ಕಳಲೆ ಪುಳಿಚಾರು

Update: 2020-07-27 19:30 GMT

ಬಹುಪಯೋಗಿ ಬಿದಿರು ಭಾರತದ ಬಹುತೇಕ ಎಲ್ಲಾ ಪ್ರಾಂತಗಳಲ್ಲೂ ಬೆಳೆಯುತ್ತದೆ. ಬಿದಿರನ್ನು ಮನೆ, ಪೀಠೋಪ ಕರಣ, ಕರಕುಶಲ ಸಾಮಗ್ರಿಗಳು ಸೇರಿದಂತೆ ನೂರಾರು ಅಗತ್ಯಗಳಿಗೆ ಬಳಸಲಾಗುತ್ತಿದೆ. ಹಾಗೆಯೆ ಎಳೆಯ ಬಿದಿರಿನ ಮೊಳಕೆಯನ್ನು ಮತ್ತು ಬಿದಿರಕ್ಕಿಯನ್ನು ಆಹಾರವಾಗಿ ಬಳಸುವುದು ತುಂಬಾ ಕಾಲದಿಂದಲೂ ಚಾಲ್ತಿಯಲ್ಲಿದೆ. ಬಿದಿರು ಮೆಳೆಗಳು ನಿತ್ಯಹರಿದ್ವರ್ಣದ ಕಾಡಿನಲ್ಲಿ ಬೆಳೆಯುವಂತೆಯೇ ಬಯಲು ಸೀಮೆಯಲ್ಲೂ ಬೆಳೆಯುತ್ತದೆ. ಎರಡು ದಶಕಗಳ ಹಿಂದೆ ಬಯಲು ಸೀಮೆಯ ಹೊಲ, ತೋಟ ಕುರುಚಲು ಕಾಡು ಬೆಟ್ಟಗುಡ್ಡಗಳ ತಪ್ಪಲಿನಲ್ಲಿ, ಸಣ್ಣ ಹೊಳೆಗಳ ಬದುವಿನಲ್ಲಿ ಅಸಂಖ್ಯ ಬಿದಿರಿನ ಮೆಳೆಗಳು ಇದ್ದವು. ಮೇದ ಸಮುದಾಯದ ಜನರು ಅವುಗಳಿಂದ ಮಾಡಿದ ಹಲವಾರು ವಸ್ತುಗಳನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಯಾವಾಗ ವಿಪರೀತದ ಯಂತ್ರ ನಾಗರಿಕತೆಯು ಜಾಗತೀಕರಣದ ಮೂಲಕ ಈ ದೇಶದೊಳಕ್ಕೆ ಕಾಲಿಟ್ಟಿತೋ ಈ ಬದುಕಿನ ಹಾದಿಗಳು ಚೆಲ್ಲಾಪಿಲ್ಲಿಯಾಗಿಬಿಟ್ಟವು. ಅದರ ಪರಿಣಾಮವು ನಾವ್ಯಾರೂ ಊಹಿಸದ ರೀತಿಯಲ್ಲಿ ನಮ್ಮನ್ನು ವಾಣಿಜ್ಯ ಮಾರುಕಟ್ಟೆಯ ಜಾಲಕ್ಕೆ ಸಿಲುಕಿಸಿಬಿಟ್ಟಿತು.

