ಕಳಚಿದ ರಾಜನ್-ನಾಗೇಂದ್ರ ಜೋಡಿಯ ಕೊನೆಯ ಕೊಂಡಿ
ಶಾಸ್ತ್ರೀಯ ಸಂಗೀತ ವಾದ್ಯಗಳ ಜೊತೆಗೆ ಪಾಶ್ಚಾತ್ಯ ವಾದ್ಯಗಳನ್ನೂ ಬಳಸಿ ವಿಶಿಷ್ಟ ಸ್ವರಮೇಳವನ್ನು ಸೃಷ್ಟಿಸಿ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಸಿಕರಿಗೆ ಮಾಧುರ್ಯದ ಔತಣ ಬಡಿಸಿದ ರಾಜನ್-ನಾಗೇಂದ್ರ ಜೋಡಿಯ ಹಿರಿಯಣ್ಣ ರಾಜನ್ ಅವರ ಅಗಲಿಕೆಯಿಂದ ಸಂಗೀತದ ಒಂದು ಯುಗ ಕೊನೆಯಾಯಿತು. ಆದರೆ ಅವರು ಸೃಷ್ಟಿಸಿದ ಅಪೂರ್ವ ಸ್ವರಮೇಳದ ಹಾಡುಗಳ ನಾದ, ಲಯ, ಮಾಧುರ್ಯಕ್ಕೆ ಕೊನೆಯೆಲ್ಲಿ?
ಕನ್ನಡ ಚಿತ್ರಗೀತೆಗಳಿಗೆ ಹೊಸ ಬಗೆಯ ಮಾಧುರ್ಯ, ಲಯ ಮತ್ತು ಗುನುಗಿಸುವ ಲಕ್ಷಣವನ್ನು ತಂದುಕೊಟ್ಟ ರಾಜನ್ ನಾಗೇಂದ್ರ ಸೋದರ ಜೋಡಿಯ ಹಿರಿಯಣ್ಣ ಅಗಲಿದ್ದಾರೆ. ಎರಡು ದಶಕಗಳ ಹಿಂದೆಯೇ ಕಿರಿಯ ಸಹೋದರ ನಾಗೇಂದ್ರ ಅವರು ಅಗಲಿದ ನಂತರ ಈ ಜೋಡಿಯ ಸ್ವರಮಾಧುರ್ಯ ಹೆಚ್ಚು ಕಡಿಮೆ ನಿಂತು ಹೋಯಿತು. ನಾಲ್ಕುದಶಕಗಳ ಸಂಗೀತದ ಸುದೀರ್ಘ ಪಯಣದಲ್ಲಿ ಅವರದು ಅಪ್ರತಿಮ ಸಾಧನೆ. ಕನ್ನಡ, ತೆಲುಗು, ತಮಿಳು ಚಿತ್ರರಂಗದ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದ ಅವರು ಇತ್ತೀಚೆಗೆ ಅಗಲಿದ ಗಾಯನ ಗಂಧರ್ವ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಸಿರಿಕಂಠವನ್ನು ಸಮರ್ಥವಾಗಿ ದುಡಿಸಿಕೊಂಡು ಬಾಲು ಅವರು ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲು ಬಹುಮಟ್ಟಿಗೆ ಕಾರಣವಾದವರು. ವಿಚಿತ್ರವೆಂದರೆ ಈಗ ಹಿರಿಯಣ್ಣ ರಾಜನ್ ನಿಧನರಾದರೂ ಅವರನ್ನು ನಾಗೇಂದ್ರ ಅವರ ಉಲ್ಲೇಖವಿಲ್ಲದೆ ಒಂಟಿಯಾಗಿ ನೆನೆಯಲು ಸಾಧ್ಯವಿಲ್ಲ. ನಾಗೇಂದ್ರ ಅವರು 2000ದಲ್ಲಿ ಅಗಲಿದ ಸಮಯದಲ್ಲೂ ರಾಜನ್ ಅವರನ್ನು ಜೊತೆಯಲ್ಲೇ ನೆನೆಯಬೇಕಾಯಿತು. ಕೃತಿ, ಸಾಧನೆ, ನೆನಪುಗಳಲ್ಲಿ ಅಗಲಿಸಲಾಗದ ಅಪೂರ್ವ ಜೋಡಿಯಿದು. ಹಾಗೆ ನೋಡಿದರೆ ಐವತ್ತರ ದಶಕದಲ್ಲಿ ಪ್ರವರ್ಧಮಾನಕ್ಕೆ ಬಂದ ಪ್ರಮುಖ ಕನ್ನಡ ಚಿತ್ರಸಂಗೀತ ನಿರ್ದೇಶಕರಲ್ಲಿ ರಾಜನ್ ನಾಗೇಂದ್ರ ಅವರೇ ಮೊದಲ ಅಪ್ಪಟ ಕನ್ನಡ ಸಂಗೀತಗಾರರು. (ಪಿ. ಶಾಮಣ್ಣ ಅವರು ಹಿರಿಯರಾದರೂ ಪ್ರಮುಖ ನಿರ್ದೇಶಕರಾಗಿ ಹೊರಹೊಮ್ಮಲಿಲ್ಲ) ಮೈಸೂರಿನ ಶಿವರಾಂ ಪೇಟೆಯ ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ರಾಜನ್ (1933-2020) ಪಿಟೀಲು ವಾದ್ಯದಲ್ಲಿ ಸಾಧನೆ ಮಾಡಿದರೆ, ನಾಗೇಂದ್ರ (1935-2000) ಅವರು ಜಲತರಂಗ ವಾದ್ಯದಲ್ಲಿ ಪರಿಣತಿ ಪಡೆದರು. ಬೆಂಗಳೂರು, ಮೈಸೂರು ಮುಂತಾದ ನಗರಗಳಲ್ಲಿ ಸಂಗೀತ ಮೇಳದಲ್ಲಿ ಕಾರ್ಯಕ್ರಮ ನೀಡುತ್ತಿದ್ದ ಅವರು ಮುಂದೆ ಮದರಾಸಿಗೆ ತೆರಳಿ ಸಂಗೀತ ನಿರ್ದೇಶಕ ಎಚ್. ಆರ್. ಪದ್ಮನಾಭಶಾಸ್ತ್ರಿ ಅವರಲ್ಲಿ ಸಿನೆಮಾ ಸಂಗೀತದ ಪಟ್ಟುಗಳನ್ನು ಕಲಿತರು. ತೆಲುಗು ಚಿತ್ರಗಳ ಧ್ವನಿಮುದ್ರಣಕ್ಕೆ ನೆರವು ನೀಡುವ ಮೂಲಕ ಚಿತ್ರಸಂಗೀತದಲ್ಲಿ ಪರಿಣತಿ ಸಾಧಿಸಿದರು.
ಬಿ. ವಿಠಲಾಚಾರ್ಯರ ‘ಸೌಭಾಗ್ಯಲಕ್ಷ್ಮೀ’(1953) ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕ ಜೋಡಿಯಾಗಿ ಬಂದ ರಾಜನ್-ನಾಗೇಂದ್ರ ಸುಮಾರು ನಾಲ್ಕು ದಶಕಗಳ ಕಾಲ ಅತಿ ಹೆಚ್ಚು ಸಂಖ್ಯೆಯ ಜನಪ್ರಿಯ ಗೀತೆಗಳನ್ನು ನೀಡಿದರು. ಅವರಷ್ಟು ಸಂಭ್ರಮ ಭಾವವನ್ನು ಹೊಮ್ಮಿಸುವ ನಾದ ಮಾಧುರ್ಯದ ಗೀತೆಗಳನ್ನು ಸೃಜಿಸಿದವರು ವಿರಳ. 1953ರಲ್ಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರೂ ಮುಂದಿನ ಹತ್ತು ವರ್ಷಗಳಲ್ಲಿ ಅವರು ಸಂಗೀತ ನಿರ್ದೇಶನ ಮಾಡಿದ ಚಿತ್ರಗಳು ಏಳು ಮಾತ್ರ. ಅದರಲ್ಲೂ ಭಾರೀ ಜನಪ್ರಿಯವಾದ ಹಾಡುಗಳು ಇರಲೇ ಇಲ್ಲವೆನ್ನಬಹುದು. ಆದರೆ ರಾಜನ್-ನಾಗೇಂದ್ರ ಅವರ ವೃತ್ತಿಬದುಕನ್ನು ಅವಲೋಕಿಸಿದವರಿಗೆ ಅವರು ಕಾಲಕಾಲಕ್ಕೆ ಒಂದು ಟ್ರೆಂಡ್ (ದಾಟಿ) ಅನ್ನು ಸೆಟ್ ಮಾಡುತ್ತಿದ್ದದ್ದು ಗೋಚರಿಸುತ್ತದೆ. 1962ರಲ್ಲಿ ಬಿಡುಗಡೆಯಾದ ಅವರ ಸಂಗೀತ ನಿರ್ದೇಶನದ ಏಳನೇ ಚಿತ್ರ ‘ರತ್ನಮಂಜರಿ’ ತೀವ್ರ ನೃತ್ಯಗತಿಯ ಹಾಗೂ ಮಾಧುರ್ಯದ ಹಾಡುಗಳನ್ನು ಪರಿಚಯಿಸಿತು. ಕನ್ನಡ ಚಿತ್ರಗೀತೆಗಳು ಒಂದು ರೀತಿಯ ಸೋಬರ್ ಲಕ್ಷಣದವು, ನೃತ್ಯಗತಿಗೆ ಹೊಂದದವು ಎಂಬ ಟೀಕೆವ್ಯಾಪಕವಾಗಿದ್ದ ಕಾಲದಲ್ಲಿ ರತ್ನಮಂಜರಿಯ ಗಿಲ್ ಗಿಲ್ ಗಿಲಕ್ಕ, ಯಾರು ಯಾರು ನೀ ಯಾರು ಗೀತೆಗಳು ಉತ್ತರ ನೀಡಿದವು. ಮುಂದೆ ಅವರು ಹುಣಸೂರು ಕೃಷ್ಣಮೂರ್ತಿಯವರ ಸಾಹಿತ್ಯಕ್ಕೆ ಸಮರ್ಥವಾಗಿ ರಾಗ ಸಂಯೋಜನೆ ಮಾಡತೊಡಗಿದರು. ‘ರತ್ನಮಂಜರಿ’ನಂತರ ಬಂದ ಹುಣಸೂರು-ರಾಜನ್ ನಾಗೇಂದ್ರ ಕಾಂಬಿನೇಷನ್ ಇದ್ದ ವೀರಸಂಕಲ್ಪದ ಹಾಡುಗಳು- ‘ಹಾಡು ಬಾ ಕೋಗಿಲೆ...’, ‘ದುಡಕದಿರು ದುಡಕದಿರು ದುಡಕದಿರು ಹೃದಯೇಶ...’, ‘ಸಿಟ್ಯಾಕೋ ಸಿಡಿಕ್ಯಾಕೋ ನನಜಾಣ...’, ‘ಯುದ್ಧ... ಯುದ್ಧ...’ ಜನಪ್ರಿಯಗೊಂಡವು. ‘ನವ ಜೀವನ’ (ಕರೆಯೇ ಕೋಗಿಲೆ ಮಾಧವನಾ..., ಲೀಲಾಮಯ ಹೇ ದೇವಾ), ‘ಅನ್ನಪೂರ್ಣ’ (ಕನ್ನಡವೇ ತಾಯ್ನುಡಿಯು, ಹೃದಯ ವೀಣೆ ಮಿಡಿಯೆ ತಾನೆ...) ಅವರ ಪ್ರತಿಭೆ ಹೊರಹಾಕಿದರೂ ನೇಪಥ್ಯಕ್ಕೆ ಕೆಲಕಾಲ ಸರಿದರು. ಮತ್ತೆ ಹುಣಸೂರರ ‘ಕನ್ನಿಕಾ ಪರಮೇಶ್ವರಿ ಕಥೆ’ (1966) (ನಿಂತಲ್ಲೇ ಅವಳು ಕುಳಿತಲ್ಲೆ ಅವಳು) ‘ಸತಿ ಸುಕನ್ಯ’ (ಮಧುರ ಮಧುರವೀ ಮಂಜುಳಗಾನ) ಚಿತ್ರದಿಂದ ಮೇಲಕ್ಕೆದ್ದು, ಮುಂದುವರಿದು ‘ಬಂಗಾರದ ಹೂವು’ (1967) ಮೂಲಕ ಮತ್ತೊಂದು ಟ್ರೆಂಡ್‌ಸೆಟ್ ಮಾಡಿದರು. ಆ ಚಿತ್ರದ ‘ಓಡುವ ನದಿ ಸಾಗರವ ಬೆರೆಯಲೇ ಬೇಕು’, ‘ಆ ಮೊಗವು ಎಂಥಾ ಚೆಲುವು’, ‘ನೀನಡೆವ ಹಾದಿಯಲ್ಲಿ’ -ಹಾಡುಗಳು ಗುಂಗು ಹಿಡಿಸಿದ್ದವು. ನಂತರ ಇತರ ಸಂಗೀತ ನಿರ್ದೇಶಕರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ ಮತ್ತು ಕನ್ನಡ ಚಿತ್ರಗಳ ಸಂಖ್ಯೆ ಅಷ್ಟೇನೂ ಏರದ ಕಾರಣ ಮತ್ತೆ ಏಳು ವರ್ಷಗಳ ಕಾಲ ಬೆರಳೆಣಿಕೆಯಷ್ಟು ಚಿತ್ರಗಳಿಗೆ ಮಾತ್ರ ಸಂಗೀತ ನೀಡಿದರು. ಗಮನಾರ್ಹ ಚಿತ್ರಗಳೆಂದರೆ ‘ಮೇಯರ್ ಮುತ್ತಣ್ಣ’, ‘ಬೋರೇಗೌಡ ಬೆಂಗಳೂರಿಗೆ ಬಂದ’, ‘ನ್ಯಾಯವೇ ದೇವರು’, ‘ಕುಳ್ಳ ಏಜೆಂಟ್ 000’, ‘ಭಲೇ ಹುಚ್ಚ’, ‘ಬೀಸಿದ ಬಲೆ’, ‘ಸ್ವಯಂವರ’ ಮಾತ್ರ. ಈ ಎಲ್ಲ ಚಿತ್ರಗಳ ಪ್ರಣಯ, ಶೃಂಗಾರಭಾವದ ಹಾಡುಗಳಲ್ಲಿ ಮಾತ್ರ ಅವರ ಸಂಭ್ರಮಭಾವದ ಧಾಟಿಯೇ ಮೇಲುಗೈ ಪಡೆದಿತ್ತು. ‘ನ್ಯಾಯವೇ ದೇವರು’ ಚಿತ್ರದ ‘ಆಕಾಶವೆ ಬೀಳಲಿ ಮೇಲೆ’ ಗೀತೆಯು ತನ್ನ ಸಾಹಿತ್ಯ, ಚಿತ್ರದ ಸನ್ನಿವೇಶ ಹಾಗೂ ಸ್ವರಸಂಯೋಜನೆಯಿಂದ ಸಾರ್ವಕಾಲಿಕ ಜನಪ್ರಿಯ ಗೀತೆಯಾಗಿ ಉಳಿದಿದೆ. ಮತ್ತೆ ಈ ಜೋಡಿ ಮೈಕೊಡವಿ ಎದ್ದು ಕನ್ನಡ ಚಿತ್ರಗೀತೆಗಳಿಗೆ ಹೊರಳುದಾರಿಯನ್ನು ತೋರಿಸಿದ್ದು ‘ಎರಡು ಕನಸು’ (1974) ಚಿತ್ರದಲ್ಲಿ. ‘ಎಂದೆಂದು ನಿನ್ನನು ಅಗಲಿ’, ‘ಎಂದು ನಿನ್ನ ನೋಡುವೆ’, ‘ತಂನ ತಂನಂ ನನ್ನೀಮನಸು’, ‘ಪೂಜಿಸಲೆಂದೇ’, ‘ಬಾಡಿಹೋದ ಬಳ್ಳಿಯಿಂದ’, ‘ಇಂದು ಎನಗೆ ಗೋವಿಂದ’- ಒಂದೊಂದು ಹಾಡೂ ಚಿತ್ರರಸಿಕರ ನಾಲಿಗೆಯ ಮೇಲೆ ನಲಿದಾಡಿದವು. ಅಲ್ಲಿಂದಾಚೆಗೆ ಅವರು ಹಿಂದಿರುಗಿ ನೋಡಲಿಲ್ಲ. ಹಾಗೆಯೇ ‘ಎರಡು ಕನಸು’ ಚಿತ್ರದ ಪ್ರಭಾವದಿಂದ ಅವರಿಗೂ ತಪ್ಪಿಸಿಕೊಳ್ಳಲಾಗಲಿಲ್ಲ. ಆ ಚಿತ್ರದ ನಂತರ ರಾಜನ್-ನಾಗೇಂದ್ರರವರ ಯಾವುದೇ ಹಾಡುಗಳನ್ನು ಕೇಳಿದರೂ ‘ಎರಡು ಕನಸು’ ಚಿತ್ರದ ಹಾಡುಗಳ ದಾಟಿ, ಸಂಗೀತ ಸಂಯೋಜನೆಯನ್ನು ವಿಸ್ತರಿಸಿದಂತೆಯೇ ಕಾಣುತ್ತದೆ. ‘ಬಯಲುದಾರಿ’, ‘ಹೊಂಬಿಸಿಲು’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಗಾಳಿಮಾತು’, ‘ನಾನೊಬ್ಬ ಕಳ್ಳ’, ‘ಮಾಂಗಲ್ಯ ಭಾಗ್ಯ’, ‘ಸಿಂಗಾಪುರದಲ್ಲಿ ರಾಜಾಕುಳ್ಳ’, ‘ಕಳ್ಳಕುಳ್ಳ’, ‘ಕಿಲಾಡಿಜೋಡಿ’ -ಹೀಗೆ ಯಾವುದೇ ಚಿತ್ರದ ಹಾಡುಗಳೂ ‘ಎರಡು ಕನಸು’ ಹಾಡುಗಳ ಛಾಯಾನುವರ್ತಿಯಂತೆ ತೋರುತ್ತವೆ. ಅದೇನೇ ಇರಲಿ ‘ಓಡುವ ನದಿ ಸಾಗರವ’, ‘ನಿಂತಲ್ಲೇ ಅವಳು’, ‘ಹೃದಯವೀಣೆ ಮಿಡಿಯೆತಾನೆ’, ‘ಮಾಮರವೆಲ್ಲೋ ಕೋಗಿಲೆ ಎಲ್ಲೊ’, ‘ಆಸೆಯ ಭಾವ...’, ‘ಬಾನಲ್ಲು ನೀನೆ’, ‘ಆಕಾಶದಿಂದ ಧರೆಗಿಳಿದ ರಂಭೆ’, ‘‘ಎಂದೆಂದೂ ನಿನ್ನನು ಮರೆತು’ -ಗೀತೆಗಳನ್ನು ನೀಡಿದ ರಾಜನ್-ನಾಗೇಂದ್ರ ಕನ್ನಡಿಗರೆದೆಯಲ್ಲಿ ಶಾಶ್ವತಸ್ಥಾನ ಪಡೆದಿದ್ದಾರೆ.
ರಾಜನ್ ಅವರು ತಾವೇ ಗಾಯಕರಾಗಿದ್ದರು. ಅನೇಕ ಕನ್ನಡ ಚಿತ್ರಗೀತೆಗಳನ್ನು ಹಾಡಿದ್ದಾರೆ. ಅವುಗಳಲ್ಲಿ ‘ಯಾರು ಯಾರು ನೀ ಯಾರು?’ (ರತ್ನಮಂಜರಿ), ‘ನಮ್ಮೂರ ಸಂತೇಲಿ, ಮುಸ್ಸಂಜೆ ಹೊತ್ತಲ್ಲಿ...’ ( ಗಾಳಿಮಾತು), ‘ನೀಲೀಯ ಬಾನಿಂದ ತಾರೆಯ ಊರಿಂದ ತೇಲುತ್ತಾ ಬಂದನೆ ಚಂದಮಾಮ’ (ಟೋನಿ) ಹಾಡುಗಳು ಇನ್ನೂ ಮಾಸದೆ ಉಳಿದಿವೆ. ಹಾಗಾಗಿ ಅವರು ಗಾಯಕರಿಗೆ ಸ್ವತ: ಹಾಡಿ ತೋರಿಸುತ್ತಿದ್ದರಂತೆ. ಎಲ್ಲ ಸಂಗೀತಕ್ಕೂ ಶಾಸ್ತ್ರೀಯ ಸಂಗೀತವೇ ಮೂಲ ಎಂದು ನಂಬಿದ್ದರೂ ಜನಪದ ಸಂಗೀತದ ಲಯಗಳನ್ನು ಶಾಸ್ತ್ರೀಯ ಸಂಗೀತದ ಜೋತೆ ಸಮ್ಮಿಲನಗೊಳಿಸುವ ಅಪೂರ್ವ ಛಾತಿ ಅವರಿಗಿತ್ತು. ಶಾಸ್ತ್ರೀಯ ವಾದ್ಯಗಳನ್ನು ಬೇರೆ ಬೇರೆ ಸಾಧ್ಯತೆಗಳಲ್ಲಿ ಬಳಸುವ ಕುಶಲತೆಯಿದ್ದ ಅವರು ಚಿತ್ರದ ಆಶಯಕ್ಕೆ ತಕ್ಕಂತೆ ವಾದ್ಯಗಳನ್ನು ಬಳಸುತ್ತಿದ್ದರು. ‘ಮಂತ್ರಾಲಯ ಮಹಾತ್ಮೆ’ ಚಿತ್ರದ ಹಿನ್ನೆಲೆ ಸಂಗೀತದಲ್ಲಿ ಅವರು ರಾಯರಿಗೆ ಪ್ರಿಯವಾದ ವೀಣೆ ಮತ್ತು ಕೃಷ್ಣನ ಕೊಳಲನ್ನೆೇ ಪ್ರಧಾನವಾಗಿ ಬಳಸಿ ಚಿತ್ರದ ಆಶಯವನ್ನು ಎತ್ತರಕ್ಕೆ ಕೊಂಡೊಯ್ದರು. ಸುಕೋಮಲ ವಾದ್ಯಗಳು ಸಂಸಾರದ ಚೌಕಟ್ಟಿನಿಂದ ಯತಿಯಾಗುವ ಹೊರಳು ಹಾದಿ ಹಿಡಿದ ವ್ಯಕ್ತಿಯೊಬ್ಬನ ತುಮುಲಗಳನ್ನು ಬಿಂಬಿಸಲಾರವು ಎಂಬ ನಂಬಿಕೆಯನ್ನೇ ಹುಸಿಗೊಳಿಸಿದರು. ಹಾಗೆಯೇ ಗೀತೆಯ ಅರ್ಥಸಾಧ್ಯತೆ ಮತ್ತು ಭಾವವನ್ನು ವಿಸ್ತರಿಸುವ, ಭಾವಗಳ ತಾಕಲಾಟಗಳನ್ನು ಅಭಿವ್ಯಕ್ತಗೊಳಿಸುವ ರೀತಿಯಲ್ಲಿ ಅವರು ಗೀತೆಗಳನ್ನು ಸಂಯೋಜಿಸುತ್ತಿದ್ದರು. ಜೊತೆಗೆ ಪೂರಕವಾದ ವಾದ್ಯಗಳನ್ನು ಬಳಸುತ್ತಿದ್ದರು. ‘ಹೃದಯವೀಣೆ ಮಿಡಿಯೆ ತಾನೆ, ಕಾರಣವು ನೀನೆ’, ‘ಎಲ್ಲಿರುವೇ ಮನವ ಕಾಡುವ ರೂಪಸಿಯೇ’, ‘ಬಾನಲ್ಲು ನೀನೆ’, ‘ಆಕಾಶದಿಂದ ಧರೆಗಿಳಿದ ರಂಭೆ’, ‘ಮಾಮರವೆಲ್ಲೋ ಕೋಗಿಲೆಯೆಲ್ಲೋ’ ಮುಂತಾದ ಹಾಡುಗಳು ಸಂಭ್ರಮವನ್ನು ಎತ್ತಿಹಿಡಿಯುವ, ‘ನಿನ್ನಾ ರೂಪು ಎದೆಯ ಕಲಕಿ’, ‘ನಿನ್ನ ಸವಿ ನೆನಪೆ ಮನದಲ್ಲಿ ಆರಾಧನೆ’, ‘ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ’ ಹಾಡುಗಳ ನೋವು, ಸಂಭ್ರಮ, ಭಕ್ತಿಯ ಸಮ್ಮಿಶ್ರಭಾವಗಳನ್ನು ಸಮರ್ಥವಾಗಿ ಹಿಡಿಯುವ ಸವಾಲಿನಲ್ಲಿ ಯಶಸ್ವಿಯಾದರು. ಹಿಂದಿಯ ಕಿಶೋರ್ ಕುಮಾರ್ ಅವರನ್ನು ಹಾಡಿಸಿದ್ದು (ಕುಳ್ಳ ಏಜೆಂಟ್ 000)ವಾಣಿ ಜಯರಾಂ ಅವರನ್ನು ದೊಡ್ಡಮಟ್ಟದಲ್ಲಿ ಪರಿಚಯಿಸಿದ್ದು ಅವರ ಯಶಸ್ಸಿನ ಮುಡಿಯ ಮತ್ತೆರಡು ಗರಿಗಳು.
