ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಎದುರಾದ ಅಪಾಯ
ಚರಿತ್ರೆಯ ಗಾಲಿ ಉಲ್ಟಾ ತಿರುಗುವುದಿಲ್ಲ ಎಂಬುದು ಎಲ್ಲರೂ ನಂಬಿಕೊಂಡು ಬಂದಿರುವ ಮಾತು. ಆದರೆ, ಈಗ ಕೊರೋನದ ನಂತರ ಕಾಲ ಬದಲಾಗಿದೆ. ವಿಶ್ವದಲ್ಲಿ ಪಾಳೆಗಾರಿಕೆಯನ್ನು ಮೆಟ್ಟಿ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂತು. ಮಾನವ ಸಮಾಜದ ವಿಕಾಸದಲ್ಲಿ ಇದೊಂದು ಮಹತ್ವದ ಬೆಳವಣಿಗೆ ಎಂದು ವ್ಯಾಖ್ಯಾನಿಸಲಾಯಿತು. ಇದರ ಮುಂದಿನ ಹೆಜ್ಜೆ ಸಮತೆಯ ಸಮಾಜ ಎಂದು ಎಪ್ಪತ್ತರ ದಶಕದಲ್ಲಿ ನಾವೆಲ್ಲ ಕನಸು ಕಂಡೆವು. ಸೋವಿಯತ್ ಸಮಾಜವಾದಿ ವ್ಯವಸ್ಥೆಯ ಕುಸಿತದ ನಂತರ ಪ್ರಪಂಚ ಅಡ್ಡಹಾದಿ ಹಿಡಿಯಿತು. ಸಮಾಜವಾದ ಈಗ ನಮ್ಮ ಆಶಯವಾಗಿ ಮಾತ್ರ ಉಳಿದಿದೆ. ಕೋವಿಡ್-19 ವಕ್ಕರಿಸಿದ ನಂತರ ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಬುಡವೇ ಅಲುಗಾಡುತ್ತಿದೆ.
ಇಡೀ ಜಗತ್ತಿಗೆ ಅನಿರೀಕ್ಷಿತವಾಗಿ ಕೊರೋನ ವೈರಸ್ ಅಪ್ಪಳಿಸಿದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ದೇಶಗಳಲ್ಲಿ ಅಧಿಕಾರ ಹಿಡಿದು ಕೂತವರು ತಾವು ಹತ್ತಿ ಬಂದ ಏಣಿಯನ್ನೇ ಒದ್ದು ಕುರ್ಚಿಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಕೊರೋನದ ವಿಶೇಷ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಎಲ್ಲ ಅಧಿಕಾರವನ್ನು ತಮ್ಮ ಬಳಿ ಕೇಂದ್ರೀಕರಿಸಿಕೊಂಡರು. ಟ್ರಂಪ್‌ನಿಂದ ಮೋದಿಯವರೆಗೆ ಈ ನಿರಂಕುಶ ಮನೋಭಾವ ಸ್ಪಷ್ಟವಾಗಿ ಗೋಚರಿಸತೊಡಗಿದೆ. ಈ ಬಗ್ಗೆ ಜಗತ್ತಿನ 500ಕ್ಕೂ ಮಿಕ್ಕಿದ ಪ್ರಮುಖ ಚಿಂತಕರು, ಲೇಖಕರು, ನೊಬೆಲ್ ಪ್ರಶಸ್ತಿ ಪುರಸ್ಕೃತರು ಆತಂಕ ವ್ಯಕ್ತಪಡಿಸಿದ್ದಾರೆ.
ಜಗತ್ತಿನ ಜನರು ಕೊರೋನದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಜೊತೆಗೆ ತಮಗೆ ಘನತೆಯ ಬದುಕನ್ನು ನೀಡಿದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಂಕಲ್ಪತೊಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೆಡ್ಲಿನ್ ಆಲ್ಬ್ರೈಟ್, ಚಿಂತಕ ನೋಮ ಚೋಮಸ್ಕಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಶೆರಿನ್ ಎಬ್ಡಿ ಈ ಕುರಿತು ಜಗತ್ತಿನ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.
