ತಾರತಮ್ಯದ ವಿರುದ್ಧ ಸಿಡಿದೆದ್ದು ಮನು ಪ್ರತಿಮೆಗೆ ಮಸಿ ಬಳಿದಿದ್ದ ದಿಟ್ಟ ಮಹಿಳೆಯರು
ಮುಂಬೈ: 2018ರ ಆಗಸ್ಟ್ 10ರಂದು ಬಹುತೇಕ ಬ್ರಾಹ್ಮಣರಿಂದ ಕೂಡಿದ ಒಂದು ಗುಂಪು ದೆಹಲಿಯ ಸಂಸತ್ ಬೀದಿಯಲ್ಲಿ ಗುಂಪು ಸೇರಿ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಘೋಷಣೆಗಳನ್ನು ಕೂಗಿತು. ಜಾತಿವಾದಿ, ಮೀಸಲಾತಿ ಚಳವಳಿ ವಿರೋಧಿ ಇತಿಹಾಸ ಹೊಂದಿದ ಯೂತ್ ಈಕ್ವಾಲಿಟಿ ಫೌಂಡೇಷನ್ (ಆಝಾದ್ ಸೇನಾ) ಮತ್ತು ಆರಕ್ಷಣ್ ವಿರೋಧಿ ಪಾರ್ಟಿ ಎಂಬ ಅವರ ಯುವ ಸಂಘಟನೆಗಳು ಅಂಬೇಡ್ಕರ್ ವಿರುದ್ಧ ಮತ್ತು ಮೀಸಲಾತಿ ನೀತಿ ವಿರುದ್ಧ ಆಕ್ರೋಶವನ್ನು ಪ್ರದರ್ಶಿಸಲು ಭಾರತ ಸಂವಿಧಾನದ ಪ್ರತಿಯನ್ನು ಬಹಿರಂಗವಾಗಿ ಸುಟ್ಟುಹಾಕಲು ನಿರ್ಧರಿಸಿದರು. ಇಡೀ ಕೃತ್ಯವನ್ನು ದಾಖಲಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟರು.
ಸುಮಾರು 1,250 ಕಿಲೋಮೀಟರ್ ದೂರದಲ್ಲಿ ಅಂದರೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ 40 ವರ್ಷದ ದಲಿತ ಮಹಿಳೆ ಕಾಂತಿಬಾಯಿ ಅಹಿರ್ ಈ ಭಯಾನಕ ಕೃತ್ಯವನ್ನು ವೀಕ್ಷಿಸಿದರು. ಸಂವಿಧಾನದ ಪ್ರತಿಯನ್ನು ಸುಟ್ಟುಹಾಕಿದ ದೃಶ್ಯ ಅವರ ಮನಸ್ಸನ್ನು ವಿಕ್ಷಿಪ್ತಗೊಳಿಸಿತು ಹಾಗೂ ತಮ್ಮ ಪ್ರತಿಭಟನೆಯನ್ನು ಬಹಿರಂಗವಾಗಿ ಪ್ರದರ್ಶಿಸುವ ನಿರ್ಧಾರಕ್ಕೆ ಅವರು ಬಂದರು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಬಣಗಳಲ್ಲೊಂದಾದ ‘ಆರ್‍ಪಿಐ-ಕಾರಟ್’ ಸಂಘಟನೆಯ ಜಿಲ್ಲಾಧ್ಯಕ್ಷೆಯಾದ ಅಹಿರ್, ಇದಕ್ಕೆ ಪ್ರತಿಯಾಗಿ ಪ್ರತಿಭಟಿಸುವ ಏಕೈಕ ವಿಧಾನವೆಂದರೆ ಈ ಹೇಯ ಕೃತ್ಯದ ಮೂಲದ ಮೇಲೆಯೇ ದಾಳಿ ಮಾಡುವುದು ಎಂಬ ನಿರ್ಧಾರಕ್ಕೆ ಬಂದರು.
