ಕೃಷಿ ಮತ್ತು ಕೃಷಿಕ ಒಂಟಿಯಲ್ಲ!
‘‘ಕೃಷಿ ನಮ್ಮ ಕಾಲಕ್ಕೇ ಮುಗಿದು ಹೋಯಿತು, ನಿಮಗಿದು ಸುತಾರಾಂ ಬೇಡ. ನಿಮಗೆ ಪೇಟೆಯ ನೀರು, ಅನ್ನವೇ ರುಚಿ. ವರ್ಷಕ್ಕೊಮ್ಮೆ ಊರಿಗೆ ಬಂದಾಗ ಚಪ್ಪಲಿ ಮೆಟ್ಟಿ ತೋಟಕ್ಕಿಳಿಯುವವರು, ನುಸಿ ಕಚ್ಚಿಸಿಕೊಳ್ಳಲು ಭಯಬೀಳುವವರು... ನಿಮಗೆ ಬೇಡ, ಆಗದು ಆಗದು ಇದು’’ ಎಂದೆಲ್ಲಾ ಹೊಸ ತಲೆಮಾರನ್ನು ನೆಲಕ್ಕೆ ಬರದಂತೆ ತಡೆಯುವ ಹಿರಿಯರೀಗ ಮುಸಿ ಮುಸಿ ನಗುವಂತಾಗಿದೆ. ಭೂಮಿ ತೋಟ ಮಟ್ಟಸ ಮಾಡಿ ಸೈಟು ಮಾಡುವ, ಮೂರುಕಾಸಿಗೆ ಮಾರಾಟ ಮಾಡಿ ನೀವು ನಮ್ಮೆಂದಿಗೆ ಬೆಂಗಳೂರಿಗೆ ಬಂದುಬಿಡಿ, ನಿಮ್ಮ ವರ್ಷದ ಆದಾಯವನ್ನು ನಾವು ತಿಂಗಳಲ್ಲಿ ಸಂಪಾದಿಸುತ್ತೇವೆ, ನಿಮ್ಮದು ಸೆಗಣಿ, ಕೆಸರು, ಗಂಜಲ, ಸೊಳ್ಳೆಯ ಸಾಮ್ರಾಜ್ಯ, ನಮ್ಮದು ಇಪ್ಪತ್ನಾಲ್ಕು ಗಂಟೆ ಎ.ಸಿ. ಹವೆ ಎಂದೆಲ್ಲಾ ಸಾಂಪ್ರದಾಯಿಕ ರೈತಾಪಿಗಳನ್ನು ಟೀಕಿಸುತ್ತಿದ್ದ ಕಿರಿಯರೇ ಈಗ ಕೊರೋನ ನೆಪವೊಡ್ಡಿ ಹಳ್ಳಿಕಡೆ ವಾಲುತ್ತಿದ್ದಾರೆ. ಬೆಂಗಳೂರಿನ ಸಹವಾಸವೇ ಬೇಡ, ಭೂಮಿ ಮಾರುವುದು ಬೇಡ, ಇರುವುದನ್ನೇ ಹಂಚಿಕೊಂಡು ಇಲ್ಲೇ ಬದುಕುವ ಎನ್ನುವ ಪದವೀಧರರು, ಟೆಕ್ಕಿಗಳು, ಡಬ್ಬಲ್ ಗ್ರಾಜುವೇಟ್‌ಗಳು ಹಳ್ಳಿಯ ಮೊಗಸಾಲೆಯಲ್ಲಿದ್ದಾರೆ.
ಕೃಷಿರಂಗ, ಅದರಲ್ಲೂ ಭಾರತೀಯ ಕೃಷಿ ಒಂಟಿಯಲ್ಲ. ಕೃಷಿಕ ಯಂತ್ರ, ನಗರ, ಮಾರುಕಟ್ಟೆ ಪ್ರವೇಶ ಮಾಡುವವರೆಗೆ ಈ ನೆಲದ ಯಾವುದೇ ಬೆನ್ನಿ-ಬೇಸಾಯ ಅದು ಕೂಡು ಸಾಂಘಿಕ ಪ್ರಕ್ರಿಯೆಯೇ ಆಗಿತ್ತು. ಗದ್ದೆಯಲ್ಲಿ ಉಳುಮೆ ಮಾಡುವ ನೇಗಿಲು, ಬಿತ್ತುವ ಬೀಜ, ಅದರ ನಾಟಿ, ಕೊಯ್ಲು, ಸಂಗ್ರಹ- ಹೀಗೆ ಪ್ರತಿ ಹಂತದಲ್ಲೂ ರೈತನ ಮನೆ ಸೇರುವ ಫಲ-ಉತ್ಪನ್ನ ನೂರಾರು ಮಂದಿಯನ್ನು ಮುಟ್ಟಿಸಿಕೊಂಡೇ ಬರುತ್ತಿತ್ತು. ಪ್ರಭುತ್ವ-ಸರಕಾರದ ಸಹಕಾರ-ಸಂಬಂಧ ಇಲ್ಲದೆಯೇ ಬದುಕಬಹುದು, ಆದರೆ ಅಕ್ಕಪಕ್ಕದವರ ಸಹಾಯ, ಸಂಬಂಧ ಇಲ್ಲದೆಯೇ ಹಳ್ಳಿಯಲ್ಲಿ ರೈತರಿಗೆ ಬದುಕಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಆಗ ಕೃಷಿವಲಯದಲ್ಲಿತ್ತು.
ಕರಾವಳಿ-ಮಲೆನಾಡು ಕೃಷಿವಲಯದಲ್ಲಿ ರೈತಾಪಿಗಳ ಮನೆ ಬಯಲು ಸೀಮೆಗಳಂತೆ ಒಂದೇ ಕಡೆ ಕೋದುಕೊಂಡು ಇರುವುದಿಲ್ಲ. ಬಯಲುಸೀಮೆಯ ಊರುಗಳ ಕಲ್ಪನೆಯೇ ಬೇರೆ. ಅಲ್ಲಿ ಹೊಲ-ತೋಟ-ತೋಪುಗಳು ಎಲ್ಲೆಲ್ಲೊ ಇದ್ದು ವಾಸ್ತವ್ಯ ಎಲ್ಲರದ್ದೂ ಒಂದೇ ಕಡೆ ಇರುತ್ತದೆ. ದಕ್ಷಿಣದಲ್ಲಿ ಹೀಗಿಲ್ಲ. ಹಿಡುವಳಿಗಳಲ್ಲೇ ಮನೆಗಳಿರುತ್ತವೆ. ಕೆಲವೊಮ್ಮೆ ಆ ಮನೆಗಳು ಮೈಲುಗಟ್ಟಲೆ ಅಂತರದಲ್ಲಿರಬಹುದು. ಯಾವುದೋ ಕಾಡುಗುಡ್ಡೆಯ ಇಳಿಜಾರು ಪ್ರಪಾತದ ಸಂಧಿಗಳಲ್ಲಿ ಒಂದೆಕ್ರೆ-ಎರಡೆಕ್ರೆ ಕೊರಕಲು ಜಮೀನನ್ನು ಶತಶತಮಾನಗಳ ಹಿಂದೆಯೇ ಕೃಷಿ ಯೋಗ್ಯವನ್ನಾಗಿಸಿ, ಪಹಣಿ ಪಡೆದು ಅಲ್ಲೇ ವಾಸ್ತವ್ಯ ಹೂಡಿದ ಪರಂಪರೆ ಇಲ್ಲಿಯದು. ಕರೆಂಟು, ರಸ್ತೆ, ಟೆಲಿಫೋನು- ಹೀಗೆ ಆಧುನಿಕ ಕಾಲದ ಯಾವುದೇ ಸೌಲಭ್ಯಗಳಿಲ್ಲದ, ತಲೆಹೊರೆಯಾಗಿಯೇ ಎಲ್ಲವನ್ನೂ ನಿಭಾಯಿಸುವ, ವಾರಕ್ಕೊಮ್ಮೆ ನಾಗರಿಕ ಪ್ರಪಂಚಕ್ಕೆ ಬಂದುಹೋಗುವ, ಬರೀ ಒಂದು ಬೆಂಕಿಪೆಟ್ಟಿಗೆಗೂ ಐದಾರು ಮೈಲು ನಡೆಯುವ, ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆ-ನದಿಗಳಿಂದ ನಿರ್ಬಂಧಿಸಲ್ಪಡುವ, ಕ್ರೂರ ಕಾಡುಪ್ರಾಣಿಗಳ ಉಪಟಳಕ್ಕೆ ತಾವೇ ಉಪಾಯ ಕಂಡುಕೊಂಡು ನಾಗರಿಕ ಲೋಕದ ಪಾಲಿಗೆ ಅಜ್ಞಾತವಾಗಿ ಇದ್ದೂ ಇಲ್ಲದಂತೆ ಬದುಕುವ ವನವಾಸಿಗಳಿವರು.
ಇಂಥ ‘ನಿರ್ಜನ ಕೃಷಿಕರು’ ಕರ್ನಾಟಕದ ಕರಾವಳಿ, ಮಲೆನಾಡು, ಘಟ್ಟ, ಅರೆಬಯಲುಸೀಮೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ. ಇಂಥವರನ್ನು ಹುಡುಕುವುದು, ಅವರ ಕೃಷಿ, ಬದುಕಿನ ಸವಾಲುಗಳನ್ನು ಗಮನಿಸುವುದು, ಅವರ ಬಾಯಿಂದಲೇ ಕಾಡುಕಥೆಗಳನ್ನು ಕೇಳುವುದು, ಅವರ ಬೆನ್ನಿಗೆ ನಿಂತು ಅವರ ತೋಟದೊಳಗೆ ನುಸುಳಿ ನಡೆದು ಕಲ್ಲು ಬರೆ ದರೆಗಳನ್ನೇರಿ ಕಾಡು ಸುಳಿದು ನೀರತೊರೆಗಳಿಗೆ ತಲೆ ಇಡುವುದು-ಇವೆಲ್ಲಾ ನಾನು ಆಗಾಗ ಅನುಭವಿಸಿದ್ದೆ. ಬೇರೆ ಬೇರೆ ಕಡೆ ಬರೆದಿದ್ದೆ. ಆಧುನಿಕ ತಲೆಗಳಿಗೆ ಇದೂ ಒಂದು ರೀತಿ ಹಸಿರು-ಕೃಷಿ ಟೂರಿಸಂ.