ಅಂತರ್ಜಲ ಕುಸಿತ, ನಗರೀಕರಣ, ಯಾಂತ್ರಿಕ ಕೃಷಿ ಪದ್ಧತಿಗಳು, ಸತತವಾಗಿ ಬಿದಿರು ಮೆಳೆಗಳನ್ನು ತೆರವುಗೊಳಿಸಿದ ಪರಿಣಾಮ ಬಯಲು ಸೀಮೆಯ ಕಡೆ ಬಿದಿರು ಬೆಳೆ ಕುಂಠಿತವಾಯಿತು. ಬಿದಿರು ಪದಾರ್ಥಗಳ ಮಾರಾಟವೂ ಅಷ್ಟಕ್ಕಷ್ಟೆ. ಈ ಕಾರಣಗಳಿಂದ ಕಳಲೆ ಸಿಗುವುದು ಮತ್ತಷ್ಟು ಅಪರೂಪವಾಯಿತು. ಆದರೆ ಘಟ್ಟ ಪ್ರದೇಶಗಳಲ್ಲಿ, ಹಳ್ಳಿಗಾಡಿನ ನಿರ್ಜನ ಪ್ರದೇಶಗಳಲ್ಲಿ ಪ್ರಾಕೃತಿಕವಾಗಿ ಬೆಳೆದ ಬಿದಿರು ಇನ್ನೂ ಅಸ್ತಿತ್ವದಲ್ಲಿದೆ. ಒಂದು ಕಳಲೆೆ ಸಿಕ್ಕಾಗ ಅದನ್ನೇ ಎರಡು-ಮೂರು ಮನೆಗಳವರು ಹಂಚಿಕೊಂಡು ಅಡುಗೆ ಮಾಡುತ್ತಾರೆ. ಆದರೆ ಸಿಗುವ ಎಲ್ಲ ಬಿದಿರುಗಳ ಕಳಲೆಯನ್ನು ಅಡುಗೆಗೆ ಬಳಸಲಾಗದು, ಅವುಗಳಲ್ಲಿ ಬಹುತೇಕ ವಿಷಕಾರಿ ಆಗಿವೆ. ಬಂಬುಸಾ ವಲ್ಗ್ಯಾರಿಸ್, ಫಿಲೋಸ್ತಾಕಿಸ್ ಎಡುಲಿಸ್, ಫಿಲೋಸ್ತಾಕಿಸ್ ಬಾಂಬುಸೈಡ್ಸ್, ಫಾರ್ಗೆಶಿಯಾ ಸ್ಪಾಥೆಸಿ ಜಾತಿಯ ಬಿದಿರಿನ ಕಳಲೆಗಳನ್ನು ಅಡುಗೆಗೆ ಬಳಸ ಬಹುದು. ಇಲ್ಲೂ ಆ ಚಿಗುರುಗಳನ್ನು ಕತ್ತರಿಸಿದ ಮೇಲೆ ಚೆನ್ನಾಗಿ ಬೇಯಿಸಿ ಅದರೊಳಗಿರುವ ವಿಷಕಾರಿ ಅಂಶಗಳನ್ನು ತೆಗೆಯಬೇಕಾಗುತ್ತದೆ. ಆದರೆ ಕೆಲವು ಬಿದಿರು ಮೊಳಕೆಗಳನ್ನು ಅಡುಗೆಯಲ್ಲಿ ಬೇಯಿಸುವಾಗಲೇ ಆ ವಿಷಯುಕ್ತ ಅಂಶಗಳು ನಾಶವಾಗುತ್ತವೆ.

ಮಲೆನಾಡು, ಕರಾವಳಿಯಲ್ಲಿ ಕಳಲೆಯು ಮುಂಗಾರಿನ ಋತುಮಾನದಲ್ಲಿ ಯಥೇಚ್ಛವಾಗಿ ಸಿಗುತ್ತದೆ. ಹೆಚ್ಚು ಲಭ್ಯತೆ ಇರುವ ಕಾರಣದಿಂದಲೋ ಏನೋ ಅಲ್ಲಿ ಕಳಲೆಯ ಸಾರುಪಲ್ಯಗಳನ್ನು ಮೀರಿ ಹಲವಾರು ತರಹದ ಅಡುಗೆಯ ತಿನಿಸುಗಳು ರೂಪುಗೊಂಡಿವೆ. ಕಳಲೆಯ ಉಪ್ಪಿನಕಾಯಿ, ವಡೆ, ಬಜೆ, ಹಸಿ, ಉಪ್ಪು ಕರಿ, ಮಜ್ಜಿಗೆ ಹುಳಿ ಮಾಡುವುದನ್ನು ಕೂಡ ಇತ್ತೀಚೆಗೆ ಗಮನಿಸಿದೆ. ಆದರೆ ಬಯಲು ಸೀಮೆಯಲ್ಲಿ ಅದರ ಸಾರು ಅಥವಾ ಪಲ್ಯ ಬಿಟ್ಟರೆ ಮತ್ತೇನು ಈಗ ರೂಢಿಯಲ್ಲಿ ಇಲ್ಲ. ಕಳಲೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬುಗೆಗಳು ಸದ್ಯ ಇನ್ನು ಈ ಅಡುಗೆಯ ಕ್ರಮಗಳನ್ನು ಉಳಿಸಿಕೊಟ್ಟಿವೆ. ಇಲ್ಲವಾದರೆ ಕೂಡ ಗತಕಾಲದಲ್ಲಿ ಮರೆತುಹೋದ ಅಡುಗೆಗಳ ಪಟ್ಟಿಗೆ ಸೇರಿರುತ್ತಿತ್ತು. ಕಳಲೆಯಲ್ಲಿ ಹೆಚ್ಚಾಗಿ ಸಸ್ಯಾಹಾರದ ಅಡುಗೆಗಳೇ ಇವೆ. ಕರಾವಳಿಯ ಕಡೆಯಲ್ಲಿ ಸಿಗಡಿ ಬಳಸಿ ಪಲ್ಯ ಮಾಡುವುದು ಬಿಟ್ಟರೆ ಅಷ್ಟು ಹೆಚ್ಚಾದ ಬೇರೆ ಪ್ರಯೋಗಗಳು ಇಲ್ಲ. ಭಾರತೀಯ ಅಡುಗೆಗಳಲ್ಲಿ ಹಾಲು, ಮೊಸರು, ಸೊಪ್ಪು, ತರಕಾರಿಗಳ ಜೊತೆಗೆ ಮಾಂಸ ಸೇರಿಸಬಾರದು ಎಂಬ ಕೆಟ್ಟ ನಂಬುಗೆಯೊಂದು ಸದಾ ಕಾಲವು ಅಡುಗೆಯ ಪ್ರಯೋಗಶೀಲತೆಯನ್ನು ಕೊಂದು ಹಾಕಿದೆ. ಇಲ್ಲವಾದರೆ ಇವತ್ತು ಉಳಿದಿರುವ ಅಡುಗೆಗಳ ಸಾವಿರ ಪಟ್ಟು ಒಳ್ಳೆಯ ಅಡುಗೆಯ ಕ್ರಮಗಳು ನಮಗೆ ಸಿಗುತ್ತಿದ್ದವು.

