ವಿಶ್ವ ಶಾಂತಿಗೆ ಒಂದು ಭರವಸೆ-ವಿಶ್ವಸಂಸ್ಥೆ

Update: 2020-10-23 19:30 GMT

ಎರಡು ಮಹಾಯುದ್ಧಗಳಲ್ಲಿ ಬೆಂದು ಕಂಗೆಟ್ಟಿದ್ದ ಜಗತ್ತು ಶಾಂತಿಗಾಗಿ ಹಂಬಲಿಸಿದ ಸಮಯದಲ್ಲಿ ಮತ್ತೆ ಪ್ರಪಂಚ ಯುದ್ಧವನ್ನು ಕಾಣಬಾರದೆಂಬ ಮಹತ್ತರ ಸಂಕಲ್ಪದಿಂದ ವಿಶ್ವಸಂಸ್ಥೆ (ಸಂಯುಕ್ತ ರಾಷ್ಟ್ರ ಸಂಘ-ಯು.ಎನ್.ಒ.) ಅಸ್ತಿತ್ವಕ್ಕೆ ಬಂದಿದೆ.

ಮೊದಲ ಮಹಾಯುದ್ಧದ ಬಳಿಕ (1919) ಸ್ಥಾಪಿತವಾದ ರಾಷ್ಟ್ರಸಂಘ 1939ರಲ್ಲಿ ಕಣ್ಣುಮುಚ್ಚಿತ್ತು. ಇನ್ನೊಂದು ವಿಶ್ವಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಆಲೋಚನೆ ಮೂಡಿದ್ದು 1943ರಲ್ಲಿ ಮಾಸ್ಕೋದಲ್ಲಿ ನಡೆದ ವಿದೇಶ ಸಚಿವರ ಸಮ್ಮೇಳನದಲ್ಲಿ. ವಾಶಿಂಗ್ಟನ್‌ನಲ್ಲಿ ಮರುವರ್ಷ ನಡೆದ ಸಮ್ಮೇಳನದಲ್ಲಿ ಅಮೆರಿಕ; ಸೋವಿಯತ್ ರಶ್ಯ, ಇಂಗ್ಲೆಂಡ್ ಪ್ರತಿನಿಧಿಗಳು ವಿಶ್ವಸಂಸ್ಥೆಯನ್ನು ಸ್ಥಾಪಿಸುವುದರ ಬಗೆಗೆ ಒಮ್ಮತಕ್ಕೆ ಬಂದರು. 1945 ಫೆಬ್ರವರಿಯಲ್ಲಿ ಸೋವಿಯತ್ ರಶ್ಯದ ಯಾಲ್ಬಾದಲ್ಲಿ ನಡೆದ ಸಮ್ಮೇಳನದಲ್ಲಿ ಸಾನ್ ಫ್ರಾನ್ಸಿಸ್ಕೋದಲ್ಲಿ ಸಮಾವೇಶವೊಂದನ್ನು ನಡೆಸಬೇಕೆಂದೂ ವಿಶ್ವಸಂಸ್ಥೆಯ ಪ್ರಣಾಳಿಕೆಯನ್ನು ರಚಿಸಬೇಕೆಂದೂ ನಿರ್ಧರಿಸಲಾಯಿತು. ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ 1945ರ ಎಪ್ರಿಲ್ 25ರಂದು ಪ್ರಪಂಚದ ಐವತ್ತು ದೇಶಗಳಿಂದ ಬಂದಿದ್ದ ಸುಮಾರು 800 ಪ್ರತಿನಿಧಿಗಳು ಸಮಾವೇಶಗೊಂಡಿದ್ದರು. ಜೂನ್ 26ರ ತನಕ ಅವರು ಚರ್ಚೆ ನಡೆಸಿದರು. ಬೇರೆ ಬೇರೆ ಸಮಿತಿ, ಮಂಡಳಿಗಳನ್ನು ರಚಿಸಿಕೊಂಡು 404 ಸಭೆಗಳನ್ನು ಜರುಗಿಸಿದರು. 1,200 ಸಲಹೆಗಳನ್ನು ಪರಿಶೀಲಿಸಿದರು. ಆಗಸ್ಟ್‌ಗೆ ಎರಡನೇ ಮಹಾಯುದ್ಧ ಮುಗಿದಿತ್ತು. ತದನಂತರ ವಿಶ್ವ ಸಂಸ್ಥೆಯ ಪ್ರಣಾಳಿಕೆ ಸಿದ್ಧವಾಯಿತು.