ಇಂಥ ಕಾಡುಮನೆಗಳಿಂದಲೇ ಹೊರಬಂದು ಶಾಲೆ ಕಲಿತ ಎಷ್ಟೋ ಮಕ್ಕಳು ಇಂದು ಉದ್ಯೋಗ ಪಡೆದು ನಗರಗಳಲ್ಲಿ ಬದುಕುತ್ತಿದ್ದಾರೆ. ಇಂಥವರು ಊರಿಗೆ ಬಂದಾಗಲೆಲ್ಲಾ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ತೊರೆ, ಜಲಪಾತ, ಕಾಡುಗುಡ್ಡೆ, ದ್ವೀಪ, ಗದ್ದೆ, ಬೆಟ್ಟ, ಹಕ್ಕಿ ಕಾಡಾಡಿಗಳ ಚಿತ್ರಗಳು ಅನ್ಯಾದೃಶ್ಯವಾಗಿರುತ್ತವೆ. ಈಗ ಕೊರೋನ ಸಂದರ್ಭದಲ್ಲಿ ಇಡೀ ದೇಶವೇ ತಲ್ಲಣಗೊಂಡಿರುವಾಗ ಅತ್ಯಂತ ಸುಖ ಸುರಕ್ಷಿತವಾಗಿರುವುದು ಇದೇ ಮನೆ-ಪರಿಸರದಲ್ಲಿ ಹುಟ್ಟಿದ ಮಕ್ಕಳು, ಹಿರಿಯರು. ಆನ್‌ಲೈನ್‌ಗಾಗಿ ಮರ ಹತ್ತುವವರು, ರೇಂಜ್ ಎಳೆದುಕೊಡುವ ಆವಿಷ್ಕಾರಗಳನ್ನು ಶೋಧಿಸುವವರು, ಸ್ಥಾಪಿಸುವವರು ಇಲ್ಲಿಯವರೇ.
ಈಗ ಮೊಬೈಲ್ ರೇಂಜೇ ಸಿಗದ ಇಂತಹ ಮನೆಗೂ ಮೊನ್ನೆ ಮೊನ್ನೆಯವರೆಗೆ ಕಾಡು ಸೀಳಿಕೊಂಡು ಹೋದ ಟೆಲಿಫೋನು ತಂತಿಗಳಿದ್ದವು. ಯಾವಾಗ ಮೊಬೈಲ್ ಟವರ್‌ಗಳು ಬಂದವೋ ಮರದ ಗೆಲ್ಲು ಬಿದ್ದೋ, ಆನೆ ತುಳಿದೋ ತಂತಿಗಳು ಅಡ್ಡಾದಿಡ್ಡಿ ತುಂಡಾಗಿ ಮಣ್ಣಿಗೆ ಬಿದ್ದು ಕುಂಬಾಗಿ ಈಗ ಬರೀ ಪಳೆಯುಳಿಕೆ ತರ ಕಂಬಗಳಷ್ಟೇ ಅಲ್ಲಲ್ಲಿ ಭೂಮಿಗೆ ಗೂಟ ಹೊಡೆದಂತೆ ಸರ್ತ ನಿಂತಿವೆ. ನಗರ-ರಾಜರಸ್ತೆ ಕೇಂದ್ರಿತ ಟವರ್‌ಗಳ ರೇಂಜ್‌ಗಳನ್ನು ಗಿಟ್ಟಿಸಲು ಇಂಥ ಹಳ್ಳಿಗಳ, ನಿರ್ಜನ ಮನೆಗಳ ಮಂದಿ ಮಾಡುವ ಸರ್ಕಸ್ಸು ಕಡಿಮೆಯಲ್ಲ. ಉದಾಹರಣೆಗೆ ನನ್ನನ್ನೇ ನೋಡಿ. ಯಾವಾಗ ಲ್ಯಾಂಡ್‌ಫೋನ್ ಸತ್ತು ವೈಕುಂಠ ಸಮಾರಾಧನೆ ಆಯಿತೋ ಅಂದಿನಿಂದ ಇದ್ದಬದ್ದ ಎಲ್ಲಾ ಕಂಪೆನಿಗಳ ಸಿಮ್ ಹಾಕಿದ್ದಾಯಿತು. ಮೊಬೈಲ್ ಹಿಡಿದಾಗಲೆಲ್ಲಾ ನನ್ನ ಬಾಯಿ ಬೊಬ್ಬೆ ಊರಿಗಿಡೀ ಕೇಳುತ್ತದೆಯೇ ಹೊರತು ಕೇಳಬೇಕಾದವರಿಗೆ ಕೇಳುವುದಿಲ್ಲ!
