ಕೊರೋನ - ಹಳ್ಳಿಯ ಅವಕಾಶಗಳು

Update: 2020-09-18 19:30 GMT

ನಗರಮುಖಿ ವಲಸಿಗರಿಗೆ ಬರೀ ಆದಾಯ, ಆರ್ಥಿಕತೆಯೇ ಒಂದು ಕಾರಣವಾಗಿರಲಿಲ್ಲ. ನಗರ ಕೇಂದ್ರಿತ ದುಡಿಮೆ ಒಂದು ಘನತೆ, ಪ್ರತಿಷ್ಠೆ ಎಂಬ ಅಹಂ ಇತ್ತು. ಅಲ್ಲಿ ಆದಾಯ ಹೆಚ್ಚು. ಅಷ್ಟೇ ಖರ್ಚು, ಅದಕ್ಕಿಂತ ಕಡಿಮೆ ಆದಾಯ-ಖರ್ಚಿನಲ್ಲಿ ಸರಳವಾಗಿ ಊರೊಳಗೆ ಬದುಕಲು ಸಾಧ್ಯವಿದ್ದರೂ ನಗರದ ಬಾಳು ಘನತೆಯದ್ದು ಎಂದೇ ಒಬ್ಬರ ಹಿಂದೆ ಒಬ್ಬರು ಕೆಂಪು ಬಸ್ಸು, ರೈಲು ಹತ್ತಿದವರೇ ಹೆಚ್ಚು. ಸ್ವಂತ ಬಿಡಾರ, ಅಂಗೈಯಗಲ ಜಾಗವಿಲ್ಲದೆ ಕೊಳಚೆಗೇರಿಯಲ್ಲಿ ತಗಡಿನ ಮನೆಯೋ, ನಿರ್ಮಾಣ ಹಂತದಲ್ಲಿರುವ ಕಟ್ಟಡದ ಒಳಗಿನ ಜಲ್ಲಿ ಮರಳರಾಶಿಯಲ್ಲಿ ರಾತ್ರಿ ಮಲಗಿದ್ರೂ ಅಡ್ಡಿಯಿಲ್ಲ. ಮಲಿನ ನೀರು, ವಿಷದ ಗಾಳಿ, ಊರಿಡೀ ಮಾಲಿನ್ಯ, ಕಚ್ಚುವ ಸೊಳ್ಳೆ, ಕಾಯಿಲೆಯ ಭೀತಿ ಏನಿದ್ರು ಅದೇ ಪರಮಸುಖ ಎಂದೇ ಊರು ಬಿಟ್ಟವರು ಇವರು.

ಮಹಾನಗರಗಳಿಗೆ ಇರುವ ಮತ್ತೊಂದು ಶಕ್ತಿ ಅದು ಬೇರೆಯವರಿಗೆ ಗೊತ್ತಾಗದ ರೀತಿ ಮನುಷ್ಯನನ್ನು ಸ್ವಭಾವ, ಚಾಳಿ, ನಡಾವಳಿಯ ಆಚೆ ಗುಪ್ತವಾಗಿಡುತ್ತದೆ. ನಾಲ್ಕೈದು ವರ್ಷಗಳ ಹಿಂದೆ ಉಡುಪಿ-ಮಣಿಪಾಲದ ಕಡೆ ವರ್ಷಕ್ಕೆ ನಾಲ್ಕೈದು ಮರ್ಡರ್‌ಗಳು ಆಗುತ್ತಿದ್ದವು. ಬಹುಪಾಲು ಇಂತಹ ಕೊಲೆ, ಇರಿತ, ಹಲ್ಲೆ ಆಗುತ್ತಿದ್ದುದು ಉತ್ತರ ಕರ್ನಾಟಕದ ವಲಸೆ ಕಾರ್ಮಿಕರ ಕ್ಯಾಂಪ್‌ಗಳಲ್ಲಿ. ರಾಯಚೂರಿನ ಕಾರ್ಮಿಕನೊಬ್ಬ ಹೆಂಡತಿಯನ್ನು ಇರಿದು ಕೊಲೆ ಮಾಡಿ ರಾತ್ರೋರಾತ್ರಿ ಉಡುಪಿಯಿಂದ ಬೆಂಗಳೂರು ಬಸ್ಸು ಹತ್ತಿ ನಿರ್ಗಮಿಸಿದರೆ ಅಂಥವರನ್ನು ಮತ್ತೆ ಹುಡುಕುವುದು ತುಂಬಾ ಕಷ್ಟ. ಹೀಗೆ ತಮ್ಮ ತಮ್ಮ ಊರೊಳಗೆ ತಗಾದೆ, ತಮಾಷೆ, ಟೀಕೆ, ನಿರ್ಲಕ್ಷ್ಯಕ್ಕೆ ಒಳಗಾದ ಅನೇಕ ಯುವಕರನ್ನು ನಗರಗಳು ಬಚ್ಚಿಟ್ಟುಕೊಂಡಿವೆ.

