ಭಾರತದ ಗಡಿಯೊಳಕ್ಕೆ ಯಾರೂ ಪ್ರವೇಶಿಸಿಲ್ಲ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ

Update: 2020-06-19 17:09 GMT

ಹೊಸದಿಲ್ಲಿ: ಭಾರತದ ಗಡಿ ಪ್ರದೇಶದೊಳಕ್ಕೆ ಯಾರೂ ಪ್ರವೇಶಿಸಿಲ್ಲ ಮತ್ತು ಭಾರತದ ಯಾವುದೇ ಪೋಸ್ಟ್ ಅನ್ನು ಯಾರೂ ವಶಕ್ಕೆ ಪಡೆದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲಡಾಕ್‌ ನ ಗಲ್ವಾನ್ ಕಣಿವೆಯಲ್ಲಿ ಸೋಮವಾರ ಚೀನಾ ಹಾಗೂ ಭಾರತ ಸೇನೆ ನಡುವೆ ನಡೆದ ಘರ್ಷಣೆಯಲ್ಲಿ ಕರ್ನಲ್ ಸಹಿತ 20 ಮಂದಿ ಭಾರತೀಯ ಯೋಧರು ಹುತಾತ್ಮರಾದ ಘಟನೆಯ ಬಳಿಕ ಗಡಿಯಲ್ಲಿ ನೆಲೆಸಿರುವ ಉದ್ವಿಗ್ನತೆ ಬಗ್ಗೆ ಚರ್ಚಿಸಲು ಪ್ರಧಾನಿ ಸರ್ವಪಕ್ಷ ಸಭೆ ಕರೆದಿದ್ದರು.

ಸಭೆಯಲ್ಲಿ ಮಾತನಾಡಿದ ಪ್ರಧಾನಿ ‘‘ಅವರು (ಚೀನಿಯರು) ನಮ್ಮ ಗಡಿಯೊಳಗೆ ನುಸುಳಿಲ್ಲ ಅಥವಾ ನಮ್ಮ ಯಾವುದೇ ಠಾಣೆಯನ್ನು ಅವರು ವಶಕ್ಕೆ ತೆಗೆದುಕೊಂಡಿಲ್ಲ ಎಂದರು. ‘‘ಭಾರತ ಮಾತೆಯನ್ನು ಕೆಣಕಿದವರಿಗೆ ತಕ್ಕ ಪಾಠವನ್ನು ಕಲಿಸಲಾಗಿದೆ ಎಂದರು. ನಮ್ಮ ಒಂದಿಂಚೂ ನೆಲದ ಮೇಲೂ ಯಾರೂ ಕೂಡಾ ಕಣ್ಣುಹಾಕಲಾಗದಂತಹ ಸಾಮರ್ಥ್ಯವನ್ನು ನಾವು ಈಗ ಪಡೆದಿದ್ದೇವೆ. ಒಂದೇ ಏಟಿನಲ್ಲಿ ಬಹು ವಲಯಗಳಲ್ಲಿ ಮುನ್ನುಗ್ಗುವಂತಹ ಸಾಮರ್ಥ್ಯವನ್ನು ಭಾರತದ ಶಸ್ತ್ರಾಸ್ತ್ರ ಪಡೆಗಳು ಬೆಳೆಸಿಕೊಂಡಿದೆ ಎಂದರು.

ಕಾಂಗ್ರೆಸ್, ಟಿಎಂಸಿ ಸೇರಿದಂತೆ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡ ಹಲವು ವಿರೋಧ ಪಕ್ಷಗಳ ನಾಯಕರು ಪೂರ್ವ ಲಡಾಕ್ ಗಡಿ ಉದ್ವಿಗ್ನತೆಗೆ ಸಂಬಂಧಿಸಿದ ವಿಷಯಗಳನ್ನು ಮುಚ್ಚಿಟ್ಟಿತ್ತೆಂದು ಅಸಮಾಧಾನ ವ್ಯಕ್ತಪಡಿಸಿದರು. ಆದಾಗ್ಯೂ, ದೇಶದ ಭದ್ರತೆಯ ವಿಚಾರದಲ್ಲಿ ಕೇಂದ್ರ ಸರಕಾರವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಒಕ್ಕೊರಲಿನಿಂದ ಘೋಷಿಸಿವೆ.

