ಕನ್ನಡದ ಕೈಯ ದೀವಿಗೆ ಡಿ. ಆರ್. ನಾಗರಾಜ್
ಕನ್ನಡದ ಅನೇಕ ಯೋಗ್ಯರಿಗೆ ಡಿ. ಆರ್. ಭಾಷೆ ಸ್ಫಟಿಕದ ಶಲಾಖೆಂತೆ ಚುಚ್ಚಿದೆ. ಅಷ್ಟು ಯೋಗ್ಯವಲ್ಲದ ಕೃತಿಗಳಿಗೆ ಮುತ್ತಿನ ಹಾರವನ್ನೂ ತೊಡಿಸಿದ್ದಾರೆ. ಸ್ವತಃ ಡಿ. ಆರ್.ಗೆ ಈ ಕುರಿತು ತೀವ್ರ ವ್ಯಾಕುಲವಿತ್ತು. ನುಡಿ ಹಾದರವನ್ನು ವಾಕರಿಕೆ ಯಿಂದ ನೋಡುವ ಚಿಕಿತ್ಸಕ ಮನೋಭಾವವಿತ್ತು. ತಮ್ಮ ವಿದ್ವತ್ ಬದುಕಿನ ಕಪ್ಪುಚುಕ್ಕೆಗಳ ಕುರಿತು ಮಾತನಾಡಲು ಅವರಿಗೆ ಲಜ್ಜೆಯೇನೂ ಅನ್ನಿಸುತ್ತಿರಲಿಲ್ಲ.
ಭಾಗ-1
1
ಡಿ.ಆರ್.ನಾಗರಾಜ್ ಹಿಂದಿನ ಶತಮಾನದ ಕೊನೆಯ ಎರಡು ದಶಕಗಳನ್ನು ಬೆರಗುಗೊಳಿಸಿದ ಸಂಸ್ಕೃತಿ ಚಿಂತಕ. ತರತರದ ಬಣ್ಣಗಳ ಎಳೆಗಳನ್ನು ಹಿಡಿದು ಊಹಿಸಿ ಚಿತ್ತಾರ ಬರೆಯುವ ಕಸುಬುದಾರ ನೇಕಾರನಂತೆ ಚಿಂತನೆಗಳನ್ನು ನೇಯಲು ಪ್ರಯತ್ನಿಸಿದ ಸಾಹಸಿ. ಸ್ವತಃ ನೇಯ್ಗೆ ಕುಟುಂಬದಲ್ಲಿ ಹುಟ್ಟಿ ಸರಕಾರಿ ಸ್ಕೂಲು ಕಾಲೇಜುಗಳಲ್ಲಿ ಕಲಿತು ವಿಶ್ವದ ಪ್ರಖ್ಯಾತ ವಿಶ್ವವಿದ್ಯಾನಿಲಯಗಳಿಗೆ ಬೇಕಾದ ಇಂಗ್ಲಿಷ್ ಕಲಿತು, ಭಾರತದ ಗ್ರಾಮೀಣ ಪ್ರದೇಶಗಳಿಂದ ಬಂದ ಪ್ರತಿಭಾವಂತ ಹುಡುಗರ ಕೈಗೆ ಕಾಮನಬಿಲ್ಲನ್ನು ತಂದುಕೊಟ್ಟ ಛಲಗಾರ. ಒಮ್ಮೆ ಕೇಳಿದೆ, ‘‘ಸಾರ್ ನೀವು ಇಂಗ್ಲಿಷ್ ಕಲಿತದ್ದು ಹೇಗೆ’’? ‘‘ಅದ್ಯಾವ್ ದೊಡ್ಡ ವಿದ್ಯೆ ಅಂತ ಕೇಳ್ತೀರಿ ಬಿಡ್ರಿ, ನಾನು ಇಂಗ್ಲಿಷ್ ಮೀಡಿಯಂನಲ್ಲಿ ಕಲಿತವನಲ್ಲ. ಅಭ್ಯಾಸ ಮಾಡುತ್ತಾ ಮಾಡುತ್ತಾ ಕಲಿತವನು, ನನ್ನ ಈಗಿನ ಇಂಗ್ಲಿಷ್ ಓದು ಗಂಟೆಗೆ 40 ರಿಂದ 60 ಪುಟ’’ ಅಂದಿದ್ದರು. ಬೆರಗಾಗಿ ಸುಮ್ಮನೆ ಕೂತೆ. ಎರಡು ವರ್ಷಗಳ ಕಾಲ ಅವರು ನಮಗೆ ಕಲಿಸಿದ್ದು ಅಪಾರ. ಭಾಷಣಗಳಿಗೆ ಹೋಗುವಾಗ ಮಾಡಿಕೊಳ್ಳುತ್ತಿದ್ದಷ್ಟೇ ಅಚ್ಚುಕಟ್ಟಾದ ಸಿದ್ಧತೆಯನ್ನು ತರಗತಿಗಳಿಗೂ ಮಾಡಿಕೊಂಡು ಬರುತ್ತಿದ್ದರು.
