ಡಿಜಿಟಲ್ ಯುಗಕ್ಕೆ ದಾಪುಗಾಲಿಟ್ಟ ಪತ್ರಮಿತ್ರ ಅಂಚೆಯಣ್ಣ!

Update: 2020-10-09 09:16 GMT

‘ಮನೆಗೊಂದು ಪತ್ರ ಊರು-ಹೋಬಳಿಗೊಂದು ಅಂಚೆ ಕಚೇರಿ’ ಎಂಬ ಪರಿಕಲ್ಪನೆ ಇಂದು ಸಂಪೂರ್ಣ ಬದಲಾಗಿದೆ. ಕಂಪ್ಯೂಟರ್, ಇಂಟರ್‌ನೆಟ್, ಮೊಬೈಲ್, ಡಿಜಿಟಲ್ ಕಾಲಕ್ಕೆ ತಕ್ಕಂತೆ ಮನೆ ಬಾಗಿಲಿಗೆ ಅಂಚೆ, ಆನ್‌ಲೈನ್ ಬ್ಯಾಂಕಿಂಗ್ ಸೇವೆ ಸೇರಿದಂತೆ ‘ಗ್ರಾಹಕರ’ ಎಲ್ಲ ಅಗತ್ಯತೆಯನ್ನು ಪೂರೈಸುವತ್ತ, ‘ಬೆರಳತುದಿಯಲ್ಲೆ ಅಂಚೆ ಕಚೇರಿ’ ಎಂಬ ಆಧುನಿಕತೆಯತ್ತ ಅಂಚೆ ಸೇವೆ ದಾಪುಗಾಲಿಟ್ಟು ನಿಂತಿದೆ.

‘ಒಲವಿನ ಓಲೆ’ಗಷ್ಟೇ ಸೀಮಿತವಾಗಿದ್ದ ಅಂಚೆ ಕಚೇರಿ, ಅಂಚೆಯಣ್ಣ ಕೇವಲ ‘ಪತ್ರ ಮಿತ್ರ’ನಷ್ಟೇ ಆಗಿಲ್ಲ. ಬದಲಿಗೆ ಜಗತ್ತಿನ ಉದ್ದಗಲಕ್ಕೂ ತನ್ನ ಹತ್ತು-ಹಲವು ಸೇವೆಗಳನ್ನು ಒದಗಿಸುವ ಮೂಲಕ ದೇಶದ ಕೋಟ್ಯಂತರ ಅಕ್ಷರ ವಂಚಿತ ಗ್ರಾಮೀಣ ಪ್ರದೇಶದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಜನರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಅಂಚೆ ಸೇವೆಯ ನೆನಪಿಗಾಗಿ ಇಂದು(ಅ.9) ‘ವಿಶ್ವ ಅಂಚೆ ದಿನ’. ಆ ಹಿನ್ನೆಲೆಯಲ್ಲಿ ‘ವಾರ್ತಾಭಾರತಿ’ ಪತ್ರಿಕೆ ಆಧುನಿಕ ಯುಗದಲ್ಲಿ ಅಂಚೆ ವ್ಯವಸ್ಥೆಯಲ್ಲಿನ ಬದಲಾವಣೆ, ಭವಿಷ್ಯದ ಕುರಿತು ಅವಲೋಕನ ನಡೆಸಿದೆ.

