ಇದು ದೇಶದ ದಿಕ್ಕನ್ನೇ ಬದಲಿಸಿತು

Update: 2020-08-03 07:04 GMT

ಅಯೋಧ್ಯೆಯ ಘಟನೆಯ ನಂತರ ದೇಶದ ಚಿತ್ರವೇ ಬದಲಾಯಿತು. ಆಗ ಒಡೆದ ಮನಸ್ಸುಗಳ ನಡುವೆ ಎದ್ದು ನಿಂತ ಸಂಶಯದ ಗೋಡೆ ಇನ್ನೂ ಕೆಳಗೆ ಬಿದ್ದಿಲ್ಲ. ಈ ವೈಷಮ್ಯದ ಗೋಡೆ ಕೆಳಗೆ ಬೀಳದಂತೆ ಅತ್ಯಂತ ಎಚ್ಚರ ವಹಿಸಲಾಗುತ್ತಿದೆ. ಆ ನಂತರ ನಡೆದ ವಿವಿಧ ರಥಯಾತ್ರೆಗಳು, ಅಭಿಯಾನಗಳು, ಗುಜರಾತ್ ಹತ್ಯಾಕಾಂಡಗಳು, ಗೋರಕ್ಷಣೆ ಹೆಸರಿನಲ್ಲಿ ನಡೆದ ಪುಂಡಾಟಿಕೆಗಳು, ಮರು ಮತಾಂತರದ ಹುಯಿಲುಗಳು, ಮಿನಿ ಬಾಬಾ ಬುಡಾನ್‌ಗಿರಿಗಳು, ಧರ್ಮ ಜಾಗೃತಿ ಸಮಾವೇಶಗಳು, ಹಿಂದೂ ಸಮಾಜೋತ್ಸವಗಳು, ಲವ್ ಜಿಹಾದ್ ಹೆಸರಿನ ವಿವಾದಗಳು, ಭಯೋತ್ಪಾದಕತೆಯ ಹುಸಿ ಆರೋಪಗಳು ಈ ದೇಶದಲ್ಲಿ ಜನಾಂಗ ದ್ವೇಷದ ಬೆಂಕಿ ಆರದಂತೆ ನೋಡಿಕೊಳ್ಳುತ್ತಿವೆ. ಭಾರತ ಈಗ ಭಾವನಾತ್ಮಕವಾಗಿ ಒಂದಾಗಿ ಉಳಿದಿಲ್ಲ. ಬಹುತ್ವ ಮಾಯವಾಗಿ ಏಕ ಧರ್ಮ, ಏಕ ಸಂಸ್ಕೃತಿಯ ಘೋಷಣೆಗಳು ಮೊಳಗುತ್ತಿವೆ. 


ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡು ಇಪ್ಪತ್ತೆಂಟು ವರ್ಷಗಳಾದವು. ಸುಪ್ರೀಂ ಕೋರ್ಟಿಗೆ ಮುಚ್ಚಳಿಕೆ ಪತ್ರ ಬರೆದು ಕೊಟ್ಟು ಅದಕ್ಕೆ ವ್ಯತಿರಿಕ್ತವಾಗಿ ಮಸೂದೆಯನ್ನು ಹಾಡಹಗಲೇ ನೆಲಸಮಗೊಳಿಸಿದ ಈ ಘಟನೆ ಬರೀ ಯಾವುದೋ ಒಂದು ಧಾರ್ಮಿಕ ಕಟ್ಟಡದ ಧ್ವಂಸವಾಗಿದ್ದರೆ ಅದಕ್ಕೆ ಅಷ್ಟು ಮಹತ್ವವಿರಲಿಲ್ಲ.ಇದು ಇಡೀ ದೇಶದ ರಾಜಕೀಯದ ದಿಕ್ಕನ್ನೇ ಬದಲಿಸಿದ ಘಟನೆ. ಆ ನಂತರ ದೇಶ ಸಾಗಿದ ದಾರಿ, ತಲುಪಿದ ಸ್ಥಿತಿ ಎಲ್ಲರಿಗೂ ಗೊತ್ತಿದೆ. ಇದು ಒಂದು ಸ್ಥಳೀಯ ಧಾರ್ಮಿಕ ವಿವಾದವಾಗಿದ್ದರೆ ಜಗತ್ತಿನ ಗಮನವನ್ನು ಸೆಳೆಯುತ್ತಿರಲಿಲ್ಲ. ಆದರೆ ಇದು ಅದೆಲ್ಲವನ್ನು ಮೀರಿ ಭವಿಷ್ಯತ್ ಭಾರತದ ದಿಕ್ಕು ದೆಸೆಗಳನ್ನೇ ಬದಲಿಸಿತು.

