ಉಡುಪಿ: ಮಲ್ಲಿಗೆ ಸಸ್ಯಾಭಿವೃದ್ಧಿಗಾಗಿ ಹೊಸ ಪ್ರಯೋಗ
ಉಡುಪಿ: ಹಣ್ಣು , ತರಕಾರಿಗಳನ್ನು ಕಡಿಮೆ ಖರ್ಚಿನಲ್ಲಿ ದೀರ್ಘ ಕಾಲ ಕೆಡದಂತೆ ಇಡಲು ‘ಶೂನ್ಯ ಶಕ್ತಿ ತಂಪು ಕೊಠಡಿ ವಿಧಾನ’ ಚಾಲ್ತಿಯಲ್ಲಿದ್ದು, ಇದೇ ಮಾದರಿಯಲ್ಲಿ ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆ ‘ಶೂನ್ಯ ಶಕ್ತಿ ಆರ್ದತೆ ಕೋಣೆ’ ಎಂಬ ಹೊಸ ವಿಧಾನವನ್ನು ಮಲ್ಲಿಗೆ ಸಸ್ಯಾಭಿವೃದ್ಧಿಗಾಗಿ ಬಳಸಿಕೊಂಡು ಯಶಸ್ಸು ಕಂಡಿದೆ.
ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದಲ್ಲಿ ಪ್ರತಿವರ್ಷ ಮಲ್ಲಿಗೆ ಸಸ್ಯೋತ್ಪಾದನೆಯ ಸಂದರ್ಭದಲ್ಲಿ ಗಿಡಗಳಲ್ಲಿ ಬೇರು ಬೆಳವಣಿಗೆ ಆಗದೆ ಉತ್ತಮ ಗಿಡಗಳನ್ನು ರೈತರಿಗೆ ಪೂರೈಸಲು ಇಲಾಖೆಗೆ ಸಾಧ್ಯವಾಗುತ್ತಿರಲಿಲ್ಲ. ಸಸ್ಯಾಭಿವೃದ್ಧಿಯಲ್ಲಿ ಮೊದಲು ಬೇರು ಬಂದು, ನಂತರ ಚಿಗುರು ಬಂದರೆ ಗುಣಮಟ್ಟದ ಗಿಡಗಳು ಬೆಳವಣಿಗೆಯಾಗಲು ಸಾಧ್ಯವಾಗುತ್ತದೆ.
ಈ ಹಿಂದೆ ಸಸ್ಯದಲ್ಲಿ ಮೊದಲು ಎಲೆ ಬಂದು ನಂತರ ಬೇರು ಬರುತ್ತಿರುವುದರಿಂದ ಬೇರುಗಳಿಂದ ಎಲೆಗಳಿಗೆ ಸರಿಯಾದ ಆಹಾರ ಪೂರೈಕೆ ಆಗದೆ ಗಿಡ ಸತ್ತು ಹೋಗುತ್ತಿತ್ತು. ಈಗಿನ ಪ್ರಯೋಗದಲ್ಲಿ ಬೇರು ಮೊದಲು ಬಂದ ಪರಿಣಾಮ ಎಲೆಗಳಿಗೆ ಸರಿಯಾದ ಆಹಾರ ಪೂರೈಕೆಯಾಗಿ ಗುಣಮಟ್ಟದ ಗಿಡ ಬೆಳೆಯುತ್ತಿದೆ. ಕೇವಲ 30 ದಿನಗಳಲ್ಲಿ ಆರ್ದತೆಯಿಂದಾಗಿಯೇ ಮಲ್ಲಿಗೆ ಗಿಡಗಳನ್ನು ಬೆಳೆಸಿ ಗುಣಮಟ್ಟದ ಸಸ್ಯೋತ್ಪಾದನೆಯನ್ನು ಮಾಡಲಾಗುತ್ತಿದೆ. 2,000 ಗಿಡಗಳು ಸಿದ್ಧ: ಈ ಪ್ರಯೋಗದ ಮೂಲಕ ಒಟ್ಟು 5,000 ಗಿಡಗಳನ್ನು ಬೆಳೆಸುವ ಗುರಿಯನ್ನು ಇಲಾಖೆ ಹೊಂದಿದ್ದು, ಮೊದಲ ಹಂತದಲ್ಲಿ ಒಂದೇ ತಿಂಗಳಲ್ಲಿ ಎರಡು ಸಾವಿರ ಗಿಡಗಳು ಸಿದ್ಧವಾಗಿವೆ. ಮುಂದೆ ಒಂದು ತಿಂಗಳಲ್ಲಿ ಎರಡನೇ ಹಂತದ ಸಸ್ಯಾಭಿವೃದ್ಧಿ ಕಾರ್ಯ ಮಾಡಲು ಇಲಾಖೆ ಉದ್ದೇಶಿಸಿದೆ. ಈ ಬಾರಿಯ ಮಳೆಗಾಲದ ಪ್ರಾರಂಭದಲ್ಲಿ ಪಾಲಿಮನೆಯಲ್ಲಿ ಪ್ರಯೋಗ ಮಾಡಿ ಕೇವಲ 30 ದಿನಗಳಲ್ಲಿ ಉತ್ತಮ ಗುಣಮಟ್ಟದ ಗಿಡಗಳನ್ನು ಪಡೆಯಲು ಯಶಸ್ವಿಯಾಗಿದ್ದೇವೆ. ಈ ಸಂಬಂಧ ಬೇರೆ ಬೇರೆ ಮಟ್ಟದಲ್ಲಿ ಮಾಡಿರುವ ಹಲವು ಪ್ರಯೋಗಗಳಲ್ಲಿ ಯಶಸ್ವಿ ಕಂಡಿರಲಿಲ್ಲ ಎಂದು ಉಡುಪಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ನಿದೀಶ ಕೆ.ಜೆ. ತಿಳಿಸಿದ್ದಾರೆ. ಸಾಮಾನ್ಯ ವ್ಯವಸ್ಥೆಯಲ್ಲಿ ಗಿಡಗಳಲ್ಲಿ ಚಿಗುರು ಬರಲು ಒಂದುವರೆ ತಿಂಗಳು ಕಾಯಬೇಕಾಗುತ್ತದೆ. ಈ ಪ್ರಯೋಗದಿಂದ 30 ದಿನಗಳಲ್ಲಿ ಚಿಗುರು ಬಂದಿರುವುದರಿಂದ 10-15 ದಿನಗಳು ಉಳಿಯುತ್ತಿದೆ. ಈ ಹಿಂದಿನ ಸಸ್ಯಾಭಿವೃದ್ಧಿಯಲ್ಲಿ ಶೇ.50ರಷ್ಟು ಗಿಡಗಳು ಬೆಳವಣಿಗೆ ಕಾಣದೆ ಸಾಯುತ್ತಿದ್ದವು. ಆದರೆ ಈ ಪ್ರಯೋಗದಲ್ಲಿ ಶೇ.90ರಷ್ಟು ಗಿಡಗಳು ಸಿಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನರೇಗಾದಲ್ಲಿ 83 ಕಾಮಗಾರಿಗೆ ಅನುಮೋದನೆ
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೇವಲ ಉಡುಪಿ ಜಿಲ್ಲೆಗೆ ಮಲ್ಲಿಗೆ ಪ್ರದೇಶ ವಿಸ್ತರಣೆಗೆ ಅವಕಾಶ ನೀಡಲಾಗಿದೆ. ರೈತರಿಗೆ ಉತ್ತಮ ಗುಣಮಟ್ಟದ ರೋಗ ರಹಿತ ಗಿಡಗಳ ಲಭ್ಯತೆ ತೀರಾ ಕಡಿಮೆ ಇರುವು ದನ್ನು ಮನಗಂಡ ಇಲಾಖೆ, ಮಲ್ಲಿಗೆ ಗಿಡ ಬೆಳೆಸುವ ಕಾರ್ಯಕ್ಕೆ ಒತ್ತು ನೀಡುತ್ತಿದೆ.
ಇಲಾಖೆಯಿಂದ ಪ್ರತಿ ಗಿಡಕ್ಕೆ 12ರೂ.ನಂತೆ ಮಾರಾಟ ಮಾಡುತ್ತಿದೆ. ಖಾಸಗಿ ನರ್ಸರಿಗಳಲ್ಲಿ ಇದರ ದರ 40-50 ರೂ. ಇದೆ. ನರೇಗಾದಲ್ಲಿ ಜಿಲ್ಲೆಯಲ್ಲಿ 83 ಮಲ್ಲಿಗೆ ಕೃಷಿ ಕಾಮಗಾರಿಗೆ ಅನುಮೋದನೆ ದೊರೆತಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ನಿದೀಶ ಕೆ.ಜೆ. ತಿಳಿಸಿದ್ದಾರೆ.