ಒಂದು ಕಡೆಯಿಂದ ಮತ್ತೊಂದು ಕಡೆಗೆ ಪತ್ರ, ಪಾರ್ಸಲ್ ರವಾನೆ, ಮನಿಯಾರ್ಡರ್ ಮಾಡುವುದು(ಎಂಓ) ಸೇರಿ ನಾಲ್ಕೈದು ಸೇವೆಗಳಿಗಷ್ಟೇ ಸೀಮಿತವಾಗಿದ್ದ ಅಂಚೆ ಇಲಾಖೆ, ಡಿಜಿಟಲ್ ಯುಗದ ಆಧುನಿಕ ವ್ಯವಸ್ಥೆಗೆ ಹೊಂದಿಕೊಂಡಿದೆ. ಹೀಗಾಗಿ ದೇಶದ ಮೂಲೆ ಮೂಲೆಗಳಿಗೂ ಅಂಚೆ ಸೇವೆ ವಿಸ್ತರಿಸಿದೆ. ದೇಶದಲ್ಲಿ 1.50 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಜಿಲ್ಲಾ ಕೇಂದ್ರದಲ್ಲಿ ಪ್ರಧಾನ, ತಾಲೂಕು ಮತ್ತು ಹೋಬಳಿ ಕೇಂದ್ರದಲ್ಲಿ ಅಂಚೆ ಉಪಕೇಂದ್ರ ಹಾಗೂ ಗ್ರಾಮೀಣ ಅಂಚೆ ಕಚೇರಿ ಸೇರಿ ರಾಜ್ಯದಲ್ಲಿ ಸುಮಾರು 5 ಸಾವಿರದಷ್ಟು ಅಂಚೆ ಕಚೇರಿಗಳು, ಸುಮಾರು ಹದಿನೈದರಿಂದ ಇಪ್ಪತ್ತು ಸಾವಿರಕ್ಕೂ ಅಧಿಕ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿನಿತ್ಯ ಕೋಟ್ಯಂತರ ರೂ.ವಹಿವಾಟು ನಡೆಸುತ್ತಿದೆ. ಜೊತೆಗೆ ಕೇಂದ್ರ-ರಾಜ್ಯಗಳ ಸರಕಾರಗಳ ಹತ್ತು-ಹಲವು ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಮಹೋನ್ನತ ಕಾರ್ಯಕ್ಕೆ ತನ್ನನ್ನು ತೊಡಗಿಸಿಕೊಂಡಿರುವುದು ಅಂಚೆ ಸೇವೆಯ ಹೆಗ್ಗಳಿಕೆ.

ಹತ್ತಾರು ಖಾಸಗಿ, ರಾಷ್ಟ್ರೀಕೃತ ಬ್ಯಾಂಕುಗಳು, ನೂರಾರು ಖಾಸಗಿ ಹಣಕಾಸು ಸಂಸ್ಥೆಗಳು, ನಾಮುಂದು, ತಾಮುಂದು ಎಂದು ಬೇಕಿರುವುದನ್ನು ಮನೆ ಬಾಗಿಲಿಗೆ ತಂದು ಕೊಡುವ ಲಕ್ಷಾಂತರ ಕಂಪೆನಿ-ಸಂಸ್ಥೆಗಳಿದ್ದರೂ, ವಿಶ್ವಾಸಾರ್ಹತೆಯ ಕೊರತೆ ಇದೆ. ಆದರೆ, ಅಂಚೆ ಇಲಾಖೆ ಬದ್ಧತೆಯಿಂದ ಜನ ಸೇವೆಗೆ ನಿಂತಿರುವುದಲ್ಲದೆ, ವಿಶ್ವಾಸಾರ್ಹತೆಗೆ ಹೆಸರಾಗಿದೆ. ಡಿಜಿಟಲ್ ಡೆಲೆವರಿ(ವಿಲೇ), ಆನ್‌ಲೈನ್ ಪೇಮೆಂಟ್, ಅಂಚೆ ಜೀವ ವಿಮೆ, ಇಂಟರ್ನೆಟ್ ಬ್ಯಾಂಕಿಂಗ್ ಸಹಿತ ಹಲವು ಸೇವೆಗಳನ್ನು ಒದಗಿಸುತ್ತಿದೆ.