ಸುಮಾರು ಎರಡು ತಿಂಗಳ ಕಾಲ ಯೋಜನೆ ರೂಪಿಸಿದ ಬಳಿಕ ಅಕ್ಟೋಬರ್ 8ರಂದು ಅಹಿರ್ ಅವರು ತಮ್ಮ ಪಕ್ಷದ ಕಾರ್ಯಕರ್ತರಾದ ಶೀಲಾ ಪವಾರ್ (42) ಮತ್ತು ಅಬ್ದುಲ್ ಶೇಖ್ ದಾವೂದ್ (33) ಜತೆ ರಾಜಸ್ಥಾನ ಹೈಕೋರ್ಟ್‍ನ ಜೈಪುರ ಪೀಠಕ್ಕೆ ಪ್ರಯಾಣ ಬೆಳೆಸಿದರು. ಮೂಲ ಯೋಜನೆ ಇದ್ದದ್ದು ಮನು ಪ್ರತಿಮೆ ಮುಂಧೆ ಪ್ರತಿಭಟನೆ ನಡೆಸಿ, ಪ್ರತಿಮೆ ತೆರವುಗೊಳಿಸುವಂತೆ ಆಗ್ರಹಿಸಿ ಹೈಕೋರ್ಟ್ ರಿಜಿಸ್ಟ್ರಾರ್‍ಗೆ ಮನವಿ ಸಲ್ಲಿಸುವುದು. ಪೌರಾಣಿಕ ಪಾತ್ರವಾದ ಮನು, ಜಾತಿ ಹಾಗೂ ಲಿಂಗ ಆಧರಿತ ಶ್ರೇಣೀಕೃತ ವ್ಯವಸ್ಥೆಯನ್ನು ನಿರ್ವಹಿಸುವ ಕಾನೂನು ಒಳಗೊಂಡ ಮನುಸ್ಮೃತಿಯ ಕರ್ತೃ ಎನ್ನಲಾಗಿದೆ.
ಆದರೆ ನ್ಯಾಯಾಲಯ ಬಳಿ ತಲುಪಿದಾಗ ಅವರು ತಮ್ಮ ಯೋಜನೆ ಬದಲಿಸಿದರು. ಸೀರೆ ಉಟ್ಟಿದ್ದ ಇಬ್ಬರು ಮಹಿಳೆಯರು ಮನು ಪ್ರತಿಮೆಗೆ ಏರಿ, ಪ್ರತಿಮೆಗೆ ಕಪ್ಪು ಬಣ್ಣ ಬಳಿದರು. ದಾವೂದ್ ಅವರ ಈ ದಿಟ್ಟ ಕಾರ್ಯಕ್ಕೆ ಸಾಕ್ಷಿಯಾದರು.
ಈ ಪ್ರತಿಭಟನೆ ಅವರನ್ನು ಎರಡು ವಾರಕ್ಕೂ ಹೆಚ್ಚು ಕಾಲ ಜೈಲಿಗೆ ತಳ್ಳಲು ಕಾರಣವಾಯಿತು. ದಾವೂದ್ ಸ್ಥಳದಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾದರು. ಆದರೆ ಅವರನ್ನು ಕೆಲ ದಿನಗಳ ಬಳಿಕ ಬಂಧಿಸಲಾಯಿತು. ಕ್ರಮೇಣ ಮೂವರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆದರೆ ಪ್ರಕರಣ ಈಗಲೂ ಮುಂದುವರಿದಿದೆ.
ಮನು ಪ್ರತಿಮೆಯನ್ನು ವಿರೂಪಗೊಳಿಸಿದ ಈ ಪ್ರಕರಣ ಭಾರತದಲ್ಲಿ ಒಂದು ವಿಶೇಷ ಘಟನೆ ಎನಿಸಿತು. ಆದರೆ ಈ ಪ್ರತಿಭಟನೆಯ ಶೈಲಿ, ವಿಶ್ವದ ವಿವಿಧೆಡೆ ನಡೆಯುತ್ತಿರುವ ಜನಾಂಗೀಯ ವಿರೋಧಿ ಮತ್ತು ಪೊಲೀಸ್ ದೌರ್ಜನ್ಯ ವಿರೋಧಿ ಪ್ರತಿಭಟನೆಯ ಜತೆ ಸಾಮ್ಯತೆ ಹೊಂದಿದೆ. 2018ರ ಡಿಸೆಂಬರ್‍ನಲ್ಲಿ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಆಫ್ರಿಕನ್ನರ ವಿರುದ್ಧ ಧೋರಣೆ ಹೊಂದುವ ಮೂಲಕ ಜಾತಿವಾದಿಯಾಗಿದ್ದರು ಎಂದು ಆಪಾದಿಸಿ ಘಾನಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್‍ನಿಂದ ಗಾಂಧಿ ಪ್ರತಿಮೆ ತೆರವುಗೊಳಿಸಿದ್ದರು.
