ಕೇವಲ 30 ಸೆಕೆಂಡುಗಳಲ್ಲಿ ಬ್ಯಾಂಕ್ ನಿಂದ 10 ಲಕ್ಷ ರೂ. ಎಗರಿಸಿದ 10 ವರ್ಷದ ಬಾಲಕ

Update: 2020-07-15 07:50 GMT

ಇಂದೋರ್ : ಸಹಕಾರಿ ಬ್ಯಾಂಕ್ ಒಂದಕ್ಕೆ ಕಾಲಿಟ್ಟ ಹತ್ತು ವರ್ಷದ ಬಾಲಕನೊಬ್ಬ ಯಾರಿಗೂ ಗೊತ್ತೇ ಆಗದಂತೆ  ಕ್ಷಣಾರ್ಧದಲ್ಲಿ  10 ಲಕ್ಷ ರೂ. ಎಗರಿಸಿ ಪರಾರಿಯಾದ ಘಟನೆ ಮಧ್ಯ ಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ನಡೆದಿದೆ.

ಹರಕುಮುರುಕು ಬಟ್ಟೆ ಧರಿಸಿದ್ದ ಬಾಲಕ ಬ್ಯಾಂಕ್ ಕಚೇರಿಗೆ 11 ಗಂಟೆ ಸುಮಾರಿಗೆ ಪ್ರವೇಶಿಸಿ ನೇರವಾಗಿ ಕ್ಯಾಶಿಯರ್ ಕ್ಯಾಬಿನ್ನಿಗೆ ತೆರಳಿದ್ದ. ಅಲ್ಲಿ ಸರತಿಯಲ್ಲಿದ್ದ ಗ್ರಾಹಕರಿಗೆ  ತಮ್ಮ ಮೂಗಿನ ನೇರಕ್ಕೆ ಏನು ನಡೆಯುತ್ತಿದೆ ಎಂಬುದೂ ತಿಳಿಯದಂತೆ ಆತ ತನ್ನ ಕೆಲಸ ಸಲೀಸಾಗಿ ನಡೆಸಿದ್ದ

ಕೌಂಟರಿನ ಡೆಸ್ಕ್ ಅಡಿ ತೂರಿ ನಿಲ್ಲುವಷ್ಟು ಗಿಡ್ಡವಾಗಿದ್ದ ಬಾಲಕ ನೋಟುಗಳ ಕಟ್ಟಗಳನ್ನು ತನ್ನ ಚೀಲಕ್ಕೆ ತುಂಬಿಸಿ ಅಲ್ಲಿಂದ  ಕೇವಲ 30 ಸೆಕೆಂಡುಗಳಲ್ಲಿ ಹೊರಗೆ ನಡೆದಿದ್ದ. ಆತ ಇನ್ನೇನು ಕಚೇರಿಯಿಂದ ಹೊರಗಡಿಯಿಡಬೇಕೆನ್ನುವಷ್ಟರಲ್ಲಿ ಬ್ಯಾಂಕಿನ ಭದ್ರತಾ ಸಿಬ್ಬಂದಿ ಆತನ ಹಿಂದೆ ಓಡಿದ್ದರೂ ಆತನನ್ನು ಸೆರೆ ಹಿಡಿಯಲು ಸಾಧ್ಯವಿಲ್ಲ.

ಇನ್ನೊಬ್ಬ ಯುವಕ ಹಾಗೂ ಬಾಲಕ ಬ್ಯಾಂಕ್ ಕಚೇರಿಯಲ್ಲಿ ಸುಮಾರು 30 ನಿಮಿಷಗಳಿಂದ ಇದ್ದರೆನ್ನಲಾಗಿದ್ದು, ಕ್ಯಾಶಿಯರ್ ತನ್ನ ಕುರ್ಚಿಯಿಂದ ಎದ್ದು ಇನ್ನೊಂದು ಕೊಠಡಿಗೆ ನಡೆಯುತ್ತಲೇ ಹೊರಗೆ ನಿಂತಿದ್ದ ಬಾಲಕ ಒಳಗೆ ನಡೆದಿದ್ದ. ಆತ ಗಿಡ್ಡಗಿದ್ದ ಕಾರಣ ಹೊರಗಡೆ ಸರತಿಯಲ್ಲಿ ನಿಂತಿದ್ದ ಜನರು ಆತನನ್ನು ಗಮನಿಸಿರಲಿಲ್ಲ.

ಬಾಲಕ ಹಾಗೂ ಆತನ ಜತೆಗಿದ್ದ ಇನ್ನೊಬ್ಬ ವ್ಯಕ್ತಿ ಬೇರೆ ಬೇರೆ ದಿಕ್ಕುಗಳಲ್ಲಿ ತೆರಳಿದ್ದಾರೆಂದು ಸೀಸಿಟಿವಿ ದೃಶ್ಯಗಳಿಂದ ತಿಳಿದು ಬರುತ್ತದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News