ಸಪ್ತ ಸಾಗರಗಳ ಜ್ಞಾನಸಲಿಲದಿಂದ ಮಜ್ಜನ ಮಾಡಿಸದೆ ತರಗತಿಗಳು ಮುಗಿಯುತ್ತಿರಲಿಲ್ಲ. ಸಿ. ಎಂ. ಬೌರಾನ ‘ಹೀರಾಯಿಕ್ ಪೊಯೆಟ್ರಿ’ ಕುರಿತು ಬರೆದಿದ್ದ ಬರಹವನ್ನು ಮೆಚ್ಚಿ ಅದಕ್ಕೊಂದು ಟಿಪ್ಪಣಿ ಬರೆದಿದ್ದರು. ಎರಡನೇ ವರ್ಷದ ಎಂ.ಎ.ಗೆ ಬರುವ ಹೊತ್ತಿಗೆ ತುಸು ಹತ್ತಿರವಾಗಿದ್ದ ನಾನು ಆಗಾಗ ಎ.ಡಿ.ಎ. ರಂಗಮಂದಿರದಲ್ಲಿದ್ದ ಸಾಹಿತ್ಯ ಅಕಾಡಮಿ ಕಚೇರಿಗೆ ಹೋಗುತ್ತಿದ್ದೆ. ಓದುತ್ತಾ ಅಥವಾ ಚರ್ಚಿಸುತ್ತಾ ಕೂತಿರುತ್ತಿದ್ದ ಡಿ. ಆರ್. ರನ್ನು ಒಮ್ಮೆ ಧೈರ್ಯ ಮಾಡಿ ‘‘ಮಾರ್ಕ್ಸ್‌ವಾದ ಕುರಿತ ನಿಮ್ಮ ಬದಲಾದ ನಿಲುವಿಗೆ ಕಾರಣವೇನು?’’ ಅಂದೆ. ‘‘ಲೋಹಿಯಾ ಓದ್ರಿ’’ಅಂದ್ರು. ‘‘ಲೋಹಿಯಾ ಸಮನ್ವಯಕಾರರಲ್ಲವೇ?’’ ಅಂದೆ. ನಕ್ಕು ಸುಮ್ಮನಾದರು. ‘‘ನಿಮ್ಮ ಬಗ್ಗೆ ಹೊರಗೆ ಒಂದು ಅಭಿಪ್ರಾಯವಿದೆ’’ಅಂದೆ. ದಿಟ್ಟಿಸಿದರು. ‘‘ವರ್ಗ ಬದಲಾದ ಕೂಡಲೇ ವರ್ಗ ಸ್ವಭಾವ ಬದಲಾಗುತ್ತದೆ ಅಂತಾರೆ’’ ಅಂದೆ. ಸಿಕ್ಕಾಪಟ್ಟೆ ಡಿಸ್ಟರ್ಬ್ ಆದ ಅವರು ಗ್ರಾಮ್ಷಿಯಿಂದ ಹಿಡಿದು ಲೋಹಿಯಾವರೆಗೆ ಸುಮಾರು ಎರಡು ಗಂಟೆ ಮಾತನಾಡಿದರು. ಕಂಗಾಲಾಗಿ ಹೋದೆ. ಅವತ್ತು ಡಿ.ಆರ್. ಆಪ್ತ ಶಿಷ್ಯೆ ಒಬ್ಬರಿದ್ದರು. ಜೊತೆಗೆ ಗೋನಾಲದಿಂದ ಬಂದಿದ್ದ ಇನ್ನೊಬ್ಬ ಪರಿಚಿತರಿದ್ದರು
. ಡಿ. ಆರ್. ಬಹಳ ಹೆಮ್ಮೆಯಿಂದ ತಮ್ಮ ಬಗ್ಗೆ ತಾವು ಹೇಳಿಕೊಳ್ಳುತ್ತಿದ್ದ ಮಾತು ‘‘ನೋಡ್ರಿ ನಾನು ಮಾತನಾಡಿದ್ದಕ್ಕೂ ಬರೆದಿದ್ದಕ್ಕೂ ಅಂಥಾ ವ್ಯತ್ಯಾಸ ಇರಲ್ಲ. ಯಾಸ್ ಇಟೀಸ್ ಬರಹಕ್ಕಿಳಿಸಿದರೆ ಲೇಖನ ಆಗ್ತಾವೆ’’ ಅನ್ನುತ್ತಿದ್ದರು. ನೇಯುವವನು ನೂಲನ್ನು ಲುಕ್ಸಾನು ಮಾಡಿದರೆ ಅಡ್ಡ ಕಸುಬಿ ಆಗುತ್ತಾನೆ ಎಂಬ ವಿವೇಕ ಮತ್ತು ಎಚ್ಚರ ಎರಡೂ ಡಿ. ಆರ್.