ಕೊರೋನ ಸೋಂಕು: ವಿಶ್ವಾದ್ಯಂತ ಒಂದೇ ದಿನ 1.83 ಲಕ್ಷ ಹೊಸ ಪ್ರಕರಣ

Update: 2020-06-22 04:03 GMT

ಹೊಸದಿಲ್ಲಿ, ಜೂ.22: ಕೊರೋನ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ವಿಶ್ವಾದ್ಯಂತ ಒಂದೇ ದಿನ 1.83 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 87 ಲಕ್ಷ ತಲುಪಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.

ಬ್ರೆಝಿಲ್‌ನಲ್ಲಿ ಗರಿಷ್ಠ ಎಂದರೆ 24 ಗಂಟೆಗಳಲ್ಲಿ 54,771 ಪ್ರಕರಣಗಳು ದೃಢಪಟ್ಟಿದ್ದು, 36,617 ಪ್ರಕರಣಗಳೊಂದಿಗೆ ಅಮೆರಿಕ ಎರಡನೇ ಸ್ಥಾನದಲ್ಲಿದೆ. ಭಾರತದಿಂದ 15,400 ಪ್ರಕರಣಗಳು ವರದಿಯಾಗಿವೆ. ವಿಶ್ವದಲ್ಲಿ ಒಟ್ಟು 87,08,008 ಪ್ರಕರಣಗಳು ದಾಖಲಾಗಿವೆ. ವಿಶ್ವಾದ್ಯಂತ ಮೃತರ ಸಂಖ್ಯೆ 4,743ರಷ್ಟು ಹೆಚ್ಚಿದ್ದು, 4,61,715ಕ್ಕೇರಿದೆ. ಒಟ್ಟು ಮೃತರ ಸಂಖ್ಯೆಯಲ್ಲಿ ಮೂರನೇ ಎರಡರಷ್ಟು ಪ್ರಕರಣಗಳು ಅಮೆರಿಕದಿಂದ ವರದಿಯಾಗಿವೆ.

ಸ್ಪೇನ್‌ನಲ್ಲಿ ಮೂರು ತಿಂಗಳ ಲಾಕ್‌ಡೌನ್ ಮೊದಲ ಬಾರಿಗೆ ಸಡಿಲಿಕೆಯಾಗಿದೆ. ಮಾರ್ಚ್ 17ರ ಬಳಿಕ ಮೊದಲ ಬಾರಿಗೆ 4.7 ಕೋಟಿ ಮಂದಿ ಮುಕ್ತವಾಗಿ ದೇಶಾದ್ಯಂತ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಬ್ರಿಟನ್ ಹಾಗೂ 26 ಯುರೋಪಿಯನ್ ದೇಶಗಳಿಂದ ಆಗಮಿಸಿದವರಿಗೆ 14 ದಿನಗಳ ಕ್ವಾರಂಟೈನ್ ಕೂಡಾ ಕೈಬಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News