ಮೊಬೈಲ್ ಕೊಂಡುಕೊಳ್ಳಲು ಸ್ಟಿಕ್ಕರ್ ಮಾರಾಟಕ್ಕಿಳಿದ ವಿದ್ಯಾರ್ಥಿ

Update: 2020-09-15 07:42 GMT

ಮಂಗಳೂರು, ಸೆ.14: ಪ್ರಧಾನಿ ಮೋದಿ ಅವರು ದಿಢೀರ್ ಘೋಷಿಸಿದ ಅವೈಜ್ಞಾನಿಕ ಲಾಕ್‌ಡೌನ್‌ನಿಂದ ಅದೆಷ್ಟೋ ಕೆಳವರ್ಗದ ಜನ, ಕೂಲಿ ಕಾರ್ಮಿಕರು ತುಂಬಾ ಸಂಕಷ್ಟವನ್ನು ಎದುರಿಸಿದರು. ಸಾಕಷ್ಟು ಸಾವು, ನೋವುಗಳು ಸಂಭವಿಸಿದವು. ಆಗಿನಿಂದ ಈವರೆಗೂ ಒಂದು ಹೊತ್ತಿನ ಊಟಕ್ಕೂ ಹಲವು ಕುಟುಂಬಗಳು ಪರದಾಡುತ್ತಿರುವುದು ಸುಳ್ಳಲ್ಲ. ಮಕ್ಕಳಿಗೆ ಕೊರೋನ ಹರಡುವ ಭೀತಿ ಯಿಂದ ಶಾಲೆಗಳು ಇನ್ನೂ ಬಾಗಿಲುಗಳನ್ನು ಮುಚ್ಚಿವೆ. ಶೈಕ್ಷಣಿಕ ವರ್ಷ ಪ್ರಾರಂ ಭವಾಗಿದ್ದು, ಮಕ್ಕಳು ಓದಿನಿಂದ ದೂರ ಉಳಿಯಬಾರದು ಎನ್ನುವ ಸದುದ್ದೇಶದಿಂದ ಆನ್‌ಲೈನ್ ಕ್ಲಾಸ್ ಶುರು ಮಾಡಲಾಗಿದೆ. ಆದರೆ, ಈ ಆನ್‌ಲೈನ್ ಕ್ಲಾಸ್ ಯೋಜನೆ ಕೂಡಾ ಲಾಕ್‌ಡೌನ್‌ನಷ್ಟೇ ಅವೈಜ್ಞಾನಿಕವಾದದ್ದು ಎನ್ನುವು ದಕ್ಕೆ ನಮ್ಮ ಮುಂದೆ ಬೇಕಾದಷ್ಟು ಉದಾಹರಣೆಗಳಿವೆ. ಬಡ ಮಕ್ಕಳಲ್ಲಿ ಈ ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಇನ್ನಷ್ಟು ಕೀಳರಿಮೆಯನ್ನು ಹೆಚ್ಚಿಸುತ್ತಿದೆ ಎನ್ನುವುದು ನಮ್ಮ ಕಣ್ಣ ಮುಂದಿನ ಸತ್ಯ. ತಮ್ಮ ಸಂಕಷ್ಟ ಏನೇ ಇರಲಿ, ಮಕ್ಕಳು ಓದಬೇಕು ಎನ್ನುವ ಮಹದಾಸೆ ಹೊಂದಿದ ಕೆಲವು ಪೋಷಕರು ತಮ್ಮ ಬಳಿ ಇರುವ ಒಡವೆ, ಜಾನುವಾರು ಹಾಗೂ ಮತ್ತಿತರ ವಸ್ತುಗಳನ್ನು ಮಾರಿ ಮೊಬೈಲ್ ಕೊಡಿಸಿದ ಉದಾಹರಣೆಗಳಿಗೇನೂ ಕಮ್ಮಿ ಇಲ್ಲ. ಇಂತಹದೇ ಸಮಸ್ಯೆಗಳಿರುವ ವಲಸೆ ಕೂಲಿಕಾರ್ಮಿಕರ ಕುಟುಂಬದ 6ನೇ ತರಗತಿಯಲ್ಲಿ ಓದುತ್ತಿರುವ ಶ್ರೀನಿವಾಸ್ ಎಂಬ ಬಾಲಕ ಸ್ಟಿಕ್ಕರ್ ಮಾರಾಟಕ್ಕಿಳಿದಿದ್ದಾನೆ. ಇದರಿಂದ ಬಂದ ಹಣದಿಂದ ಮೊಬೈಲ್ ಕೊಂಡುಕೊಳ್ಳಬೇಕು ಎನ್ನುವುದು ವಿದ್ಯಾರ್ಥಿಯ ಮಹದಾಸೆ ಆಗಿದೆ. ಈ ವಿದ್ಯಾರ್ಥಿ ಪತ್ರಿಕೆಯೊಂದಿಗೆ ಮಾತನಾಡಿದ್ದು, ಸಂದರ್ಶನದ ಆಯ್ದ ಭಾಗ ಇಲ್ಲಿದೆ.