ಅಯೋಧ್ಯೆಯ ಮಸೀದಿಯನ್ನು ಕೆಡವಿದ ಜಾಗದಲ್ಲಿ ಮಂದಿರ ನಿರ್ಮಾಣದ ಭೂಮಿ ಪೂಜೆ ಮುಂಬರುವ ಬುಧವಾರ ಆಗಸ್ಟ್ 5 ನೇ ತಾರೀಕು ನಡೆಯಲಿದೆ. ಭೂಮಿ ಪೂಜೆಯನ್ನು ನೆರವೇರಿಸಲು ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಅಯೋಧ್ಯೆಗೆ ಬರಲಿದ್ದಾರೆ.ಸಂಘಪರಿವಾರದ ಪ್ರಮುಖ ನಾಯಕರು ಅಂದು ಅಯೋಧ್ಯೆಯಲ್ಲಿ ಸೇರಲಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಇತ್ಯರ್ಥ ಗೊಂಡ ವಿವಾದದ ಜಾಗದಲ್ಲಿ ಸುಮಾರು 300 ಕೋಟಿ ರೂಪಾಯಿ ವೆಚ್ಚದ ರಾಮಮಂದಿರ ನಿರ್ಮಾಣವಾಗಲಿದೆ.

ಯಾವುದೇ ಪ್ರದೇಶದಲ್ಲಿ ಮಂದಿರ, ಮಸೀದಿ, ಚರ್ಚ್, ಗುರುದ್ವಾರ, ಬಸದಿ, ಬುದ್ಧವಿಹಾರ ನಿರ್ಮಾಣಕ್ಕೆ ಭಾರತದಲ್ಲಿ ಯಾರ ಅಭ್ಯಂತರವೂ ಇಲ್ಲ. ಆದರೆ ಹಿಂದೆ ಇನ್ನೊಂದು ಧರ್ಮಕ್ಕೆ ಸೇರಿದ್ದ ಪ್ರಾರ್ಥನಾ ಕಟ್ಟಡವನ್ನು ಉದ್ರಿಕ್ತ ಜನಜಂಗುಳಿಯ ಮೂಲಕ ಧ್ವಂಸಗೊಳಿಸಿ ಆ ಜಾಗದಲ್ಲಿ ತಮ್ಮ ಮಂದಿರ ಕಟ್ಟುತ್ತೇವೆಂದು ಹೊರಟವರ ಬಗ್ಗೆ ಆಕ್ಷೇಪಗಳು ಸಹಜವಾಗಿ ವ್ಯಕ್ತವಾಗಿದ್ದವು. ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಅದೆಲ್ಲ ಮುಗಿದ ಅಧ್ಯಾಯವಾಗಿದೆ. ಈ ನಡುವೆ ಅಲ್ಲಿ ಬೌದ್ಧ ವಿಹಾರದ ಅವಶೇಷಗಳು ದೊರೆತ ಸುದ್ದಿ ಬಹಿರಂಗವಾಗಿದ್ದರೂ ಅದು ಅಷ್ಟಾಗಿ ದೇಶದ ಗಮನವನ್ನು ಸೆಳೆಯಲಿಲ್ಲ.

