​ದೇಶದಲ್ಲಿ ವಾರದಲ್ಲಿ ಒಂದು ಲಕ್ಷ ಕೋವಿಡ್-19 ಪ್ರಕರಣ !

Update: 2020-06-24 04:01 GMT

ಹೊಸದಿಲ್ಲಿ: ದೇಶದಲ್ಲಿ ಕಳೆದ ಒಂದು ವಾರದಲ್ಲಿ ಒಂದು ಲಕ್ಷಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಮಂಗಳವಾರ ಒಂದೇ ದಿನ ದೇಶದಲ್ಲಿ 15,600 ಪ್ರಕರಣಗಳು ದೃಢಪಟ್ಟಿದ್ದು, ಇದು ದೇಶದಲ್ಲಿ ದಿನವೊಂದರಲ್ಲಿ ದಾಖಲಾದ ಗರಿಷ್ಠ ಸಂಖ್ಯೆ. ಅಂತೆಯೇ ಮಂಗಳವಾರ ಒಂದೇ ದಿನ ದೇಶದಲ್ಲಿ 466 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ವಾರದ ಹಿಂದೆ 3.53 ಲಕ್ಷ ಇದ್ದ ಒಟ್ಟು ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಮಂಗಳವಾರ 4.55 ಲಕ್ಷಕ್ಕೇರಿದೆ. ಈ ಅವಧಿಯಲ್ಲಿ 1.02 ಲಕ್ಷ ಪ್ರಕರಣಗಳು ಸೇರ್ಪಡೆಯಾಗಿವೆ. ಏಳು ದಿನದಲ್ಲಿ ಮೃತಪಟ್ಟವರ ಸಂಖ್ಯೆ 2451. ಇದು ಒಟ್ಟು ಮೃತರ ಸಂಖ್ಯೆಯ ಪೈಕಿ ಶೇಕಡ 18ರಷ್ಟು.

ದೆಹಲಿಯಲ್ಲಿ ಗರಿಷ್ಠ 3947 ಪ್ರಕರಣಗಳು ಮಂಗಳವಾರ ದೃಢಪಟ್ಟಿವೆ. ಮಹಾರಾಷ್ಟ್ರದಿಂದಲೂ ಅಧಿಕ ಸಂಖ್ಯೆಯ ಪ್ರಕರಣಗಳು ದೆಹಲಿಯಲ್ಲಿ ದಾಖಲಾಗಿರುವುದು ಇದೇ ಮೊದಲು. ಮಹಾರಾಷ್ಟ್ರದಲ್ಲಿ ಮಂಗಳವಾರ 3214 ಪ್ರಕರಣಗಳು ವರದಿಯಾಗಿವೆ. ಮಂಗಳವಾರ ದೇಶಾದ್ಯಂತ ಒಟ್ಟು 15689 ಪ್ರಕರಣಗಳು ದೃಢಪಟ್ಟಿವೆ.

ಮಹಾರಾಷ್ಟ್ರದಲ್ಲಿ ಮಂಗಳವಾರ 248 ಸೋಂಕಿತರು ಮೃತಪಟ್ಟಿದ್ದು, ರಾಜ್ಯದಲ್ಲಿ ಮೃತರ ಸಂಖ್ಯೆ 6531ಕ್ಕೇರಿದೆ. ಜೂನ್ 21ರಂದು ಗರಿಷ್ಠ ಅಂದರೆ 186 ಮಂದಿ ಮೃತಪಟ್ಟಿದ್ದರು. ಮುಂಬೈ ಮಹಾನಗರದಲ್ಲಿ 107 ಮಂದಿ ಮಂಗಳವಾರ ಅಸು ನೀಗಿದ್ದು, ಒಟ್ಟು ಮೃತರ ಸಂಖ್ಯೆ 3844ಕ್ಕೇರಿದೆ.

ದೆಹಲಿಯ ಒಟ್ಟು ಪ್ರಕರಣಗಳ ಪೈಕಿ ಶೇಕಡ 69 ಪ್ರಕರಣಗಳು ಕಳೆದ 23 ದಿನಗಳಲ್ಲಿ ವರದಿಯಾಗಿವೆ. ರೋಗ ಅತ್ಯಂತ ವೇಗವಾಗಿ ಹರಡುತ್ತಿದೆ. ಸರ್ಕಾರಿ ಇಲಾಖೆಗಳು ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿವೆ. ಆದರೆ ಜನ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ; ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತಿಲ್ಲ; ಮಾಸ್ಕ್ ಧರಿಸುತ್ತಿಲ್ಲ. ಆದ್ದರಿಂದ ಪರಿಸ್ಥಿತಿ ಶೀಘ್ರ ಸುಧಾರಿಸಲಾರದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News