ನಾನು ಜಾವಗಲ್ಲಿನಲ್ಲಿ ಮೇಷ್ಟ್ರಾಗಿದ್ದಾಗ ಆಗಾಗ ಪೂರ್ಣಚಂದ್ರ ತೇಜಸ್ವಿಯವರ ಮೂಡಿಗೆರೆಯ ಮನೆಗೆ ಹೋಗುತ್ತಿದ್ದೆ. ಒಂದು ಬಾರಿ ತೇಜಸ್ವಿ, ‘‘ಬನ್ನಿ ಬನ್ನಿ ದೇರ್ಲ, ನಿನ್ನೆ ಬೀಸಿದ ಬಿರುಗಾಳಿಗೆ ತೋಟದೊಳಗಿನ ಮರಗಳು ಉರುಳಿ ನಮಗಿಂದು ಕರೆಂಟು ಇಲ್ಲ, ಟೆಲಿಫೋನು ಇಲ್ಲ, ಟಿ. ವಿ. ಕೇಬಲ್ ನೆಟ್‌ವರ್ಕ್ ಸರಿ ಇಲ್ಲ, ಪತ್ರಿಕೆಯೂ ಯಾಕೋ ಬಂದಿಲ್ಲ, ನಾನಿವತ್ತು ಸುಖವಾಗಿದ್ದೇನೆ. ಬನ್ನಿ ಬನ್ನಿ’’ ಅಂದ್ರು.
ಒಂದು ಕಾಲದಲ್ಲಿ ಎಲ್ಲಾ ಕಾಡು, ಹಳ್ಳಿ, ಕುಗ್ರಾಮಗಳ ಮನೆಗಳು ಹೀಗೆಯೇ ಇತ್ತು. ನಿಷ್ಕಲ್ಮಶ, ನಿರುದ್ವಿಗ್ನ ಬದುಕು ಅದು. ದೊರೆಯ ನೆರವು ಬೇಡ, ಆದರೆ ನೆರೆಹೊರೆಯವರ ಸಹವಾಸ, ನೆರವು, ಕನಿಷ್ಠ ಕೂಲಿಯಾಳುಗಳಿಲ್ಲದೆ ಇವರೆಲ್ಲ ಹೇಗೆ ಬದುಕುತ್ತಾರೆ? ತೋಟದ, ಹೊಲದ ಕೆಲಸ ನಿಭಾಯಿಸುತ್ತಾರೆ? ಎಂಬ ಪ್ರಶ್ನೆ ಮೂಡುವುದು ಸಹಜ. ಬಹುಪಾಲು ಇಂಥ ಕಾಡು-ಕುಗ್ರಾಮ ನೆಲೆಯ ಕೃಷಿ ಕುಟುಂಬಗಳಲ್ಲಿ ಬರೀ ಗಂಡ-ಹೆಂಡ್ತಿಯಷ್ಟೇ ಅಲ್ಲ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಮ್ಮ, ಚಿಕ್ಕಪ್ಪ ಅವರ ಇವರ ಎಲ್ಲಾ ಮಕ್ಕಳುಮರಿ ಎಂದು ಹತ್ತು ಹದಿನೈದು ಮಂದಿ ಇರುತ್ತಿದ್ದರು. ಹಟ್ಟಿ ತುಂಬಾ ಹಸುಗಳು, ಗದ್ದೆ ಬೇಸಾಯ, ಸಮೃದ್ಧ ತರಕಾರಿ, ತೋಟದ ಬೆಳೆ, ಹಬ್ಬ ಹರಿದಿನ ಎಲ್ಲಾ ಇರುತ್ತಿತ್ತು. ಎರಡು ವರ್ಷದ ಹಿಂದೆ ಸುಳ್ಯ ತಾಲೂಕಿನ ಗುತ್ತಿಗಾರು, ವಳಲಂಬೆ, ಬಿಳಿಮಲೆ ಪ್ರದೇಶಕ್ಕೆ ಹೋಗಿದ್ದೆ. ಸುಮಾರು ಮನೆಗಳಲ್ಲಿ ವರ್ಷವಿಡೀ ಕಾಡೊಳಗಡೆಯ ಸಹಜ ಒರತೆಯ ಝರಿ ನೀರನ್ನೇ ಅಡಿಕೆಯ ಸೀಳುದಂಬೆ ಅಥವಾ ಪೈಪ್ ಮೂಲಕ ಹಾಯಿಸಿ ಮನೆಯ ಬಚ್ಚಲು, ತೋಟಗಳಿಗೆ ಬಳಸುವ ಕ್ರಮ; ಆ ಶುದ್ಧ ಸಿಹಿ, ತಂಪು ನೀರ ಸುಖ ನೋಡಿ ಅಚ್ಚರಿಪಟ್ಟೆ. ಇತ್ತೀಚೆಗೆ ಖ್ಯಾತ ಪ್ರಗತಿಪರ ಚಿಂತಕ, ಲೇಖಕ ಡಾ ಪುರುಷೋತ್ತಮ ಬಿಳಿಮಲೆಯವರ ಊರುಮನೆ ಅರ್ಥಾತ್ ಕಾಡುಮನೆಯಂಗಳದಲ್ಲಿ ಅವರ ಎರಡು ಪುಸ್ತಕಗಳ ಬಿಡುಗಡೆಯಿತ್ತು. ರಾಜ್ಯ, ರಾಷ್ಟ್ರಮಟ್ಟದ ಅನೇಕ ಲೇಖಕರು, ಚಿಂತಕರು ಅಂದು ಕಗ್ಗಾಡ ಕಿರುದಾರಿ-ರಸ್ತೆಯನ್ನು ಹೊಕ್ಕು ಆ ಕಾಡುಮನೆ ಸೇರಿದ್ದರು. ಹೊಸ ಪುಸ್ತಕ, ಗಣ್ಯರ ಮಾತು, ತಾಳಮದ್ದಳೆ ಈ ಎಲ್ಲಾ ಸುಖಗಳಿಗಿಂತ ಹೆಚ್ಚು ಆಪ್ಯಾಯಮಾನವಾದುದು ಅಂದಿನ ಆ ಪರಿಸರ, ಆ ಕಣಿವೆಮನೆಯ ಸುತ್ತಲಿನ ಕಾಡು, ಏಕಾಂತ.