ಅಡುಗೆಯಲ್ಲಿ ಮಡಿ, ಅತಿಯಾದ ಕಂದಾಚಾರಗಳು ರುಚಿ - ರಸ - ರಸಿಕತೆಗಳನ್ನು ಸರ್ವನಾಶ ಮಾಡಿವೆ ಮತ್ತು ಇವತ್ತಿಗೂ ಮಾಡುತ್ತಿವೆ. ಕನಿಷ್ಠ ಮಾಡಿ ತಿನ್ನುವವರನ್ನಾದರೂ ಬಿಡುತ್ತಾರೆಯೇ? ಅವರ ಮೇಲೆ ಇನ್ನಿಲ್ಲದ ಧರ್ಮಕರ್ಮ, ರೂಢಿಗತ ಕ್ರಮಗಳ ಮಾತುಗಳನ್ನು ಹೇರಿ ಆ ಬಗ್ಗೆ ಯೋಚಿಸದಂತೆ ಮಾಡಿಬಿಡುತ್ತಾರೆ. ಆದರೆ ನಾವು ಅಂತಹ ಮಾತುಗಳನ್ನು ಕೇಳುವುದನ್ನು ಈ ಕಾಲದಲ್ಲಾದರೂ ಬಿಡಬೇಕು. ಕಳಲೆಯಲ್ಲಿ ಒಂದಷ್ಟು ಪ್ರಯೋಗಗಳನ್ನು ಮಾಡಬೇಕು. ಅಂತಹದಕ್ಕೆ ಕಾಂಬೋಡಿಯ, ಚೀನಾ ದೇಶಗಳ ಅಡುಗೆಗಳನ್ನು ಗಮನಿಸಬಹುದು.