ಹಿನ್ನೆಲೆ ಸಂಗೀತದಲ್ಲೂ ರಾಜನ್ ಜೋಡಿ ಅಷ್ಟೇ ವಿಭಿನ್ನ ಪ್ರಯೋಗಗಳನ್ನು ಮಾಡಿತು. ಅವರು ‘ಮಂತ್ರಾಲಯ ಮಹಾತ್ಮೆ’ಯಂತಹ ಸಂತನ ಕತೆಯ ವಸ್ತವಿನಿಂದ ಹಿಡಿದು ‘ಗಂಧದಗುಡಿ’, ‘ಕಳ್ಳ ಕುಳ್ಳ’ ಚಿತ್ರಗಳಂತಹ ಸಾಹಸಮಯ, ‘ಬಯಲುದಾರಿ’ಯಂತಹ ಸಾಮಾಜಿಕ, ಕೌಟುಂಬಿಕ ಚಿತ್ರಗಳವರೆಗೆ ಅವರ ಕ್ರಿಯಾಶೀಲತೆ ವಿಸ್ತರಿಸಿದೆ. ಆಗಲೇ ಹೇಳಿದಂತೆ ‘ಮಂತ್ರಾಲಯ ಮಹಾತ್ಮೆ’ಯಲ್ಲಿ ಶಾಸ್ತ್ರೀಯ ವಾದ್ಯಗಳ ನವಿರು ಸಂಗೀತ ಹಿನ್ನೆಲೆಯಲ್ಲಿ ಬಳಕೆಯಾದರೆ ‘ಗಂಧದ ಗುಡಿ’ ಚಿತ್ರದ ಸಾಹಸ ಮತ್ತು ಚೇಸಿಂಗ್ ಸನ್ನಿವೇಶಗಳ ತೀವ್ರತೆಯನ್ನು ಹೆಚ್ಚಿಸಲು ವಿಭಿನ್ನ ಪ್ರಯೋಗವನ್ನು ಮಾಡಿ ಯಶಸ್ಸು ಕಂಡರು. ಅದೇ ರೀತಿ ‘ಬಯಲು ದಾರಿ’, ‘ಚಂದನದ ಗೊಂಬೆ’ ‘ಬೆಂಕಿಯ ಬಲೆ’ ಚಿತ್ರದ ಹಿನ್ನೆಲೆ ಸಂಗೀತ ದುರಂತವನ್ನು ಗಾಢಗೊಳಿಸುವ ರೀತಿಯಲ್ಲಿ ಸಂಯೋಜನೆಗೊಂಡಿರುವುದನ್ನು ಗಮನಿಸಬಹುದು. ‘ಪರಸಂಗದ ಗೆಂಡೆತಿಮ್ಮ’ ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತದಲ್ಲಿ ಮಾಡಿರುವ ಪ್ರಯೋಗವನ್ನು ಮರೆಯುವಂತೆಯೇ ಇಲ್ಲ.