►ಯಾವ ತರಗತಿಯಲ್ಲಿ ಓದುತ್ತಿದ್ದೀಯಾ?

-ನಾನು 6ನೇ ತರಗತಿ. ಸರಕಾರಿ ಶಾಲೆಯಲ್ಲಿ ಓದುತ್ತಿದ್ದೇನೆ. ಕೊರೋನದಿಂದಾಗಿ ಶಾಲೆಗೆ ರಜೆ ಇದೆ. ಆದರೆ, ಆನ್‌ಲೈನ್ ಕ್ಲಾಸ್ ನಡೆಯುತ್ತ್ತಿದೆ. ನನ್ನ ಸಹಪಾಠಿಗಳಿಗೆಲ್ಲ ಮೇಷ್ಟ್ರುಗಳು ವಾಟ್ಸ್‌ಆ್ಯಪ್ ಮೂಲಕ ಹೋಮ್‌ವರ್ಕ್ ಕಳುಹಿಸುತ್ತಿದ್ದಾರೆ. ಆದರೆ, ನಮ್ಮ ಬಳಿ ಅಂತಹ ದೊಡ್ಡ ಮೊಬೈಲ್ ಇಲ್ಲ ಮತ್ತು ಅಂತಹ ಮೊಬೈಲ್‌ನ್ನು ಕೊಂಡುಕೊಳ್ಳುವಷ್ಟು ನಮ್ಮ ಪೋಷಕರು ಅನುಕೂಲಸ್ಥರಲ್ಲ. ಲಾಕ್‌ಡೌನ್ ಆದಾಗಿಂದ ನಮ್ಮ ತಂದೆ, ತಾಯಿಗೆ ಕೆಲಸವೂ ಇಲ್ಲ. ಹಾಗಾಗಿ ನಾನು ಸ್ಟಿಕ್ಕರ್ ಮಾರಾಟಕ್ಕಿಳಿದಿದ್ದೇನೆ. ಇದರಿಂದ ಬಂದ ಹಣದಿಂದ ಮೊಬೈಲ್ ಕೊಂಡುಕೊಳ್ಳುವ ಕನಸಿದೆ. ಆದರೆ, ಊಟಕ್ಕೂ ಸಮಸ್ಯೆ ಇರುವುದರಿಂದ ಏನಾಗುತ್ತದೋ ಗೊತ್ತಿಲ್ಲ.

►ಯಾವ ಊರು ನಿಮ್ಮದು?

