್ತು. ಈ ಬಾರಿ ಸುಮಾರು 30-35ಕಡೆಗಳಿಂದ ವರದಿಯಾಗುವ ಮೂಲಕ ಒಟ್ಟು 110 ಸ್ಥಳಗಳಲ್ಲಿ ಈ ಕಪ್ಪೆ ಪತ್ತೆಯಾಗಿರುವುದು ದೃಢಪಟ್ಟಿವೆ ಎಂದು ಕಪ್ಪೆ ಸಂಶೋಧಕ ಡಾ.ಗುರುರಾಜ ಕೆ.ವಿ. ತಿಳಿಸಿದ್ದಾರೆ.

ಮಲಬಾರ್ ಟ್ರೀ ಟೋಡ್ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ನಿಟ್ಟಿನಲ್ಲಿ ಹೆಚ್ಚಿನವರಿಗೆ ತರಬೇತಿ ನೀಡುವಂತೆ ಹ್ಯಾಬಿಟ್ಯಾಟ್ ಟ್ರಸ್ಟ್ ಈ ವರ್ಷ ಸಹಾಯನಿಧಿಯನ್ನು ನೀಡಿದೆ. ಅದರಂತೆ ಸುಮಾರು 40 ಮಂದಿಗೆ ತರಬೇತಿ ನೀಡಲು ದಾಂಡೇಲಿ ಮತ್ತು ಕಾರ್ಕಳದ ಮಾಳದಲ್ಲಿ ಸಿದ್ಧತೆ ಮಾಡಲಾಗಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಅದು ಸಾಧ್ಯವಾಗಲಿಲ್ಲ. ಇದೀಗ ಆನ್‌ಲೈನ್‌ನಲ್ಲಿ ಯೂಟ್ಯೂಬ್, ವಾಟ್ಸ್‌ಆ್ಯಪ್ ಮೂಲಕ ಆ ಕಪ್ಪೆಯನ್ನು ಹೇಗೆ ನೋಡಬೇಕು ಯಾವ ರೀತಿಯಲ್ಲಿ ನೋಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪಶ್ಚಿಮ ಘಟ್ಟದಲ್ಲಿರುವವ ಸ್ಥಳೀಯರಿಗೆ ಈ ಕಪ್ಪೆಯನ್ನು ಟ್ರಾಕ್ ಮಾಡುವಂತೆ ತಿಳಿಸಿದ್ದೇವೆ. ಅದು ಎಲ್ಲಿ ಹೋಗುತ್ತದೆ ಎಂಬುದರ ಬಗ್ಗೆ ಪ್ರತಿದಿನ ಅದು ಇರುವ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡು ವಂತೆ ಹೇಳಿದ್ದೇವೆ ಎಂದು ಗುರುರಾಜ್ ಕೆ.ವಿ. ತಿಳಿಸಿದ್ದಾರೆ.

ಈ ಕಪ್ಪೆ ಯಾಕೆ ವಿರಳ ಎಂಬುದರ ಬಗ್ಗೆ ಅಧ್ಯಯನ ಆರಂಭಿಸಲಾಯಿತು. ಈ ಕಪ್ಪೆ ಕೂಗುವ ಶಬ್ದವನ್ನು ಮೊದಲ ಬಾರಿಗೆ ನಾನು ದಾಖಲೀಕರಣ ಮಾಡಿದೆ. ಇದು ಮಿಡತೆ ರೀತಿಯಲ್ಲಿ ಕೂಗುವ ಶಬ್ದ ಮಾಡುವುದರಿಂದ ಬಹಳಷ್ಟು ಮಂದಿಯ ಕಣ್ಣಿಗೆ ಬೀಳದೆ ಮಿಸ್ ಆಗಿರಬಹುದು. ಇಂತಹ ಕಪ್ಪೆಗಳ ಬಗ್ಗೆ ಅಧ್ಯಯನ ಮಾಡಬೇಕಾದರೆ ಸ್ಥಳೀಯರ ಸಹಕಾರ ಅತ್ಯಗತ್ಯ. ಆದುದರಿಂದ ಸ್ಥಳೀಯರಿಗೆ ಈ ಕುರಿತು ತರಬೇತಿ ನೀಡುವ ಉದ್ದೇಶ ಕೂಡ ನಮ್ಮದಾಗಿದೆ.

-ಡಾ.ಗುರುರಾಜ ಕೆ.ವಿ.,

ಅಧ್ಯಾಪಕರು, ಕಪ್ಪೆ ಸಂಶೋಧಕರು

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News