ಇತ್ತೀಚೆಗೆ ಬಿಳಿಯ ಪೊಲೀಸ್ ಅಧಿಕಾರಿ ಡೆರೆಕ್ ಚಾವ್ಲಿನ್ ಅಮೆರಿಕದ ಮಿನ್ನಪೊಲೀಸ್‍ನಲ್ಲಿ 46 ವರ್ಷ ವಯಸ್ಸಿನ ಆಫ್ರಿಕನ್- ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಅವರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ದೇಶದ ಜನಾಂಗೀಯ ಪರಂಪರೆಯ ಪ್ರತೀಕ ಎನಿಸಿದ ಹಲವು ಮಂದಿ ಮುಖಂಡರ ಪ್ರತಿಮೆಗಳಿಗೆ ಕಪ್ಪು ಮಸಿ ಬಳಿಯಲಾಯಿತು ಅಥವಾ ಕಿತ್ತೆಸೆಯಲಾಯಿತು. ಇಂಥ ಹಲವು ಪ್ರತಿಭಟನೆಗಳು ಜೀತ ವ್ಯಾಪಾರಿಗಳು ಹಾಗೂ ಸಾಮ್ರಾಜ್ಯಶಾಹಿ ವ್ಯವಸ್ಥೆಯ ಇತಿಹಾಸದ ಕ್ರೂರ ಇತಿಹಾಸವನ್ನು ಬಿಂಬಿಸುವ ಹಲವು ಮುಖಂಡರ ಪ್ರತಿಮೆಗಳನ್ನು ಕಿತ್ತೆಸೆಯುವ ಮೂಲಕ ಬ್ರಿಟನ್ ಹಾಗೂ ಯೂರೋಪ್‍ನಲ್ಲೂ ನಡೆಯುತ್ತಿವೆ.
“ತುಳಿತಕ್ಕೊಳಗಾಗಿರುವವರು ಸಂಘಟಿತರಾಗಿರುವುದು ಸಂತಸ ತಂದಿದೆ”
ಮತ್ತೆ ಭಾರತದತ್ತ ಬಂದರೆ, ಔರಂಗಾಬಾದ್‍ನ ಶಂಭುನಗರ ಕೊಳಗೇರಿಯ ಒಂದು ಕೊಠಡಿಯ ಮನೆಯಲ್ಲಿರುವ ಅಹೀರ್ ಹೇಳುವಂತೆ ಜಾಗತಿಕವಾಗಿ ತುಳಿತಕ್ಕೊಳಗಾದವರು ಏಕತೆಯನ್ನು ಸಾಧಿಸಲು ಸದಾ ಮಾರ್ಗವನ್ನು ಕಂಡುಕೊಂಡಿದ್ದಾರೆ. “ತುಳಿತಕ್ಕೊಳಗಾದವರು ಏಕತೆಯನ್ನು ಪ್ರದರ್ಶಿಸುತ್ತಿರುವ ಬಗ್ಗೆ ಮತ್ತು ದಮನಕಾರರ ವಿರುದ್ಧ ಸ್ಪಷ್ಟವಾಗಿ ಹಾಗೂ ಪ್ರಬಲವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿರುವುದರ ಬಗ್ಗೆ ನನಗೆ ಹೃದಯ ತುಂಬಿ ಬಂದಿದೆ”ಎಂದು ಅವರು ವಿವರಿಸುತ್ತಾರೆ. ಅಮೆರಿಕ ಹಾಗೂ ವಿಶ್ವದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಜನಾಂಗೀಯ ವಿರೋಧಿ ಪ್ರತಿಭಟನೆಯ ಸುದ್ದಿಗಳನ್ನು ಅಹಿರ್ ಗಮನಿಸುತ್ತಿದ್ದಾರೆ.
