ಪಾನಕಗಳ ಪರಿಷೆ
ಪಾನಕ ಎಂದರೆ ನೆನಪಾಗುವುದು ರಾಮನವಮಿ. ಎರಡು ಮೂರು ದಶಕಗಳ ಹಿಂದಿನ ರಾಮನವಮಿಗಳು ಬಹಳ ಸುಂದರವಾಗಿದ್ದವು ಎಂದು ಇವತ್ತು ಅನಿಸುತ್ತದೆ, ಕಾರಣ ಇವತ್ತಿನ ಹಾಗೆ ಲೋಡುಗಟ್ಟಲೆ ಪ್ಲಾಸ್ಟಿಕ್ ಲೋಟ ದೊನ್ನೆಗಳ ರಾಶಿ ಬೀದಿಗಳಲ್ಲಿ ಬಿದ್ದಿರುತ್ತಿರಲಿಲ್ಲ. ಆಗೆಲ್ಲಾ ನಾವೇ ಲೋಟ ಚೊಂಬು ಹಿಡಿದು ಹೋಗಬೇಕಿತ್ತು. ಅದಕ್ಕೆ ಪಾನಕ, ಮಜ್ಜಿಗೆ ತುಂಬಿಕೊಂಡು ಕುಡಿಯುವುದು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಸರದಿಯಲ್ಲಿ ನಿಂತು ಹೊಟ್ಟೆ ಬಿರಿಯುವಷ್ಟು ಸಲ ಪಾನಕ, ಮಜ್ಜಿಗೆ ಕುಡಿಯುವುದು, ಬಟ್ಟೆ ಎಲ್ಲಾ ಒದ್ದೆ ಆಗಿ ಅಂಟುವುದು. ಮನೆಯಲ್ಲಿ ಅಮ್ಮಂದಿರಿಂದ ಬೈಗುಳ ಕೇಳುವುದು ಸಂಪ್ರದಾಯ ಕೂಡ! ಪಾನಕ ಎಂದರೆ ಅದು ಬೆಲ್ಲ ಮತ್ತು ಚೂರು ಹುಣಸೆ ಹುಳಿಯಿಂದ ಮಾಡಿದ್ದು ಮಾತ್ರ ಎಂದೇ ಬಹುಕಾಲದವರೆಗೂ ನಂಬಿಕೊಂಡಿದ್ದೆ ನಾನು. ಯಾಕೆಂದರೆ ಉಳಿದವನ್ನು ನಾವು ಬೇರೆಯ ಹೆಸರುಗಳಿಂದ ಕರೆಯುತ್ತಿದ್ದೆವು. ಆದರೆ ಪಾನಕ ಎಂದಾಗ ಮಾತ್ರ ಅದು ಬೆಲ್ಲದ ಪಾನಕ ಎಂದೇ ನಿರ್ಧಾರಿತವಾಗಿತ್ತು. ಮನೆಯಲ್ಲಿ ಈ ಬೆಲ್ಲದ ಪಾನಕ ಮಾಡುತ್ತಲೇ ಇರಲಿಲ್ಲ. ಅದಕ್ಕಾಗಿ ನಾವು ರಾಮನವಮಿ ಬರುವುದನ್ನೇ ಕಾಯಬೇಕಿತ್ತು.