ಪ್ರಪಂಚದಲ್ಲಿ ಶಾಂತಿಯ ಭದ್ರತೆ, ರಾಷ್ಟ್ರಗಳ ನಡುವೆ ಸ್ನೇಹ ಸೌಹಾರ್ದ, ಪರಸ್ಪರ ಹಕ್ಕುಗಳ ಮನ್ನಣೆ ಮತ್ತು ವಿವಾದಗಳಿಗೆ ಶಾಂತಿಯುತ ಪರಿಹಾರ, ಹಿಂದುಳಿದವರಿಗೆ ಮತ್ತು ಅಸಹಾಯಕರಿಗೆ ನೆರವು ಈ ಘನ ಉದ್ದೇಶಗಳನ್ನು ಪ್ರತಿಪಾದಿಸಿ ಅವುಗಳನ್ನು ಆಚರಿಸಲು ಕರೆನೀಡುವ ಪ್ರಣಾಳಿಕೆಗೆ ಪ್ರಪಂಚದ ಐದರಲ್ಲಿ ನಾಲ್ಕು ಭಾಗದ ಜನ ವಾಸಿಸುವ ಐವತ್ತು ರಾಷ್ಟ್ರಗಳು 1945 ಅಕ್ಟೋಬರ್ 24ರಂದು ಸಹಿಹಾಕಿದ್ದವು.

ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ವರ್ಷಕ್ಕೊಮ್ಮೆ ಸಮಾವೇಶಗೊಳ್ಳುತ್ತಾರೆ. ಈ ಸಭೆ ವಿಶ್ವ ಸಂಸ್ಥೆಯ ಮಹಾಸಭೆ, ಚರ್ಚೆಗೆ ಬರುವ ಎಲ್ಲ ವಿಷಯಗಳ ಬಗೆಗೆ ಪ್ರತಿ ದೇಶವೂ ತನ್ನ ನಿಲುವನ್ನು ಮಹಾಸಭೆಯಲ್ಲಿ ವ್ಯಕ್ತಪಡಿಸಲು ಅವಕಾಶವಿದೆ. ಮತ ಚಲಾಯಿಸುವಾಗ ಪ್ರತಿ ಸದಸ್ಯ ರಾಷ್ಟ್ರಕ್ಕೆ ಅದರ ಗಾತ್ರ, ಜನಸಂಖ್ಯೆ ಬಲ ಏನೇ ಇರಲಿ ಒಂದು ಮತ ಮಾತ್ರ. ಮಹಾಸಭೆಯು ಮುಖ್ಯವಾದ ಸಮಸ್ಯೆಯ ಮೇಲೆ ನಿರ್ಣಯವನ್ನು ಕೈಗೊಳ್ಳಲು ಮೂರರಲ್ಲಿ ಎರಡು ಪಾಲು ಸದಸ್ಯರ ಬೆಂಬಲ ದೊರೆಯಬೇಕು. ತುರ್ತು ಪರಿಸ್ಥಿತಿಗಳಲ್ಲಿ ಮಹಾಸಭೆಯ ವಿಶೇಷ ಅಧಿವೇಶನವನ್ನು ಕರೆಯಲಾಗುತ್ತದೆ.

ವರ್ಷಕ್ಕೊಮ್ಮೆ ಸಮಾವೇಶಗೊಳ್ಳುವ ವಿಶ್ವಸಂಸ್ಥೆಯ ಸರ್ವಸದಸ್ಯರನ್ನೊಳ ಗೊಂಡು ಮಹಾಸಭೆಯೇ ಎಲ್ಲ ವಿಷಯಗಳನ್ನೂ ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಜಗತ್ತಿನ ಯಾವುದೇ ಒಂದು ಪ್ರದೇಶದಲ್ಲಿ ಘರ್ಷಣೆಯಾಗಿ ವಿವಾದ ಹುಟ್ಟಿಕೊಂಡರೆ ಭದ್ರತಾ ಸಮಿತಿ ಸಮಾವೇಶಗೊಂಡು ಅದನ್ನು ಚರ್ಚಿಸುತ್ತದೆ. ವಿಶ್ವಸಂಸ್ಥೆಯ ಪ್ರಣಾಳಿಕೆಯನ್ನು ಕಾರ್ಯಗತಗೊಳಿಸುವುದರಲ್ಲಿ ಭದ್ರತಾ ಸಮಿತಿಯೇ ಪ್ರಧಾನಪಾತ್ರ ವಹಿಸುತ್ತದೆ.