ಅಂಬೇಡ್ಕರ್ ಅವರ ಕಟ್ಟಾ ಅನುಯಾಯಿಯಾಗಿರುವ ಅಹಿರ್ ತಮ್ಮ ಪತಿ ಮತ್ತು ಹದಿಹರೆಯದ ಪುತ್ರಿಯ ಜತೆ ವಾಸವಿದ್ದಾರೆ. ಅವರ ಕುಟುಂಬ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟಪಡಬೇಕಾದ ಸ್ಥಿತಿಯಲ್ಲಿದ್ದರೂ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಸಕ್ರಿಯ ಹೋರಾಟದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಪವಾರ್ ಅವರಿಗೂ ಕಷ್ಟದ ಸರಮಾಲೆ ಇದೆ. ಬಂಜಾರ ಅಧಿಸೂಚಿತ ಬುಡಕಟ್ಟಿಗೆ ಸೇರಿದ ಭೂರಹಿತ ಮಹಿಳೆ ಜೀವನಾಧಾರವಾಗಿ ಮೇಲ್ಜಾತಿಯವರ ಜಮೀನಿನಲ್ಲಿ ಅಥವಾ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಾರೆ. ಮೊಬೈಲ್ ಫೋನ್ ಕೂಡಾ ಐಷಾರಾಮಿ ವಸ್ತು ಎಂದು ಅವರು ಹೇಳುತ್ತಾರೆ.
ಅಹೀರ್ 12ನೇ ತರಗತಿವರೆಗೆ ಓದಿದ್ದರೆ ಪವಾರ್ ಅನಕ್ಷರಸ್ಥೆ. ತಮ್ಮ ಜೀವನಾನುಭವಗಳು ಹಾಗೂ ತಳಹಂತದ ಹೋರಾಟ ಅವರಿಗೆ ಅಂಬೇಡ್ಕರ್ ಹಾಗೂ ಅವರ ಜಾತಿ ಸಂಪ್ರದಾಯ ವಿರೋಧಿ ಹೋರಾಟವನ್ನು ಕಲಿಸಿತು ಎಂದು ಇಬ್ಬರೂ ಹೇಳುತ್ತಾರೆ.
ರಾಜಕೀಯ ಹೋರಾಟದಲ್ಲಿ ಅಹೀರ್, ಪವಾರ್ ಅವರಿಗಿಂತ ಹಿರಿಯರು ಹಾಗೂ ಹಲವು ವರ್ಷಗಳಿಂದ ಇಬ್ಬರೂ ಜತೆಯಾಗಿ ಹಲವು ಪ್ರತಿಭಟನೆಗಲ್ಲಿ ಭಾಗವಹಿಸಿದ್ದಾರೆ ಹಾಗೂ ಬಿಜೆಪಿ ಹಾಗೂ ಆರೆಸ್ಸೆಸ್‍ನ ಹಿಂದುತ್ವವಾದಿ ಕಾರ್ಯಸೂಚಿ ವಿರುದ್ಧ ಔರಂಗಾಬಾದ್ ಜಿಲ್ಲೆಯಲ್ಲಿ ಧ್ವನಿ ಎತ್ತಿದ್ದಾರೆ.
2017ರಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿಯ ಸಂಸದ ಅನಂತಕುಮಾರ್ ಹೆಗಡೆ ‘ಜಾತ್ಯತೀತ’ ಎಂಬ ಪದವನ್ನು ಟೀಕಿಸಿದ್ದರು ಹಾಗೂ ಈ ಪದವನ್ನು ಸಂವಿಧಾನದ ಪೀಠಿಕೆಯಿಂದ ಕಿತ್ತು ಹಾಕಬೇಕು ಎಂದು ಹೇಳಿದ್ದರು. ಆಗ ಆರ್‍ಪಿಐ-ಕಾರಟ್ ಗುಂಪಿನ ಕಾರ್ಯಕರ್ತರ ಜತೆ ಪ್ರತಿಭಟನೆ ನಡೆಸಿ, ಔರಂಗಾಬಾದ್‍ನಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಕಚೇರಿ ಮೇಳೆ ದಾಳಿ ನಡೆಸಿದ್ದರು.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕದ ಪ್ರತಿಭಟನೆಗಳ ಬಗೆಗಿನ ಹಾಗೂ ಕಾನ್ಫಿಡರೇಟ್ ಮುಖಂಡರ ಪ್ರತಿಮೆಗಳು ಉರುಳುತ್ತಿರುವ ವರದಿಗಳು ಹೇರಳವಾಗಿ ಹರಿದು ಬರುತ್ತಿರುವ ನಡುವೆಯೇ ಅಹೀರ್ ಅವರು ರಾಜಸ್ಥಾನ ಹೈಕೋರ್ಟ್‍ಗೆ ಪಯಣ ಬೆಳೆಸಿದ ತಮ್ಮ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ.