ವಿಶ್ವದಲ್ಲಿ ಕೊರೋನ ವೈರಾಣು ವ್ಯಾಪಕವಾಗಿ ಹಬ್ಬತೊಡಗಿದಾಗ ಅದನ್ನು ಎದುರಿಸಲು ಚೀನಾ ಏನೊ ಸಮರ್ಥವಾಯಿತು. ಆದರೆ, ಉಳಿದ ಬಂಡವಾಳಶಾಹಿ ಸರಕಾರಗಳು ತತ್ತರಿಸಿದವು. ಮಾರುಕಟ್ಟೆ ಆರ್ಥಿಕತೆಯನ್ನು ಒಪ್ಪಿಕೊಂಡು ಆರೋಗ್ಯ ಕ್ಷೇತ್ರವನ್ನು ಪೇಟೆಯಲ್ಲಿ ಇಟ್ಟ ನವ ಉದಾರವಾದಿ ಸರಕಾರಗಳು ಕೊರೋನ ಹೊಡೆತಕ್ಕೆ ತತ್ತರಿಸಿ ಹೋದವು. ಮೊದಲೇ ದುರ್ಬಲಗೊಂಡ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅನಿರೀಕ್ಷಿತವಾಗಿ ಎರಗಿದ ಈ ಪಿಡುಗನ್ನು ಎದುರಿಸಲು ಏದುಸಿರು ಬಿಡತೊಡಗಿದವು. ಖಾಸಗಿ ಆಸ್ಪತ್ರೆಗಳು, ಮಲ್ಟಿಸ್ಪೆಷಾಲಿಟಿ ಕಾರ್ಪೊರೇಟ್ ಆಸ್ಪತ್ರೆಗಳು ಇದಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತೆ ಬಾಗಿಲು ಬಂದ್ ಮಾಡಿ ಕುಳಿತವು. ಇದು ಬಂಡವಾಳಶಾಹಿ ವ್ಯವಸ್ಥೆಯ ನೈಜ ಮುಖ ಬಯಲುಗೊಳಿಸಿದೆ ಎಂದು ನಮ್ಮ ಅನೇಕ ಮಿತ್ರರು ವ್ಯಾಖ್ಯಾನಿಸಿದರು. ಇದು ನಿಜ ಕೂಡ. ಆದರೆ, ಬಂಡವಾಳವಾದ ಈ ಬಿಕ್ಕಟ್ಟಿನಿಂದ ಪಾರಾಗಲು ಸರ್ವಾಧಿಕಾರಿಗಳ ಮೊರೆ ಹೋಯಿತು. ಅನೇಕ ದೇಶಗಳಲ್ಲಿ ಚುನಾವಣೆ ಮೂಲಕ ಅಧಿಕಾರಕ್ಕೆ ಬಂದವರು ಈ ಸನ್ನಿವೇಶವನ್ನು ಬಳಸಿ ಕೊಂಡು ಸರ್ವಾಧಿಕಾರಿ ಆಗುತ್ತಿದ್ದಾರೆ.
ಹಂಗರಿ, ಫಿಲಿಪ್ಪೀನ್ಸ್, ಎಲ್‌ಸಾಲ್ವಡಾರ್ ದೇಶಗಳಲ್ಲಿ ಅಧಿಕಾರದಲ್ಲಿದ್ದವರು ಕೊರೋನ ನೆಪ ಮುಂದೆ ಮಾಡಿ ದೇಶದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣವನ್ನು ನಿರ್ಮಿಸಿದ್ದಾರೆ. ಎಲ್ಲ ಅಧಿಕಾರವನ್ನು ತಮ್ಮ ಬಳಿ ಕೇಂದ್ರೀಕರಿಸಿಕೊಂಡಿದ್ದಾರೆ.
ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡಾ ಕೊಲೆಯ ನಂತರ ಸಿಡಿದೆದ್ದ ಜನರ ಆಕ್ರೋಶ ಸಾಮಾನ್ಯವಾದುದಲ್ಲ. ಇಂತಹ ಪ್ರತಿರೋಧವನ್ನು ಹತ್ತಿಕ್ಕಲು ಆಳುವವರ್ಗ ಸರ್ವಾಧಿಕಾರದ ರೂಪು ತಾಳುತ್ತಿದೆ. ಇದಕ್ಕೆ ಭಾರತವೂ ಹೊರತಲ್ಲ. ಕೊರೋನ ಬರುವುದಕ್ಕಿಂತ ಮುಂಚೆ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಒಂದಿಡೀ ಸಮುದಾಯದ ಜನರನ್ನು ಹಿಟ್ಲರ್ ಮಾದರಿಯ ಡಿಟೆನ್ಷೆನ್ ಸೆಂಟರ್‌ಗಳಿಗೆ ದಬ್ಬಲು ಹೊರಟಿದ್ದ ಸರಕಾರದ ನಿಲುವು ಬದಲಾಗಿಲ್ಲ. ಕೊರೋನ ಹಬ್ಬತೊಡಗಿದಾಗಲೂ ‘ಇವರಿಂದಲೇ ಹಬ್ಬಿತು’ ಎಂದು ಒಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಮಸಲತ್ತು ಅತ್ಯಂತ ವ್ಯಾಪಕವಾಗಿ ನಡೆಯಿತು. ಇಂದಿಗೂ ಕೆಲ ಅಮಾಯಕ ಜನರ ಬಾಯಿಯಲ್ಲಿ ಇಂತಹ ಮಾತುಗಳು ಬರುತ್ತಿವೆ.
ಕೊರೋನದಂತಹ ಸನ್ನಿವೇಶವನ್ನು ಪಕ್ಷ ಭೇದ ಮರೆತು ಇಡೀ ರಾಷ್ಟ್ರ ಒಂದಾಗಿ ಎದುರಿಸಬೇಕು. ಆದರೆ, ಈ ಕಾಲದಲ್ಲೂ ಕೇಂದ್ರದ ಬಿಜೆಪಿ ಸರಕಾರ ಸೈದ್ಧಾಂತಿಕ ವಿರೋಧಿಗಳನ್ನು ಮತ್ತು ರಾಜಕೀಯ ವಿರೋಧಿಗಳನ್ನು ದಮನ ಮಾಡಲು ಈ ಸಂದರ್ಭದ ದುರ್ಲಾಭ ಪಡೆಯಿತು. ತನ್ನ ಎದುರಾಳಿಗಳ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಜೈಲಿಗೆ ತಳ್ಳಿದೆ. ‘ಲಾಲ್ ಸಲಾಂ, ಕಾಮ್ರೇಡ್ ಪದಗಳ ಬಳಕೆ ಮತ್ತು ಲೆನಿನ್ ಫೋಟೊ ಇವುಗಳನ್ನು ಬಳಸುವುದೇ ಅಪರಾಧ’ ಎಂದು ರಾಷ್ಟ್ರೀಯ ತನಿಖಾ ದಳ ವ್ಯಾಖ್ಯಾನಿಸತೊಡಗಿದೆ. ವರವರರಾವ್ ಅವರಂತಹ 81 ವಯಸ್ಸಿನ ಹೆಸರಾಂತ ಕವಿಯನ್ನು, ಆನಂದ್ ತೇಲ್ತುಂಬ್ಡೆೆ ಅವರಂಥ ಅಂತರ್‌ರಾಷ್ಟ್ರೀಯ ಖ್ಯಾತಿಯ ಚಿಂತಕರನ್ನು ಜೈಲಿಗೆ ದಬ್ಬಲಾಗಿದೆ. ನ್ಯಾಯಾಲಯಗಳಲ್ಲೂ ಇವರಿಗೆ ಜಾಮೀನು ಸಿಗುತ್ತಿಲ್ಲ. ಇದು ಫ್ಯಾಶಿಸ್ಟ್ ಸರ್ವಾಧಿಕಾರವಲ್ಲದೆ ಮತ್ತೇನು?
ದೇಶದ ಅಧಿಕಾರ ಸ್ಥಾನಗಳಲ್ಲಿ ಅಂದರೆ ನಮ್ಮ ಶಾಸನ ಸಭೆಗಳಲ್ಲಿ ಕೋಮು ಗಲಭೆಗೆ ಕಾರಣರಾದವರು, ಬಾಂಬ್ ಸ್ಫೋಟದ ಆರೋಪ ಹೊತ್ತವರು, ಅತ್ಯಾಚಾರ ಎಸಗಿದ ಅಪರಾಧಿಗಳು, ಅಮಾಯಕರನ್ನು ಜೀವಂತ ಸುಟ್ಟು ಹಾಕಿದವರು, ಸಾವಿರಾರು ಹತ್ಯೆ ಮಾಡಿ ದಕ್ಕಿಸಿಕೊಂಡವರು ವಿಜೃಂಭಿಸುತ್ತಿದ್ದಾರೆ. ರಾಜಕೀಯ ಅಧಿಕಾರ ಅಪರಾಧಿಗಳ ಪಾಲಾಗಿದೆಯೇನೊ ಎಂಬ ಸಂದೇಹ ಬರುತ್ತಿದೆ. ಇವರೆಲ್ಲ ಸೇರಿ ಜನಪರ ಹೋರಾಟಗಾರರನ್ನು, ಲೇಖಕರನ್ನು, ಚಿಂತಕರನ್ನು ರಾಜದ್ರೋಹಿಗಳೆಂದು ಕರೆದು ಜೈಲಿಗೆ ಹಾಕುತ್ತಿದ್ದಾರೆ. ಕರಾಳ ಪೌರತ್ವ ಕಾಯ್ದೆಯ ವಿರುದ್ದ ಪ್ರತಿಭಟನೆ ಮಾಡಿದವರನ್ನು ಹುಡುಕಿ ಸೆರೆಮನೆಗೆ ತಳ್ಳಲಾಗುತ್ತಿದೆ. ಗರ್ಭಿಣಿ ಸಫೂರ ಝರ್ಗರ್ ಅವರನ್ನು ಜೈಲಿಗೆ ತಳ್ಳಿ ಜಾಮೀನು ಸಿಗದಂತೆ ಅಡ್ಡಗಾಲು ಹಾಕಲಾಯಿತು. ಇದೀಗ ಅವರಿಗೆ ಜಾಮೀನು ಸಿಕ್ಕಿದೆ.