ಇಂಥ ಮನೆಯ ಮಕ್ಕಳು ಓದು, ಉದ್ಯೋಗ ದಾರಿಯಲ್ಲಿ ದಿಲ್ಲಿ, ಅಮೆರಿಕ, ದುಬೈ ಎಲ್ಲಿಗೇ ಹೋಗಲಿ ಭಾವನಾತ್ಮಕವಾಗಿ ನಿರಂತರ ಊರೊಟ್ಟಿಗೆ ಬೆಸೆದುಕೊಂಡೇ ಇರುತ್ತಾರೆ. ದಿಲ್ಲಿಯಿಂದ ಬಂದು ಇರುವ ಒಂದೆರಡು ದಿನಗಳಲ್ಲಿ ಓರಗೆಯವರನ್ನು ಸೇರಿಸಿ, ಅವರ ಮಕ್ಕಳನ್ನು ಕೂರಿಸಿ ಕೂಡುಕೂಟ ಕಟ್ಟಿಕೊಂಡು ಜಗಲಿಯಲ್ಲಿ ಯಕ್ಷಗಾನ ಕುಣಿಯುವುದೋ, ಹಟ್ಟಿಯ ಬೈಪಣೆಯಲ್ಲಿ ಹಲಸಿನಹಣ್ಣು ಬಿಡಿಸಿಟ್ಟು ತಿನ್ನುವುದೋ, ಬಚ್ಚಲುಮನೆಯ ಒಲೆಯಲ್ಲಿ ಗೇರುಬೀಜ ಸುಡುವುದೋ, ಅದೇ ಬಚ್ಚಲಿನ ಗೋಡೆಯ ಮೇಲೆ ತಾವೇ ಹಿಂದೆ ಬಾಲ್ಯದಲ್ಲಿ ಬರೆದ ಇದ್ದಿಲ ಮಸಿ ಬರಹಗಳನ್ನು ಓದುವುದರಲ್ಲೋ ಸಿಗುವ ಸುಖ ಆಧುನಿಕ ಮಹಾನಗರದ ಯಾವುದೇ ಮೂಲೆಯಲ್ಲಿ ಸಿಗಲಾರದು!
ಹೀಗೆ ಬಂದು ನಾಲ್ಕೈದು ದಿನ ಇದ್ದು ನಾಟಿಕೋಳಿ ಸಾರಲ್ಲಿ ತಿಂದುಂಡು, ತನ್ನ ಬಂಧು ಬಳಗವನ್ನು ಮಾತನಾಡಿಸಿ, ಪ್ರೈಮರಿ ಶಾಲೆಯ ಅಂಗಳಕ್ಕಿಳಿದು ಹಳ್ಳಿಯ ಮೇಷ್ಟ್ರುಗಳನ್ನು ಮಾತನಾಡಿಸಿ ತಿರುಗಿ ಬಸ್ಸೋ, ರೈಲೋ, ವಿಮಾನವೋ ಹತ್ತಿ ಮಹಾನಗರ ಸೇರಿಕೊಳ್ಳುವವರ ಸುಖ ಒಂದು ಬಗೆಯಾದ್ರೆ ಅದೇ ಹಳ್ಳಿಮನೆಯಲ್ಲಿ ಜೀವನಪರ್ಯಂತ ಉಳಿಯುವ ಹಿರಿಯರನ್ನು ಕೇಳಿನೋಡಿ. ಕೃಷಿಕನಾಗಿ ಲಾಗಾಯ್ತಿನಿಂದ ಇಲ್ಲೇ ಉಳಿದುದಕ್ಕೆ ಬೇಸರವಿದೆಯಾ? ‘‘ಇಲ್ಲ ಇಲ್ಲ, ದುಡ್ಡುಕಾಸು ಕೂಡಿಸಿಲ್ಲ, ಅರಮನೆ ಕಟ್ಟಿಸಿಲ್ಲ, ಐಷಾರಾಮಿ ಕಾರು ಖರೀದಿಸಿಲ್ಲ, ಆದ್ರೂ ಸುಖವಾಗಿದ್ದೀವಿ, ಸಂತೃಪ್ತ ಜೀವನ’’ ಎನ್ನುತ್ತಾರೆ ಅವರು.