ಗಿದ್ದವು. ಅನೇಕ ಸಲ ಇದು ನಿಜವೇ ಎಂದು ನೋಡಿದ್ದೇನೆ. ನಿಜ ಅದು. ತರಗತಿಗಳಲ್ಲಿ ಮಾಡುತ್ತಿದ್ದ ಪಾಠ, ಸಭೆಗಳಲ್ಲಿ ಮಾಡುತ್ತಿದ್ದ ಭಾಷಣ ಎರಡೂ ಅಸ್ಖಲಿತವಾಗಿರುತ್ತಿದ್ದವು. ಅಸ್ಖಲಿತ ಎಂಬುದೂ ಅವರಿಗೆ ಪ್ರಿಯವಾದ ಪದ. ಯಾವುದರಲ್ಲೂ ಸುಮ್ಮನೆ ಸೋರಿ ಹೋಗಬಾರದು. ಇಪ್ಪತ್ತರ ಹರೆಯದಲ್ಲಿ ನಾವು ತುಸು ಪೋಲಿ ಪೋಲಿಯಾದ ಪದ್ಯ ಬರೆಯುತ್ತಿದ್ದೆವು. ಬಂಡಾಯದ ನುಡಿಗಟ್ಟುಗಳು ಕ್ಲೀಷೆಯೆನ್ನಿಸಲಾರಂಭಿಸಿದ್ದವು. ಕಿ.ರಂ.ಗೆ ತೋರಿಸಿದರೆ ‘ಸ್ಕ್ಯಾಂಟಿ’ ಅಂದರು. ಡಿ. ಆರ್. ‘‘ಏ ಚೆನ್ನಾಗಿದೆ. ಬರೆದಿರೋದು ಪೂರ್ತಿ ಕೊಡ್ರಿ, ಸಾಧ್ಯಾ ಆದ್ರೆ ಪುಸ್ತಕ ಮಾಡೋಣ’’ ಅಂದ್ರು. ಕಿ.ರಂ. ಗಿಮಿಕ್ಕುಗಳನ್ನು, ರೋಚಕತೆಗಾಗಿ ಕಾವ್ಯ ಬರೆಯುವುದನ್ನು ಇಷ್ಟ ಪಡುತ್ತಿರಲಿಲ್ಲ. ಈ ವಿಚಾರದಲ್ಲಿ ತುಸು ಸಂಪ್ರದಾಯವಾದಿ ಅವರು. ಡಿ. ಆರ್. ಹಾಗಲ್ಲ. ರೂಢಿ ಮುರಿವ ಎಲ್ಲ ಕೆಲಸಗಳನ್ನು ಸಾಹಸವೆಂಬಂತೆ ನೋಡುತ್ತಿದ್ದರು.
ಡಿ. ಆರ್. ಅವರ ಬೌದ್ಧಿಕ ಸಾಹಸಗಳನ್ನು ದಿಗಿಲಿನಿಂದ, ಕುತೂಹಲದಿಂದ ನೋಡುತ್ತಿದ್ದೆವು. ತನ್ನ ಊರಿನವರು ಎಂಬ ಕಾರಣಕ್ಕೆ ನಮಗೆ ಸದರವನ್ನೇನೂ ತೋರಿಸುತ್ತಿರಲಿಲ್ಲ. ಸದಾ ಓದುವಂತೆ, ಗಂಭೀರ ಪ್ರಯತ್ನ ಮಾಡುವಂತೆ ಹೇಳುತ್ತಿದ್ದರು. ಅವರು ಕನ್ನಡದಲ್ಲಿ ತನ್ನದೊಂದು ‘ಸ್ಕೂಲ್ ಆಫ್ ಥಾಟ್’ ಶುರು ಮಾಡಬಹುದಿತ್ತು. ಮಾಡಲಿಲ್ಲ. ಅನಂತಮೂರ್ತಿಯವರ, ಲಂಕೇಶರ, ಸುಬ್ಬಣ್ಣನವರ ಸ್ಕೂಲ್‌ಗಳಿಗೆ ಹೋಗುತ್ತಿದ್ದರು. ಕೆಲವೊಮ್ಮೆ ಅದನ್ನು ಕಬ್ಜಾ ಮಾಡಲು ನೋಡಿದರು, ಅದಾಗಲಿಲ್ಲ. ಅವೇ ಕೆಲವೊಮ್ಮೆ ನುಂಗಲು ನೋಡಿದವು. ಅಂಥ ಸಂದರ್ಭಗಳಲ್ಲಿ ಪಶ್ಚಿಮದಿಂದ ತಂದ ದಿವ್ಯಾಸ್ತ್ರಗಳನ್ನು ಝಳಪಿಸಿ ಎದುರಾಳಿಗಳಿಗೆ, ಗುರುಗಳಿಗೆ ದಿಗ್ಭ್ರಮೆ ಹುಟ್ಟಿಸುತ್ತಿದ್ದರು. ಇದನ್ನು ನೋಡಿ ಅನೇಕ ಸಾರಿ ಕಿ.