►ಹೆಚ್ಚಿದ ವೇಗ: ಪರಸ್ಪರ ಸಂಪರ್ಕ ಸಾಧನಕ್ಕೆ ಪಾರಿವಾಳಗಳ ಮೂಲಕ ಆರಂಭಗೊಂಡ ಅಂಚೆ ವ್ಯವಸ್ಥೆ ಇಂದು ಅತ್ಯಂತ ವೇಗ ಪಡೆದುಕೊಂಡಿದೆ. ಸಂದೇಶ ರವಾನೆಗೆ ಸೀಮಿತವಾಗಿದ್ದ ಈ ವ್ಯವಸ್ಥೆ ಇಂದು ಎಲ್ಲ ಕ್ಷೇತ್ರಕ್ಕೂ ವಿಸ್ತರಣೆಗೊಂಡಿದೆ. ರಾಜ ಮಹರಾಜರ ಆಡಳಿತದಲ್ಲಿ ಗೂಢಚರ್ಯ ಸಂದೇಶಕ್ಕೆ ಬಳಕೆ ಮಾಡುತ್ತಿದ್ದ ಈ ವ್ಯವಸ್ಥೆ ಇಂದು ಆಡಳಿತ ವ್ಯವಸ್ಥೆ ಮತ್ತು ಜನರ ಬದುಕಿನ ಪ್ರಮುಖ ಅಂಗಗಳಲ್ಲಿ ಒಂದಾಗಿದೆ.

►ಮನೆ ಬಾಗಿಲಿಗೆ ಎಟಿಎಂ: ಬ್ಯಾಂಕುಗಳ ಎಟಿಎಂ ಎಲ್ಲರಿಗೂ ಗೊತ್ತು. ಆದರೆ, ‘ಮನೆ ಬಾಗಿಲಿಗೆ ಎಟಿಎಂ’ ಎಂಬ ಅಂಚೆ ಇಲಾಖೆ ಹೊಸ ಪರಿಕಲ್ಪನೆಯ ಸೇವೆ ಬಹುತೇಕರಿಗೆ ಗೊತ್ತಿಲ್ಲ. ಯಾವುದೇ ಬ್ಯಾಂಕುಗಳಿಂದ ನೀವು ಇರುವ ಜಾಗದಲ್ಲೇ ನಿಮ್ಮ ಹಣ ಪಡೆದುಕೊಳ್ಳಬಹುದಾಗಿದೆ. ಡಿಜಿಟಲ್ ಆ್ಯಪ್ ಮೂಲಕ ಅಂಚೆ ಇಲಾಖೆ ನಿಮ್ಮ ಮನೆ ಬಾಗಿಲಲ್ಲೆ ನಿಮ್ಮ ಹೆಬ್ಬೆರಳಿನ ಗುರುತನ್ನು ಪಡೆದು ನಿಮಗೆ ಹಣ ನೀಡುವ ವ್ಯವಸ್ಥೆ ಮಾಡಿದೆ. ಹಿರಿಯ ನಾಗರಿಕರು, ಅಂಗವಿಕಲರು ಸೇರಿದಂತೆ ಸೂಕ್ತ ಸಾರಿಗೆ ಸಂಪರ್ಕವಿಲ್ಲದ ದೂರದ ಊರುಗಳಲ್ಲಿ ಜನರಿಗೆ ಈ ಸೇವೆ ಬಹಳ ಅನುಕೂಲಕವಾಗಿದೆ.

ಕೋವಿಡ್-19 ಸಂಕಷ್ಟ ಪರಿಸ್ಥಿತಿಯಲ್ಲಿ ಸುದೀರ್ಘ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರು ಮನೆಗಳಲ್ಲೇ ಉಳಿಯುವಂತಾಯಿತು. ಈ ಮಧ್ಯೆ ಬ್ಯಾಂಕಿಂಗ್ ಕ್ರಾಂತಿ ಎಂಬಂತೆ ಅಂಚೆ ಇಲಾಖೆ ಬರೋಬ್ಬರಿ 412 ಕೋಟಿ ರೂ.ಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ದೊಡ್ಡ ಸಾಧನೆಯನ್ನೇ ಮಾಡಿದೆ. ನೀವು ಯಾವ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದೀರಿ ಎಂಬುದರ ಹೊರತಾಗಿಯೂ ನಗರ ಅಥವಾ ಹಳ್ಳಿಗಳಲ್ಲಿ ಬ್ರಾಂಚ್ ಇಲ್ಲದೆ ಅಂಚೆ ಕಚೇರಿಗೆ ಕರೆ ಮಾಡಿ ನಗದನ್ನು ಮನೆ ಬಾಗಿಲಿಗೆ ತಲುಪಿಸಲು ವಿನಂತಿಸಬಹುದಾಗಿದೆ. ಕೇವಲ 15 ನಿಮಿಷದೊಳಗೆ ಆಯಾ ಪ್ರಾದೇಶಿಕ ಕಚೇರಿಯ ಪೋಸ್ಟ್ ಮ್ಯಾನ್ ನಿಮ್ಮ ಮನೆ ಬಾಗಿಲಿಗೆ ತಲುಪಿ ಹಣವನ್ನು ವರ್ಗಾಯಿಸಲಿದ್ದಾರೆ. ಇದಕ್ಕಾಗಿ ಅಂಚೆ ಕಚೇರಿಯಲ್ಲಿ ಖಾತೆಯೊಂದನ್ನು ಹೊಂದಿರಬೇಕು ಅಷ್ಟೇ. ಅಂಚೆ ಇಲಾಖೆ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ (ಐಪಿಪಿಬಿ) ಬೆರಳಚ್ಚು ತಂತ್ರಜ್ಞಾನ ಹೊಂದಿರುವ ಕೈಯಿಂದಲೇ ನಿಯಂತ್ರಿಸಬಹುದಾದ 1.86 ಲಕ್ಷ ಎಇಪಿಎಸ್ ಡಿವೈಸ್ ಮೂಲಕ ಈ ಎಲ್ಲ ನಗದು ವ್ಯವಹಾರಗಳನ್ನು ಮಾಡಲಾಗಿದೆ. ಗ್ರಾಹಕರ ಮನೆ ಬಾಗಿಲಿಗೆ ಸೇವೆಯನ್ನು ಒದಗಿಸಲು 2ಲಕ್ಷ ಅಂಚೆ ಪೇದೆಗಳು ಸೇವೆ ಸಲ್ಲಿಸುತ್ತಿದ್ದಾರೆ.

