ಸಚಿನ್ ಪೈಲಟ್, ಇತರ ಬಂಡಾಯ ಶಾಸಕರಿಗೆ ಸ್ಪೀಕರ್‌ರಿಂದ ನೋಟಿಸ್

Update: 2020-07-15 05:43 GMT

ಜೈಪುರ, ಜು.15: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್‌ರನ್ನು ಉಪ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಿದ ಮರುದಿನ ರಾಜಸ್ಥಾನ ವಿಧಾನಸಭೆಯ ಸ್ಪೀಕರ್ ಸಿ.ಪಿ. ಜೋಶಿ ಕಚೇರಿಯು ಸರಕಾರದ ವಿರುದ್ಧ ಬಂಡಾಯ ಎದ್ದಿರುವ ಪೈಲಟ್ ಹಾಗೂ ಇತರ ಶಾಸಕರಿಗೆ ನೋಟಿಸ್ ನೀಡಿದ್ದು, ಜುಲೈ 17ರೊಳಗೆ ಉತ್ತರಿಸುವಂತೆ ತಿಳಿಸಿದ್ದಾರೆ.

ಕಾಂಗ್ರೆಸ್ ಮುಖ್ಯ ಸಚೇತಕ ಮಹೇಶ್ ಜೋಶಿ ಸ್ಪೀಕರ್ ಸಿಪಿ ಜೋಶಿ ಅವರಿಗೆ ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಮಂಗಳವಾರ ಮನವಿ ಮಾಡಿದ್ದರು. ಪೈಲಟ್ ಸತತ ಎರಡು ಬಾರಿ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದರು. ಪೈಲಟ್‌ಗೆ 18 ಶಾಸಕರ ಬೆಂಬಲ ಇದೆ ಎನ್ನಲಾಗಿದೆ.

ಪೈಲಟ್‌ರನ್ನು ಡಿಸಿಎಂ ಹುದ್ದೆಯಿಂದ ವಜಾಗೊಳಿಸಿದ ಬಳಿಕ ರಾಜಸ್ಥಾನದಲ್ಲಿ ಮತ್ತೊಂದು ಹೋರಾಟ ಆರಂಭವಾಗಿದ್ದು, ಎಲ್ಲರೂ ಸುದೀರ್ಘ ಕಾನೂನು ಹಾಗೂ ತಾಂತ್ರಿಕ ಹೋರಾಟದಲ್ಲಿ ತೊಡಗಿಸಿಕೊಳ್ಳುವ ಸೂಚನೆ ನೀಡಿದ್ದಾರೆ.

"ಕಾಂಗ್ರೆಸ್‌ನಲ್ಲಿರುವ ಕೆಲವು ನಾಯಕರು ನಾನು ಬಿಜೆಪಿಗೆ ಸೇರ್ಪಡೆಯಾಗುತ್ತೇನೆೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ನಾನು ಹಾಗೆ ಮಾಡುವುದಿಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲು ನಾನು ಬಹಳಷ್ಟು ಶ್ರಮಿಸಿದ್ದೇನೆ'' ಎಂದು ಪೈಲಟ್ ಹೇಳಿದ್ದಾರೆ.

ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಹೆಚ್ಚಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿ ಘಟಕ ಇಂದು ಸಭೆ ಕರೆದಿದ್ದು, ಮಾಜಿಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕಿ ವಸುಂಧರಾ ರಾಜೆ ಜೈಪುರದಲ್ಲಿ ನಡೆಯುವ ಸಭೆಯಲ್ಲಿ ಹಾಜರಾಗುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News