ಹುಟ್ಟೂರು, ಹಳ್ಳಿ ಹಾಗಲ್ಲ. ಅಲ್ಲಿ ಪ್ರತಿ ಮನೆ ಮನೆಗಳ ಗೋಡೆಗಳಿಗೂ ಕಿವಿ ಇರುತ್ತವೆ. ಇರುವ ಕಥೆಗಳನ್ನು ಇನ್ನೊಬ್ಬರಿಗೆ ಹೇಳುವುದು ಬಿಡಿ; ಇರುವ-ಇಲ್ಲದ ಸಲ್ಲದ ಎಲ್ಲರ ಬಗ್ಗೆ ಹೊಸ ಹೊಸ ಕಥೆಗಳು ಹುಟ್ಟುವ ಜಾಗ ಅದು. ಮನೆ ದೂರವಿದ್ದರೂ ಮನಸ್ಸು ಒಂದನ್ನೊಂದು ಕಟ್ಟಿಕೊಂಡೇ ಇರುತ್ತವೆ. ಕಟ್ಟುವ ಕಥೆಗಳೇ ಹೆಚ್ಚಾಗಿ ಗ್ರಾಮದ ಪಾತ್ರಗಳು ಮುಜುಗರ ಅನುಭವಿಸುವುದೇ ಹೆಚ್ಚು. ಇಂಥ ಸಹಜ ಸಂಕೋಚದಿಂದ ಕೆಟ್ಟು ಪಟ್ಟಣ ಸೇರುವ, ಅಲ್ಲಿ ಅಜ್ಞಾತವಾಸ ಅನುಭವಿಸಿ ಬದಲಾಗಿದ್ದೇವೆ ಎಂದು ಭಾವಿಸಿ, ಭ್ರಮಿಸಿ ನಾಪಾಸಾಗುವವರೇ ಹೆಚ್ಚು.

ವಿಚಿತ್ರ ಅಂದರೆ ಇದೇ ಹಳ್ಳಿಗಳಿಂದ ವಲಸೆ ಹೋದ ರಾಶಿ ರಾಶಿ ಜನ ಹೊರಗಡೆ, ನಗರಗಳಲ್ಲಿ ಬದುಕುತ್ತಿದ್ದಾರೆ ಎಂದು ಗೊತ್ತಿದ್ದರೂ ಅಳಿದುಳಿದ ರೈತರು ಕೊರೋನ ಸಂದರ್ಭದಲ್ಲಿ ರಸ್ತೆ-ದಾರಿಗಳನ್ನು ಅಗೆದು ಬಗೆದು ಅಡ್ಡಗಟ್ಟಿ ತಮ್ಮೂರುಗಳನ್ನು ದ್ವೀಪ ಮಾಡಿದ್ದು. ಯುವಕರು ಮತ್ತೆ ಗ್ರಾಮಮುಖಿಯಾಗಿ ಕಾಯಿಲೆ ಹೊತ್ತು ಬಂದರೆ ಅಪಾಯವೆಂಬ ಈ ಹಳ್ಳಿಪ್ರಜ್ಞೆ ಪ್ಲೇಗ್-ಕಾಲರಾ ಕಾಲದಲ್ಲೂ ಇತ್ತಂತೆ. ಆದರೆ ಹೊರಗಡೆಯಿಂದ ಯಾರೇ ಹೊಸಬ ಬಂದರೂ ಅನುಮಾನ ಪಡುವ ಹಳ್ಳಿಗೆ ತನ್ನ ಮನೆಮಗನನ್ನೇ ಅನುಮಾನಿಸುವ ಕ್ರಮ ಬೇರೆಯೇ ರೀತಿಯದು. ತೀರಾ ಅನಿವಾರ್ಯವಾದಾಗ ಇಂಥವರನ್ನು ಊರಹೊರಗಿನ ಶಾಲೆಯೋ ತೋಟದ ಮನೆಯೋ ಆಸ್ಪತ್ರೆಯೋ ಅಲ್ಲಿ ವಾರ ಇರಿಸಿ ಸುರಕ್ಷತೆ ಮೂಡಿಸುವ ಕ್ರಮ ಇಲ್ಲಿಯದು.