ಮನೆಯಲ್ಲಿ ನೆಂಟರಿಷ್ಟರು ಬಂದಾಗ ಕಾಫಿ, ಟೀ ಮಾಡುವುದು ಅಷ್ಟು ಬಳಕೆಯಲ್ಲಿ ಇರಲಿಲ್ಲ. ಕಾರಣ ಆ ವೇಳೆಯಲ್ಲಿ ನಮಗೆ ಹಾಲು ಲಭ್ಯವಾಗುತ್ತಿರಲಿಲ್ಲ. ಪ್ಯಾಕೆಟ್ ಹಾಲು ಮತ್ತು ಫ್ರಿಡ್ಜ್ ಸೌಲಭ್ಯಗಳು ಇರಲಿಲ್ಲವಲ್ಲ. ಅದಕ್ಕಾಗಿ ಸರಳವಾದ ಪಾನಕಗಳು ಸೃಷ್ಟಿಯಾಗುತ್ತಿದ್ದವು. ಮನೆಯಲ್ಲಿರುವ ಚೂರು ಹುಳಿ ಪದಾರ್ಥದ ಜೊತೆಗೆ ಸಕ್ಕರೆ ಅಥವಾ ಬೆಲ್ಲ ಕಲಸಿ ಏಲಕ್ಕಿಯ ಪುಡಿ ಉದುರಿಸಿ ಘಮ ಘಮ ಎನ್ನುವ ಪಾನಕ ತಯಾರಾಗಿ ಸಣ್ಣ ಸಣ್ಣ ಲೋಟಗಳಲ್ಲಿ ಹಜಾರದಿ ವಿರಾಜಮಾನರಾದ ಅತಿಥಿಗಳ ಕೈ ಸೇರುತ್ತಿದ್ದವು. ಎರಡು ಮಾತಾಡುವ ವೇಳೆಗೆ ಗೊಳಕ್ಕನೆ ಮೂರು ಗುಟುಕುಗಳಲ್ಲಿ ಪಾನಕ ಖಾಲಿಯಾಗಿಬಿಡುತ್ತಿತ್ತು. ಇಂತಹ ಹೊತ್ತಿನ ಪಾನಕವಾಗಿ ‘ನಿಂಬೆಹಣ್ಣಿನ ಶರಬತ್ತು’ ಹೆಸರು ಮಾಡಿತ್ತು. ಈಗಲೂ ಅಲ್ಲಲ್ಲಿ ಈ ಶರಬತ್ತು ಉಳಿದುಕೊಂಡಿದೆ. ಬಂದವರಿಗೆ ಬೆಲ್ಲ, ನೀರು ಕೊಡುವುದು ಬಹು ಹಳೆಯ ಸಂಪ್ರದಾಯ. ಅದು ಬಿದ್ದು ಹೋಗಿಯೇ ಬಹಳ ಸಮಯವಾಗಿಬಿಟ್ಟಿದೆ. ಈಗಂತೂ ರೆಡಿಮೇಡ್ ಜ್ಯೂಸ್‌ಗಳು ಮನೆಯ ಫ್ರಿಡ್ಜ್ ಗಳಲ್ಲಿ ಸಿದ್ಧವಾಗಿ ಕೂತಿರುತ್ತವೆ. ಯಾರಾದರು ಬಂದರೆ ಅದನ್ನೇ ಲೋಟಕ್ಕೆ ಸುರುವಿ ಕೊಡುವುದಷ್ಟೇ ಅಥವಾ ನಮಗೆ ಬೇಕು ಅನ್ನಿಸಿದಾಗ ಕುಡಿಯುವುದಷ್ಟೇ. ವಿವಿಧ ರೀತಿಯಲ್ಲಿ ಪ್ರಯೋಗ ಮಾಡುವಷ್ಟು ಮನುಷ್ಯನ ಮನಸ್ಸು ಬಿಡುವಾಗಿಲ್ಲ. ಅದು ಸದಾ ಕಾಲವು ಆಧುನಿಕತೆಯ ಧಾವಂತ, ಪ್ರಕ್ಷುಬ್ದತೆಗಳಲ್ಲಿ ಕಳೆದುಹೋಗಿದೆ.
