ಹಣ ಅಕ್ರಮ ವರ್ಗಾವಣೆ ಪ್ರಕರಣ: ಅಹ್ಮದ್ ಪಟೇಲ್ ವಿಚಾರಣೆ
ಹೊಸದಿಲ್ಲಿ, ಜೂ.27: ಗುಜರಾತ್ ಮೂಲದ ಸಂಸ್ಥೆ ಸ್ಟರ್ಲಿಂಗ್ ಬಯೊಟೆಲ್ ಹಾಗೂ ಅದರ ನಿರ್ದೇಶಕರು ಒಳಗೊಂಡಿರುವ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಶನಿವಾರ ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್‌ರ ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಿಲ್ಲಿಯಲ್ಲಿರುವ ಪಟೇಲ್ ನಿವಾಸಕ್ಕೆ ತೆರಳಿದ ಮೂವರು ಅಧಿಕಾರಿಗಳ ತಂಡ, ಪ್ರಕರಣಕ್ಕೆ ಸಂಬಂಧಿಸಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತು. ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪಟೇಲ್‌ಗೆ ಈ ಹಿಂದೆ ಎರಡು ಬಾರಿ ಸಮನ್ಸ್ ಜಾರಿಯಾಗಿತ್ತು. ಆದರೆ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ 65 ವರ್ಷ ಮೀರಿದ ಹಿರಿಯ ನಾಗರಿಕರು ಮನೆಯೊಳಗೇ ಇರಬೇಕೆಂದು ಸರಕಾರ ಸೂಚಿಸಿದ್ದ ಕಾರಣ ಪಟೇಲ್ ವಿಚಾರಣೆಗೆ ಹಾಜರಾಗಿರಲಿಲ್ಲ.
ಸ್ಟರ್ಲಿಂಗ್ ಬಯೊಟೆಕ್ ಸಂಸ್ಥೆಯ ನಿರ್ದೇಶಕರಾದ ಚೇತನ್ ಸಂದೇಸರ ಮತ್ತು ನಿತಿನ್ ಸಂದೇಸರ ಹಾಗೂ ಇತರರು ಆಂಧ್ರಬ್ಯಾಂಕ್‌ನಿಂದ ಬಹುಕೋಟಿ ಮೊತ್ತದ ಸಾಲ ಪಡೆದು ಅದನ್ನು ಮರುಪಾವತಿಸದೆ ವಂಚಿಸಿದ್ದಾರೆ. ಸಾಲ ಪಡೆಯುವ ಸಂದರ್ಭದಲ್ಲಿ ಸಂಸ್ಥೆಯ ಬ್ಯಾಲೆನ್ಸ್ ಶೀಟ್‌ನಲ್ಲಿ ಸುಳ್ಳು ಅಂಕಿಅಂಶ ನೀಡಿ ಅಧಿಕ ಮೊತ್ತದ ಸಾಲ ಮಂಜೂರು ಮಾಡಿಸಿಕೊಂಡಿದ್ದಾರೆ. ಅಲ್ಲದೆ ಸ್ಟರ್ಲಿಂಗ್ ಬಯೊಟೆಕ್‌ನ ನಿರ್ದೇಶಕರು ದೇಶದಲ್ಲಿ ಸುಮಾರು 250 ಸಂಸ್ಥೆಗಳನ್ನು ಸ್ಥಾಪಿಸಿದ್ದು , ಇದರಲ್ಲಿ 200 ಬೇನಾಮಿ ಸಂಸ್ಥೆಗಳಾಗಿದ್ದು, ವಿವಿಧ ಬ್ಯಾಂಕ್‌ಗಳಿಂದ ಪಡೆದ ಹಣವನ್ನು ಈ ಸಂಸ್ಥೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿದೆ.
ಈ ಮಧ್ಯೆ, ದಿಲ್ಲಿಯ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರ ಸರಕಾರಿ ನಿವಾಸಕ್ಕೆ 25 ಲಕ್ಷ ರೂ. ಹಣವನ್ನು ತಲುಪಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ದೂರು ದಾಖಲಿಸುವಂತೆ 2018ರಲ್ಲಿ ದಿಲ್ಲಿಯ ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿತ್ತು. 2019ರ ಮಾರ್ಚ್‌ನಲ್ಲಿ, ಕಾಂಗ್ರೆಸ್ ಪಕ್ಷದ ಲೆಕ್ಕಪತ್ರದಲ್ಲಿ ತೆರಿಗೆ ತಪ್ಪಿಸಿದ ಪ್ರಕರಣಕ್ಕೆ ಸಂಬಂಧಿಸಿ, ಪಕ್ಷದ ಖಜಾಂಚಿಯಾಗಿರುವ ರಾಜ್ಯಸಭಾ ಸಂಸದ ಅಹ್ಮದ್ ಪಟೇಲ್‌ಗೆ ಆದಾಯ ತೆರಿಗೆ ಇಲಾಖೆ ಸಮನ್ಸ್ ಜಾರಿಗೊಳಿಸಿತ್ತು.