ಬೆಂಗಳೂರು ಸೇರಿದ್ದ ಹಳ್ಳಿ ಹೆಂಗಸರು ದಿನವಹಿ ಮಾಡುತ್ತಿದ್ದ ಸಾಮಾನ್ಯ ಕೆಲಸ ಹತ್ತಾರು ಮನೆಗಳಲ್ಲಿ ಅನುಕ್ರಮವಾಗಿ ಮುಸುರೆ ತೊಳೆಯುವುದು, ಬಟ್ಟೆ ಒಗೆಯುವುದು, ನೆಲ ಒರಸುವುದು. ಒಂದೊಂದು ಮನೆಯಲ್ಲಿ ಒಂದು-ಎರಡು ಗಂಟೆ ದುಡಿದೇ ಪ್ರತಿ ತಿಂಗಳು ಹತ್ತಾರು ಸಾವಿರ ಕೂಡುಹಣ ಮಾಡುವವರಿದ್ದರು. ಕೊರೋನ ಶುರುವಾದ ಮೇಲೆ ಇಂಥವರನ್ನು ಮನೆಯೊಳಗೆ ಬಿಟ್ಟರೆ ಎಲ್ಲಿ ಕಾಯಿಲೆ ಅಂಟುತ್ತದೋ ಎಂಬ ಭಯದಲ್ಲಿ ‘‘ಮತ್ತೆ ಕರೆಯುತ್ತೇವೆ’’ ಎಂದವರೆಲ್ಲಾ ತೊಳೆಯುವ, ಗುಡಿಸುವ, ಒಗೆಯುವ ಕೆಲಸಗಳನ್ನು ತಾವೇ ಕಲಿತು, ಕೆಲವೆಡೆ ಗಂಡ ಹೆಂಡತಿ ಹಂಚಿಕೊಂಡು ನಿಭಾಯಿಸಿ ಮುಂದೆ ಆಳು ಬರದಿದ್ದರೂ ಸುಧಾರಿಸಬಲ್ಲೆವು ಎಂಬ ಹಂತಕ್ಕೆ ತಲುಪಿದ್ದಾರೆ.

ಎಲ್ಲದರ ಪರಿಣಾಮ ಲಕ್ಷ ಲಕ್ಷ ಜನ ಮತ್ತೆ ಹಳ್ಳಿ ಕಡೆಗೆ ಹೊರಟಿದ್ದಾರೆ. ಹಳ್ಳಿ-ನಗರ ಎರಡನ್ನೂ ಅಳೆದು ತೂಗಿ ತಮಗೆ ಅದೇ ತಮ್ಮ ಊರೇ ಸುಖ ಎಂದು ನಂಬಿ ಗುಳೇ ಆರಂಭವಾಗಿದೆ. ‘‘ಬೇಡಿ, ಹೋಗಬೇಡಿ’’ ಎಂದು ನಾಡದೊರೆ ಎಷ್ಟೇ ಗೋಗರೆದರೂ ಬಹುಮಂದಿ ತಿರುಗಿ ವಿಮುಖವಾಗುವ ಸಾಧ್ಯತೆ ಕಡಿಮೆ. ಯಾವುದು ಸುಖವಿಲ್ಲ, ಅನ್ನ ನೀಡುವುದಿಲ್ಲ, ಬಾಳು ಕೊಡುವುದಿಲ್ಲ ಎಂದು ಭ್ರಮಿಸಿ ಹೊರಟಿದ್ದರೂ ಈಗ ಅದೇ ಭೂಮಿ, ಅದೇ ಹರಕುಮುರುಕು ಮನೆ, ಅದೇ ಹುಟ್ಟೂರು ವಾಪಸಾದ ಈ ವಲಸಿಗರ ಧಾರಣಾಶಕ್ತಿಯನ್ನು ತಡೆದುಕೊಳ್ಳಬಹುದೇ?