ಕೋವಿಡ್ ನಿಮಿತ್ತ ಹಳ್ಳಿಗೆ ಮರಳಿ ಬಂದ ಮಗ ವರ್ಕ್ ಫ್ರಂ ಹೋಂ ಆದರೂ ದಿನಾ ಮಧ್ಯಾಹ್ನ ಅರ್ಧ ಗಂಟೆ ಚಾವಡಿಯ ಕಾವಿ ನೆಲದಲ್ಲಿ ಕಾಲುಚಾಚಿ ಮಲಗುತ್ತಾನೆ. ಕಚೇರಿಯಲ್ಲಿ ಹೀಗೆ ಮಲಗುವಂತಿಲ್ಲ. ಇಂಥ ಮಲಗುಸುಖ ಇಲ್ಲದೆಯೇ ಎಷ್ಟೋ ವರ್ಷಗಳೇ ಆದವು ಎನ್ನುತ್ತಾನೆ. ಅದೇ ಚಾವಡಿಯ ಈಸಿಚೇರ್‌ನಲ್ಲಿ ಉಂಡು ವರಗಿದ ಅಪ್ಪಯ್ಯ ಹೇಳುತ್ತಾರೆ- ‘‘ನಾನು ಮಧ್ಯಾಹ್ನ ಹೀಗೆ ಮಲಗಿ ಆರಾಮವಾಗಿರದ ದಿನವೇ ಇಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಕೃಷಿ. ಕೃಷಿಯನ್ನು ನಾವು ಮಾಡುವುದು, ಅದು ನಮ್ಮನ್ನು ನಿರ್ದೇಶಿಸುವುದಲ್ಲ’’ ಎಂದು. ಹೌದಲ್ಲ. ನಮ್ಮ ಹಬ್ಬಗಳು ಇರಬಹುದು, ಕೃಷಿಕರು ಮದುವೆ, ಮುಂಜಿಗೆ ದಿನವಿಡುವಾಗಲೂ ಹಾಗೆಯೇ. ಕೃಷಿಗೆ ಹೆಚ್ಚು ಒತ್ತಡ, ಅನಿವಾರ್ಯಗಳಿಲ್ಲದ ದಿನಗಳನ್ನೇ ಆಯ್ಕೆ ಮಾಡುತ್ತಾರೆ. ಬೇಸಾಯ, ಕೊಯ್ಲು, ತೋಟದ ಕೆಲಸಗಳೇ ಇಲ್ಲದಿರುವ ನಡು, ಬಿಡುವುಗಳಲ್ಲೇ ಇಂಥ ಹಬ್ಬ, ಆಚರಣೆ, ಕೌಟುಂಬಿಕ ಕಾರ್ಯಕ್ರಮಗಳು ಹೆಚ್ಚಾಗಿ ಬರುತ್ತವೆ.
ರೈತ ಪ್ರತಿಷ್ಠೆಗಳು ನಿಧಾನವಾಗಿ ಬದಲಾಗುತ್ತವೆ. ಕುಟ್ಟಿಕುಮೇರು ರಾಘಣ್ಣನ ಮನೆ ಮುಂದೆ ನಿನ್ನೆ ಮೊನ್ನೆಯವರೆಗೆ ವಿಶಾಲವಾದ ಭತ್ತದ ಗದ್ದೆಗಳು ಇದ್ದವು. ಅವರ ಗುತ್ತಿನ ಮನೆಗೆ ಆ ವಿಸ್ತಾರ ಗದ್ದೆಯಂಚಿನ ನಡು ಬದುಕಟ್ಟಪುಣಿಯಲ್ಲಿ ನಡೆದು ಹೋಗಿ ಹೊಳೆ ದಾಟಿ ಮೆಟ್ಟಲೇರಿ ಅಂಗಳಕ್ಕೆ ಸೇರಿ ಗುತ್ತಿನ ಏರು ಜಗಲಿ, ಚಾವಡಿಗೆ ಹತ್ತುವುದೇ ಒಂದು ಸೊಗಸು. ಎರಡು ವರ್ಷದ ಹಿಂದೆ ಅವರು ಆ ಕಟ್ಟಪುಣಿ-ಬದುವನ್ನೇ ನೂರಾರು ಲೋಡು ಕೆಂಪುಮಣ್ಣು ಹಾಕಿ ಎತ್ತರ-ಅಗಲಗೊಳಿಸಿ, ಮನೆಯೆದುರ ಅಡ್ಡತೋಡಿಗೆ ಮೋರಿ ಕೂರಿಸಿ ನೇರವಾಗಿ ಗುತ್ತಿನ ಮನೆಗೇ ರಸ್ತೆ ಮಾಡಿದ್ರು. ರಾಘಣ್ಣನ ಉದ್ದೇಶ ಮಹಾಮನೆಯ ಅಂಗಳದಲ್ಲಿ ಹೊಸ ಕಾರು ನಿಲ್ಲಿಸುವುದು! ಯಾವ ಗುತ್ತಿನ ಮನೆಯಂಗಳದಲ್ಲಿ ಕಂಬಳದ ಎತ್ತು, ಅಂಕದ ಕೋಳಿ, ಬೈಹುಲ್ಲಿನ ಬಣವೆ, ವಿಶಾಲವಾದ ಹಟ್ಟಿ, ಜಗಲಿಯಲ್ಲಿ ಪೇರಿಸಿಟ್ಟ ಅಕ್ಕಿಮುಡಿ ಇವೆಲ್ಲಾ ಪ್ರತಿಷ್ಠೆಯ ಭಾಗವಾಗಿದ್ದವೋ ಅವೆಲ್ಲ ಈಗ ಹಿಂದೆ ಸರಿದು, ಕಾರು, ರಸ್ತೆ ಅಹಂನ ಭಾಗಗಳಾಗಿವೆ.