ಸಾಮಾನ್ಯವಾಗಿ ಕಳಲೆಯನ್ನು ಕಡಿದು ತಂದು ಮೇಲಿನ ಸಿಪ್ಪೆಗಳನ್ನು ಸುಲಿದು ಒಳಗಿನ ಬಿಳಿಯಾದ ತಿರುಳನ್ನು ಬಿಸಿನೀರಲ್ಲಿ ತೊಳೆದು ನಮಗೆ ಬೇಕಾದ ರೀತಿ ಸಣ್ಣದಾದ, ತೆಳುವಾದ, ಉದ್ದವಾದ ಉಪ್ಪಿನಕಾಯಿ ಅಥವಾ ಪಲ್ಯಕ್ಕಾಗಿ ಬೇಕಾಗುವ ಗಾತ್ರದಲ್ಲಿ ಕತ್ತರಿಸಿಕೊಂಡು ಉಪ್ಪು ಹಾಕಿದ ನೀರಿನಲ್ಲಿ ಒಂದು ದಿನ ನೆನೆಸಿ ಮಾರನೆಯ ದಿನ ಅದನ್ನು ಮತ್ತೆ ಬಿಸಿನೀರಿನಲ್ಲಿ ತೊಳೆದು ನೀರು ಸೋಸಲು ಬಿಟ್ಟು ನಂತರ ಅದನ್ನು ಹುರಿಯಲು, ಬೇಯಿಸಲು ಅಥವಾ ರುಬ್ಬಿ ಕಡುಬು ಮಾಡಲು ಬಳಸಬಹುದು. ಹಾಗೆಯೆ ಉಪ್ಪಿನಕಾಯಿ ಮಾಡಬಹುದು. ಇವುಗಳ ಹತ್ತಾರು ರೆಸಿಪಿಗಳು ಮಾಡುವ ವಿಧಾನಗಳು ಯೂಟ್ಯೂಬ್‌ನಲ್ಲಿ ಸಿಗುತ್ತವೆ. ಭಾರತದ ಹಿಮಾಲಯದ ತಪ್ಪಲು ಪ್ರದೇಶಗಳು, ಬಂಗಾಳ ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಮತ್ತು ಕರಾವಳಿಗಳಲ್ಲಿ ಬಿದಿರಿನ ಕಳಲೆ ಆಹಾರವಾಗಿ ಬಳಸಲ್ಪಡುತ್ತದೆ. ಅದರಲ್ಲೂ ಈಶಾನ್ಯ ರಾಜ್ಯಗಳಲ್ಲಿ ಇದರ ಬಳಕೆ ಹೆಚ್ಚು. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರಗಳಲ್ಲಿ ಸಿಗುವ ತಾಜಾ ಕಳಲೆಗಳನ್ನು ಹಸಿಯಾಗೇ ಸಲಾಡ್ ರೂಪದಲ್ಲಿ ತಿನ್ನುವರು. ಅಲ್ಲದೆ ಇವನ್ನು ಕತ್ತರಿಸಿ ಫರ್ಮೆಂಟೇಷನ್ ಮಾಡಿಟ್ಟು ವರ್ಷಪೂರ್ತಿ ಬಳಸುವರು. ಅದರಲ್ಲೂ ಹಂದಿಮಾಂಸದ ತುಂಡುಗಳೊಂದಿಗೆ ಹುರಿದು ಬೇಯಿಸಿ ತಿನ್ನುವುದು ಜನಪ್ರಿಯ ಖಾದ್ಯ. ಅಸ್ಸಾಮಿನ ಅಡುಗೆಗಳಲ್ಲಿ ಕಳಲೆ ಬಳಕೆ ಬಹಳ ಸಾಂಪ್ರದಾಯಿಕವಾಗಿದೆ.

ಮಂಗರಸನ ಕಳಲೆೆ ಪುಳಿಚಾರು:   

ಸೂಪಶಾಸ್ತ್ರ’ ಕೃತಿಯಲ್ಲಿ ಮಂಗರಸನು ಕಳಲೆಯ ಅಡುಗೆ ಮಾಡುವ ಕುರಿತೇ 14 ಪದ್ಯಗಳನ್ನು ಬರೆದಿದ್ದಾನೆ. ಅದರಲ್ಲಿ 10-11 ಅಡುಗೆಗಳ ಪ್ರಸ್ತಾಪವಿದೆ. ಮಂಗರಸನು ಜೈನ ಧರ್ಮಿಷ್ಠನಾದುದರಿಂದ ಅಪ್ಪಿತಪ್ಪಿಯೂ ಮಾಂಸಾಹಾರದ ಸೊಲ್ಲೆತ್ತುವುದಿಲ್ಲ. ಸೂಪಶಾಸ್ತ್ರ ಕೃತಿಯಲ್ಲಿ ನೂರಾರು ಅಡುಗೆಗಳ, ಪಾನೀಯಗಳ ಬಗ್ಗೆ ಬರೆದಿದ್ದಾನೆ. ಹಾಗೆ ನೋಡಿದರೆ ಅವೆಲ್ಲವೂ ಪುಳಿಚಾರು ಅಡುಗೆಗಳೇ ಆಗಿವೆ.