ರಂ. ಕೂಡ ಕಂಗಾಲಾಗಿ ಹೋಗುತ್ತಿದ್ದ ಹಾಗೆ ಕಾಣುತ್ತದೆ. ಸುಮ್ಮನೆ ಕುತೂಹಲಕ್ಕೆ ಪಾಂಡವರು ನಡೆಸಿದ ರಾಜಸೂಯ ಯಾಗದಲ್ಲಿ ಹಿರಿಯರಾದ ದ್ರೋಣ, ಭೀಷ್ಮರೂ ಕೂಡ ಕೃಷ್ಣನಿಗೆ ಅಗ್ರಪೂಜೆ ನೀಡುವಂತೆ ಒತ್ತಾಯಿಸುತ್ತಾರೆ. ಬ್ರಾಹ್ಮಣನೂ ಅಲ್ಲದ, ರಾಜನೂ ಅಲ್ಲದ ಗೋವಳಿಗನೊಬ್ಬ ಅದ್ಹೇಗೆ ಅಗ್ರಪೂಜೆಗೆ ಅರ್ಹ ಎಂಬುದು ಸರೀಕರ ಆಕ್ಷೇಪವಾಗುತ್ತದೆ. ಕ್ಷತ್ರಿಯರ ಬಲ, ಬ್ರಾಹ್ಮಣರ ವಿದ್ವತ್ತು ಎರಡರಲ್ಲೂ ಎತ್ತರದವನು ಕೃಷ್ಣ ಮಾತ್ರ ಎಂದು ಭೀಷ್ಮ,ದ್ರೋಣರು ಷರಾ ನುಡಿಯುತ್ತಾರೆ. ಡಿ. ಆರ್. ಹಾಗೆ ತನ್ನ ಉರಿ ಉರಿವ ಬೌದ್ಧಿಕ ಸಾಹಸಗಳಿಂದಾಗಿ ತನ್ನ ಕಾಲದ ಗುರು ಹಿರಿಯರಿಂದ ಅಸೂಯೆ ಭರಿತ ಅಗ್ರ ಪೂಜೆ ಕೊಂಡವರು.
2
ಡಿ. ಆರ್. ಅಂದರೆ ಏನು? ಅವರನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಎಂದು ಕನ್ನಡ ಬೌದ್ಧಿಕ ಜಗತ್ತು ಆಗಾಗ ತಲೆಕೆಡಿಸಿಕೊಂಡಿದೆ. ಕೆಲವರಿಗೆ ಅವರು ಪರಿಭಾಷೆಗಳ ಸರದಾರನೆಂಬಂತೆ ಕಂಡಿದ್ದಾರೆ. ಇನ್ನೂ ಕೆಲವರಿಗೆ ಜ್ಞಾನದ ಅಗ್ನಿದಿವ್ಯ ಹೊತ್ತವರಂತೆ ಕಂಡಿದ್ದಾರೆ. ಡಿ. ಆರ್.ಗೆ ಕನ್ನಡ ಬರೆಯೋಕೆ ಬರಲ್ಲ. ಈ ಸ್ಟಂಟು ಭಾಳಾ ದಿನ ನಡಿಯಲ್ಲ ಎಂದು ಗೇಲಿ ಮಾಡಿಕೊಂಡು ಕೆಲವರು ಓಡಾಡಿದ್ದಾರೆ. ಅನುಕರಣೆ ಮಾಡಬೇಕೆಂದವರು; ಇಂಥಾ ಚಂಚಲ ಮನುಷ್ಯನನ್ನು ಹೇಗೆ ಹಿಂಬಾಲಿಸುವುದು? ನಡೆವ ದಾರಿಯನ್ನೇ ಮುರಿದು ಮಧ್ಯದಲ್ಲಿ ಹೊಸ ಓಣಿಗೆ ನುಗ್ಗಿ ಬಿಡುವ ತೊಂಡು ಗೂಳಿಯಂತೆ ಹಲವರಿಗೆ ಕಂಡಿದ್ದಾರೆ. ರೂಮಿಯ ಸಾಗರರೂಪಿ ಮೊರೆತದ ಪ್ರೇಮವನ್ನು ಕಂಡು ಗುರು ಶಂಮ್ಸ್ ತಬ್ರೇಝ್ ಥರ ಥರ ನಡುಗುತ್ತಿದ್ದನಂತೆ. ಡಿ. ಆರ್.