“ಅದೊಂದು ವಿಶಿಷ್ಟ ಅನುಭವ. ನಾವು ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದರೆ ನಮ್ಮ ಪ್ರತಿಭಟನೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿತ್ತು ಎನ್ನುವುದು ನಮಗೆ ಗೊತ್ತಿತ್ತು. ನಮಗಾಗಿ ಅಲ್ಲದಿದ್ದರೂ, ಅವರನ್ನು (ಸಂವಿಧಾನದ ಪ್ರತಿಯನ್ನು ದೆಹಲಿಯಲ್ಲಿ ಸುಟ್ಟುಹಾಕಿದವರು) ಪ್ರಶ್ನಿಸುವವರೇ ಇರಲಿಲ್ಲ. ಆದ್ದರಿಂದ ನಾವು ಈ ಕಾರ್ಯಕ್ಕೆ ಧುಮುಕಿದೆವು ಎಂದು ಅಹೀರ್ ಹೇಳುತ್ತಾರೆ.
“ಮನು ಖಾಡ್ಯ (ಕಾನೂನು)ದ ಹಿಂದೂ ಜಾತಿ, ಮೂಲಭೂತವಾಗಿ ಬ್ರಾಹ್ಮಣರು ಮತ್ತು ಸವರ್ಣೀಯರು ಎಂಬುದನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಕೇವಲ ಒಂದು ಸರಳ ಕಾರ್ಯದ ಮೂಲಕ ನಾವು ಇದು ಕರಾಳ ನಂಬಿಕೆ ಎನ್ನುವುದನ್ನು ನಾವು ಸಾರಿ ಹೇಳಿದೆವು” ಎಂದು ಪವಾರ್ ವಿವರಿಸುತ್ತಾರೆ.
“ದೆಹಲಿಯಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟರೆ ರಾಜಸ್ಥಾನವನ್ನು ತಮ್ಮ ಪ್ರತಿಭಟನೆ ಸ್ಥಳವಾಗಿ ಏಕೆ ಆಯ್ಕೆ ಮಾಡಿಕೊಳ್ಳಬೇಕು?” ಎಂದು ಪ್ರಶ್ನಿಸಿದಾಗ “ಹಿಂದೂ ಪುರಾಣದ ಪ್ರಕಾರ ಮನು, ಮನುಸ್ಮೃತಿಯ ಕರ್ತೃ. ಆತ ಕಾನೂನುಬದ್ಧವಾಗಿ ಜಾತಿ ಮತ್ತು ಲಿಂಗದ ಆಧಾರದಲ್ಲಿ ಮಾನವೀಯತೆಯ ಕುಸಿತಕ್ಕೆ ಅನುಮತಿಸಿದ್ದ. ಶೂದ್ರರಿಗೆ ಹಾಗೂ ಅತಿಶೂದ್ರರಿಗೆ ಮತ್ತು ಮಹಿಳೆಯರಿಗೆ ಕಟ್ಟುನಿಟ್ಟಿನ ಕಾನೂನುಗಳನ್ನು ರೂಪಿಸಿದ್ದ. ಈ ಕಾಲ್ಪನಿಕ ವ್ಯಕ್ತಿಗೆ ಸದ್ಯದ ಭಾರತದಲ್ಲಿ ಕೂಡಾ ಮಾನ್ಯತೆ ಇದೆ. ಇನ್ನೂ ಆಘಾತಕಾರಿ ಅಂಶವೆಂದರೆ ಆತನ ಪ್ರತಿಮೆಯನ್ನು ಹೈಕೋರ್ಟ್ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ” ಎಂಬ ಉತ್ತರ ಅಹಿರ್ ಅವರಿಂದ ಬಂತು. ತಾವು ಕೇವಲ ಅಂಬೇಡ್ಕರ್ ತತ್ವಗಳನ್ನಷ್ಟೇ ಅನುಸರಿಸುವುದಾಗಿ ಅವರು ಸ್ಪಷ್ಟಪಡಿಸಿದರು.