ಸರ್ವಪಕ್ಷ ಸಭೆಯ ಆರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು, ಭಾರತೀಯ ಯೋಧರ ಸಾವಿಗೆ ಸಂತಾಪ ವ್ಯಕ್ತಪಡಿಸಿದರು ಮತ್ತು ಗಡಿ ಉದ್ವಿಗ್ನತೆಗೆ ಸಂಬಧಿಸಿ ಸರಕಾರಕ್ಕೆ ಸವಾಲುಗಳ ಸರಮಾಲೆಯನ್ನೇ ಎಸೆದರು.

“ಯಾವ ದಿನಾಂಕದಂದು ಚೀನಿ ಪಡೆಗಳು ಲಡಾಖ್‌ನಲ್ಲಿರುವ ನಮ್ಮ ಪ್ರದೇಶದೊಳಗೆ ನುಸುಳಿವೆ?. ಚೀನಾದ ಅತಿಕ್ರಮಣ ಬಗ್ಗೆ ಸರಕಾರಕ್ಕೆ ಯಾವಾಗ ಮಾಹಿತಿ ಲಭಿಸಿತು?. ಈಗ ವರದಿಯಾದಂತೆ ಮೇ 5ರಂದೇ ಅಥವಾ ಅದಕ್ಕೂ ಮುನ್ನವೇ?. ನಮ್ಮ ದೇಶದ ಗಡಿಗಳ ಉಪಗ್ರಹ ಚಿತ್ರಗಳನ್ನು ನಿಯಮಿತವಾಗಿ ಸರಕಾರವು ಪಡೆದುಕೊಳ್ಳುತ್ತಿಲ್ಲವೇ?. ಎಲ್‌ಎಸಿಯಲ್ಲಿ ನಡೆಯುತ್ತಿರುವ ಅಸಹಜ ಚಟುವಟಿಕೆಗಳ ಬಗ್ಗೆ ನಮ್ಮ ಬಾಹ್ಯ ಗುಪ್ತಚರ ಸಂಸ್ಥೆಗಳು ಯಾವುದೇ ಮಾಹಿತಿ ನೀಡಲಿಲ್ಲವೇ?. ಭಾರತದ ಅಥವಾ ಚೀನಾ ಭಾಗದ ಎಲ್‌ಎಸಿಯುದ್ದಕ್ಕೂ ಚೀನಿ ಪಡೆಗಳ ಒಳನುಸುಳುವಿಕೆ ಹಾಗೂ ಬೃಹತ್ ಪಡೆಗಳ ಜಮಾವಣೆ ಬಗ್ಗೆ ಮಿಲಿಟರಿ ಬೇಹುಗಾರಿಕೆಯು ಸರಕಾರವನ್ನು ಎಚ್ಚರಿಸಲಿಲ್ಲವೇ?. ಇದು ಗುಪ್ತಚರ ವ್ಯವಸ್ಥೆಯ ವೈಫಲ್ಯವೆಂದು ಸರಕಾರ ಪರಿಗಣಿಸಿದೆಯೇ?” ಎಂದು ಸೋನಿಯಾ ಸರಕಾರಕ್ಕೆ ಏಳು ಪ್ರಶ್ನೆಗಳನ್ನು ಕೇಳಿದ್ದಾರೆ.