ಗಂಜಿ, ಕನಿಷ್ಠ ನೀರು ಕುಡಿದಾದರೂ ಸಾಯುವುದಾದರೆ ಊರಲ್ಲೇ ಎಂದು ಕೊನೆಯ ಆಯ್ಕೆಯನ್ನು ಪ್ರಕಟಿಸಿಯೇ ಬೆಂಗಳೂರಿಗೆ ಟಾಟಾ ಹೇಳಿ ಬಂದ ಇವರನ್ನೆಲ್ಲಾ ಸಂತೈಸುವ ಶಕ್ತಿ ಹಳ್ಳಿಗಳಿಗೆ ಇದೆಯೇ. ಇದೇ ಮಾನವ ಸಂಪನ್ಮೂಲಗಳನ್ನು ಬಳಸಿ ಗ್ರಾಮಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಗಳು ಏನು? ಇಂಥ ಯೋಚನೆ-ಯೋಜನೆಗಳ ತಯಾರಿಯಲ್ಲಿ ಪ್ರಭುತ್ವ ಇದೆಯೇ? ಪದೇ ಪದೇ ಕೊರೋನವನ್ನು ನಗರಗಳಿಗೇ ಆರೋಪಿಸಿ ತೋರಿಸುವ ಮಾಧ್ಯಮಗಳೇಕೆ ಗ್ರಾಮಗಳ ವಸ್ತುಸ್ಥಿತಿಯನ್ನು ತೋರಿಸುವುದಿಲ್ಲ? ಅಲ್ಲಿ ನೀರಾವರಿ ಇದೆಯೇ, ರಸ್ತೆಗಳಿದೆಯೇ? ಶಾಲೆ-ಆಸ್ಪತ್ರೆಗಳು ಹೇಗಿವೆ? ಯುವಕರ ದುಡಿಮೆ, ಕೌಶಲವನ್ನು ಚೋದಿಸಲು ಬೇಕಾಗುವ ಮೂಲಸೌಕರ್ಯಗಳಿವೆಯೇ? ಕರೆಂಟು, ಮೊಬೈಲ್ ನೆಟ್‌ವರ್ಕ್ ಇದೆಯೇ? ಬೀಜಗೊಬ್ಬರ, ಬೆಳೆದ ಬೆಳೆಗೆ ಮಾರುಕಟ್ಟೆ, ಸಾಗಾಟ, ಸಂಗ್ರಹಾಲಯ, ತರಬೇತಿ, ಯಂತ್ರಗಳಿವೆಯೇ?