ಮೆತ್ತನುಕ್ಕರಿಸಿಕೊಂಡೆಳೆಯ ಕಳಿಲೆೆಯ ಕುಡಿಯ

ನೊತ್ತಿ ಶತಛಿದ್ರವಾಗುವ ತೆರದಿ ಕದುಕಿಳಿದು

ಹತ್ತೆಂಟು ಭಾಗೆಯಂ ಮಾಡಿ ನಸುಮೆಣಸುಪ್ಪನಿಕ್ಕಿ ತುಪ್ಪದೊಳಗಟ್ಟು

ಉತ್ತಮದ ಸಂಭಾರಮಂ ಹಲವು ರುಚಿ ಮಾಡಿ

ಮತ್ತದಕೆ ಚೆನ್ನಾಗಿ ಪೂರೈಸಿ ಪೊಡ್ಡಣಿಗೆಯಿತ್ತು

ನರೆಯಂ ಕೊಟ್ಟು ಪರಿಮಳವನಿಕ್ಕಲದು ಚಚ್ಚುಗಳಿಲೆವೆಸರು ಕಣಾ (ಶಾಕಾ ಪಾಕಾಧ್ಯಾಯ 3.2, ಸೂಪಶಾಸ್ತ್ರ)

ಎಳೆಯ ಕಳಿಲೆೆಯ ಕುಡಿಯನೊಗರು ಹೋಹಂತೆ ಕುದಿ

ಗೊಳಿಸಿಯೊರಳೋಳು ತುಳಿದು ನೀರುಳ್ಳಿ ಕರಿಬೇವು

ಎಳೆಯಲ್ಲಮಿಕ್ಕಿಯಿಗಂ ಬೆರೆಸಿ ನೀರಿಂದಲಟ್ಟುಕೊಂಡಾ ವಡೆಯನು

ಬಳಿಕುದುರೆಯಂ ಮಾಡಿ ತೆಂಗಾಯ ಹಸಿಯಕ್ಕಿ

ಬಿಳಿಯುದ್ದನಿಕ್ಕಿ ಹಾಲೆರೆದರೆದ ಸಂಪಳೆಯ

ತಿಳಿದುಪ್ಪದೊಳಗೂಡೆಯನಟ್ಟು ತಾಳಿಲಗೊಣಬು ಪುಡೆಯುಂ ಹಸಮಾಳ್ಪುದು

(ಶಾಕಾ ಪಾಕಾಧ್ಯಾಯ 3.10, ಸೂಪಶಾಸ್ತ್ರ)
       

ಇಲ್ಲಿ ಮೊದಲನೆಯದು ಎಳೆಯ ಕಳಲೆಯ ಬೇಯಿಸಿ ತೆಗೆದು ಜಜ್ಜಿ ನೂರು ಸಣ್ಣ ತುಂಡಾಗಿ ಕತ್ತರಿಸಿ ಮೆಣಸು ಉಪ್ಪು ಹಾಕಿ ತುಪ್ಪದಲ್ಲಿ ಬಾಡಿಸಿ ಹಲವು ಮಸಾಲೆಗಳನ್ನು ಬೆರೆಸಿ ಒಗ್ಗರಣೆ ಕೊಟ್ಟು ಪಲ್ಯ ಮಾಡುವ ಬಗೆಯಾದರೆ ಎರಡನೆಯದು ಎಳೆಯ ಕಳಲೆಯ ಒಗರು ಹೋಗುವಂತೆ ನೀರಿನಲ್ಲಿ ಕುದಿಸಿ ಈರುಳ್ಳಿ, ಕರಿಬೇವು, ತೆಂಗಿನ ತುರಿ, ನೆನೆಸಿದ ಅಕ್ಕಿ, ಬಿಳಿ ಉದ್ದು ಹಾಕಿ ಸಂಪಳ ತೆಗೆದು ಮಾಡಿದ ಕಡುಬು/ವಡೆಯ ಬಗೆಯನು ವಿವರಿಸುತ್ತದೆ. 16ನೇ ಶತಮಾನದಲ್ಲೇ ಈ ಬಗೆಯ ಅಡುಗೆ ಇರುವುದಾದರೆ ಕಳಲೆಯ ಬಳಕೆ ಪ್ರಾಚೀನವಾದುದೇ ಇರಬೇಕು. ಇಲ್ಲಿ ಯಾವುದರಲ್ಲೂ ಹುಳಿ ಬಳಸಿದ ಉದಾಹರಣೆ ಇಲ್ಲ. ಆದಾಗ್ಯೂ ‘ಕಳಲೆ ಪುಳಿಚಾರು ಎಂದೇಕೆ ಹೇಳಿದನೋ.. ಮಂಗರಸನೇ ವಿವರಿಸಬೇಕು! ಪೂರ್ವಾತ್ಯ ದೇಶಗಳಲ್ಲಿ ಕಳಲೆೆ: 