ಅಯೋಧ್ಯೆಯ ಘಟನೆಯ ನಂತರ ದೇಶದ ಚಿತ್ರವೇ ಬದಲಾಯಿತು. ಆಗ ಒಡೆದ ಮನಸ್ಸುಗಳ ನಡುವೆ ಎದ್ದು ನಿಂತ ಸಂಶಯದ ಗೋಡೆ ಇನ್ನೂ ಕೆಳಗೆ ಬಿದ್ದಿಲ್ಲ. ಈ ವೈಷಮ್ಯದ ಗೋಡೆ ಕೆಳಗೆ ಬೀಳದಂತೆ ಅತ್ಯಂತ ಎಚ್ಚರ ವಹಿಸಲಾಗುತ್ತಿದೆ. ಆ ನಂತರ ನಡೆದ ವಿವಿಧ ರಥಯಾತ್ರೆಗಳು, ಅಭಿಯಾನಗಳು, ಗುಜರಾತ್ ಹತ್ಯಾಕಾಂಡಗಳು, ಗೋರಕ್ಷಣೆ ಹೆಸರಿನಲ್ಲಿ ನಡೆದ ಪುಂಡಾಟಿಕೆಗಳು, ಮರು ಮತಾಂತರದ ಹುಯಿಲುಗಳು, ಮಿನಿ ಬಾಬಾ ಬುಡಾನ್‌ಗಿರಿಗಳು, ಧರ್ಮ ಜಾಗೃತಿ ಸಮಾವೇಶಗಳು, ಹಿಂದೂ ಸಮಾಜೋತ್ಸವಗಳು, ಲವ್ ಜಿಹಾದ್ ಹೆಸರಿನ ವಿವಾದಗಳು, ಭಯೋತ್ಪಾದಕತೆಯ ಹುಸಿ ಆರೋಪಗಳು ಈ ದೇಶದಲ್ಲಿ ಜನಾಂಗ ದ್ವೇಷದ ಬೆಂಕಿ ಆರದಂತೆ ನೋಡಿಕೊಳ್ಳುತ್ತಿವೆ. ಭಾರತ ಈಗ ಭಾವನಾತ್ಮಕವಾಗಿ ಒಂದಾಗಿ ಉಳಿದಿಲ್ಲ.ಬಹುತ್ವ ಮಾಯವಾಗಿ ಏಕ ಧರ್ಮ, ಏಕ ಸಂಸ್ಕೃತಿಯ ಘೋಷಣೆಗಳು ಮೊಳಗುತ್ತಿವೆ. ಈ ಘಟನೆ ನಡೆಯುವ ಮುನ್ನ ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಹೊಂದಿದ್ದ ಭಾರತೀಯ ಜನತಾ ಪಕ್ಷ ಈಗ ದೇಶದ ಆಡಳಿತ ಪಕ್ಷವಾಗಿದೆ. ಲೋಕಸಭೆಯಲ್ಲಿ ಅದರ ದೈತ್ಯ ಬಲದ ಎದುರು ಪ್ರತಿಪಕ್ಷಗಳು ನಿಟ್ಟುಸಿರು ಬಿಡುತ್ತಿವೆ.ಇಷ್ಟಕ್ಕೆ ಬಿಜೆಪಿ ಸಂತೃಪ್ತಿ ಹೊಂದಿಲ್ಲ, ಅದೀಗ ಪ್ರತಿಪಕ್ಷ ಮುಕ್ತ ಭಾರತದ ಏಕ ಪಕ್ಷ ಅಬಾಧಿತ ಆಡಳಿತದ ಗುರಿ ಇರಿಸಿಕೊಂಡಿದೆ.

ಅಯೋಧ್ಯೆಯ ಘಟನೆಯ ನಂತರ ದೇಶದಲ್ಲಿ ಹೊಸ ಪೀಳಿಗೆ ಬಂದಿದೆ. 1992ರ ಮುಂಚಿನ ಸೌಹಾರ್ದ ಭಾರತವನ್ನು ನೋಡಿರದಿದ್ದ ಈ ಪೀಳಿಗೆ ಈ ವೈಷಮ್ಯದ ನಡುವೆಯೇ ಬೆಳೆಯುತ್ತಿದೆ. ಈ ಹೊಸ ಯುವಕರ ನಡುವೆ ಮತ ನಿರಪೇಕ್ಷತೆ ಮತ್ತು ಸಹಿಷ್ಣುತೆಯನ್ನು ಬೆಳೆಸುವ ಮುನ್ನಡೆಸುವ ಕಾರ್ಯ ಅಷ್ಟೊಂದು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಬದಲಾವಣೆ ಅಷ್ಟು ಸುಲಭವಲ್ಲ.

