ಉತ್ತರ ಪ್ರದೇಶ : ​ರೌಡಿಗಳಿಂದ ಗುಂಡಿನ ದಾಳಿ ; 8 ಪೊಲೀಸರ ಬರ್ಬರ ಹತ್ಯೆ

Update: 2020-07-03 15:19 GMT

ಲಕ್ನೋ,ಜು.3: ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಕುಖ್ಯಾತ ಗ್ಯಾಂಗ್‌ ಸ್ಟರ್‌ ನನ್ನು ಬಂಧಿಸಲು ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಡಿವೈಎಸ್‌ಪಿ ಹಾಗೂ ಮೂವರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಎಂಟು ಮಂದಿಯನ್ನು ಕ್ರಿಮಿನಲ್‌ಗಳು ಹತ್ಯೆಗೈದಿದ್ದಾರೆ.

  ಗ್ರಾಮಸ್ಥನ ಕೊಲೆ ಯತ್ನ ಪ್ರಕರಣದ ಆರೋಪಿಯಾದ ಕಾನ್ಪುರದ ಕುಖ್ಯಾತ ಗ್ಯಾಂಗ್‌ ಸ್ಟರ್ ವಿಕಾಸ್‌ ದುಬೆಯನ್ನು ಸೆರೆಹಿಡಿಯಲು ಪೊಲೀಸರ ತಂಡವೊಂದು ಕಾರ್ಯಾಚರಣೆಗಿಳಿದಿತ್ತು. ವಿಕಾಸ್ ದುಬೆ ಕಾನ್ಪುರ ಜಿಲ್ಲೆಯ ಚೌಬೇಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕ್ರೂ ಗ್ರಾಮದಲ್ಲಿ ಅವಿತುಕೊಂಡಿದ್ದಾನೆಂಬ ಮಾಹಿತಿ ಪಡೆದ ಬಳಿಕ ಪೊಲೀಸರು ಅಲ್ಲಿಗೆ ಧಾವಿಸಿದ್ದರು.

  ಬಿಎಸ್ಪಿ ನಾಯಕ ಪಿಂಟೂ ಸೆನೆಗರ್ ಹತ್ಯೆ ಪ್ರಕರಣದಲ್ಲಿ ಭಾಗಿಗಳಾಗಿದ್ದ ವಿಕಾಸ್ ದುಬೆನ ಬಾಡಿಗೆ ಶೂಟರ್‌ ಗಳನ್ನು ಕೂಡಾ ಸೆರೆಹಿಡಿಯಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಪಿಂಟೂ ಸೆನೆಗರ್ ಜೂನ್ 18ರಂದು ಕಾನ್ಪುರದ ಚಕೇರಿ ಎಂಬಲ್ಲಿ ಬಾಡಿಗೆ ಶೂಟರ್‌ಗಳ ಗುಂಡಿಗೆ ಬಲಿಯಾಗಿದ್ದರು.

ಈ ಪ್ರಕರಣದ ಇತರ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಗುರುವಾರ ಮಧ್ಯಪ್ರದೇಶದ ಚಿಂದ್ವಾರಾದಲ್ಲಿ ಬಂಧಿಸಿದ್ದರು.

  ಉಪಪೊಲೀಸ್ ನಿರೀಕ್ಷಕ ದೇವೇಂದ್ರ ಮಿಶ್ರಾ, ಸಬ್‌ಇನ್ಸ್‌ಪೆಕ್ಟರ್ ಗಳಾದ ಶಿವರಾಜ್‌ಪುರದ ಠಾಣಾಧಿಕಾರಿ ಮಹೇಶ್ ಯಾದವ್. ಅನೂಪ್ ಕುಮಾರ್, ಬಾಬುಲಾಲ್ ಹಾಗೂ ಕಾನ್ಸ್‌ ಟೇಬಲ್‌ ಗಳಾದ ಸುಲ್ತಾನ್‌ಸಿಂಗ್, ರಾಹುಲ್, ಜಿತೇಂದ್ರ ಹಾಗೂ ಬಬ್ಲೂ ಗುಂಡಿನ ಚಕಮಕಿಯ ಸಂದರ್ಭ ಸಾವನ್ನಪ್ಪಿದರು. ಗುಂಡಿನ ಘರ್ಷಣೆಯಲ್ಲಿ ಇತರ ಐವರು ಪೊಲೀಸರಿಗೂ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