ಬೆಲ್ಲದ ಪಾನಕ ಮತ್ತು ನಿಂಬೆಯ ಶರಬತ್ತು ಎರಡೂ ಆತಿಥ್ಯ ಮತ್ತು ಆಚರಣೆಗಳ ಭಾಗವಾಗಿ ಕಾಣಿಸಿಕೊಂಡವು. ಆದರೆ ಬಿಸಿಲಲ್ಲಿ ದಣಿದಾಗ, ಮಳೆಯಲ್ಲಿ ಮಿಂದಾಗ, ಚಳಿಯಲ್ಲಿ ತರಗುಟ್ಟಿದಾಗ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ತಣ್ಣನೆಯ ಪಾನಕಗಳನ್ನು ಅಥವಾ ಬಿಸಿಬಿಸಿಯಾದ ಸೂಪು/ ತಿಳಿಸಾರುಗಳನ್ನು ಕುಡಿಯಬೇಕಿತ್ತು. ಅದಕ್ಕೆಂದೇ ಹಲವು ಸೊಪ್ಪು, ತರಕಾರಿ, ಹಣ್ಣು, ಸಿಹಿ, ಉಪ್ಪು, ಮಸಾಲೆಗಳನ್ನು ಆಶ್ರಯಿಸಿದ್ದೆವು. ಅವುಗಳನ್ನು ಹದವಾಗಿ ಮಿಶ್ರಣ ಮಾಡಿ ಕಲಸಿ, ಕೆಲವನ್ನು ಕುದಿಸಿ, ಕೆಲವನ್ನು ಕೊಳೆಯಿಸಿ ಹುಳಿ ಬರಿಸಿ ಕುಡಿಯಲು ಬಳಸಲಾಗುತ್ತಿತ್ತು. ಇವು ಜನರ ಭೌಗೋಳಿಕ ಪ್ರದೇಶ, ಅಲ್ಲಿ ಬೆಳೆವ ಬೆಳೆ, ಸಿಗುವ ಪದಾರ್ಥಗಳ ಮೇಲೆ ಅವಲಂಬಿತವಾಗಿದೆ ಕೂಡ. ಮಲೆನಾಡು, ಕರಾವಳಿ ಮತ್ತು ಬಯಲು ಸೀಮೆಯ ಪಾನಕಗಳು ಅವುಗಳ ಪದಾರ್ಥಗಳು ಏಕತೆರನಾಗಿಲ್ಲದೆ ತುಂಬಾ ವೈವಿಧ್ಯಮಯವಾಗಿವೆ. ಕರಾವಳಿಯ ಭಾಗದಲ್ಲಿ ಕೋಕಂ ಅಥವಾ ಪುನರ್ಪುಳಿಯ ಪಾನಕ ಜನಪ್ರಿಯ.
ಮಲೆನಾಡಿನಲ್ಲಿ ತುಂಬಾ ವೈವಿಧ್ಯಮಯವಾದ ಪಾನಕಗಳು ಇವೆ. ಕೋಕಂ (ಪುನರ್ಪುಳಿ, ಕೆಂಪಕ್ಕಿ ನೀರಿನ ಪಾನಕ, ಹಲವು ಹಣ್ಣಿನ ಪಾನಕಗಳು) ಬಯಲು ಸೀಮೆಯ ಕಡೆಗೆ ಬೆಲ್ಲ ಮತ್ತು ಹುಳಿ ಸೇರಿಸಿದ ಪಾನಕಗಳು ಜನಪ್ರಿಯ. ಇನ್ನು ಕೆಲವು ಸಲ ಕುಡಿಯುವ ನೀರಿಗೇ ಲಾವಂಚ, ಸೊಗದೆ, ತುಳಸಿ, ಬೇವು ಹಾಕುವುದೂ ಉಂಟು. ಪಾನಕಗಳು ಪುರಾತನ ಕಾಲದಿಂದಲೂ ನಮ್ಮ ಆಹಾರದ ಜೊತೆಗೆ ಬೆಳೆದು ಬಂದಿವೆ. ಮೂರನೇ ಮಂಗರಸನು ತನ್ನ ಸೂಪ ಶಾಸ್ತ್ರ ಕೃತಿಯಲ್ಲಿ ‘ಪಾನಕಾಧ್ಯಾಯ’ ಎಂಬ ಪ್ರತ್ಯೇಕ ಅಧ್ಯಾಯವನ್ನೇ ರಚಿಸಿ ಹಲವಾರು ತರಹದ ಪಾನಕಗಳನ್ನು ಮಾಡುವ ಕ್ರಮಗಳ ಬಗ್ಗೆ ಬರೆದಿದ್ದಾನೆ.