-ನಮ್ಮದು ಮೂಲತಃ ತೆಲಗು, ಆಂಧ್ರಪ್ರದೇಶ. ನಮ್ಮ ತಂದೆ ತಾಯಿಗಳು ಬಹಳ ವರ್ಷಗಳಿಂದ ಇಲ್ಲಿಯೇ ಬಂದು ನೆಲೆಸಿದ್ದರಿಂದ ನಾನು ಹುಟ್ಟಿ ಬೆಳೆದಿದ್ದೆಲ್ಲ ಇಲ್ಲಿಯೇ. ಇದುವರೆಗೂ ನಾನು ಆಂಧ್ರವನ್ನು ನೋಡಿಯೇ ಇಲ್ಲ. ಹಾಗಾಗಿ ಇಲ್ಲಿನ ಭಾಷೆಗಳೆಲ್ಲ ಬರುತ್ತವೆ. ಈ ಮೊದಲು ನಾವು ಎಕ್ಕೂರಿನ ರೈಲ್ವೆ ಸ್ಟೇಶನ್ ಬಳಿ ಟೆಂಟ್ ಹಾಕಿಕೊಂಡಿದ್ದೆವು. ಆದರೆ, ಅಲ್ಲಿ ನಮ್ಮ ಹಾಗೆ ಬಹಳಷ್ಟು ಜನರು ಟೆಂಟ್ ಹಾಕತೊಡಗಿದ್ದರಿಂದ ಸ್ಥಳೀಯರು ಅಲ್ಲಿಂದ ಓಡಿಸಿದರು. ಹಾಗಾಗಿ ಸದ್ಯ ಮುಡಿಪುವಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದೇವೆ.

►ನೀನು ಸ್ಟಿಕ್ಕರ್ ಮಾರುವುದು ಸ್ವಾಭಿಮಾನದಿಂದ ಬದುಕಲು ಮತ್ತು ಮೊಬೈಲ್ ಕೊಂಡಕೊಳ್ಳಲು. ಆದರೆ, ಬಾಲಕನೊಬ್ಬ ಹೀಗೆ ಶಿಕ್ಷಣದಿಂದ ವಂಚಿತನಾಗುವುದು ನಿಜವಾದ ಅವಮಾನ ಅಲ್ಲವಾ?

-ಅದು ಹೇಗೆ ಅವಮಾನ ಎನ್ನುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ನನ್ನ ಹಾಗೆ ಶಾಲೆಯಿಂದ ದೂರ ಉಳಿದ ಮಕ್ಕಳು ಬಹಳಷ್ಟು ಜನ ಇದ್ದಾರೆ. ನಮ್ಮಲ್ಲಿಯ ಬಹುತೇಕರ ಬಳಿ ಮೊಬೈಲ್‌ಗಳಿಲ್ಲ. ಯಾಕಾದರೂ ಈ ಆನ್‌ಲೈನ್ ಶಿಕ್ಷಣ ಶುರು ಮಾಡಿದರೋ, ಈ ಕೊರೋನ ಯಾಕಾದರೂ ಬಂತೋ, ಎಂದು ತೊಲಗುತ್ತದೆಯೋ ಅನಿಸುತ್ತೆ.

►ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು ಕೊರೋನ ಕಾರಣಕ್ಕಾಗಿ. ಆದರೆ ನೀನು ಹೀಗೆ ಹೊರಗಡೆ ಅಡ್ಡಾಡುತ್ತಿದ್ದಿಯಲ್ಲ ಕೊರೋನ ಭಯ ಇಲ್ಲವಾ?

-ಕೊರೋನ ಭಯ ನನಗೂ ಇದೆ. ಆದರೆ, ಅನಿವಾರ್ಯ. ಶಾಲೆ ಯಾವಾಗ ಶುರುವಾಗುತ್ತೋ ಗೊತ್ತಿಲ್ಲ. ಮೊಬೈಲ್ ಕೊಂಡುಕೊಂಡರೆ ಆನ್‌ಲೈನ್ ಕ್ಲಾಸ್ ಕೇಳಬಹುದಲ್ಲವ?

►ಎಷ್ಟು ಜನ ಇದ್ದೀರಿ ಮನೆಯಲ್ಲಿ? ಏನು ಕೆಲಸ ಮಾಡುತ್ತಾರೆ ನಿಮ್ಮ ತಂದೆ ತಾಯಿ ಮತ್ತೆ ಅಣ್ಣ?