ಇಲ್ಲೇ ಒಂದೇ ಒಂದು ಸರಳ ಪ್ರಶ್ನೆ. ಕೊರೋನ ಹುಟ್ಟಿದ ಮೂಲ ಮತ್ತು ಗಡಿ ತಗಾದೆಯ ಕಾರಣಕ್ಕಾಗಿ ಚೀನಾವಸ್ತುಗಳು ನಮಗೆ ಬೇಡವೇ ಬೇಡ ಎಂಬ ಧ್ಯೇಯದ ‘ಸ್ವದೇಶೀ ಆಂದೋಲನ’ವೊಂದು ಇತ್ತೀಚೆಗೆ ಹುಟ್ಟಿಕೊಂಡಿದೆ. ನೀವು ನಂಬಲಿಕ್ಕಿಲ್ಲ. ಬೇರೆ ಕ್ಷೇತ್ರ ಬಿಡಿ, ಬರೀ ಕೃಷಿರಂಗ ಒಂದನ್ನೇ ತೆಗೆದುಕೊಂಡರೂ ಭಾರತದ ಕೃಷಿ, ಸಾಗುವಳಿ ಸಂಬಂಧಿ ಬಹುಪಾಲು ಯಂತ್ರಗಳು ಚೀನಾದ್ದೇ. ಕಳೆದ ಒಂದು ದಶಕದಲ್ಲಿ ಚೀನಾ ದೇಶದ ಆಮದು ಕೃಷಿಯಂತ್ರಗಳು ಭಾರತದ ಹಳ್ಳಿಹಳ್ಳಿಗಳಿಗೆ ದಾಂಗುಡಿ ಇಟ್ಟಿವೆ. ಕಳೆಕೊಚ್ಚುವ ಯಂತ್ರದಿಂದ ಹಿಡಿದು ನೂರಾರು ಅಡಿ ಎತ್ತರದ ಮರಗಳಿಗೆ ಬೋರ್ಡು ಒಯ್ಯುವ, ಸ್ಪ್ರೇ ಮಾಡುವ, ಗೆಲ್ಲು ಸವರುವ ಯಂತ್ರಗಳವರೆಗೆ ಚೀನಾದ್ದೇ ಸಾರ್ವಭೌಮ.

ಕರಾವಳಿ-ಮಲೆನಾಡು ಭಾಗದ ಯಾವುದೇ ಕೃಷಿಪರ ಯಂತ್ರೋಪಕರಣವನ್ನು ಮಾರುವ ಅಂಗಡಿಗೆ ಹೋಗಿ ನೋಡಿ. ಶೇ. 75-80ರಷ್ಟು ಮಾಲುಗಳು ಚೀನಾದ್ದು ಅಥವಾ ಅಲ್ಲಿಂದ ಪರಿಕರಗಳನ್ನು ತಂದು ಜೋಡಿಸಿದ್ದು. ಇವುಗಳಿಂದ ಲಾಭ ಎಷ್ಟಿದೆ ಎಂದರೆ ‘ಇವುಗಳಿಲ್ಲದೆ ನಮ್ಮ ಕೃಷಿಯೇ ಇಲ್ಲ’ ಎಂಬ ಮಟ್ಟಿಗೆ ಇವು ರೈತರ ಮನೆ, ತೋಟ, ಹೊಲಗಳನ್ನು ಆಕ್ರಮಿಸಿಕೊಂಡಿವೆ.