1927ರ ಡಿಸೆಂಬರ್ 25ರಂದು ಮಹಾರಾಷ್ಟ್ರದ ನಾಸಿಕ್ ನ ಚಾವ್ದಾರ್ ಚೌಕದಿಂದ ನೀರು ಪಡೆಯುವ ಐತಿಹಾಸಿಕ ಅಭಿಯಾನದ ವೇಳೆ, ಅಂಬೇಡ್ಕರ್ ಅಸ್ಪ್ರಶ್ಯರ ಸಮ್ಮೇಳನವನ್ನು ಆಯೋಜಿಸಿದ್ದರು. ಈ ಸಮ್ಮೇಳನದಲ್ಲಿ ಮನುಸ್ಮೃತಿಯ ಪ್ರತಿಯನ್ನು ಬ್ರಾಹ್ಮಣ್ಯದ ವಿರುದ್ಧದ ಕ್ರಾಂತಿಯ ಸಂಕೇತವಾಗಿ ಸುಟ್ಟುಹಾಕಲಾಯಿತು. ಆ ಬಳಿಕ ಪ್ರತಿ ವರ್ಷ ಹಲವು ಜಾತಿ ವಿರೋಧಿ ಗುಂಪುಗಳು ಆ ದಿನವನ್ನು ಮನುಸ್ಮೃತಿ ದಹನ ದಿವಸವಾಗಿ ಆಚರಿಸಿ ಪುಸ್ತಕದ ಪ್ರತಿಯನ್ನು ಸುಡುತ್ತಾರೆ.
ರಾಜಸ್ಥಾನ ಹೈಕೋರ್ಟ್ ಆವರಣದ ಒಳಗಿನ ಉದ್ಯಾನವನ ಪ್ರದೇಶದಲ್ಲಿ, 10 ಅಡಿ ಎತ್ತರದ ಮನು ಪ್ರತಿಮೆ ಇದೆ. ರಾಜಸ್ಥಾನ ನ್ಯಾಯಾಂಗ ಅಧಿಕಾರಿಗಳ ಸಂಘ 1989ರಲ್ಲಿ ಇದನ್ನು ನಿರ್ಮಿಸಿತ್ತು. ಇದಕ್ಕೆ ಲಯನ್ಸ್ ಕ್ಲಬ್ ನೆರವು ನೀಡಿದ್ದು, ಹಲವು ವರ್ಷಗಳ ಕಾಲ ಇದು ಅಪಸ್ವರಕ್ಕೆ ಕಾರಣವಾಗಿತ್ತು. ಮೂರು ದಶಕಗಳ ಕಾಲ ಜಾತಿ ವಿರೋಧಿ ಹೋರಾಟಗಾರರು ಈ ಪ್ರತಿಮೆ ಪ್ರತಿಷ್ಠಾಪನೆಯನ್ನು ಟೀಕಿಸುತ್ತಿದ್ದರು ಹಾಗೂ ಸಂವಿಧಾನಕ್ಕೆ ವಿರುದ್ಧವಾದ ಕಾನೂನನ್ನು ರಚಿಸಿದ್ದ ಪೌರಾಣಿಕ ವ್ಯಕ್ತಿಯ ಪ್ರತಿಮೆಯನ್ನು ನ್ಯಾಯಾಲಯದ ಆವರಣದಲ್ಲಿ ಸ್ಥಾಪಿಸಲು ಅನುಮತಿ ನೀಡಿದ ನ್ಯಾಯಾಂಗದ ಕ್ರಮವನ್ನು ಪ್ರಶ್ನಿಸಿದ್ದರು.