ರಾಮ ಮಂದಿರ ಹೋರಾಟ ಬರೀ ಒಂದು ಮಂದಿರಕ್ಕಾಗಿ ನಡೆದ ಹೋರಾಟವಲ್ಲ. ಅದು ಭಾರತದ ದಿಕ್ಕು ದೆಸೆಗಳನ್ನೇ ಬದಲಿಸುವ ಗುರಿ ಹೊಂದಿತ್ತು.ಇದರಲ್ಲಿ ಸೆಕ್ಯುಲರ್ ಎಂದು ಹೇಳಿಕೊಳ್ಳುವ ಪಕ್ಷಗಳ ಆಷಾಢಭೂತಿತನವೂ ಬಯಲಿಗೆ ಬಂದಿದೆ. ಶಾಬಾನು ಪ್ರಕರಣದ ನಂತರ ಹಿಂದೂ ಓಟ್ ಬ್ಯಾಂಕ್ ಓಲೈಸಲು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಅಯೋಧ್ಯೆಯ ವಿವಾದಾತ್ಮಕ ಕಟ್ಟಡದ ಬೀಗ ತೆಗೆಸಿದ್ದು ಸಂಘ ಪರಿವಾರಕ್ಕೆ ಅನುಕೂಲ ಮಾಡಿಕೊಟ್ಟಿತು. ನಂತರ ವಿ.ಪಿ. ಸಿಂಗ್ ಪ್ರಧಾನಿಯಾಗಿದ್ದಾಗ ಹಿಂದುಳಿದವರಿಗೆ ಮೀಸಲಾತಿ ನೀಡುವ ಮಂಡಲ್ ವರದಿಯ ಜಾರಿಗೆ ಮುಂದಾದರು. ಅದನ್ನು ತಡೆಯಲು ಆರೆಸ್ಸೆಸ್ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ವಿವಾದವನ್ನು ಮುಂದೆ ಮಾಡಿತು.

ಅಯೋಧ್ಯೆಯ ಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಗುಜರಾತಿನ ಸೋಮನಾಥ ದಿಂದ ರಥಯಾತ್ರೆ ಹೊರಟರು. ಬಹಳ ಜನ ಭಾವಿಸಿದಂತೆ ಇದು ಅವರ ವೈಯಕ್ತಿಕ ತೀರ್ಮಾನವಲ್ಲ. ಬಿಜೆಪಿಯ ತೀರ್ಮಾನವೂ ಅಲ್ಲ. ಇದನ್ನು ತೀರ್ಮಾನಿಸಿದ್ದು ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂದಿನ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್ ಅವರು ಅಡ್ವಾಣಿ ಮತ್ತು ಗೋವಿಂದಾಚಾರ್ಯರನ್ನು ನಾಗಪುರಕ್ಕೆ ಕರೆಸಿಕೊಂಡು ವಿಶ್ವ ಹಿಂದು ಪರಿಷತ್ತು ಆರಂಭಿಸಿದ ಮಂದಿರ ನಿರ್ಮಾಣದ ಹೋರಾಟದಲ್ಲಿ ಧುಮುಕುವಂತೆ ಸೂಚಿಸಿದರು. ಇದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಸಮ್ಮತಿ ಇರಲಿಲ್ಲ ಎಂದು ಕೆಲವರು ಹೇಳುತ್ತಾರೆ.ಗುಜರಾತಿನಿಂದ ಹೊರಟ ಈ ರಥಯಾತ್ರೆಯಲ್ಲಿ ಉದ್ದಕ್ಕೂ ಅಡ್ವಾಣಿ ಅವರ ಜೊತೆಗಿದ್ದವರು ಈಗಿನ ಪ್ರಧಾನಿ ನರೇಂದ್ರ ಮೋದಿ. ಈ ಬಗ್ಗೆ ಸಂಘಪರಿವಾರದ ನಿಕಟವರ್ತಿ ನಮ್ಮ ಹುಬ್ಬಳ್ಳಿಯ ಪ್ರಶಾಂತ ನಾತು ತಮ್ಮ ಅಂಕಣವೊಂದರಲ್ಲಿ ಖಚಿತ ಮಾಹಿತಿಯನ್ನು ದಾಖಲಿಸಿದ್ದಾರೆ.