►ಅಂಚೆ ‘ಸುಕನ್ಯಾ’: ‘ಹೆಣ್ಣು ಮಗುವೇ ಭಾರ’ ಎಂಬ ಅಪನಂಬಿಕೆ ತೊಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ 2015ರಲ್ಲಿ ರೂಪಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಸುಕನ್ಯಾ ಸಮೃದ್ಧಿ ಯೋಜನೆ ನಿಜಕ್ಕೂ ಇಂದು ದೇಶದ ಎಲ್ಲ ಕಡೆಗಳಲ್ಲಿ ‘ಅಂಚೆ ಸುಕನ್ಯಾ’ ಯೋಜನೆಯಾಗಿ ಮನೆ ಮಾತಾಗಿದೆ. ಅಲ್ಲದೆ, ಸುಮಾರು 15 ಕೋಟಿ ಫಲಾನುಭವಿಗಳು ಈ ಯೋಜನೆಯಡಿ ಖಾತೆ ಹೊಂದಿದ್ದಾರೆ. ಇದು ಹೆಣ್ಣು ಮಕ್ಕಳ ಹೆಸರಲ್ಲಿ ತೆರೆಯುವ ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ 1ಸಾವಿರ ರೂ.ಕನಿಷ್ಠ ಕಂತಿನ ಮೊತ್ತವನ್ನು ಪಾವತಿಸುವ ಮೂಲಕ ಖಾತೆಯನ್ನು ಚಾಲ್ತಿಯಲ್ಲಿಡಬಹುದು. ಹೆಣ್ಣು ಮಕ್ಕಳ ಪಾಲಕರು ಹೆಣ್ಣು ಮಗುವಿನ ಹೆಸರಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದಾಗಿದೆ. ಖಾತೆ ಆರಂಭಿಸಿದ ದಿನದಿಂದ 21 ವರ್ಷಗಳವರೆಗೆ ಖಾತೆ ಚಾಲನೆಯಲ್ಲಿರುತ್ತದೆ. ಆನಂತರ ಖಾತೆಯನ್ನು ಮುಕ್ತಾಯಗೊಳಿಸಿ, ಖಾತೆ ಹೊಂದಿರುವ ಹೆಣ್ಣು ಮಗುವಿಗೆ ಸಂಪೂರ್ಣ ಮೊತ್ತವನ್ನು ನೀಡಲಾಗುತ್ತದೆ. ಒಂದು ವೇಳೆ 21 ವರ್ಷದ ಪಕ್ವತಾ ಅವಧಿಯ ನಂತರವೂ ಖಾತೆಯನ್ನು ಬಂದ್ ಮಾಡದಿದ್ದಲ್ಲಿ ಖಾತೆಯಲ್ಲಿನ ಹಣಕ್ಕೆ ಆಯಾ ಕಾಲಕ್ಕೆ ನಿರ್ಧರಿತವಾಗುವ ದರದಲ್ಲಿ ಬಡ್ಡಿಯನ್ನು ಜಮೆಮಾಡಲಾಗುತ್ತದೆ. ಒಂದು ವೇಳೆ ಖಾತೆ ಆರಂಭಿಸಿದ 21 ವರ್ಷದೊಳಗೆ ಖಾತೆ ಹೊಂದಿದ ಹೆಣ್ಣು ಮಗಳು ವಿವಾಹವಾದಲ್ಲಿ ಖಾತೆಯನ್ನು ಸ್ವಚಾಲಿತವಾಗಿ ಮುಕ್ತಾಯಗೊಳಿಸಲಾಗುತ್ತದೆ.