ಕಡೆದ ಮಜ್ಜಿಗೆಯ ಸೋದಿಸಿಕೊಂಡು ಬಿಳಿಯುಪ್ಪು ಪುಡಿಯಿಕ್ಕಿ ನಾಲ್ಕೈದು ಬಗೆ ಮಾಡಿ ಮಾವಿನೆಳೆ ಮಿಡಿ ಮಾದಲದ ಕಾಯ ತೊಕ್ಕು ಕರಿಬೇವು ನೀರುಳ್ಳಿ ಹಸಿಯಲ್ಲಗಳನು ಕಡಿದಿಕ್ಕಿ ಹುಳಿಯ ಹಿಂಡುವುದು ಮತ್ತುಳಿದುದಕೆ ಕಡು ಗಂಪಿತಪ್ಪಕಾಯ್ ಬೇಳಿ ಬೇ ಳಿಡುತ ಶೈತ್ಯಂಗೊಳಿಸಿ ಭೋಜನಾಂತ್ಯದೊಳು ಮನಮೊಸೆದು ಪಾನಂಗೊಡುವುದು - 14 ಹಾಲು ಮೊಸರು ಮಜ್ಜಿಗೆಗಳ ಜೊತೆಗೆ ಹಲವು ಹಣ್ಣುಗಳ ಹುಳಿರಸದ ಪಾನಕಗಳು ಇದರಲ್ಲಿವೆ. ಕೆಲವನ್ನು ಬಿಸಿಯಾಗಿ ಕುದಿಸಿ ಮಾಡಿ ಆರಿಸಿ ಕುಡಿಯಬೇಕು. ಕೆಲವಕ್ಕೆ ಒಗ್ಗರಣೆ ಕೂಡ ಹಾಕಬೇಕು. ಇನ್ನು ಕೆಲವು ಬೇಯಿಸಿ ಬಸಿದು ತೆಗೆದು ಕುಡಿಯಬೇಕು. ಕೆಲವು ಹಸಿಯಾಗಿವೆ, ಕೆಲವು ಬಿಸಿಯಾಗಿವೆ ಹೀಗೇ ಹಲವು ತೆರನಾಗಿವೆ. ಈಚಿನ ದಶಕದಲ್ಲಿ ಹಣ್ಣಿನ ಪಾನಕದ ಅಂಗಡಿಗಳು ಎಲ್ಲ ಊರುಗಳಲ್ಲಿಯೂ ಬಹಳವಾಗಿವೆ. ಆದರೆ ಹಣ್ಣಿನ ರಸದ ಪಾನಕದ ಬದಲು ಅದರ ಕೃತಕ ವಾಸನೆಯುಳ್ಳ ನೀರು, ಸಕ್ಕರೆ ಮತ್ತು ಐಸ್‌ಗಳ ಮಿಶ್ರಣವೇ ಹೆಚ್ಚು ಅಲ್ಲಿರುತ್ತದೆ.