ಎಪ್ಪತ್ತರ ದಶಕದಲ್ಲಿ ಹೆಚ್ಚಿದ ನಿರ್ಮಾಣ ಚಟುವಟಿಕೆ ಮತ್ತು ಹೊಸ ನಾಯಕ ನಟರ ಆಗಮನದೊಂದಿಗೆ ಗಾಯಕ ಬಾಲಸುಬ್ರಹ್ಮಣ್ಯಂ ಅವರ ಸುವರ್ಣಯುಗವೂ ಆರಂಭವಾಯಿತು. ಇದನ್ನು ಉದ್ಘಾಟಿಸಿದ ಶ್ರೇಯಸ್ಸು ಖಂಡಿತಾ ರಾಜನ್ ಅವರಿಗೆ ಸಲ್ಲಬೇಕು. ‘ದೇವರಗುಡಿ’, ‘ಮಾಂಗಲ್ಯಭಾಗ್ಯ’, ‘ಮಹಾತ್ಯಾಗ’, ‘ಚಂದನದ ಗೊಂಬೆ’, ‘ಗಾಳಿಮಾತು’, ‘ಬಯಲುದಾರಿ’, ‘ಆಟೋರಾಜ’, ‘ಬೀಸಿದ ಬಲೆ’, ‘ಒಂದೇ ಗುರಿ’, ‘ಪ್ರೊ.ಹುಚ್ಚೂರಾಯ’, ‘ಅವಳ ಹೆಜ್ಜೆ’, ‘ಸಿಂಗಾಪುರದಲ್ಲಿ ರಾಜಾ ಕುಳ್ಳ’, ‘ಕಳ್ಳಕುಳ್ಳ’, ‘ಕುಳ್ಳ ಏಜೆಂಟ್’, ‘ಪಾವನ ಗಂಗ’, ‘ಕೌಬಾಯ್ ಕುಳ್ಳ’, ‘ಹೊಂಬಿಸಿಲು’, ‘ಬೆಳುವಲದ ಮಡಿಲಲ್ಲಿ’, ‘ಬಯಸದೇ ಬಂದ ಬಾಗ್ಯ’- ಹೀಗೆ ಸಾಲು ಸಾಲು ಚಿತ್ರಗಳಲ್ಲಿ ರಾಜೇಶ್, ವಿಷ್ಣು, ಶ್ರೀನಾಥ್, ರಾಮಗೋಪಾಲ್, ಬಸಂತಕುಮಾರ್ ಪಾಟೀಲ್, ಮುಂತಾದ ನಾಯಕರಿಗೆ ಸರಿಹೊಂದುವಂತೆ ಎಸ್‌ಪಿಬಿ ಅವರ ಕಂಠವನ್ನು ಬಳಸಿದರು. ಬಾಲು ಅವರ ಜನಪ್ರಿಯತೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಜೋಡಿಯ ಕ್ರಿಯಾಶೀಲ ಮನಸ್ಸು ಕೆಲಸ ಮಾಡಿದೆ. ಬಾಕ್ಸಾಫೀಸಿನಲ್ಲಿ ಸೋತ ಕೆಲವು ಚಿತ್ರಗಳು ನೆನಪಿನಲ್ಲಿ ಉಳಿದಿರುವುದು ಅವರು ಸಂಯೋಜಿಸಿರುವ ಹಾಡಿನಿಂದಾಗಿ ಎಂಬುದು ಅಷ್ಟೇ ಸತ್ಯ.
ನಾಗೇಂದ್ರ ಅವರ ಅಗಲಿಕೆಯ ನಂತರ ಚಿತ್ರ ಸಂಗೀತದಿಂದ ನೇಪಥ್ಯಕ್ಕೆ ಸರಿದ ರಾಜನ್ ಅವರು ರಾಜನ್-ನಾಗೇಂದ್ರ ಸಂಗೀತ ಟ್ರಸ್ಟ್ ರಚಿಸಿ ಸಂಗೀತ ಸಂಬಂಧಿ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಅನೇಕ ಗಾಯಕರಿಗೆ ತರಬೇತು ನಿಡುತ್ತಿದ್ದರು. ದಾಸಗೀತಾಮೃತ ಎಂಬ ಭಕ್ತಿಗೀತೆಗಳ ಸಿಡಿ ಹೊರತಂದಿದ್ದರು.
ಶಾಸ್ತ್ರೀಯ ಸಂಗೀತ ವಾದ್ಯಗಳ ಜೊತೆಗೆ ಪಾಶ್ಚಾತ್ಯ ವಾದ್ಯಗಳನ್ನೂ ಬಳಸಿ ವಿಶಿಷ್ಟ ಸ್ವರಮೇಳವನ್ನು ಸೃಷ್ಟಿಸಿ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಸಿಕರಿಗೆ ಮಾಧುರ್ಯದ ಔತಣ ಬಡಿಸಿದ ರಾಜನ್-ನಾಗೇಂದ್ರ ಜೋಡಿಯ ಹಿರಿಯಣ್ಣ ರಾಜನ್ ಅವರ ಅಗಲಿಕೆಯಿಂದ ಸಂಗೀತದ ಒಂದು ಯುಗ ಕೊನೆಯಾಯಿತು. ಆದರೆ ಅವರು ಸೃಷ್ಟಿಸಿದ ಅಪೂರ್ವ ಸ್ವರಮೇಳದ ಹಾಡುಗಳ ನಾದ, ಲಯ, ಮಾಧುರ್ಯಕ್ಕೆ ಕೊನೆಯೆಲ್ಲಿ?