ಖಾತೆ ತೆರೆದ 14 ವರ್ಷಗಳ ವರೆಗೆ ಖಾತೆಗೆ ವಂತಿಗೆ ಪಾವತಿಸಬಹುದು. ಈ ಅವಧಿಯ ನಂತರ ಖಾತೆಯಲ್ಲಿ ಹಣಕ್ಕೆ ಬಡ್ಡಿ ಮಾತ್ರ ಜಮೆ ಮಾಡುತ್ತ ಹೋಗಲಾಗುತ್ತದೆ. ಖಾತೆ ಹೊಂದಿದ ಹೆಣ್ಣು ಮಗಳು ತನಗೆ 18 ವರ್ಷ ವಯಸ್ಸು ಪೂರ್ಣವಾದ ನಂತರ ಒಂದು ವೇಳೆ ಬಯಸಿದಲ್ಲಿ, 21 ವರ್ಷದ ಪಕ್ವತಾ ಅವಧಿಯ ಮುನ್ನವೇ ಖಾತೆಯಲ್ಲಿನ ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ. ಹಿಂದಿನ ಆರ್ಥಿಕ ವರ್ಷದ ಕೊನೆಯಲ್ಲಿ ಖಾತೆಯಲ್ಲಿ ಇರುವ ಒಟ್ಟು ಮೊತ್ತದ ಶೇ.50ರಷ್ಟನ್ನು ಉನ್ನತ ವಿದ್ಯಾಭ್ಯಾಸ ಅಥವಾ ವಿವಾಹಕ್ಕಾಗಿ ಮರಳಿ ಪಡೆಯಬಹುದಾಗಿದೆ. ಅಲ್ಲದೆ, ತೆರಿಗೆ ವಿನಾಯಿತಿ ಪಡೆಯಬಹುದು. ಹೆಣ್ಣು ಮಗು ಹುಟ್ಟಿದ 10 ವರ್ಷಗಳ ಅವಧಿಯೊಳಗೆ ಮಗುವಿನ ಪಾಲಕರು ಮಗುವಿನ ಹೆಸರಲ್ಲಿ ಖಾತೆ ಆರಂಭಿಸಬಹುದು. ಓರ್ವ ಹೆಣ್ಣು ಮಗುವಿನ ಹೆಸರಲ್ಲಿ ಒಂದೇ ಖಾತೆ ತೆರೆಯಬಹುದು. ಗರಿಷ್ಠ ತಮ್ಮ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಪಾಲಕರು ಅಥವಾ ಪೋಷಕರು ಸುಕನ್ಯಾ ಸಮೃದ್ಧಿ ಖಾತೆ ಆರಂಭಿಸಬಹುದು. ಆದರೂ ಎರಡನೇ ಹೆರಿಗೆಯಲ್ಲಿ ಅವಳಿ ಹೆಣ್ಣು ಮಕ್ಕಳು ಅಥವಾ ಮೊದಲ ಹೆರಿಗೆಯಲ್ಲೇ ತ್ರಿವಳಿ ಹೆಣ್ಣು ಮಕ್ಕಳು ಜನಿಸಿದಲ್ಲಿ ಮೂರು ಮಕ್ಕಳ ಹೆಸರಲ್ಲಿ ಖಾತೆ ತೆರೆಯಬಹುದು. ಖಾತೆ ಆರಂಭಿಸಲು ಅರ್ಜಿ ಫಾರಂ, ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ, ಗುರುತಿನ ದಾಖಲೆ(ಆರ್‌ಬಿಐನ ಕೆವೈಸಿ ನಿಯಮಗಳ ಅನುಸಾರ), ವಿಳಾಸದ ಪುರಾವೆ ನೀಡಬೇಕಾಗುತ್ತದೆ.

►ನಿಮ್ಮದೇ ಅಂಚೆ ಪೆಟ್ಟಿಗೆ: ಅಂಚೆ ಇಲಾಖೆಯ ಅತ್ಯಂತ ಪುರಾತನ ಸೇವೆಯಾದ ಅಂಚೆ ಪೆಟ್ಟಿಗೆ ಇಂದು ‘ಸ್ಮಾರ್ಟ್ ಪೋಸ್ಟ್ ಬಾಕ್ಸ್’ ಆಗಿದೆ. ಡಿಜಿಟಲ್ ಯುಗದ ಆಧುನಿಕ ‘ಆ್ಯಪ್’ ಇದೀಗ ಅಂಚೆ ಇಲಾಖೆ ಸೇವೆಯಲ್ಲಿಯೂ ಬಂದಿದೆ. ನಿಮ್ಮ ಪತ್ರ, ಪಾರ್ಸಲ್ ಸಹಿತ ವಿವಿಧ ಸೇವೆಗಳನ್ನು ಇಲ್ಲಿ ನೀವು ಪಡೆಯಬಹುದಾಗಿದ್ದು, ಇಲ್ಲಿ ಎಲ್ಲವೂ ಮೊಬೈಲ್ ಮೂಲಕವೇ ಮಾಡಬಹುದಾಗಿದೆ. ಇಲಾಖೆ ಆ್ಯಪ್‌ನಲ್ಲಿ ವಿವರಗಳನ್ನು ನೀಡಿ ನೋಂದಣಿ(ರಿಜಿಸ್ಟಾರ್) ಮಾಡಿಕೊಂಡರೆ ನಿಮ್ಮ ಮೊಬೈಲ್‌ಗೆ ಎಸ್ಸೆಮ್ಮೆಸ್ ಸಂದೇಶ ಬರಲಿದೆ. ಜೊತೆಗೆ ಒಂದು ಓಟಿಪಿ ಬರುತ್ತದೆ. ಅದನ್ನು ಆಧರಿಸಿ ನೀವು ನಿಮ್ಮ ಪತ್ರ, ಪಾರ್ಸಲ್ ಅನ್ನು ಪಡೆದುಕೊಳ್ಳಬಹುದಾಗಿದೆ.

►ಬಡವರಿಗೆ ಬೆಸ್ಟ್ ‘ಅಂಚೆ ಉಳಿತಾಯ’: ಬಡ-ಮಧ್ಯಮ ವರ್ಗದ ಜನರಿಗೆ ಮತ್ತು ಪ್ರತಿನಿತ್ಯ ದುಡಿದು ಉಣ್ಣುವ ಕೂಲಿ-ಕಾರ್ಮಿಕರಿಗೆ ಅಂಚೆ ಇಲಾಖೆ ಉಳಿತಾಯ ಖಾತೆಗಳು ಬೆಸ್ಟ್. ಅಂಚೆ ಕಚೇರಿ ಉಳಿತಾಯ, ನಿಗದಿತ ಅವಧಿಗೆ ಮರಳಿಸುವ ಆರ್‌ಡಿ, ನಿಶ್ಚಿತ ಠೇವಣಿ, ಮಾಸಿಕ ಆದಾಯ ಯೋಜನೆ ಖಾತೆ, ಹಿರಿಯ ನಾಗರಿಕರ ಉಳಿತಾಯ ಖಾತೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್‌ಎಸ್‌ಸಿ), ಕಿಸಾನ್ ವಿಕಾಸ್ ಪತ್ರ ಸೇರಿದಂತೆ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳು ದೇಶದಲ್ಲಿ ಬಹಳ ಜನಪ್ರಿಯವಾಗಿವೆ. ಸೂಕ್ತ ಬಡ್ಡಿ ದರದೊಂದಿಗೆ ಸುರಕ್ಷಿತ ಹೂಡಿಕೆ-ಖಾತರಿಯ ಆದಾಯದೊಂದಿಗೆ ಒದಗಿಸುತ್ತಿವೆ. ಈ ಹಿಂದೆ ನಗದು ರೂಪದಲ್ಲಿ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ವಿಧವಾ ವೇತನವನ್ನು ಒದಗಿಸುತ್ತಿದ್ದ ಅಂಚೆ ಸಿಬ್ಬಂದಿ ಇದೀಗ ಬ್ಯಾಂಕ್ ಮತ್ತು ಅಂಚೆ ಇಲಾಖೆಯಲ್ಲಿ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುವ ಕೆಲಸವನ್ನು ಮಾಡುದ್ದಾರೆ.

►ಗೋಲ್ಡ್ ಬಾಂಡ್: ಶೇರು ಮಾರುಕಟ್ಟೆ ಏರಿಳಿತಗಳ ಕಾಲ ಮಧ್ಯಮ ವರ್ಗದ ಜನರಿಗೆ ‘ಕಷ್ಟ ಕಾಲ’ದಲ್ಲಿ ನೆರವಾಗುವ ಅಂಚೆ ಇಲಾಖೆ ‘ಸವರನ್ ಗೋಲ್ಡ್ ಬಾಂಡ್’(ಎಸ್‌ಜಿಬಿ) ಯೋಜನೆ ಅತ್ಯಂತ ಜನಪ್ರಿಯವಾಗಿದೆ. ಜೊತೆಗೆ ಇದು ಅತ್ಯಂತ ಸುರಕ್ಷಿತ ಮತ್ತು ಭದ್ರತೆಯನ್ನು ಖಾತ್ರಿಪಡಿಸಿದೆ. ಹೀಗಾಗಿ ಈ ಯೋಜನೆ ಸುಮಾರು ಒಂದು ಸಾವಿರ ಕೋಟಿ ರೂ.ಮೊತ್ತದ 17.73ಲಕ್ಷ ಬಾಂಡ್‌ಗಳು ಮಾರಾಟ ಕಂಡಿದ್ದು, ನಿಜಕ್ಕೂ ಇದು ದಾಖಲೆಯೇ ಸರಿ ಎಂದು ಅಧಿಕಾರಿಗಳ ವಿವರಣೆಯಾಗಿದೆ.

