ಉ. ಪ್ರದೇಶ: ಭ್ರಷ್ಟಾಚಾರ ಪ್ರಕರಣದಲ್ಲಿ ಹಲವರನ್ನು ಬಂಧಿಸಿದ ಒಂದು ವಾರದಲ್ಲಿ ಐಪಿಎಸ್ ಅಧಿಕಾರಿಯ ವರ್ಗಾವಣೆ
ಉತ್ತರ ಪ್ರದೇಶ: ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನೇಮಕಾತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಹಲವರನ್ನು ಬಂಧಿಸಿದ್ದ ಐಪಿಎಸ್ ಅಧಿಕಾರಿಯೊಬ್ಬರನ್ನು ದಿಢೀರ್ ವರ್ಗಾವಣೆಗೊಳಿಸಿರುವುದು ಇದೀಗ ವಿವಾದ ಸೃಷ್ಟಿಸಿದೆ.
ಈ ಬಗ್ಗೆ ಆದಿತ್ಯನಾಥ್ ಸರಕಾರದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ನೇಮಕಾತಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಹಲವರನ್ನು ಬಂಧಿಸಿದ್ದಕ್ಕಾಗಿ ಐಪಿಎಸ್ ಅಧಿಕಾರಿ ಸತ್ಯಾರ್ಥ್ ಅನಿರುಧ್ ಪಂಕಜ್ ಅವರಿಗೆ ನೀಡಲಾದ ಶಿಕ್ಷೆ ಇದು ಎಂದು ವಿಪಕ್ಷಗಳು ಆರೋಪಿಸಿವೆ. ವರ್ಗಾವಣೆಯ ನಂತರ ಅವರಿಗೆ ಯಾವುದೇ ಸ್ಥಾನವನ್ನು ನೀಡಿಲ್ಲ.
ಮತ್ತೊಂದು ಬೆಳವಣಿಗೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಕೊರೋನ ಪಾಸಿಟಿವ್ ಆದ ಕಾರಣ ಸತ್ಯಾರ್ಥ್ ಅನಿರುದ್ಧ ಅವರನ್ನು ಕೊರೋನ ವಾರ್ಡ್ ಗೆ ದಾಖಲಿಸಲಾಗಿದೆ. ಅವರ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಕಳೆದ ವಾರವಷ್ಟೇ ಭ್ರಷ್ಟಾಚಾರ ಆರೋಪದಲ್ಲಿ 11 ಮಂದಿಯನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದರು. ಬಂಧಿತರಲ್ಲಿ ಉದ್ಯಮಿ ಮತ್ತು ರಾಜಕಾರಣಿ, ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಕೆ.ಎಲ್. ಪಟೇಲ್ ಎನ್ನುವವನು ಇದ್ದಾನೆ ಎಂದು ವರದಿಯಾಗಿದೆ.