ಹಣ್ಣು, ಹಾಲು, ನೀರು ಮತ್ತು ಸಕ್ಕರೆಯ ಪ್ರಮಾಣವು ಬಾಯಿರುಚಿಗೆ ಮತ್ತು ತಕ್ಷಣದ ವಿಶ್ರಾಂತಿಗೆ ಸಮಾಧಾನ ಅನಿಸುತ್ತದೆಯಾದರೂ ಆರೋಗ್ಯಕ್ಕೆ ಒಳ್ಳೆಯವಲ್ಲ. ಎಲ್ಲ ಹುಳಿ-ಸಿಹಿ ಹಣ್ಣುಗಳಲ್ಲಿಯೂ ಪಾನಕವನ್ನು ಬಹಳ ಅಚ್ಚುಕಟ್ಟಾಗಿ ಮಾಡಬಹುದು, ಹಾಗೆಯೆ ಕೆಲವು ತರಕಾರಿಗಳಲ್ಲಿ ಸಹ. ಹಣ್ಣಾದ ಬೇಲದ ಹಣ್ಣಿನ ತಿರುಳನ್ನು ಹೊರಗೆ ತೆಗೆದು ಅದಕ್ಕೆ ತಕ್ಕಷ್ಟು ಬೆಲ್ಲ, ಏಲಕ್ಕಿ ಪುಡಿ. ಒಂದು ಹರಳಿನಷ್ಟು ಉಪ್ಪುಸೇರಿಸಿ ಸ್ವಲ್ಪನೀರು ಹಾಕಿ ಚೆನ್ನಾಗಿ ಕಲಸಿ ಅಥವಾ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಆಮೇಲೆ ಈ ಮಿಶ್ರಣವನ್ನು ಸೋಸಿ ತೆಗೆದರೆ ಬೇಲದ ಹಣ್ಣಿನ ಪಾನಕ ಸಿದ್ಧ. ಇದೇ ತರಹ ಕಲ್ಲಂಗಡಿ, ಖರಬೂಜ, ಮಾವು, ಕಿತ್ತಳೆ ಸೇರಿದಂತೆ ಹಲವು ಹಣ್ಣುಗಳ ಪಾನಕ ಮಾಡಬಹುದು.
ಸೌತೆಕಾಯಿ ಪಾನಕ:
ತರಕಾರಿಯಲ್ಲಿ ಸೌತೆಕಾಯಿ ಬಳಸಿ ಪಾನಕ ಮಾಡಬಹುದು. ಅದರ ತಿರುಳನ್ನು ತೆಗೆದುಕೊಂಡು ಅದಕ್ಕೆ ಚೂರು ತೆಂಗಿನ ಹಾಲು, ಬೆಲ್ಲ ಸೇರಿಸಿ ಚೆನ್ನಾಗಿ ನೀರು ಹಾಕಿ ರುಬ್ಬಿ ಸೋಸಿ ತೆಗೆದರೆ ಸೌತೆಕಾಯಿ ಪಾನಕ ಸಿದ್ದವಾಗುತ್ತದೆ. ಸಿಹಿ ಬದಲು ಚೂರು ಖಾರ ಬೇಕು. ಅಂದರೆ ಬೆಲ್ಲದ ಬದಲು ಉಪ್ಪುಮತ್ತು ಮೆಣಸಿನ ಪುಡಿ ಬೆರೆಸಿ ಪಾನಕ ಮಾಡಬಹುದು.
ಹೆಸರು ಕಾಳು ಪಾನಕ:
ನೆನೆ ಹಾಕಿದ ಹೆಸರುಕಾಳಿನ ಜೊತೆಗೆ ತೆಂಗಿನ ತುರಿ ಬೆಲ್ಲ ಸೇರಿಸಿ ಸಿಹಿ ಅಥವಾ ಉಪ್ಪುಮೆಣಸಿನ ಪುಡಿ ಸೇರಿಸಿ ಖಾರ ಪಾನಕ ಮಾಡಬಹುದು. ಅಗತ್ಯವಿದ್ದರೆ ಕ್ಯಾರೆಟ್ ಕೂಡ ಸೇರಿಸಬಹುದು.