►ಇ-ಕಾಮರ್ಸ್: ಅಮೆಜಾನ್, ಫ್ಲಿಪ್‌ಕಾರ್ಟ್ ಮಾದರಿಯಲ್ಲೇ ಅಂಚೆ ಇಲಾಖೆಯ ಇ-ಕಾಮರ್ಸ್ ವ್ಯವಸ್ಥೆ ಸಾವಿರಾರು ಉತ್ಪಾದಕರು ಮತ್ತು ಲಕ್ಷಾಂತರ ಗ್ರಾಹಕರ ಸ್ನೇಹಿಯಾಗಿದೆ. ತಮಗೆ ಬೇಕಿದ್ದ ವಸ್ತುಗಳನ್ನು ಗ್ರಾಹಕರು ಆನ್‌ಲೈನ್ ಮೂಲಕವೇ ಖರೀದಿಸಬಹುದಾಗಿದೆ. ಇಲ್ಲಿ ಉತ್ಪಾದಕರು ಮತ್ತು ಗ್ರಾಹಕರು ನೊಂದಣಿ ಮಾಡಿಕೊಳ್ಳಬೇಕು. ಯಾವುದೇ ರೀತಿಯ ವಂಚನೆಗೆ ಅವಕಾಶವಿಲ್ಲ. ನಿಗದಿತ ಅವಧಿಯಲ್ಲೆ ಜನರಿಗೆ ನಿಶ್ಚಿತ ಸೇವೆ ದೊರೆಯಲಿದೆ.

►ಜೀವ ರಕ್ಷಕ: ಮಾರಕ ಕೊರೋನ ಸೋಂಕಿಗೆ ಇನ್ನೂ ಔಷಧ ಬಂದಿಲ್ಲ. ಆದರೆ, ಅಂಚೆ ಇಲಾಖೆ ಮತ್ತು ಇಲ್ಲಿನ ಸಿಬ್ಬಂದಿ ಕೊರೋನ ವಾರಿಯರ್ಸ್ ಆಗಿಯೂ ಸೋಂಕಿನ ವಿರುದ್ಧದ ಹೋರಾಟದಲ್ಲಿ ತಮ್ಮ ಕಾರ್ಯ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ಮೂಲೆ-ಮೂಲೆಗೂ ಜೀವ ರಕ್ಷಕ ಔಷಧಿಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಕೋವಿಡ್-19 ಸೋಂಕಿನ ಸಂಕಷ್ಟದ ಅವಧಿಯಲ್ಲಿ ರಾಕಿ ಹಬ್ಬದ ಸಂದರ್ಭದಲ್ಲಿ ತಮ್ಮ ಸಹೋದರರಿಗೆ ರಾಕಿ ರವಾನೆ ಮತ್ತು ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಲಕ್ಷಾಂತರ ಮಕ್ಕಳ ಕೊಡುಗೆಯನ್ನು ಶಿಕ್ಷಕರಿಗೆ ತಲುಪಿಸುವ ಕೆಲಸವನ್ನು ಅಂಚೆ ಇಲಾಖೆ ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದೆ.

Writer - ಪ್ರಕಾಶ್ ರಾಮಜೋಗಿಹಳ್ಳಿ

contributor

Editor - ಪ್ರಕಾಶ್ ರಾಮಜೋಗಿಹಳ್ಳಿ

contributor

Similar News