ಪೂರ್ವ ಏಶ್ಯ ದೇಶಗಳಲ್ಲಿ ಬಿದಿರು ಬೆಳೆ ಮತ್ತು ಬಳಕೆ ಅಗಾಧವಾಗಿ ಇದೆ ಮತ್ತು ಅಲ್ಲಿನ ಕಾಡು ಮತ್ತು ಕೃಷಿ ಪ್ರದೇಶಗಳಲ್ಲಿ ಬಿದಿರು ವಿವಿಧ ತಳಿಗಳಲ್ಲಿ ಲಭ್ಯವಿದೆ. ಚೀನಾ, ಕಾಂಬೋಡಿಯ, ಬರ್ಮಾ, ವಿಯೆಟ್ನಾಂ, ಥಾಯ್, ಇಂಡೋನೇಶ್ಯ, ಫಿಲಿಪ್ಪೀನ್ಸ್ ದೇಶಗಳಲ್ಲಿ ಕಳಲೆಯು ಹಲವು ತರದ ಅಡುಗೆಗಳಲ್ಲಿ ಮುಖ್ಯ ಪದಾರ್ಥವಾಗಿ ಬಳಸುತ್ತಾರೆ. ಕಳಲೆಯನ್ನು ವಿವಿಧ ರೀತಿಯ ತರಕಾರಿಗಳೊಂದಿಗೆ ಹುರಿದು ಪಲ್ಯ ಮಾಡುತ್ತಾರೆ. ಈ ಎಲ್ಲ ಬಹುತೇಕ ಪೂರ್ವ ಏಶ್ಯ ದೇಶಗಳಲ್ಲಿ ಕಳಲೆಯ ಜೊತೆಗೆ ಯಥೇಚ್ಛವಾಗಿ ತೆಂಗಿನ ಹಾಲನ್ನು ಸೇರಿಸುತ್ತಾರೆ. ಇಲ್ಲಿ ಬಿದಿರಿನಷ್ಟೇ ತೆಂಗಿನ ಬೆಳೆಯು ಹೆಚ್ಚಾಗಿ ಇರುವುದನ್ನು ಗಮನಿಸಬಹುದು. ಆದರೆ ತರಕಾರಿಯಂತೆಯೇ ಸಿಗಡಿ, ಮೀನು ಮತ್ತು ಮಾಂಸವನ್ನು ಕೂಡ ಸೂಪು, ಪಲ್ಯಗಳಿಗೆ ಧಾರಾಳವಾಗಿ ಸೇರಿಸಿ ಹುರಿದು ರುಚಿಗೊಳಿಸುತ್ತಾರೆ. ಇವುಗಳಲ್ಲಿ ಹಲವನ್ನು ನೂಡಲ್ಸ್ ಜೊತೆಗೆ ಅಥವಾ ಅನ್ನದ ಜೊತೆಗೆ ಕಲಸಿ ತಿನ್ನಬಹುದು. ಥಾಯ್‌ನಲ್ಲಿ ‘ನೋ ಮೈ’, ಕಾನ್ಗ್ ಥೈ ಪ್ಲ’ ಅನ್ನುವ ಸಲಾಡ್ ಮತ್ತು ಸೂಪ್‌ಗಳನ್ನೂ ಮಾಡುತ್ತಾರೆ. ಭಾರತಕ್ಕಿಂತಲೂ ಕಳಲೆಯ ಲಭ್ಯತೆ ಅಲ್ಲಿ ಹೆಚ್ಚು ಇರುವುದು ಮತ್ತು ಅವರ ಬಿದಿರಿಗೆ ಔಷಧೀಯ ಗುಣವಿದೆ ಎಂಬ ಪ್ರಾಚೀನ ನಂಬುಗೆಗಳಿಂದ ಕಳಲೆಯ ಬಳಕೆಯು ಸಾಂಪ್ರದಾಯಿಕವಾಗಿದೆ.

ಅಂದ ಹಾಗೆ ಮುಂಗಾರು ಶುರುವಾಗಿದೆ.. ಕಳಲೆ ಕೀಳುವ ಸಮಯ. ಹುಡುಕಿ ತಂದು ಉಪ್ಪುನೀರಿನಲ್ಲಿ ನೆನೆಸಿಟ್ಟು ಒಂದಷ್ಟು ಮಾಂಸದಡುಗೆಯ ಪ್ರಯೋಗ ಮಾಡೋಣ.

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News