ರಾಜಕೀಯ ವಿರೋಧಿಗಳು ಮಾತ್ರವಲ್ಲದೆ ಆ್ಸಮ್ನೆಸ್ಟಿ ಇಂಟರ್ ನ್ಯಾಷನಲ್‌ನ ಮುಖ್ಯಸ್ಥ ಮತ್ತು ಅಂಕಣಕಾರ ಆಕಾರ್ ಪಟೇಲ್ ಮೇಲೂ ಎಫ್‌ಐಆರ್ ಹಾಕಲಾಗಿದೆ. ಅಮೆರಿಕದಲ್ಲಿ ನಡೆದಂತೆ ಭಾರತದಲ್ಲಿ ಯಾಕೆ ಪ್ರತಿಭಟನೆ ನಡೆಯುವುದಿಲ್ಲ ಎಂದು ಪ್ರಶ್ನಿಸಿದ ತಪ್ಪಿಗೆ ಆಕಾರ್ ಪಟೇಲ್ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗಿದೆ.
ಈ ದೇಶಕ್ಕೊಬ್ಬ ಗೃಹಮಂತ್ರಿ ಇದ್ದಾರೆ. ಅಮಿತ್ ಶಾ ಎಂದು ಅವರ ಹೆಸರು. ಕೊರೋನ ಬಂದಾಗ 3 ತಿಂಗಳು ನಾಪತ್ತೆಯಾಗಿದ್ದ ಇವರು ಈಗ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಉರುಳಿಸಲು, ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಓಡಾಡತೊಡಗಿದ್ದಾರೆ.
ಕೊರೋನ ಬರುವ ಮುಂಚೆ ಈ ದೇಶದಲ್ಲಿ ಕರಾಳ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶವ್ಯಾಪಿ ಹೋರಾಟ ನಡೆದಿತ್ತು. ದಿಲ್ಲಿಯ ಶಾಹೀನ್ ಬಾಗ್‌ನಂತೆ ದೇಶದ ಪ್ರತಿ ನಗರಗಳಲ್ಲೂ ಮಿನಿ ಶಾಹೀನ್ ಬಾಗ್‌ಗಳು ರೂಪುಗೊಂಡಿದ್ದವು. ಕನ್ಹಯ್ಯಾ ಕುಮಾರ್ ಎಂಬ ಯುವಕನ ಭಾಷಣ ಕೇಳಲು ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ದಿಲ್ಲಿ ಸಿಂಹಾಸನ ಅಲುಗಾಡತೊಡಗಿತ್ತು. ಇಂತಹ ಸನ್ನಿವೇಶದಲ್ಲಿ ಇವರಿಗೆ ಆಪತ್ಬಾಂಧವನಂತೆ ಕೊರೋನ ಬಂತು. ಅದನ್ನು ಬಳಸಿಕೊಂಡು ದೇಶದಲ್ಲಿ ಪ್ರತಿರೋಧದ ಚಟುವಟಿಕೆಗಳನ್ನು ನಿರ್ಬಂಧಿಸಿದರು. ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದರು. ಭೂ ಸುಧಾರಣಾ ಶಾಸನದ ಚಟ್ಟ ಕಟ್ಟಿದರು. ಈಗ ಇವರು ಆಡಿದ್ದೇ ಆಟ, ಎಲ್ಲದಕ್ಕೂ ಕೊರೋನ ನೆಪ.
ಪ್ರಜಾಪ್ರಭುತ್ವಕ್ಕೆ ಭಾರತ ಮಾತ್ರವಲ್ಲದೆ ಜಗತ್ತಿನಲ್ಲಿ ಗಂಡಾಂತರ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಜನರು ತಮ್ಮ ಘನತೆಯ ಬದುಕಿನ ಹಕ್ಕುಗಳನ್ನು ಉಳಿಸಿಕೊಳ್ಳಲು ಜೀವನ್ಮರಣದ ಹೋರಾಟ ನಡೆಸಬೇಕಾಗಿದೆ.