ರಾಷ್ಟ್ರಗಳ ನಡುವೆ ವಿವಾದ ಉಂಟಾದಲ್ಲಿ ಭದ್ರತಾ ಸಮಿತಿ ಅದರ ಕಾರಣಗಳನ್ನು ಹುಡುಕಿ ಶಾಂತ ರೀತಿಯಿಂದ ಪರಿಹರಿಸಿಕೊಳ್ಳಲು ವಿವಾದಗ್ರಸ್ತ ರಾಷ್ಟ್ರಗಳನ್ನು ಒತ್ತಾಯಪಡಿಸುತ್ತದೆ. ಕದನ ಪ್ರಾರಂಭವಾಗಿದ್ದರೆ ಶಸ್ತ್ರವಿರಾಮಕ್ಕೆ ಕರೆಕೊಡುತ್ತದೆ. ಸಂದಾನದ ಉಪಾಯಗಳನ್ನು ಸೂಚಿಸುತ್ತದೆ. ವಿವಾದ ಅಷ್ಟರಲ್ಲಿ ಪರಿಹಾರವಾಗದಿದ್ದರೆ ಘರ್ಷಣೆಯ ಸ್ಥಳಕ್ಕೆ ವಿಶ್ವಸಂಸ್ಥೆ ಸೈನ್ಯವನ್ನು ಕಳುಹಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಏರ್ಪಾಡು ಮಾಡುತ್ತದೆ. ಭದ್ರತಾ ಸಮಿತಿಯಲ್ಲಿ ಆದ ನಿರ್ಣಯಗಳ ಪ್ರಸ್ತಾವ ಮಹಾಸಭೆಯಲ್ಲಿ ಬರುತ್ತದೆ. ವಿಟೋ ಚಲಾವಣೆ ಆದ ಪ್ರಸಂಗದಲ್ಲಿ ವಿಷಯವನ್ನು ಮಹಾಸಭೆ ಪರಿಶೀಲಿಸಬಹುದು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯಾಲಯ ನ್ಯೂಯಾರ್ಕ್‌ನ ಈಸ್ಟ್ ನದಿಯ ದಡದಲ್ಲಿ 7,285 ಹೆಕ್ಟೇರ್ ವಿಸ್ತೀರ್ಣದ ಪ್ರದೇಶ ದಲ್ಲಿ ನಿರ್ಮಿತವಾಗಿದೆ. ಮೂವತ್ತೊಂಭತ್ತು ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಸುಮಾರು ನಾಲ್ಕು ಸಾವಿರ ಜನ ವಿಶ್ವಸಂಸ್ಥೆಯ ಆಡಳಿತವನ್ನು ನಿರ್ವಹಿಸುತ್ತಾರೆ. ಪ್ರಪಂಚದ ಎಲ್ಲ ರಾಷ್ಟ್ರಗಳಿಂದಲೂ ವಿಶ್ವಸಂಸ್ಥೆಯ ಅಧಿಕಾರಿ ವರ್ಗಕ್ಕೆ ಆಯ್ಕೆ ಮಾಡಲಾಗುತ್ತದೆ. ಅತ್ಯಂತ ಸಮರ್ಥರೆನಿಸಿದ ಅಧಿಕಾರಿಗಳು ವಿಶ್ವಸಂಸ್ಥೆಯ ಧ್ಯೇಯೋದ್ದೇಶಗಳಿಗಾಗಿ ದುಡಿಯುತ್ತಾರೆ.