ರ ಬೌದ್ಧಿಕ ಪ್ರೇಮ ಅವರ ಗುರು ಶಿಷ್ಯರಿಬ್ಬರಿಗೂ ತಬ್ರೇಝ್‌ನ ಸ್ಥಿತಿಯಂತೆಯೇ ಅನ್ನಿಸಿದೆ. ಎಲ್ಲೋ ಕೆಲವರಿಗೆ ಮಾತ್ರ ಡಿ. ಆರ್. ದಾರಿ ತೋರುವ ಕೈ ಮರದಂತೆ ಕಂಡಿರಬಹುದು. ಅಲೆಮಾರಿ ಪಶುಪಾಲಕ ಸಮುದಾಯಗಳಲ್ಲಿ ನಿದ್ದೆ ಬಾರದ ಕೆಲವು ಮುದುಕರು ಎತ್ತರದ ಜಾಗದಲ್ಲಿ ಕೂತು ಕತ್ತಲ ಆಗಸವನ್ನು ದಿಟ್ಟಿಸುತ್ತಾರಂತೆ. ಆಕಾಶದ ಯಾವುದೋ ಮೂಲೆಯಲ್ಲಿ ಮಿಂಚು ಕಂಡರೆ ಬೆಳಗ್ಗೆ ಕುರಿಮಂದೆಯನ್ನು ಮಿಂಚಿದ ದಿಕ್ಕಿಗೆ ತಿರುಗಿಸಿ ನಡೆಯುತ್ತಾರಂತೆ. ಮಿಂಚಿದ ಗಮ್ಯ ಸ್ಥಾನಕ್ಕೆ ಮುಟ್ಟುವ ಹೊತ್ತಿಗೆ ನೆಲ ಹಸಿರಾಗಿರುತ್ತದೆ ಎಂಬುದು ಅವರ ನಂಬಿಕೆ.
ಲಂಕೇಶರು ಮರುಭೂಮಿಯ ಒಂಟೆಗಾಹಿಗಳ ಕುರಿತು ಹೀಗೆ ಬರೆದಿದ್ದಾರೆ. ಡಿ. ಆರ್. ಅನೇಕ ಸಾರಿ ಹೀಗೆ ಮಿಂಚುಗಳ ದಾರಿ ತೋರುವ ಕೈ ಮರದಂತೆ ಕಾಣುತ್ತಾರೆ. ಅವಸರ್ಪಿಣಿ ಅವಸ್ಥೆಗೆ ಸಿಕ್ಕಿದ ಕನ್ನಡ ವಿದ್ವತ್ ಪರಂಪರೆ ಕೈ ಮರ ತೋರಿದ ಕಡೆ ನಡೆವ ಸಾಹಸ ಮಾಡುವುದಿರಲಿ, ಆ ಕಡೆ ನೋಡುವುದಕ್ಕೆ ಥರ ಥರ ನಡುಗಿದರೆ ಏನು ಮಾಡುವುದು?. ಅನೇಕರು ಡಿ. ಆರ್. ಸಾಹಸಗಳೆಲ್ಲ ಕೃತಕ, ಹುಸಿ, ಸಂಸ್ಕೃತಿಯೊಂದು ತನಗೆ ಬೇಕಾದುದನ್ನು ಸೃಷ್ಟಿಸಿಕೊಳ್ಳುತ್ತದೆ ಎಂಬ ಸೃಷ್ಟಿ ತತ್ವವನ್ನು ನಾಜೂಕಾಗಿ ಮಂಡಿಸುತ್ತಾರೆ. ತನ್ನ ಓರಗೆಯವರಾಗಲಿ, ಶಿಷ್ಯರಾಗಲಿ ಡಿ.ಆರ್. ತೋರಿದ ಕಡೆ ನಡೆಯಲಿಲ್ಲ. ಅವರ ಜ್ಞಾನದ ಹಸಿವನ್ನು ತನ್ನ ಹಸಿವು ಎಂದುಕೊಳ್ಳದ ನಾವು ಮತ್ತು ನಮ್ಮ ನಾಡು ಅದರಿಂದ ಕಳೆದುಕೊಂಡದ್ದೇನು ಎಂಬ ಕುರಿತು ಸಮರ್ಪಕ ಮೌಲ್ಯ ಮಾಪನ ನಡೆಯಬೇಕಾಗಿದೆ.