ಸಂಘ ಪರಿವಾರದ ಗುರಿ ಬರೀ ಒಂದು ಮಂದಿರದ ನಿರ್ಮಾಣವಲ್ಲ. ಮಂದಿರ ನಿರ್ಮಾಣವೆಂಬುದು ಒಂದು ನೆಪ ಮಾತ್ರ. ಅದರ ಗುರಿ ಭಾರತದ ಇಂದಿನ ಸಂವಿಧಾನಾತ್ಮಕ ಆಡಳಿತ ವ್ಯವಸ್ಥೆಯನ್ನು ಬದಲಿಸಿ ಮೀಸಲಾತಿ ಮತ್ತು ಸಮಾನತೆ ಇಲ್ಲದ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣವಾಗಿದೆ. ಈ ಕಟುಸತ್ಯವನ್ನು ಅದು ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ. ಹಾಗೇನೂ ಇಲ್ಲವೆಂದು ಹೇಳಿ ಸಿದ್ದಿ ಬುಡಕಟ್ಟಿನ ವ್ಯಕ್ತಿಯನ್ನು ಮೇಲ್ಮನೆಗೆ ನಾಮಕರಣ ಮಾಡಿದ್ದನ್ನು ಉದಾಹರಣೆಯಾಗಿ ನೀಡುತ್ತದೆ. ಶಾಂತಾರಾಮ ಸಿದ್ದಿಯವರನ್ನು ನಾಮಕರಣ ಮಾಡಿದ್ದು ನಿಜ. ಅದೂ ಕೂಡ ಯಾವುದೇ ಧರ್ಮಕ್ಕೆ ಸೇರದ ತಮ್ಮದೇ ಪ್ರತ್ಯೇಕ ಸಂಸ್ಕೃತಿ, ನಂಬಿಕೆಗಳನ್ನು ಹೊಂದಿರುವ ಅರಣ್ಯವಾಸಿ ಆದಿವಾಸಿಗಳನ್ನು ವನವಾಸಿಗಳೆಂದು ಕರೆದು ಅವರನ್ನು ಹಿಂದುತ್ವದ ತೆಕ್ಕೆಗೆ  ತೆಗೆದುಕೊಂಡು ಹಿಂದೂ ರಾಷ್ಟ್ರದ ಗುರಿ ಸಾಧನೆಗಾಗಿ ಅವರನ್ನು ಬಳಸಿಕೊಳ್ಳಲು ಇಂತಹ ಪುಟ್ಟ ಪುರಸ್ಕಾರಗಳನ್ನು ನೀಡಲಾಗುತ್ತದೆ. ಭಾರತೀಯ ಸಮಾಜದಿಂದ ಅಲ್ಪಸಂಖ್ಯಾತ ಮುಸಲ್ಮಾನರು, ಕ್ರೈಸ್ತರು ಮತ್ತು ಎಡಪಂಥೀಯರನ್ನು ಪ್ರತ್ಯೇಕಿಸಿ ಮೂಲೆ ಗುಂಪು ಮಾಡಲು ಬುಡಕಟ್ಟು ಮತ್ತು ಎಡಪಂಥೀಯರನ್ನು ಪ್ರತ್ಯೇಕಿಸಿ ಮೂಲೆಗುಂಪು ಮಾಡಲು, ಬುಡಕಟ್ಟು ಮತ್ತು ಉಪೇಕ್ಷಿತ ಸಮುದಾಯಗಳ ಜನರನ್ನು ಬರಸೆಳೆದು ಅಪ್ಪಿಕೊಳ್ಳುವ ದೂರದೃಷ್ಟಿಯ ಉದ್ದೇಶ ಇದರ ಹಿಂದಿದೆ ಅಂದರೆ ಅತಿಶಯೋಕ್ತಿ ಅಲ್ಲ.