ವಿಶ್ವಸಂಸ್ಥೆಯ ಆಡಳಿತ ನಿರ್ವಹಣೆಯ ಖರ್ಚುಗಳಿಗಾಗಿ ಸದಸ್ಯ ರಾಷ್ಟ್ರಗಳು ವಂತಿಗೆ ನೀಡುತ್ತವೆ. ಸದಸ್ಯ ರಾಷ್ಟ್ರದ ಆರ್ಥಿಕಮಟ್ಟ, ವಂತಿಗೆ ನೀಡುವ ಚೈತನ್ಯದ ಪ್ರಮಾಣ ಇವನ್ನು ಆಧರಿಸಿ ಪ್ರತಿ ಸದಸ್ಯ ರಾಷ್ಟ್ರದ ವಂತಿಗೆ ಇಷ್ಟೆಂದು ನಿರ್ಧರಿಸಲಾಗಿದೆ. ಅಮೆರಿಕದ ಸಂಯುಕ್ತ ಸಂಸ್ಥಾನ ಅತ್ಯಂತ ಹೆಚ್ಚಿನ ವಂತಿಗೆಯನ್ನು ಸಲ್ಲಿಸುತ್ತದೆ. ಅನೇಕ ರಾಷ್ಟ್ರಗಳು ನಿಗದಿಯಾದ ಪ್ರಮಾಣಕ್ಕಿಂತ ಹೆಚ್ಚಿಗೆ ವಂತಿಗೆ ಸಲ್ಲಿಸುತ್ತವೆ.

ಗಡಿರೇಖೆ, ಪ್ರದೇಶದ ಒಡೆತನ, ಒಪ್ಪಂದಗಳ ವ್ಯಾಖ್ಯಾನ ಈ ವಿಷಯಗಳ ಬಗೆಗೆ ಸದಸ್ಯ ರಾಷ್ಟ್ರಗಳ ನಡುವೆ ವಿವಾದ ಹುಟ್ಟಿದರೆ, ಅವು ಬಯಸಿದಾಗ ವಿಶ್ವನ್ಯಾಯಾಲಯ ತೀರ್ಮಾನ ನೀಡುತ್ತದೆ.

ಎಲ್ಲ ಸದಸ್ಯ ರಾಷ್ಟ್ರಗಳೂ ಎದುರಿಸಬೇಕಾದ ಸಮಸ್ಯೆಗಳಿರುತ್ತವೆ. ಪ್ರವಾಹ ನಿಯಂತ್ರಣ, ಸ್ತ್ರೀ ಸಮಾನತೆ, ಆರ್ಥಿಕ ಬೆಳವಣಿಗೆ, ಮಾದಕ ವಸ್ತುಗಳ ನಿಯಂತ್ರಣ ಇವು ಇಂತಹ ಕೆಲವು ಸಮಸ್ಯೆಗಳು. ಇದಕ್ಕೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ಮತ್ತು ನೆರವನ್ನು ಆರ್ಥಿಕ ಮತ್ತು ಸಾಮಾಜಿಕ ಸಮಿತಿ ಏರ್ಪಡಿಸುತ್ತದೆ.

ವಿಶ್ವಸಂಸ್ಥೆಯ ಹೊಣೆ ಸೇನೆಗಳು ಹೋರಾಡದಂತೆ ನೋಡಿಕೊಳ್ಳುವುದು ಮಾತ್ರವಲ್ಲ, ಎಲ್ಲ ರಾಷ್ಟ್ರಗಳ ಜನರ ಕಲ್ಯಾಣ ಸಾಧನೆಯೂ ಅದರ ಕರ್ತವ್ಯ. ಕೆಲವು ರಾಷ್ಟ್ರಗಳು ಶ್ರೀಮಂತವಾಗಿದ್ದು ಕೆಲವು ಬಡತನದಲ್ಲಿ ಬಳಲುತ್ತಿದ್ದರೆ ಅದು ನ್ಯಾಯವೂ ಅಲ್ಲ, ಶಾಂತಿಯನ್ನು ಉಳಿಸಿಕೊಳ್ಳುವ ದಾರಿಯೂ ಅಲ್ಲ. ಮನುಷ್ಯಕುಲವೆಲ್ಲ ಒಂದು ಎನ್ನುವ ಭಾವನೆ ಬೆಳೆಯಬೇಕು. ದೇಶಗಳು ಸಹಕಾರದಿಂದ ಲೋಕ ಕಲ್ಯಾಣಕ್ಕಾಗಿ, ಪರಸ್ಪರ ಹಿತಕ್ಕಾಗಿ ದುಡಿಯುವುದನ್ನು ಕಲಿಯಬೇಕು. ಇದಕ್ಕಾಗಿ ವಿಶ್ವಸಂಸ್ಥೆಯ ಆಶ್ರಯದಲ್ಲಿ ಹದಿನಾಲ್ಕು ವಿಶೇಷ ಸಂಸ್ಥೆಗಳು ಕೆಲಸಮಾಡುತ್ತವೆ. ಅವು ಅಂತರ್‌ರಾಷ್ಟ್ರೀಯ ಅಣುಶಕ್ತಿ ಸಂಸ್ಥೆ, ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ಜಾಗತಿಕ ಆಹಾರ ಮತ್ತು ವ್ಯವಸಾಯ ಸಂಸ್ಥೆ, ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ಇತ್ಯಾದಿ.