ನಾಡಿನ ಜ್ಞಾನಶಿಸ್ತುಗಳು ಹೊಸ ನೀರಿಲ್ಲದೆ ಕೊಳೆಯಲಾರಂಭಿಸಿವೆ. ಸ್ವಂತ ಸೃಷ್ಟಿಸುವ ಶಕ್ತಿಯಿಲ್ಲದ ಪಾಂಡುವಿನಂತಾಗಿದೆ ಎಂದು ಒಮ್ಮಿಮ್ಮೆ ಅನ್ನಿಸುತ್ತದೆ. ದೂರ್ವಾಸ ಮಂತ್ರಗಳೂ ದಕ್ಕುತ್ತಿಲ್ಲ, ಕೃಷ್ಣ ದ್ವೈಪಾಯನರೂ ಸಿಗುತ್ತಿಲ್ಲ. ದುಡ್ಡು ಕೊಟ್ಟು ಬ್ರಾಹ್ಮಣರಿಂದ ಮಕ್ಕಳನ್ನು ಪಡೆಯಲು ವ್ಯವಸ್ಥೆ ಮಾಡು ಎಂದು ತಾಯಿ ಸತ್ಯವತಿಗೆ ಭೀಷ್ಮ ಹೇಳುತ್ತಾನೆ. ಇತ್ತ ಪಾಂಡುವೂ ಕುಂತಿಗೆ ಅದೇ ಮಾತುಗಳನ್ನು ಹೇಳುತ್ತಾನೆ. ಭೀಷ್ಮನದು ಹೆಣ್ಣನ್ನು ಕೂಡದ ವ್ರತ. ಪಾಂಡುವಿನದು ಹುಟ್ಟಿಸಲಾಗದ ಶಾಪ. ಹೇಗೆ ನಡೆದೀತು ಮುಂದೆ? ಕನ್ನಡದ ಜ್ಞಾನದ ಬಂಡಿಗೆ ಯಾರು ಕುತ್ತಿಗೆ ಕೊಡಬೇಕು? ಬಂಡಿ ಮುಂದಕ್ಕೆ ಚಲಿಸದೆ ನಿಂತರೆ ಗೆದ್ದಲು ಹತ್ತುವುದಿಲ್ಲವೇ? ಡಿ. ಆರ್. ಒಮ್ಮೆ ‘‘ತರ್ಕ ತಟಕ್ಕನೆ ಕೊಳೆಯುತ್ತದೆ. ಕೊಳೆತ ಕೂಡಲೇ ಕಾವ್ಯ ಹುಟ್ಟುತ್ತದೆ’’ಅಂದಿದ್ದರು. ಪ್ಲೇಟೋ ಮೌನವಾದರೆ ಹೋಮರನಿಗೆ ಬಾಯಿ ಬರುತ್ತದೆ ಅಂದ ಹಾಗೆ. ತರ್ಕದ ಸಾವು ಹೊಸ ರೂಪಕ, ಪ್ರತಿಮೆಗಳ ಹುಟ್ಟಿಗೆ ಗೊಬ್ಬರ. ಶಂಬಾ ಋಗ್ವೇದದೊಳಗೂ ಪ್ರತಿಮೆಗಳನ್ನು ಹುಡುಕುತ್ತಾರೆ. ಛಂದಸ್ಸು ಅಮರತ್ವದ ಸಂಕೇತ ಎಂದು ವೈದಿಕರು ವರ್ಣಿಸಿದರೆ, ಅಧಿಕಾರದ ಸಂಕೇತ ಎಂದು ಡಿ. ಆರ್. ಭಾವಿಸುತ್ತಾರೆ. ವೈದಿಕರು ಬುದ್ಧನನ್ನೂ ಛಂದಸ್ಸುಗಳ ಬಲೆಗೆ ಬೀಳಿಸಲು ಹೊರಟಿದ್ದರಂತೆ. ಬುದ್ಧ ತಪ್ಪಿಸಿಕೊಂಡು ಶ್ರಮಣನಾದನಂತೆ.
ಭಾರತೀಯ ಬೌದ್ಧಿಕ ಪರಂಪರೆಗಳಲ್ಲಿನ ರಕ್ತ ಸಿಕ್ತ ಕುರುಹುಗಳು ಯುದ್ಧಭೂಮಿಯ ಕೊಲೆಗಳಷ್ಟೇ ಘೋರ. ಹಾಗಂತ ಹೊಸ ಬೆಳಕನ್ನು ಮುಟ್ಟದಿದ್ದರೆ ಜ್ಞಾನವೃಕ್ಷ ಮಡಿಯುತ್ತದೆ. ವೃದ್ಧನಿಗೆ ಮಾತ್ರ ನೆನಪುಗಳು ಸಂಭ್ರಮವೆನ್ನಿಸುತ್ತವೆ. ಪುಟಿಯುವ ಪೋರ ಪೋರಿಯರಿಗೆ ನಾಳೆಗಳದೇ ಕನಸು. ನಾವು ವಿಚಿತ್ರ ಶಾಪ-ಉಶ್ಯಾಪಗಳಲ್ಲಿ ಬಳಲುತ್ತಿದ್ದೇವೆ. ಏರಬೇಕಾದ ವಯಸ್ಸಿನ ಪುರು ಪಿತೃ ಯಯಾತಿಗೆ ಯೌವನದ ಭಿಕ್ಷೆ ನೀಡಿ ಹಣ್ಣುಗಾಯಾಗಿ ದ್ದಾನೆ. ಇಬ್ಬರಿಗೂ ಹುಟ್ಟಿಸುವ ಶಕ್ತಿಯಿಲ್ಲ. ಹೇಗೆ ನಡೆದೀತು ನಾಡು ಮುಂದೆ?