ಆರೆಸ್ಸೆಸ್ ಸ್ವಯಂ ಸೇವಕರು ದಶಕಗಳ ಕಾಲ ಆದಿವಾಸಿ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವುದು ನಿಜ. ಅನೇಕರು ಅದಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದಾರೆ. ಆದರೆ ಇದರ ಹಿಂದೆ ಇರುವುದು ಹಿಂದುತ್ವದ ಜಾಲವನ್ನು ವಿಸ್ತರಿಸುವ ಉದ್ದೇಶ. ಶತಮಾನಗಳಿಂದ ಕಾಡಿನಲ್ಲಿರುವ ವಿಭಿನ್ನ ಬುಡಕಟ್ಟು ಜನರ ಸಮಸ್ಯೆಗಳು ಸಾಕಷ್ಟಿವೆ.ಕಾಡಿನಿಂದ ಅವರನ್ನು ಎತ್ತಂಗಡಿ ಮಾಡುವ, ಅವರ ಭೂಮಿಯನ್ನು ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪೆನಿಗಳಿಗೆ ಕೊಡುವ ಹುನ್ನಾರಗಳನ್ನು ನಮ್ಮ ಸರಕಾರಗಳು ಮಾಡುತ್ತಲೇ ಇವೆ. ಗುಜರಾತ್‌ನಲ್ಲಿ ನರ್ಮದಾ ಅಣೆಕಟ್ಟಿನಿಂದಾಗಿ ನೂರಾರು ಹಳ್ಳಿಗಳು ಮುಳುಗಿ ಸಾವಿರಾರು ಜನ ಬೀದಿಪಾಲಾಗಿದ್ದಾರೆ. ಇವರನ್ನು ಸಂಘಟಿಸಿ ಮೇಧಾ ಪಾಟ್ಕರ್ ಹೋರಾಡುತ್ತಲೇ ಇದ್ದಾರೆ. ಆದರೆ ಸಂಘ ಪರಿವಾರ ಇಂತಹ ಭೂಮಿಯ ಹಕ್ಕಿನ ಪ್ರಶ್ನೆಗಳನ್ನು ಎತ್ತುವುದಿಲ್ಲ. ಈ ನಾಡಿನ ನಿಜವಾದ ಒಡೆಯರಲ್ಲಿ ಸ್ವಾಭಿಮಾನವನ್ನು ತುಂಬುವುದಿಲ್ಲ. ಇವರು ಕೇವಲ ಏಕಲ ಶಾಲೆಗಳನ್ನು ತೆರೆದು ಅವರ ಉದ್ಧಾರಕರಾಗುತ್ತಾರೆ. ತಮ್ಮ ಅಜೆಂಡಾ ಜಾರಿಗಾಗಿ ಅವರನ್ನು ಬಳಸಿಕೊಳ್ಳುತ್ತಾರೆ. ಆದರೆ ಈ ಜನರ ಮಧ್ಯೆ ಎಡಪಂಥೀಯ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಕೆಲಸ ಮಾಡಿದ್ದು ಕಡಿಮೆ. ಮಾವೋವಾದಿಗಳು ಮಾತ್ರ ಕೆಲವೆಡೆ ಸಂಘಟನೆ ಹೊಂದಿದ್ದಾರೆ.

ಅದೇನೇ ಇರಲಿ ತೊಂಬತ್ತರ ದಶಕದ ಹಿಂದೆ ಜನ ಆಹಾರ, ಶಿಕ್ಷಣ, ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದರು. ಇಂತಹ ಜಾಗೃತ ಹೋರಾಟಗಳು ಜಾಗತೀಕರಣದ ಮುಕ್ತ ಆರ್ಥಿಕ ನೀತಿಯ ವಿಸ್ತರಣೆಗೆ ಅಡ್ಡಿಯಾಗಿದ್ದವು. ಅಂತಲೇ ಹೋರಾಟದ ದಿಕ್ಕನ್ನೇ ಬದಲಿಸಿ ಹೊಸ ಪೀಳಿಗೆಯ ಯುವಕರನ್ನು ಮಂದಿರ, ಮಸೀದಿ, ಲವ್ ಜಿಹಾದ್, ಮತಾಂತರ ಮುಂತಾದ ಕೆಲಸಕ್ಕೆ ಬಾರದ ಹೋರಾಟಗಳಲ್ಲಿ ಮುಳುಗಿಸುವಲ್ಲಿ ಶೋಷಕ ವರ್ಗ ಯಶಸ್ವಿಯಾಗಿದೆ. ಇದನ್ನೆಲ್ಲ ಎದುರಿಸಿ ಹೋರಾಡಬೇಕಾದ ಸಂಘಟಿತ ಕಾರ್ಮಿಕ ವರ್ಗಕ್ಕೂ ಧರ್ಮ, ಜಾತಿಗಳ ಮಂಪರು ಕವಿದಿದೆ.
ದುರಂತವೆಂದರೆ ನಮ್ಮ ಯುವಕರಿಗೆ ಬುದ್ಧ, ಬಸವಣ್ಣ, ಗಾಂಧೀಜಿ, ಬಾಬಾ ಸಾಹೇಬರು, ವಿವೇಕಾನಂದರು ಆದರ್ಶ ವಾಗುವ ಬದಲು ನಾಥೂರಾಮ್‌ಗೋಡ್ಸೆಯಂಥವರು ಐಕಾನ್‌ಗಳಾಗುತ್ತಿದ್ದಾರೆ.