 1948ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಅಕ್ಟೋಬರ್ 24ರಂದು ವಿಶ್ವಸಂಸ್ಥೆಯ ದಿನಾಚರಣೆ ಘೋಷಿಸಿತು. ಈ ದಿನಾಚರಣೆಯ ಉದ್ದೇಶ ವಿಶ್ವಸಂಸ್ಥೆಯ ಗುರಿಗಳು ಮತ್ತು ಸಾಧನೆಗಳನ್ನು ವಿಶ್ವದ ಜನರಿಗೆ ತಿಳಿಸುವುದು ಮತ್ತು ಜನರ ಬೆಂಬಲವನ್ನು ಪಡೆಯುವುದು. ವಿಶ್ವಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ತೊಡಕುಗಳಿಲ್ಲವೆಂದಲ್ಲ. ಭದ್ರತಾ ಸಮಿತಿಯ ಶಾಶ್ವತ ಸದಸ್ಯ ರಾಷ್ಟ್ರಗಳಲ್ಲಿ ಆಗಾಗ ವಿರಸಗಳುಂಟಾಗುತ್ತದೆ. ದಕ್ಷಿಣ ಆಫ್ರಿಕ ಮತ್ತು ರೊಡೀಸಿಯದಂತಹ ರಾಷ್ಟ್ರಗಳು ವಿಶ್ವಸಂಸ್ಥೆಯ ನಿರ್ಧಾರಗಳಿಗೆ ಮನ್ನಣೆ ಕೊಡುವುದಿಲ್ಲ. ಇವೆಲ್ಲ, ಸಂಸ್ಥೆ ಯಾವ ಶ್ರೇಷ್ಠವಾದ ಉದ್ದೇಶದಿಂದ ಸ್ಥಾಪಿತವಾಯಿತೋ, ಅದರ ಸಾಧನೆಗೆ ಅಡ್ಡಿಗಳಾಗಿದೆ. ಆದರೂ ಹಲವು ದೇಶಗಳವರು ಒಟ್ಟಿಗೆ ಕೆಲಸಮಾಡಿ ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗವನ್ನು ಈ ಸಂಸ್ಥೆ ತೋರಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಒಂದು ನೂರು ರಾಷ್ಟ್ರಗಳ ವೈಜ್ಞಾನಿಕರು, ವೈದ್ಯರು ಒಟ್ಟಿಗೆ ಕೆಲಸಮಾಡುತ್ತಾರೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಹಿಂದುಳಿದ ರಾಷ್ಟ್ರದಲ್ಲಿ ಕಾಯಿಲೆಯೊಂದು ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದರೆ ಈ ನೂರು ರಾಷ್ಟ್ರಗಳ ನಿಪುಣರು ಅದನ್ನು ತಡೆಗಟ್ಟಲು ಕೆಲಸ ಮಾಡುತ್ತಾರೆ. ವಿಶ್ವಸಂಸ್ಥೆ ಹಿಂದುಳಿದ ದೇಶಗಳಿಗೆ ಶಿಕ್ಷಣ, ಶಿಲ್ಪಶಾಸ್ತ್ರ, ವೈದ್ಯ ಮೊದಲಾದ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ನಿಪುಣರನ್ನು ಕಳುಹಿಸುತ್ತದೆ. ಶಾಂತಿಗಾಗಿ ಹಂಬಲಿಸುವ ಜಗತ್ತಿಗೆ ಒಂದು ಭರವಸೆ ವಿಶ್ವಸಂಸ್ಥೆ. ವಿಶ್ವಸಂಸ್ಥೆಯ ಮುಖ್ಯ ಉದ್ದೇಶದಂತೆ ಜಗತ್ತಿನಲ್ಲಿ ಸದಾ ಶಾಂತಿ ನೆಲೆಸಲಿ.

Writer - ಜಗದೀಶ ವಡ್ಡಿನ, ಕಾರವಾರ

contributor

Editor - ಜಗದೀಶ ವಡ್ಡಿನ, ಕಾರವಾರ

contributor

Similar News