ಡಿ. ಆರ್. ಬೌದ್ಧಿಕ ಸಾಹಸಕ್ಕೆ ಹೊಸ ಭಾಷೆ ಅಗತ್ಯವಾಗಿತ್ತು. ಜೊತೆಗೆ ಕಥನದ ಮಾದರಿಯೊಂದನ್ನು ಅಳವಡಿಸಿಕೊಡರು. ಅದು ಕಥಾ ಸರಿತ್ಸಾಗರದ ಮಾದರಿ. ಜೈನ ಮೀಮಾಂಸೆಯ ಮಾದರಿ. ವಡ್ಡಾರಾಧನೆಯ ಮಾದರಿ ಕೂಡ. ಧರ್ಮದಿಂದ ವಿಜ್ಞಾನದವರೆಗೆ, ಇತಿಹಾಸ ಮತ್ತು ದೃಷ್ಟಾಂತಗಳ ಚುಂಗು ಹಿಡಿದು ರೂಪಕಗಳ ನಕಾಶೆ ಬಿಡಿಸಿ ಎರಕ ಹೊಯ್ದರು. ಭಾಷೆಯೆಂಬುದು ವ್ಯಾಖ್ಯಾನಕಾರನಿಗೆ, ಆ್ಯಕ್ಟಿವಿಸ್ಟನಿಗೆ ಸಂಭ್ರಮ. ಅದೊಂದು ವಿಲಾಸ. ಅನುಭಾವಿಗೆ ಸೂತಕ. ಬುದ್ಧನಿಗೆ ಭಾಷೆ ಎಂಬುದು ಸೂತಕ. ನಾಗಾರ್ಜುನನಿಗೆ ಅದೇ ತೆಪ್ಪ, ಕೈಮರ. ಅಲ್ಲಮ ಭಾಷೆಯೆಂಬುದು ಸೂತಕ. ಪ್ರಾಣಘಾತುಕ ಎನ್ನುತ್ತಾನೆ. ಅವನು ಅನುಭಾವಿ. ಬಸವಣ್ಣ ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಬಿಡುತ್ತಾನೆ. ಬಸವಣ್ಣನಿಗೆ ಅದು ಸಂಭ್ರಮ. ವಿಲಾಸ. ಡಿ. ಆರ್. ಕೂಡ ನಾಗಾರ್ಜುನನಂತೆ ವ್ಯಾಖ್ಯಾನಕಾರರು. ಬಸವಣ್ಣನಂತೆ ಆಕ್ಟಿವಿಸ್ಟ್. ಹಾಗಾಗಿ ಶಬ್ದಗಳು ಸೂತಕವಲ್ಲ. ನುಡಿಯು ಮುತ್ತಿನ ಹಾರ, ಸ್ಫಟಿಕದ ಶಲಾಖೆ. ವಾಗ್ವಿಲಾಸದಲ್ಲಿ ಮುಳುಗಿ ಹೋಗುತ್ತಿದ್ದರು. ಅನುಭಾವಿ, ದಾರ್ಶನಿಕರು ಕಂಡುಕೊಂಡಿದ್ದನ್ನು ಅನುಭವಿಸಿದ್ದನ್ನು ದಾಟಿಸಲು ಪರಿತಾಪ ಪಡುವುದಿಲ್ಲ. ಹಿಮ ಹೊದ್ದ ಪರ್ವತದಂತೆ ಸುಮ್ಮನಿರುತ್ತಾರೆ. ವ್ಯಾಖ್ಯಾನಕಾರರಿಗೆ ಮಾತ್ರ ಅಗ್ನಿಯ ಬಟ್ಟೆ ತೊಟ್ಟಂತೆ ಎನ್ನುವ ಹಂಬಲ. ಕನ್ನಡದ ಅನೇಕ ಯೋಗ್ಯರಿಗೆ ಡಿ. ಆರ್. ಭಾಷೆ ಸ್ಫಟಿಕದ ಶಲಾಖೆಂತೆ ಚುಚ್ಚಿದೆ. ಅಷ್ಟು ಯೋಗ್ಯವಲ್ಲದ ಕೃತಿಗಳಿಗೆ ಮುತ್ತಿನ ಹಾರವನ್ನೂ ತೊಡಿಸಿದ್ದಾರೆ. ಸ್ವತಃ ಡಿ. ಆರ್.ಗೆ ಈ ಕುರಿತು ತೀವ್ರ ವ್ಯಾಕುಲವಿತ್ತು. ನುಡಿ ಹಾದರವನ್ನು ವಾಕರಿಕೆಯಿಂದ ನೋಡುವ ಚಿಕಿತ್ಸಕ ಮನೋಭಾವವಿತ್ತು. ತಮ್ಮ ವಿದ್ವತ್ ಬದುಕಿನ ಕಪ್ಪುಚುಕ್ಕೆಗಳ ಕುರಿತು ಮಾತನಾಡಲು ಅವರಿಗೆ ಲಜ್ಜೆಯೇನೂ ಅನ್ನಿಸುತ್ತಿರಲಿಲ್ಲ.