ಎರಡು ದಶಕಗಳ ಹಿಂದೆಯೇ ಕರಾವಳಿ-ಮಲೆನಾಡಿನಲ್ಲಿ ಇಂಥ ಕೃಷಿ ಯಂತ್ರೋಪಕರಣಗಳ ಮಳಿಗೆಯನ್ನು ಆರಂಭಿಸಿದ್ದ ‘ಕೋಡಿಬೈಲ್’ ಸಂಸ್ಥೆಯ ಮಾಲಕರಾದ ಕೋಡಿಬೈಲ್ ಸತ್ಯನಾರಾಯಣರಲ್ಲಿ ನಾನೊಂದು ಸರಳ, ಸಹಜ ಪ್ರಶ್ನೆಯನ್ನು ಇತ್ತೀಚೆಗೆ ಕೇಳಿದ್ದೆ. ನಾನು ಕೃಷಿಕ, ಹಸಿವೆಯಾಗಿದೆ. ನೀವು ಈ ತಿಂಡಿ ತಿನ್ನಬೇಡಿ ಎನ್ನುತ್ತೀರಿ, ಹಾಗಾದರೆ ನನಗೀಗ ಬೇರೆ ತಿಂಡಿ ಬೇಕಾಗಿದೆ. ಅದನ್ನು ತೋರಿಸುವುದು, ಕೊಡುವುದು ನಿಮ್ಮ ಕರ್ತವ್ಯ ಅಲ್ಲವೇ?
ಸತ್ಯನಾರಾಯಣ ಒಂದು ಕತೆ ಹೇಳಿದ್ರು. ಚೀನಾದಿಂದ ಬರುವ ಕಳೆಕೊಚ್ಚು ಯಂತ್ರದ ತುದಿಗೊಂದು ಬ್ಲೇಡ್ ಬರುತ್ತದೆ. ಸುಲಭವಾಗಿ ಮಾಡಬಹುದಾದ ಕಬ್ಬಿಣದ ಬ್ಲೇಡ್ ಅದು. ಅಲ್ಲಿಂದ ಬೇಡ, ನಮ್ಮವರಿಗೇ ಅವಕಾಶ ಮಾಡಿಕೊಡುವ ಎಂದು ಗೊತ್ತಿರುವ ಒಬ್ಬರಿಗೆ ಹೇಳಿದೆ. ಶೇ. 15ರಿಂದ 20 ಹೆಚ್ಚುವರಿ ಉತ್ಪಾದನಾ ವೆಚ್ಚವಾದರೂ ಆ ಹೊಸ ಬ್ಲೇಡನ್ನು ಸ್ವೀಕರಿಸಿ ಮಾರಾಟಕ್ಕಿಟ್ಟೆ. ನಮ್ಮ ರೈತರಿಗೆ ಅದು ಬೇಡವೇ ಬೇಡ. ಕಾರಣ ಚೀನಾದ ಬ್ಲೇಡಿನ ಫಿನಿಶಿಂಗ್ ಅಷ್ಟು ಚೆಂದ, ನಾಜೂಕದು. ಗಮ್ಮತ್ತಂದ್ರೆ ಚೀನಾದಿಂದ ನಮಗೆ ಆಮದಾಗುವ ಬ್ಲೇಡಿನ ಕಬ್ಬಿಣ ನಮ್ಮದೇ ದೇಶದ್ದು. ಇಲ್ಲಿಯ ಕಬ್ಬಿಣ ಚೀನಾಕ್ಕೆ ಹೋಗಿ ಅಲ್ಲಿಂದ ಅದು ಬ್ಲೇಡ್ ಆಗಿ ಭಾರತದ ಪುತ್ತೂರಿಗೆ ಬರುವ ದಾರಿಯನ್ನು ಗಮನಿಸಿ!

ಹಳ್ಳಿಯಲ್ಲಿ ಈಗಾಗಲೇ ಇರುವವರು ಮತ್ತು ಹಳ್ಳಿಗೆ ವಾಪಸು ಬರುವವರು ಸೇರಿ ಎಲ್ಲರಿಗೂ ಈಗ ಹಳ್ಳಿಯಲ್ಲಿ ಕೆಲಸ ಬೇಕಾಗಿದೆ. ಬರೀ ಇರುವ ನೆಲಕ್ಕೆ, ತುಂಡು ಭೂಮಿಗೆ ಬಿತ್ತಿ ಬೆಳೆ ಪಡೆಯುವುದು ಸಾಕೇ? ಕೃಷಿ ಸಂಬಂಧಿ ಬೇರೆ ಉತ್ಪಾದನಾ ಕಾರ್ಯಗಳು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಸಾಧ್ಯವಿಲ್ಲವೇ. ಬೆಳೆ, ಬರೀ ಅನ್ನ ಸಾಕಾಗುವುದಿಲ್ಲ. ನಮಗೆ ಹಣವೂ ಬೇಕು. ಅದು ಇದ್ದರೆ ಎಲ್ಲವನ್ನೂ ಖರೀದಿಸಬಲ್ಲೆವು ಎಂಬ ದಾರಿಯಲ್ಲೇ ನಗರಕ್ಕೆ ಹೋಗಿ ಈಗ ವಾಪಾಸಾದ ಮಂದಿಯ ಕೈಗೆ ಪುನಃ ಹಣದ ಚೈತನ್ಯ ನೀಡುವುದು ಹೇಗೆ? ಬಂದವರಿಗೆಲ್ಲಾ ಹಳ್ಳಿ ಕೆಲಸ ಕೊಡುವುದಾದರೂ ಹೇಗೆ? ಹಳ್ಳಿಯ ಆರ್ಥಿಕ ಚೈತನ್ಯ ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟುತ್ತವೆ.