ಕೆಂಪಕ್ಕಿ ಪಾನಕ:
ಪಾಲಿಶ್ ಮಾಡದೆ ಇರುವ ಕೆಂಪಕ್ಕಿಯನ್ನು ಎರಡನೆಯ ಸಲ ತೊಳೆದು ಆ ನೀರನ್ನು ಉಳಿಸಿಕೊಂಡು ಅದಕ್ಕೆ ಬೆಲ್ಲ, ಕಾಯಿಹಾಲು ಬೆರೆಸಿ ಚೆನ್ನಾಗಿ ಕಲಸಿ ಪಾನಕ ಮಾಡಬಹುದು. ಹಸಿಶುಂಠಿಯ ಪಾನಕಕ್ಕೆ ಹೆಚ್ಚಿನ ಸಿದ್ಧತೆ ಬೇಕಿಲ್ಲ. ನಾವು ಮಾಡುವ ನಿಂಬೆಯ ಪಾನಕಕ್ಕೆ ನಿಂಬೆ ರಸವನ್ನು ಚೂರು ಕಡಿಮೆ ಮಾಡಿ ಶುಂಠಿ ರಸವನ್ನು ಚೂರು ಸೇರಿಸಿದರೆ ಮುಗಿಯಿತು, ಹಸಿಶುಂಠಿಯ ಪಾನಕ ಸಿದ್ಧ. ಈ ಪಟ್ಟಿಯು ಇನ್ನೂ ಬಹುವಾಗಿ ಮುಂದುವರಿಯುತ್ತದೆ. ಇಲ್ಲಿ ಕೆಲವನ್ನು ರುಬ್ಬಿಕೊಳ್ಳಬೇಕು. ಕೆಲವದರಲ್ಲಿ ರಸವನ್ನು ಹಿಂಡಿ ತೆಗೆಯಬೇಕು. ಆಮೇಲೆ ಅವಕ್ಕೆ ಬೆಲ್ಲ ಸಕ್ಕರೆ ಅಥವಾ ನಿಂಬೆ-ಹುಣಸೆ ಹುಳಿ ಸೇರಿಸಿ ಕಲಸಿ ಸೋಸಿ ಪಾನಕ ತೆಗೆಯಬೇಕು. ಪಾನಕ ಮಾಡುವ ಹಣ್ಣು /ಪದಾರ್ಥ ಸಿಹಿಯಾಗಿದ್ದರೆ ಹುಳಿಯನ್ನು ಸೇರಿಸಬೇಕು ಅಥವಾ ಹಣ್ಣು/ಪದಾರ್ಥ ಹುಳಿಯಾಗಿದ್ದರೆ ಸಿಹಿಯನ್ನು ಸೇರಿಸಬೇಕು. ಘಮಕ್ಕೆ ಏಲಕ್ಕಿ ಅಥವಾ ಹೂವುಗಳನ್ನು, ಪತ್ರೆಗಳನ್ನು ಬಳಸಬಹುದು. ಬಣ್ಣ ಮತ್ತು ಸುಗಂಧಕ್ಕೆ ಸೊಗದೆ, ಲಾವಂಚದ ರೀತಿಯ ಬೇರುಗಳನ್ನು, ಶಂಖ ಪುಷ್ಪದ ರೀತಿಯ ಹೂಗಳನ್ನು ಬಳಸಬಹುದು. ಹುಲ್ಲಿನ ಪಾನಕಗಳೂ ಉಂಟು. ಎಲ್ಲವೂ ನೈಸರ್ಗಿಕವಾದ ಪದಾರ್ಥಗಳೇ ಆಗಿರುವುದರಿಂದ ಗಂಭೀರ ದುಷ್ಪರಿಣಾಮಗಳೇನು ಘಟಿಸುವುದಿಲ್ಲ. ಅಡುಗೆ - ಆಹಾರ ಎಂಬುದು ಸದಾ ಪ್ರಯೋಗಶೀಲತೆಯೇ ಆಗಿದೆ. ಚೂರು ಬಿಸಿಲಾದಾಗ, ದಣಿವಾದಾಗ ಒಂದಷ್ಟು ಪ್ರಯೋಗಕ್ಕೆ ಮುಂದಾಗಿರಿ.