‘‘ಕೃಷಿ ನಮ್ಮ ಕಾಲಕ್ಕೇ ಮುಗಿದು ಹೋಯಿತು, ನಿಮಗಿದು ಸುತಾರಾಂ ಬೇಡ. ನಿಮಗೆ ಪೇಟೆಯ ನೀರು, ಅನ್ನವೇ ರುಚಿ. ವರ್ಷಕ್ಕೊಮ್ಮೆ ಊರಿಗೆ ಬಂದಾಗ ಚಪ್ಪಲಿ ಮೆಟ್ಟಿ ತೋಟಕ್ಕಿಳಿಯುವವರು, ನುಸಿ ಕಚ್ಚಿಸಿಕೊಳ್ಳಲು ಭಯಬೀಳುವವರು... ನಿಮಗೆ ಬೇಡ, ಆಗದು ಆಗದು ಇದು’’ ಎಂದೆಲ್ಲಾ ಹೊಸ ತಲೆಮಾರನ್ನು ನೆಲಕ್ಕೆ ಬರದಂತೆ ತಡೆಯುವ ಹಿರಿಯರೀಗ ಮುಸಿ ಮುಸಿ ನಗುವಂತಾಗಿದೆ. ಭೂಮಿ ತೋಟ ಮಟ್ಟಸ ಮಾಡಿ ಸೈಟು ಮಾಡುವ, ಮೂರುಕಾಸಿಗೆ ಮಾರಾಟ ಮಾಡಿ ನೀವು ನಮ್ಮೆಂದಿಗೆ ಬೆಂಗಳೂರಿಗೆ ಬಂದುಬಿಡಿ, ನಿಮ್ಮ ವರ್ಷದ ಆದಾಯವನ್ನು ನಾವು ತಿಂಗಳಲ್ಲಿ ಸಂಪಾದಿಸುತ್ತೇವೆ, ನಿಮ್ಮದು ಸೆಗಣಿ, ಕೆಸರು, ಗಂಜಲ, ಸೊಳ್ಳೆಯ ಸಾಮ್ರಾಜ್ಯ, ನಮ್ಮದು ಇಪ್ಪತ್ನಾಲ್ಕು ಗಂಟೆ ಎ.ಸಿ. ಹವೆ ಎಂದೆಲ್ಲಾ ಸಾಂಪ್ರದಾಯಿಕ ರೈತಾಪಿಗಳನ್ನು ಟೀಕಿಸುತ್ತಿದ್ದ ಕಿರಿಯರೇ ಈಗ ಕೊರೋನ ನೆಪವೊಡ್ಡಿ ಹಳ್ಳಿಕಡೆ ವಾಲುತ್ತಿದ್ದಾರೆ. ಬೆಂಗಳೂರಿನ ಸಹವಾಸವೇ ಬೇಡ, ಭೂಮಿ ಮಾರುವುದು ಬೇಡ, ಇರುವುದನ್ನೇ ಹಂಚಿಕೊಂಡು ಇಲ್ಲೇ ಬದುಕುವ ಎನ್ನುವ ಪದವೀಧರರು, ಟೆಕ್ಕಿಗಳು, ಡಬ್ಬಲ್ ಗ್ರಾಜುವೇಟ್‌ಗಳು ಹಳ್ಳಿಯ ಮೊಗಸಾಲೆಯಲ್ಲಿದ್ದಾರೆ.