ಕೊರೋನ ಕಾಲಕ್ಕಲ್ಲ, ಆ ಮುಂಚೆಯೇ ಗ್ರಾಮಗಳಿಗೆ ವಾಪಸಾದ ಅನೇಕ ಟೆಕ್ಕಿಗಳು, ಎಂಬಿಎ ಓದಿದವರು, ವೈದ್ಯರು, ಸ್ನಾತಕೋತ್ತರ ಪದವೀಧರರು, ಡಾಕ್ಟರೇಟ್ ಪಡೆದವರು ಹಳ್ಳಿಗಳಲ್ಲಿ ಕೃಷಿಯಲ್ಲೇ ಆರ್ಥಿಕವಾಗಿ ಲಾಭ ಪಡೆದು ಸ್ವಾವಲಂಬಿಗಳಾದವರಿದ್ದಾರೆ. ಹಸಿರು ಮನೆಯೊಳಗಡೆ ತರಕಾರಿ, ದಾಳಿಂಬೆ, ಆ್ಯಂಥೋರಿಯಂ, ಗುಲಾಬಿ ಬೆಳೆಸಿ ವಿದೇಶಗಳಿಗೆ ರಫ್ತು ಮಾಡಿ ಲಾಭ ಪಡೆದವರಿದ್ದಾರೆ. ಬರೀ ಪಿಯುಸಿ ಓದಿದ ಯುವಕನೊಬ್ಬ ಇಲೆಕ್ಟ್ರೀಶಿಯನ್ ಕೆಲಸ ಬಿಟ್ಟು ಮನೆ-ತೋಟದಲ್ಲೇ ಸುಮಾರು ಒಂದೂವರೆ ಸಾವಿರ ಜೇನು ಕುಟುಂಬಗಳನ್ನಿಟ್ಟು ಸಾಕಿ ರೂ. ಇಪ್ಪತ್ತು ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಪಡೆಯುವ ಕಥೆಯನ್ನು ದಾಖಲಿಸಿದ್ದೇನೆ.

‘‘ಅಲ್ಲಿರಲಾರೆ, ಇನ್ನೆಲ್ಲಿಗೆ? ಇದೇ ನಮ್ಮ ಕೊನೆಯ ನಿಲ್ದಾಣ’’ ಎಂದು ಹಳ್ಳಿಗೆ ಬಂದವರೆಲ್ಲಾ ಈಗ ಹತಾಶರಾಗುವ ಯಾವ ಅಗತ್ಯವೂ ಇಲ್ಲ. ನೀವು ಯಾವುದನ್ನು ನಿರೀಕ್ಷಿಸಿ ನಗರಕ್ಕೆ ಹೋದಿರೋ ಆ ಸುಖ ಇಲ್ಲಿರಲಾರದು. ಆದರೆ ಮನಸ್ಸು ಮಾಡಿದ್ರೆ ನೀವೇ ಶ್ರಮವಹಿಸಿ ದುಡಿದ್ರೆ, ಬೆವರು ಹರಿಸಿದ್ರೆ ತಿನ್ನುವ ಅನ್ನಕ್ಕೆ ಸಮಸ್ಯೆಯಾಗದು. ಮೊದಲು ನಿಮ್ಮ ನಿಮ್ಮ ಜಾಗದ ಗಡಿ, ಬೇಲಿ ಗುರುತಿಸಿ. ದಿನವಹೀ ದುಡಿಮೆಯ ವೇಳಾಪಟ್ಟಿ ರಚಿಸಿ. ಇಲ್ಲೀಗ ನೀವೇ ಯಜಮಾನರು. ನೀವೇ ಆಳುಗಳು. ಅಕ್ಕಪಕ್ಕದ ಮಾದರಿ ರೈತರ ಮಾರ್ಗದರ್ಶನ ಪಡೆಯಿರಿ. ಹಿರಿಯರ ಅನುಭವಗಳಿಗೆ ಕಿವಿಕೊಡಿ. ಮನೆಯಲ್ಲಿ ಯಾರೂ ಸೋಮಾರಿಗಳಾಗದಂತೆ ಎಲ್ಲರನ್ನೂ ದುಡಿಮೆಗೆ ಹಂಚಿ, ಚೋದಿಸಿ. ಹೊಲಗದ್ದೆ ತೋಟದೊಳಗೆ ಬೆಳೆಯುವ ಧಾನ್ಯದಿಂದ ಹಿಡಿದು ತರಕಾರಿಯವರೆಗೆ ಮಾರಾಟಜಾಲ ವೃದ್ಧಿಸಿ, ಮೌಲ್ಯವರ್ಧನೆ ಸಾಧ್ಯವೋ ನೋಡಿ. ತೋಟದೆಡೆಯಲ್ಲಿ ಬೇಲಿಯಂಚಿನಲ್ಲಿ ಬಿದ್ದು ಕೊಳೆತು ಹೋಗುವ ಹಲಸಿನ ಹಣ್ಣನ್ನು ಸಂಸ್ಕರಿಸಿ ಏನೇನು ಮಾಡಬಹುದೆಂದು ಯೋಚಿಸಿ. ಪರಿಸರವನ್ನು ಪ್ಲಾಸ್ಟಿಕ್ ಸುರಿದು ಮಾಲಿನ್ಯಗೊಳಿಸದೆ ಸ್ವಚ್ಛ ಗಾಳಿ, ನೀರು, ವಿಷವಿಲ್ಲದ ಅನ್ನವೋ ಅದ್ಭುತ ಪರಮ ಸುಖ, ಇವು ಎಂದಿಗೂ ನಗರದಲ್ಲಿ ಸಿಗಲಾರದು, ಅಮೂಲ್ಯವಾದುದು, ಬೆಲೆ ಕಟ್ಟಲಾಗದು ಎಂದು ಯೋಚಿಸಿ.