ದಿಟ್ಟ ಹೋರಾಟ
ಇಷ್ಟಾಗಿಯೂ ಆ ಇಬ್ಬರ ಪ್ರತಿಭಟನೆ ದಿಟ್ಟ ಹೋರಾಟ. ಮಸಿ ಬಳಿದ ಪರಿಣಾಮವಾಗಿ ಈ ಮಹಿಳೆಯರಿಗೆ ಘೇರಾವ್ ಹಾಕಲಾಯಿತು. ವೈರಲ್ ಆದ ವಿಡಿಯೊದಲ್ಲಿ ರಾಜಸ್ಥಾನದ ನ್ಯಾಯಾಂಗ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬ್ರಾಹ್ಮಣ ವಕೀಲರು ಮಹಿಳೆಯರಿಗೆ “ಪ್ರತಿಮೆಗೆ ಕಪ್ಪು ಬಳಿದದ್ದೇಕೆ”ಎಂದು ಪ್ರಶ್ನಿಸುತ್ತಿದ್ದರು. ‘ಮನು ಬ್ರಾಹ್ಮಣ್ಯದ ಸಂಕೇತ’ ಎಂದು ಮಹಿಳೆಯರು ಹೇಳಿದಾಗ, ಕೆಲವರು ತಾವು ಬ್ರಾಹ್ಮಣರು ಎಂದು ಹೇಳಿಕೊಂಡು, ನಿಮ್ಮ ಮುಖಕ್ಕೂ ಏಕೆ ಕಪ್ಪು ಹಚ್ಚಬಾರದು ಎಂದು ಪ್ರಶ್ನಿಸಿದರು.
ಮೂರು ದಶಕಗಳಿಂದ, ಹಲವು ಜಾತಿ ವಿರೋಧಿ ಸಂಘಟನೆಗಳು ಜಾತೀಯವಾದಿಯ ಪ್ರತಿಮೆಯನ್ನು ನ್ಯಾಯಾಲಯ ಆವರಣದಲ್ಲಿ ಸ್ಥಾಪಿಸಲು ಅವಕಾಶ ಮಾಡಿಕೊಟ್ಟ ರಾಜಸ್ಥಾನ ರಾಜ್ಯ ಸರ್ಕಾರ ಮತ್ತು ನ್ಯಾಯಾಂಗದ ಬ್ರಾಹ್ಮಣ್ಯ ನೀತಿಯನ್ನು ಪ್ರಶ್ನಿಸುತ್ತಿವೆ.
1989ರಲ್ಲಿ ಈ ಪ್ರತಿಮೆ ಸ್ಥಾಪಿಸಿದ ತಕ್ಷಣ ರಾಜ್ಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದವು. ರಾಜಸ್ಥಾನ ಹೈಕೋರ್ಟ್‍ನ ಕಿಕ್ಕಿರಿದು ತುಂಬಿದ್ದ ಹಾಲ್‍ನಲ್ಲಿ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಪುತ್ಥಳಿಯನ್ನು ಕೋರ್ಟಿನಿಂದಾಚೆ ಸ್ಥಳಾಂತರಿಸಲಾಯಿತು. ಆದರೆ ಈ ಆದೇಶವನ್ನು ಜೈಪುರ ಮೂಲದ ವಿಎಚ್‍ಪಿ ಮುಖಂಡ ಆಚಾರ್ಯ ಧರ್ಮೇಂದ್ರ ಪ್ರಶ್ನಿಸಿದರು.
ಈ ಪ್ರಕರಣ ಮತ್ತೆ ಮತ್ತೆ ನ್ಯಾಯಾಲಯದ ವಕೀಲರ ಸಂಘದ ಮುಂದೆ ಬಂತು. 2015ರ ಆಗಸ್ಟ್ 3ರಂದು 25 ವರ್ಷಗಳ ಬಳಿಕ ರಾಜಸ್ಥಾನ ಹೈಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡಿತು. ಹಲವು ಜಾತಿ ವಿರೋಧಿ ಸಂಘಟನೆಗಳು ವಿಷಯದಲ್ಲಿ ಮಧ್ಯಪ್ರವೇಶ ಮಾಡಿದವು. ಜಾತಿ ವಿರೋಧಿ ದೃಷ್ಟಿಕೋನದಿಂದ ವಕೀಲರು ವಾದ ಮಾಡುವ ಪ್ರಯತ್ನ ನಡೆಸಿದಾಗಲೆಲ್ಲ ಬ್ರಾಹ್ಮಣ ವಕೀಲರು ಪ್ರತಿಭಟನೆ ನಡೆಸಿ ನ್ಯಾಯಾಲಯದಲ್ಲಿ ಅವರನ್ನು ದಮನಿಸುತ್ತಿದ್ದರು. ಮುಖ್ಯ ನ್ಯಾಯಮೂರ್ತಿ ಸುನೀಲ್ ಅಂಬ್ವಾನಿ, ನ್ಯಾಯಮೂರ್ತಿಗಳಾದ ಅಜಿತ್ ಸಿಂಗ್ ಮತ್ತು ವಿ.ಎಸ್.ಸಿರದಾನ ಅವರನ್ನು ಒಳಗೊಂಡ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿ, ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕೆ ನೋಟಿಸ್ ನೀಡಿ, ಅರ್ಜಿ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು. ಅಂದಿನಿಂದ ಇಂದಿನವರೆಗೂ ಪ್ರಕರಣ ಹೈಕೋರ್ಟ್‍ನಲ್ಲಿ ಬಾಕಿ ಇದೆ.
