ಭಾರತದ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್‌ಗೆ ಕೊರೋನ ಸೋಂಕು ದೃಢ
ಹೊಸದಿಲ್ಲಿ,ಜು.12: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಉತ್ತರಪ್ರದೇಶದ ಸಂಪುಟ ಸಚಿವ ಚೇತನ್ ಚೌಹಾಣ್‌ಗೆ ಕೊರೊನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.
ಭಾರತದ ಮಾಜಿ ಕ್ರಿಕೆಟಿಗರಾದ ಆಕಾಶ್ ಚೋಪ್ರಾ ಹಾಗೂ ಆರ್‌ಪಿ ಸಿಂಗ್ ಚೌಹಾಣ್‌ಗೆ ಬೇಗನೆ ಚೇತರಿಸಿಕೊಳ್ಳಿ ಎಂದು ಟ್ವಿಟರ್‌ನಲ್ಲಿ ಹಾರೈಸುವುದರೊಂದಿಗೆ ಶನಿವಾರ ತಡರಾತ್ರಿ ಈ ಸುದ್ದಿ ಬಹಿರಂಗವಾಗಿದೆ.
ಚೇತನ್ ಚೌಹಾಣ್‌ಗೂ ಕೋವಿಡ್-19 ಸೋಂಕು ದೃಢಪಟ್ಟಿದೆ. ಸರ್‌ನೀವು ಬೇಗನೆ ಚೇತರಿಸಿಕೊಳ್ಳಿ ಎಂದು ಹಾರೈಸುವೆ ಎಂದು ಚೋಪ್ರಾ ಟ್ವೀಟ್ ಮಾಡಿದ್ದರು. ಚೇತನ್ ಚೌಹಾಣ್‌ಜೀಗೆ ಕೊರೋನ ವೈರಸ್ ಸೋಂಕು ಇರುವ ವಿಚಾರ ಈಗಷ್ಟೇ ನನಗೆ ಗೊತ್ತಾಯಿತು. ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸುವೆ ಎಂದು ಆರ್‌ಪಿ ಸಿಂಗ್ ಟ್ವೀಟ್ ಮಾಡಿದ್ದಾರೆ.
72ರ ಹರೆಯದ ಚೌಹಾಣ್ ಶುಕ್ರವಾರ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಲಕ್ನೊದ ಸಂಜಯ ಗಾಂಧಿ ಪಿಜಿಐ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೌಹಾಣ್ ಕುಟುಂಬದವರು ಕೂಡ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆ.ಅವರೆಲ್ಲರನ್ನೂ ಹೋಮ್ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಚೇತನ್ ಚೌಹಾಣ್ ಉತ್ತರಪ್ರದೇಶದ ಸರಕಾರದ ಸಂಪುಟದಲ್ಲಿ ಸೈನಿಕರ ಕಲ್ಯಾಣ, ಗೃಹರಕ್ಷಣೆ, ಪಿಆರ್‌ಡಿ ಹಾಗೂ ನಾಗರಿಕ ರಕ್ಷಣೆ ಸಚಿವಾಲಯದ ಜವಾಬ್ದಾರಿ ಹೊತ್ತಿದ್ದಾರೆ.
ಮಾಜಿ ಲೋಕಸಭಾ ಸಂಸದ ಚೌಹಾಣ್ ಕೊರೋನ ವೈರಸ್ ಸೋಂಕಿಗೆ ಒಳಗಾದ ಓರ್ವ ಅಂತರ್‌ರಾಷ್ಟ್ರೀಯ ಕ್ರಿಕೆಟಿಗನಾಗಿದ್ದಾರೆ. ಪಾಕ್‌ನ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಹಾಗೂ ಸ್ಕಾಟ್ಲೆಂಡ್‌ನ ಮಜೀದ್ ಹಕ್‌ಗೆ ಕೂಡ ಕೊರೋನ ವೈರಸ್ ಇರುವುದು ದೃಢಪಟ್ಟಿದೆ. ಇವೆಲ್ಲರೂ ಚೇತರಿಸಿಕೊಂಡಿದ್ದಾರೆ.