ಜಗತ್ತಿನ ಬೇರೆ ದೇಶಗಳಿಗಿಂತ ಹೆಚ್ಚು ಪರ್ಯಾಯ ಔಷಧಿಗಳ ಪ್ರಯೋಗ ಇದೀಗ ಕೋವಿಡ್-19ಕ್ಕೆ ಭಾರತದಲ್ಲಿ ನಡೆಯುತ್ತಿದೆ. ಹೆಚ್ಚಿನ ದೇಶಗಳು ಬರೀ ಅಲೋಪತಿಯನ್ನೇ ನಂಬಿದರೆ ಭಾರತ ಮಾತ್ರ ಬಹುಬಗೆಯ ಗಿಡಮೂಲಿಕೆಗಳನ್ನು ರೋಗನಿರೋಧಕ ಶಕ್ತಿ ವೃದ್ಧಿಗೆಂದು ಬಳಸುತ್ತಿದೆ. ನಾಟಿ ಔಷಧಾಲಯಗಳು, ಸಂಶೋಧನಾ ಕೇಂದ್ರಗಳು ಈ ಉದ್ದೇಶದ ಬಹುಬಗೆಯ ಔಷಧಿಗಳನ್ನು ಈಗಾಗಲೇ ಉತ್ಪಾದಿಸಿ ಜನರ ಕೈಗೆ ನೀಡಿವೆ.ಲಕ್ಷಾಂತರ ಹಳ್ಳಿ ಮಂದಿ ತಮ್ಮ ತಮ್ಮ ತೋಟ ಪರಿಸರದಲ್ಲೇ ಒದಗುವ ಬೇರುಗಡ್ಡೆ ಚಿಗುರು ನಾರುಗಳನ್ನು ಬಳಸಿ ಸದೃಢರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಳ್ಳಿ ಕೇಂದ್ರಿತರು ಇಂಥ ಮೂಲಿಕೆಗಳ ಕೃಷಿಯನ್ನು ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ ಕೃಷಿ ಮಾಡಲು, ಸಿದ್ಧವಸ್ತುವನ್ನಾಗಿಸಲು, ಮೌಲ್ಯವರ್ಧನೆ- ಮಾರುಕಟ್ಟೆ ಕಂಡುಕೊಳ್ಳಲು ಅವಕಾಶಗಳಿವೆ.

Writer - ನರೇಂದ್ರ ರೈ ದೇರ್ಲ

contributor

Editor - ನರೇಂದ್ರ ರೈ ದೇರ್ಲ

contributor

Similar News