ಮನು ಎಂಬ ವ್ಯಕ್ತಿ ಇದ್ದ ಎಂಬುದನ್ನು ನಿರೂಪಿಸುವ ಯಾವ ಪುರಾವೆಯೂ ಇಲ್ಲ. ಆದರೆ ಆತ ಮನುಸ್ಮೃತಿಯನ್ನು ಅಥವಾ ಶೂದ್ರರು, ಅತಿಶೂದ್ರರು ಮತ್ತು ಮಹಿಳೆಯರ ಮೇಲೆ ಕಠಿಣ ಕ್ರಮಗಳನ್ನು ಸೂಚಿಸುವ ‘ಮನು ಕಾನೂನನ್ನು’ ರಚಿಸಿದ ಎಂದು ನಂಬಲಾಗುತ್ತಿದೆ. ಇದರಲ್ಲಿ ಜಾತಿ ಆಧಾರದಲ್ಲಿ ಹಲವು ನಿಯಮಾವಳಿಗಳು ಹಾಗೂ ಶಿಕ್ಷೆಗಳನ್ನು ವಿವರಿಸಲಾಗಿದೆ. ಈ ಇಬ್ಬರು ಮಹಿಳೆಯರಂತೆ ಹಲವು ಮಂದಿ ಹೈಕೋರ್ಟ್‍ನ ಆವರಣದಲ್ಲಿ ಇರುವುದು ಅಸಮಾನತೆಯ ಸಂಕೇತ ನ್ಯಾಯ ಮತ್ತು ಸಮಾನತೆಯ ತತ್ವಕ್ಕೆ ವಿರುದ್ಧವಾದದ್ದು ಎಂದು ವಾದಿಸುತ್ತಾ ಬಂದಿದ್ದಾರೆ.
ಈ ಘಟನೆ ನಡೆದು ಎರಡು ವರ್ಷ ಬಳಿಕ ಮಹಿಳೆಯರು ಆರೋಪವನ್ನು ಎದುರಿಸುತ್ತಲೇ ಇದ್ದರು. ಪ್ರಕರಣ ದಾಖಲಾದಾಗ ಹಲವು ಜಾತಿ ವಿರೋಧಿ ಗುಂಪುಗಳು ಹಾಗೂ ಮಾನವ ಹಕ್ಕುಗಳ ವಕೀಲರು ಅವರ ನೆರವಿಗೆ ಬಂದರು. ಆದರೆ ಈ ಇಬ್ಬರು ಜೈಲಿನಿಂದ ಬಿಡುಗಡೆಗಾಗಿ ಮತ್ತು ನಂತರ ವಿಚಾರಣೆಗೆ ಹಾಜರಾಗುವ ಸಲುವಾಗಿ ನಿಧಿ ಸಂಗ್ರಹಿಸಿದರು. “ನಮ್ಮನ್ನು ಬಂಧಿಸಿದಾಗ ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಆಡಳಿತ ಇತ್ತು. ಇದೀಗ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಪ್ರಸ್ತುತ ಇರುವ ಸರ್ಕಾರಗಳು ಈ ಅಂಶವನ್ನು ಪರಿಗಣಿಸಿ ನಮ್ಮ ಮೇಲಿನ ಆರೋಪವನ್ನು ಕೈಬಿಡುತ್ತದೆ ಎಂಬ ನಿರೀಕ್ಷೆ ನಮ್ಮದು” ಎಂದು ಅಹಿರ್ ಹೇಳುತ್ತಾರೆ.