‘‘ಭೂಮಿ ಇದೆಯಾ’’ ಎಂದು ವಿಚಾರಿಸುವ ಫೋನ್‌ಕಾಲ್‌ಗಳು ನಗರದ ಕಡೆಯಿಂದ ಬರುತ್ತಿವೆ. ಕಳೆದ ಒಂದೆರಡು ತಿಂಗಳಲ್ಲಿ ಐದಾರು ಮಂದಿ ನಗರ ಕೇಂದ್ರಿತ ಗೆಳೆಯರು ನನ್ನಲ್ಲೇ ಒಂದು-ಎರಡು ಎಕರೆ ವಿಸ್ತಾರದ ಕೃಷಿ ಭೂಮಿ ಇದೆಯಾ ಎಂದು ವಿಚಾರಿಸಿದರು. ಅವರಲ್ಲಿ ಪತ್ರಕರ್ತ ಗೆಳೆಯರಿದ್ದರು, ವಕೀಲರಿದ್ದರು, ಟೆಕ್ಕಿಗಳಿದ್ದರು. ಮುಖ ಮುಚ್ಚಿಕೊಂಡು ಉಸಿರುಕಟ್ಟುವ ಸ್ಥಿತಿಯಲ್ಲೇ ಇರಲಾರದೆ ಕೊನೆಯ ನಿಲ್ದಾಣ ಹಳ್ಳಿಕಡೆಯ ಒಂದು ತುಂಡು ಭೂಮಿ ಎಂಬ ಆಸೆ ಅವರದು. ಹಾಗೆ ವಿಚಾರಿಸಿದ್ದ ಕಿರಿಯ ಮಿತ್ರರಲ್ಲಿ ನಾನು ಕೇಳಿದ ಸಹಜ ಪ್ರಶ್ನೆಗಳಿವು: ನಿಮಗೆ ಕೃಷಿ ಗೊತ್ತಿದೆಯಾ? ನೀವು ಕೃಷಿ ಮನೆಯವರಾ? ನಿಮ್ಮ ಪತ್ನಿ, ಮಕ್ಕಳಿಗೆ ಆಸಕ್ತಿಯಾ ಎಂದು. ಹೆಚ್ಚಿನವರು ಕೃಷಿ ಗೊತ್ತಿಲ್ಲದಿದ್ದರೂ ಕೃಷಿ ಕುಟುಂಬದವರೇ. ತನ್ನ ತಂದೆ, ಅಜ್ಜ ಕೃಷಿಕರೆಂದು ಕೃಷಿಯ ಒಂದು ಎಳೆಯನ್ನು ಪರಂಪರೆಗೆ ತಾಗಿಸಿ ಅದನ್ನೊಂದು ಅರ್ಹತೆಯನ್ನಾಗಿಸಲು ಪ್ರಯತ್ನಿಸುವವರು ಮತ್ತು ಅದರ ಆಧಾರದಲ್ಲೇ ನಾವು ಕೃಷಿಯನ್ನು ನಿಭಾಯಿಸಬಲ್ಲೆವು ಎನ್ನುತ್ತಾರೆ. ಕೃಷಿ ಅಷ್ಟೊಂದು ಸುಖ ಸುಲಭ ಎಂದು ಹೇಳಿದ್ದು ಯಾರು? ಅದರ ಕಷ್ಟ-ನಷ್ಟಗಳು ನಿಮಗೆ ಗೊತ್ತಿದೆಯಾ? ಅಂದಾಗ ಅವರ ನಗರದ, ವರ್ತಮಾನದ ನೂರಾರು ಒತ್ತಡ, ಸಂಕಷ್ಟಗಳನ್ನು ವಿವರಿಸಿ ಹಳ್ಳಿಯೇ ನಮಗೆ ಅನುಕೂಲವೆನ್ನುತ್ತಾರೆ.
ಈ ವಿಷಯ ಇಷ್ಟಕ್ಕೆ ಮುಗಿಯುವುದಿಲ್ಲ. ಕೃಷಿ ಕೆಲಸದಲ್ಲಿ ತೊಡಗಿಕೊಂಡಿರುವ ಗ್ರಾಮ್ಯ ಮಹಿಳೆಯರನ್ನು ಗಮನಿಸಿ. ಈ ದೇಶದ ಶೇ. 85 ಮಹಿಳೆಯರು ಇದೇ ವಲಯದಲ್ಲಿ ದುಡಿಯುತ್ತಿದ್ದರೂ ಸ್ವಂತ ಭೂಮಿ ಹೊಂದಿದ ಮಹಿಳೆಯರು ಕೇವಲ ಶೇ. 5 ಮಾತ್ರ. ಬಿತ್ತನೆ, ನಾಟಿ ವಿಷಯಗಳಲ್ಲಿ ‘ಕೈಶಕ್ತಿ’ ಪೊಲ್ಸು ಎಂದು ಹೆಣ್ಣಿನ ಕೈಗುಣಕ್ಕೆ ಬಾಗುವುದುಂಟು. ಆದರೆ ಸ್ವಂತ ಮನೆಯಲ್ಲಿ ಕನಿಷ್ಠ ತರಕಾರಿ ಬೀಜ ಬಿತ್ತಲೂ ಎಡೆಯಿಲ್ಲದ ಸ್ತ್ರೀಯರೇ ನಮ್ಮಲ್ಲಿ ಹೆಚ್ಚು