ಎಲ್‌ಎಸಿಯಲ್ಲಿ ಯಥಾಸ್ಥಿತಿಯನ್ನು ಮರುಸ್ಥಾಪಿಸಬೇಕೆಂಬ ಭರವಸೆಯನ್ನು ಸರಕಾರವ ದೇಶಕ್ಕೆ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಸೋನಿಯಾ ಗಾಂಧಿ (ಕಾಂಗ್ರೆಸ್), ಮಮತಾ ಬ್ಯಾನರ್ಜಿ (ಟಿಎಂಸಿ), ಮಾಯಾವತಿ (ಬಿಎಸ್ಪಿ), ಉದ್ಧವ್‌ ಠಾಕ್ರೆ ( ಶಿವಸೇನೆ), ಎಂ.ಕೆ. ಸ್ಟಾಲಿನ್ (ಡಿಎಂಕೆ), ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಓ. ಪನ್ನೀರ್‌ಸೆಲ್ವಂ (ಎಐಎಡಿಎಂಕೆ), ಎನ್.ಚಂದ್ರಬಾಬು ನಾಯ್ಡು(ಟಿಡಿಪಿ), ಸೀತಾರಾಮ ಯಚೂರಿ (ಮಾರ್ಕ್ಸಿಸ್ಟ್), ನಿತೀಶ್‌ಕುಮಾರ್ (ಜೆಡಿಯು), ಶರದ್‌ಪವಾರ್ (ಎನ್‌ಸಿಪಿ) ಮತ್ತಿತರರು ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದುರ.

ಸರ್ವಪಕ್ಷ ಸಭೆಯು ದೇಶಕ್ಕೊಂದು ಒಳ್ಳೆಯ ಸಂದೇಶ ನೀಡಿದೆ. ನಾವು ನಮ್ಮ ಯೋಧರ ಹಿಂದೆ ಇದ್ದೇವೆ ಎಂಬುದನ್ನು ತೋರಿಸಿದೆ. ದೇಶದ ಟೆಲಿಕಾಂ, ರೈಲ್ವೆ ಹಾಗೂ ವಿಮಾನಯಾನ ವಲಯಗಳಿಗೆ ಚೀನಾ ಪ್ರವೇಶಕ್ಕೆ ಅವಕಾಶ ನೀಡಬಾರದು.

-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ

ಚೀನಾದ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶವಿದೆ. ತಮ್ಮ ನಡುವಿನ ಅನೈಕ್ಯತೆಯನ್ನು ಇತರ ರಾಷ್ಟ್ರಗಳು ದುರುಪಯೋಗಪಡಿಸುವುದಕ್ಕೆ ರಾಜಕೀಯ ಪಕ್ಷಗಳು ಅವಕಾಶ ನೀಡಕೂಡದು.

-ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ

ಭಾರತ-ಚೀನಾ ಬಿಕ್ಕಟ್ಟಿನ ವಿಷಯದಲ್ಲಿ ಭಾರತವು ಪಂಚಶೀಲ ತತ್ವಗಳನ್ನು ಅನುಸರಿಸಬೇಕು. ಈ ವಿವಾದವನ್ನು ಬಳಸಿಕೊಂಡು ತನ್ನ ಮೈತ್ರಿಕೂಟಕ್ಕೆ ಭಾರತವನ್ನು ಸೆಳೆಯಲು ಬಯಸುತ್ತಿರುವ ಅಮೆರಿಕದ ಪ್ರಯತ್ನಗಳನ್ನು ವಿರೋಧಿಸಬೇಕು.

-ಡಿ.ರಾಜಾ (ಸಿಪಿಐ)

ಗಡಿಯಲ್ಲಿ ಮೂಲಸೌಕರ್ಯ ನಿರ್ಮಾಣ ಕಾರ್ಯ ನಿಲ್ಲಕೂಡದು. ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದಲ್ಲಿ ಚೀನಾ ಪ್ರಾಯೋಜಿತ ಚಟುವಟಿಕೆಗಳು ಆತಂಕಕಾರಿಯಾಗಿವೆ.

-ಕೊನ್ರಾಡ್ ಸಂಗ್ಮಾ, ಎನ್‌ಪಿಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News