ನಾನು ನನ್ನ ಬಾಲ್ಯವನ್ನು ಬಸವನ ಬಾಗೇವಾಡಿಯಲ್ಲಿ ಕಳೆದೆ. ಅಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿದ್ದ ಬಸವಣ್ಣ ನವರ ಗುಡಿಯ ಆವರಣದ ಸುತ್ತಲಿನ ಗೋಡೆ ಮತ್ತು ದ್ವಾರಗಳ ಮೇಲ್ಭಾಗದಲ್ಲಿ ಬಸವಣ್ಣನವರ ವಚನಗಳನ್ನು ಕಲ್ಲಿನಲ್ಲಿ ಕೆತ್ತಿಸಿದ್ದರು. ಅದರಲ್ಲಿ ಒಂದು ವಚನದಲ್ಲಿ ಬಸವಣ್ಣ ನವರು ‘‘ಉಳ್ಳವರು ಶಿವಾಲಯ ಮಾಡಿಹರು, ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ , ದೇಹವೇ ದೇಗುಲ, ಶಿರ ಹೊನ್ನ ಕಲಶವಯ್ಯ ಕೂಡಲ ಸಂಗಮದೇವಾ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’’ ಎಂದು ಹೇಳಿದ್ದು ನೆನಪಿದೆ. ಈಗ ಅಯೋಧ್ಯೆ ುಲ್ಲಿ ನಡೆಯುತ್ತಿರುವುದು ಸ್ಥಾವರ ಸಂಸ್ಕೃತಿಯ ವಿಜೃಂಭಣೆ. ಈ ಮಂದಿರ ನಿರ್ಮಾಣಕ್ಕಾಗಿ ಅಡಿಪಾಯದಲ್ಲಿ ಹಾಕಲು ಕರ್ನಾಟಕದ ವಿವಿಧೆಡೆಗಳಿಂದ ಮಣ್ಣನ್ನು ಸಂಗ್ರಹಿಸಿ ಒಯ್ಯಲಾಗುತ್ತಿದೆ. ಕೆಲ ವೀರಶೈವ ಮಠಾಧೀಶರೂ ಈ ಮಣ್ಣು ಸಂಗ್ರಹ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ರಾಷ್ಟ್ರ ಕೊರೋನ ಹೊಡೆತದಿಂದ ತತ್ತರಿಸಿ ಹೋಗಿರುವಾಗ, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಡದ ಭೂಮಿ ಪೂಜೆ ನಡೆಯಲಿದೆ. ನಿಜ ರಾಮ ಭಕ್ತ ಗಾಂಧಿ ಇಂದು ಬದುಕಿದ್ದರೆ ಇದರ ವಿರುದ್ಧ ಅನ್ನ ಸತ್ಯಾಗ್ರಹಕ್ಕೆ ಮುಂದಾಗುತ್ತಿದ್ದರು. ಆದರೆ ಗಾಂಧೀಜಿ ಇರದಿದ್ದರೂ ಬಾಬಾಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ ಎಂಬ ರಕ್ಷಾ ಕವಚವಿದೆ. ಈ ರಕ್ಷಾಕವಚವನ್ನು ಉಳಿಸಿಕೊಳ್ಳುವುದು ಪ್ರಜ್ಞಾವಂತ ಪ್ರಜೆಗಳ ಆದ್ಯ ಕರ್ತವ್ಯವಾಗಬೇಕಾಗಿದೆ.
ಈಗಂತೂ ಹಳ್ಳಿ,ಹಳ್ಳಿಗಳಲ್ಲಿ ದೇವಾಲಯಗಳು ತಲೆ ಎತ್ತುತ್ತಿವೆ. ಇವುಗಳ ಹಿಂದೆ ಸಾತ್ವಿಕ ಭಕ್ತಿಗಿಂತ ದೇವರ ಮೂರ್ತಿಯನ್ನಿಟ್ಟು ವ್ಯಾಪಾರ ಮಾಡುವ ಲಾಭಕೋರ ಹುನ್ನಾರವಿದೆ. ‘‘ದೇಶದಲ್ಲಿ ದೇವಾಲಯಗಳ ಸಂಖ್ಯೆ ಕಡಿಮೆಯಾಗಿ ಗ್ರಂಥಾಲಯಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ’’ ಎಂದು ಡಾ. ಅಂಬೇಡ್ಕರ್ ಅವರು ಹೇಳಿದ ಮಾತು ಸದಾ ನಮ್ಮನ್ನು ಎಚ್ಚರಿಸಿ ಮುನ್ನಡೆಸಬೇಕಾಗಿದೆ.

Writer - ಸನತ್ ಕುಮಾರ ಬೆಳಗಲಿ

contributor

Editor - ಸನತ್ ಕುಮಾರ ಬೆಳಗಲಿ

contributor

Similar News