-ನಾವು ಒಟ್ಟು 6 ಜನ ಮಕ್ಕಳು. ಇಬ್ಬರು ಅಕ್ಕಂದಿರ ಮದುವೆ ಆಗಿದೆ. ಇನ್ನೂ ಒಬ್ಬಳದು ಮದುವೆ ಆಗಬೇಕು. ನಮ್ಮ ತಂದೆ ಮತ್ತು ಅಣ್ಣ ಗಾರೆ ಕೆಲಸಕ್ಕೆ ಹೋಗುತ್ತಿದ್ದರು. ಈಗ ವಾರದಲ್ಲಿ ಒಂದೆರಡು ದಿನ ಮಾತ್ರ ಅಣ್ಣನಿಗೆ ಕೆಲಸ ಸಿಗುತ್ತಿದೆ. ನಮ್ಮ ತಾಯಿ ಹಲವರ ಮನೆಯಲ್ಲಿ ನೆಲ ಒರೆಸುವ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ, ಲಾಕ್‌ಡೌನ್ ಆದಾಗಿನಿಂದ ಅವಳಿಗೆ ಕೆಲಸ ಇಲ್ಲವಾಗಿದೆ. ನಾವು ಈಗ ಸದ್ಯ ಇರುವ ಬಾಡಿಗೆ ಮನೆಯ ಮಾಲಕರು ಬಾಡಿಗೆ ಮತ್ತು ಡೆಪೋಸಿಟ್ ಕೊಡಿ, ಇಲ್ಲವಾದರೆ ಮನೆ ಖಾಲಿ ಮಾಡಿ ಎಂದು ತಾಕೀತು ಮಾಡಿದ್ದರಿಂದ ನಮ್ಮ ತಂದೆ ಸಾಲ ತರುವ ಸಲುವಾಗಿ ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ.

ಆನ್‌ಲೈನ್ ಕ್ಲಾಸ್ ಕೇಳಿಸಿಕೊಳ್ಳಲು ಮೊದಲು ಆ್ಯಂಡ್ರಾಯ್ಡ್ ಮೊಬೈಲ್ ಬೇಕು. ಊಟಕ್ಕೆ ಪರದಾಡುತ್ತಿರುವ ಅತ್ಯಂತ ಕೆಳವರ್ಗದ ಮತ್ತು ಕೂಲಿ ಕಾರ್ಮಿಕರ ಬಳಿ ಇಂತಹ ಮೊಬೈಲ್‌ಗಳು ಇರಲು ಹೇಗೆ ಸಾಧ್ಯ? ಇಂತಹವರ ಮಕ್ಕಳು ಶಾಲೆಗೆ ಹೋಗುವುದೇ ಒಂದು ದೊಡ್ಡ ಸವಾಲು. ಹಾಗಿರುವಾಗ ಪೋಷಕರು ಮೊಬೈಲ್‌ಗಳನ್ನು ಎಲ್ಲಿಂದ ತಂದು ಕೊಟ್ಟಾರು? ಅಕ್ಕಪಕ್ಕದ ಶ್ರೀಮಂತರ ಬಳಿ ಮೊಬೈಲ್‌ಗಳಿರುತ್ತವೆ ನಿಜ. ಆದರೆ, ಅತ್ಯಂತ ಹಿಂದುಳಿದವರು, ಕೂಲಿಕಾರ್ಮಿಕರ ಮಕ್ಕಳನ್ನು ಅದೆಷ್ಟು ಜನ ತಮ್ಮ ಹತ್ತಿರಕ್ಕೆ ಬಿಟ್ಟುಕೊಳ್ಳುವ ಔದಾರ್ಯ ತೋರುತ್ತಿದ್ದಾರೆ ಎನ್ನುವುದು ಶ್ರೀನಿವಾಸ್‌ನಂತಹ ಹಲವು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.

Writer - ಕಳಕೇಶ್ ಗೊರವರ, ರಾಜೂರ

contributor

Editor - ಕಳಕೇಶ್ ಗೊರವರ, ರಾಜೂರ

contributor

Similar News