ಅಮ್ಜದ್ ಆಲಿ, ತಮೀಮ್ ಬಂಧಿತರೆಂದು ಸುಳ್ಳು ಹರಡಿದ್ದಕ್ಕಾಗಿ ಕ್ಷಮೆಯಾಚಿಸಿದ ಪತ್ರಕರ್ತ ದೀಪಕ್ ಚೌರಾಸಿಯಾ

Update: 2020-06-15 10:11 GMT

ಹೊಸದಿಲ್ಲಿ : ನ್ಯೂಸ್ ನೇಷನ್ ವಾಹಿನಿಯ ಪತ್ರಕರ್ತ ಹಾಗೂ ಸುದ್ದಿ ನಿರೂಪಕ ದೀಪಕ್ ಚೌರಾಸಿಯಾ ಅವರು ಕೇರಳದಲ್ಲಿ ಪಟಾಕಿ ತುಂಬಿದ್ದ ಹಣ್ಣು ತಿಂದು ಆನೆ ಮೃತಪಟ್ಟ ಘಟನೆ ಸಂಬಂಧ ತಾವು ಮಾಡಿದ್ದ ಸುಳ್ಳು ಸುದ್ದಿಯ ಪೋಸ್ಟ್ ಒಂದಕ್ಕೆ ಕ್ಷಮೆಯಾಚಿಸಿದ್ದಾರೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆನೆ ಮೃತಪಟ್ಟ ಪ್ರಕರಣ ಕುರಿತಂತೆ ನಕಲಿ ಸುದ್ದಿ ಪೋಸ್ಟ್ ಮಾಡಿದ್ದ ದೀಪಕ್ ಚೌರಾಸಿಯಾ ಅವರ ಟ್ವೀಟ್ ಇದೀಗ ಡಿಲೀಟ್ ಮಾಡಲಾಗಿದೆ. ''ಕೇರಳದ ಗರ್ಭಿಣಿ ಆನೆ ಹತ್ಯೆ ಪ್ರಕರಣದಲ್ಲಿ ಅಮ್ಜದ್ ಆಲಿ ಹಾಗೂ ತಮೀಮ್ ಶೇಖ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಈ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ'' ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ಅವರು ಈ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ದೂರದರ್ಶನ ತನ್ನ ಸುದ್ದಿ ಪ್ರಸಾರದಲ್ಲಿ ಕೇರಳ ಪ್ರಕರಣದಲ್ಲಿ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಹಾಗೂ ಆತನನ್ನು 'ವಿಲ್ಸನ್' ಎಂದು ಗುರುತಿಸಲಾಗಿದೆ ಎಂದು ಹೇಳಿತ್ತು.

ಚೌರಾಸಿಯಾ ಅವರು ಟ್ವೀಟ್‍ನಲ್ಲಿ ಆರೋಪಿಗಳ ಸುಳ್ಳು ಹೆಸರು ಸೃಷ್ಟಿಸಿ ಮುಸ್ಲಿಮರನ್ನು ದೂಷಿಸಲು ಯತ್ನಿಸಿದ್ದನ್ನು 'ಜನತಾ ಕಾ ರಿಪೋರ್ಟರ್' ಬಹಿರಂಗಗೊಳಿಸಿತ್ತು.

ಇದೀಗ ಚೌರಾಸಿಯಾ ಅವರಿಗೆ ತಮ್ಮ ತಪ್ಪಿನ ಅರಿವಾಗಿದ್ದು,  ಕ್ಷಮೆಯಾಚಿಸಿ ಈ ರೀತಿ ಟ್ವೀಟ್ ಮಾಡಿದ್ದಾರೆ ''ಕೇರಳ ಆನೆ ಸಾವು ಪ್ರಕರಣ ಸಂಬಂಧ ನನ್ನ ಟ್ವಿಟ್ಟರ್ ಖಾತೆಯಿಂದ ಸುಳ್ಳು ಮಾಹಿತಿ ಪೋಸ್ಟ್ ಆಗಿದೆ. ನಿಜ ಹೊರಬಿದ್ದಾಗ  ನನ್ನ ಟ್ವೀಟ್ ಡಿಲೀಟ್ ಮಾಡಿದ್ದೇನೆ. ನಾನೊಬ್ಬ ಪತ್ರಕರ್ತ ಹಾಗೂ ವಿಶ್ವಾಸಾರ್ಹತೆ ನನಗೆ ಬಹಳ ಮುಖ್ಯ. ತರುವಾಯ. ನನ್ನಿಂದ ಯಾರಿಗಾದರೂ ನೋವುಂಟಾಗಿದ್ದರೆ ವಿಷಾಧಿಸುತ್ತೇನೆ.''

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News