3
ಡಿ. ಆರ್. ಅವರ ಬೌದ್ಧಿಕ ಯಾನದ ನಕಾಶೆಯನ್ನು ಮುಖ್ಯವಾಗಿ ನಾಲ್ಕು ಭಾಗವಾಗಿ ಗುರುತಿಸಬಹದು.
1. ಮಾರ್ಕ್ಸ್‌ವಾದದ ಓದು ಮತ್ತು ವಿಮರ್ಶಾ ಪ್ರಯೋಗಗಳು
2. ವಸಾಹತು ವಾದಿ ಪ್ರಮೇಯಗಳು, ವಿಸ್ಮತಿ ತತ್ವ ಮತ್ತು ಸಬಾಲ್ಟರ್ನ್ ಚಿಂತನೆಗಳು
3. ಸಮಕಾಲೀನ ಒತ್ತಡಗಳು ಮತ್ತು ಸಮಾಜ ವಿಜ್ಞಾನದ ಆಯಾಮಗಳು
4 ಭಾರತದ ತತ್ವಶಾಸ್ತ್ರದ ಪ್ರಸ್ಥಾನಗಳು ಮತ್ತು ಅವುಗಳ ಚಾರಿತ್ರಿಕ ಅನುಸಂಧಾನಗಳು
ಸಾಹಿತ್ಯ ವಿಮರ್ಶೆಯನ್ನು ಲೋಕ ವಿಮರ್ಶೆಯಾಗಿ ಗ್ರಹಿಸಿದ ಡಿ. ಆರ್. ಅದನ್ನು ವಿವರಿಸುವುದಕ್ಕಾಗಿ ಮಾರ್ಕ್ಸ್‌ವಾದಿ ಪ್ರಮೇಯಗಳನ್ನು ಅಳವಡಿಸಿಕೊಂಡರು. ‘ಅಮೃತ ಮತ್ತು ಗರುಡ’ ಮತ್ತು ಅವರ ಪಿಎಚ್.ಡಿ. ಪ್ರಬಂಧವಾದ ‘ಶಕ್ತಿ ಶಾರದೆಯ ಮೇಳ’ ಕೃತಿಗಳು ಅವರ ಸಾಹಿತ್ಯ ಮತ್ತು ಸಂಸ್ಕೃತಿಗಳ ಕುರಿತಾದ ವಿಮರ್ಶೆಗೆ ಅತ್ಯುತ್ತಮ ಉದಾಹರಣೆಗಳು. ಕಾವ್ಯದ ಒಡಲಲ್ಲಿ ವಿದ್ರೋಹದ ಗುಣ ಇರುತ್ತದೆ ಎಂದು ಗ್ರಹಿಸಿ ಸಾಹಿತ್ಯ ವಿಮರ್ಶೆಗೆ ಹೊರಟರು. ಕುವೆಂಪು ಅವರಂಥ ದೊಡ್ಡ ದಾರ್ಶನಿಕ ಸಾಹಿತಿಗಳ ದೃಷ್ಟಿಕೋನಗಳಲ್ಲಿ ವರ್ಗ ಮತ್ತು ವರ್ಣಗಳ ಕುರಿತಂತೆ ಇರುವ ಮಿತಿಗಳೇನು ಎಂದು ವಿವರಿಸಿದರು. ವರ್ಗ ತತ್ವ ಮತ್ತು ದ್ವಂದ್ವಾತ್ಮಕ ಭೌತವಾದದ ವಿಧಾನಗಳ ಮೂಲಕ ಸಾಹಿತ್ಯ ಕೃತಿಗಳನ್ನು ವಿವರಿಸಿದರು. ಸಾಹಿತ್ಯ ಮತ್ತು ತತ್ವಶಾಸ್ತ್ರಗಳನ್ನು ಮುಖಾಮುಖಿ ಮಾಡಿ ತತ್ವ ಶಾಸ್ತ್ರದ ಗರುಡ ಹಂಬಲದ ತೀವ್ರತೆಯನ್ನು ಗುರುತಿಸಿದರು. ಕಡೆ ಕಡೆಗೆ ‘ಅಮೃತ ಮತ್ತು ಗರುಡ’ ಕೃತಿಯ ಕುರಿತು ಅದು ತನ್ನ ಕೂಸು ಎಂದು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ ಎನ್ನುತ್ತಿದ್ದರು. ಸರಳ, ಏಕಮುಖಿ ನಿಲುವುಗಳ ಕೃತಿ ಎಂಬುದು ಅದಕ್ಕೆ ಕಾರಣ.