 ತಾವು ತಲೆಮರೆಸಿಕೊಂಡಿರುವ ಹಳ್ಳಿಗೆ ಪೊಲೀಸ್ ಪಡೆಗಳು ಆಗಮಿಸದಂತೆ ತಡೆಯಲು ವಿಕಾಸ್‌ದುಬೆ ಹಾಗೂ ಆತನ ಅನುಚರರು, ಬಿಕ್ರು ಗ್ರಾಮದ ರಸ್ತೆ ಮಧ್ಯೆ ಬೃಹತ್‌ಗಾತ್ರದ ಅರ್ತ್‌ಮೂವರ್‌ನ್ನು ನಿಲ್ಲಿಸಿದ್ದರು. ಪೊಲೀಸರು ಅಲ್ಲಿಗೆ ತಲುಪಿದಾಗ ಅವರ ಮೇಲೆ ಆಸುಪಾಸಿನ ಮನೆಗಳ ಮೇಲ್ಛಾವಣಿಗಳಲ್ಲಿ ಹೊಂಚುಹಾಕಿ ನಿಂತಿದ್ದ ಪಾತಕಿಗಳು ಮನಬಂದಂತೆ ಗುಂಡುಹಾರಿಸಿದರು.

 ಪೊಲೀಸರು ಪ್ರತಿ ದಾಳಿಯನ್ನು ನಡೆಸಿದರಾದರೂ, ಕ್ರಿಮಿನಲ್‌ಗಳ ಎತ್ತರದಿಂದ ಗುಂಡು ಹಾರಿಸಿದ್ದರಿಂದ 8 ಮಂದಿ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆಂದು ಉತ್ತರಪ್ರದೇಶದ ಪೊಲೀಸ್ ಮಹಾನಿರ್ದೇಶಕ ಎಚ್.ಸಿ. ಆವಸ್ತಿ ತಿಳಿಸಿದ್ದಾರೆ.ಪಾತಕಿಗಳು ಗುಂಡುಹಾರಾಟ ನಡೆಸಿದ ಮನೆಗಳ ಮೇಲ್ಛಾವಣಿಯಿಂದ ಎಕೆ47 ರೈಫಲ್‌ನ ಕಾಡತೂಸುಗಳ ಖಾಲಿ ಶೆಲ್‌ಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

   60ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವಿಕಾಸ್ ದುಬೆ ಬಿಜೆಪಿ ನಾಯಕ ಸಂತೋಷ್ ಶುಕ್ಲಾ ಅವರನ್ನು 2001ರಲ್ಲಿ ಪೊಲೀಸ್ ಠಾಣೆಯಲ್ಲಿ ಹತ್ಯೆಗೈದ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪವನ್ನು ಎದುರಿಸುತ್ತಿದ್ದಾನೆ.

    ಗುಂಡಿನ ಕಾಳಗದ ಬಳಿಕ ಉತ್ತರಪ್ರದೇಶದ ಕಾನೂನು, ಸುವ್ಯವಸ್ಥೆ ಕುರಿತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್, ಕಾನ್ಪುರದ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಹಾಗೂ ಕಾನ್ಪುರ ವಲಯದ ಮಹಾನಿರೀಕ್ಷಕ ಮೋಹಿತ್ ಅಗರ್‌ವಾಲ್ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದು, ಪಾತಕಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪಾತಕಿಗಳು ಪರಾರಿಯಾಗದಂತೆ ನೋಡಿಕೊಳ್ಳಲು ಕಾನ್ಪುರ ವಿಭಾಗದ ಅರು ಜಿಲ್ಲೆಗಳನ್ನ ಸೀಲ್‌ಡೌನ್ ಮಾಡಲಾಗಿದೆಯೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News