ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಕಡಿತ?

Update: 2020-12-04 05:55 GMT

ಬೆಂಗಳೂರು, ಡಿ.3: ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ), ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗಗಳನ್ನು (ಒಬಿಸಿ) ಉನ್ನತ ಶಿಕ್ಷಣದಿಂದ ದೂರವಿಟ್ಟು, ಸಂವಿಧಾನಾತ್ಮಕ ಮೀಸಲಾತಿ ಅವಕಾಶಗಳನ್ನು ಕಸಿದುಕೊಳ್ಳುವ ಮೂಲಕ ಆಧುನಿಕ ಅಸ್ಪಶ್ಯತೆ, ಹೊಸ ರೀತಿಯ ಗುಲಾಮಿ ಪದ್ಧತಿ ಜಾರಿಗೆ ಮುಂದಾಗಿರುವ ಕೇಂದ್ರ ಸರಕಾರದ ಹುನ್ನಾರದ ವಿರುದ್ಧ ಉಗ್ರ ಹೋರಾಟದ ಅಗತ್ಯವಿದೆ’ ಎಂದು ಸಂಸದರು, ಮಾಜಿ ಸಂಸದರು, ವಿದ್ಯಾರ್ಥಿ ಸಂಘಟನೆಗಳ ನಾಯಕರು, ಶಿಕ್ಷಣ ತಜ್ಞರು ಹಾಗೂ ದಲಿತ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಿನ 1944 ರಿಂದಲೂ ಜಾರಿಯಲ್ಲಿದ್ದ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ)ದ ವಿದ್ಯಾರ್ಥಿಗಳಿಗೆ ನೀಡುವ ‘ಸ್ಕಾಲರ್ ಶಿಪ್’(ವಿದ್ಯಾರ್ಥಿ ವೇತನ) ಯೋಜನೆ ಕಡಿತಕ್ಕೆ ಮುಂದಾಗಿರುವ ಕೇಂದ್ರ ಸರಕಾರದ ವಿರುದ್ಧ ವಿವಿಧ ವಲಯಗಳ ಗಣ್ಯರು ಆಕ್ರೋಶ ಹೊರಹಾಕಿದ್ದಾರೆ.

2013ರಿಂದ ಮೆಟ್ರಿಕ್ ನಂತರ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ಇಂದಿನ ಬೆಲೆ ಏರಿಕೆಗೆ ಅನುಗುಣವಾಗಿ ಪರಿಷ್ಕರಣೆಯನ್ನೇ ಮಾಡಿಲ್ಲ. ಅಲ್ಲದೆ, ಸ್ಕಾಲರ್‌ಶಿಪ್ ಪಡೆದುಕೊಳ್ಳಲು ಇರುವ ವಾರ್ಷಿಕ ಆದಾಯ ಮಿತಿಯನ್ನು 2.50ಲಕ್ಷ ರೂ.ಯಿಂದ ಹೆಚ್ಚಿಸಿಲ್ಲ. ಹೀಗಾಗಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಲಾಗಿದೆ.

 ಅಲ್ಲದೆ, ಸಂಪೂರ್ಣ ಕೇಂದ್ರ ಪುರಸ್ಕೃತ ಯೋಜನೆಯನ್ನು 2019ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಹಾಗೂ ರಾಜ್ಯ ಸರಕಾರ ಕ್ರಮವಾಗಿ ಶೇ.60 ಮತ್ತು ಶೇ.40ರಷ್ಟು ಅನುದಾನದ ಹಂಚಿಕೆ ಮಾಡಿ ಪುನರ್ ರೂಪಿಸಲಾಗಿದೆ. ಇದು ರಾಜ್ಯ ಸರಕಾರಗಳಿಗೆ ಹೊರೆಯಾಗಿದ್ದು, ಕೇಂದ್ರ ಸರಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನ ಎಂಬ ದೂರು ಗಳು ಕೇಳಿಬಂದಿವೆ.

ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲೆ ಕನಿಷ್ಠ ಗೌರವ, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದರೆ ಮೆಟ್ರಿಕ್ ನಂತರದ ಸ್ಕಾಲರ್ಶಿಪ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ವಿದ್ಯಾರ್ಥಿ ವೇತನವನ್ನು 1,200 ರೂ.ನಿಂದ ಕನಿಷ್ಠ 7ಸಾವಿರ ರೂ.ನಿಂದ 8 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿ, ಪರಿಷ್ಕರಿಸಬೇಕು. ಅಲ್ಲದೆ, ಸ್ಕಾಲರ್ಶಿಪ್ ಯೋಜನೆಗೆ ನಿಗದಿಪಡಿಸಿರುವ ಆದಾಯ ಮಿತಿಯನ್ನು 2.50ಲಕ್ಷ ರೂ.ನಿಂದ 7ರಿಂದ 8ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂಬ ಒತ್ತಾಯಿಸಲಾಗುತ್ತಿದೆ.

ಆಧುನಿಕ ಅಸ್ಪಶ್ಯತೆ ಬೆಳೆಸುವ ನೀತಿ: ‘ಸಂವಿಧಾನಾತ್ಮಕವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳಿಗೆ ಉನ್ನತ ಶಿಕ್ಷಣದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕೇಂದ್ರದ ನೂತನ ಶಿಕ್ಷಣ ನೀತಿಯಲ್ಲಿ ಈ ವರ್ಗಗಳ ಪ್ರಸ್ತಾಪವೂ ಇಲ್ಲ. ಇವರನ್ನೆಲ್ಲ ’ಸಾಮಾಜಿಕ ಅವಕಾಶ ವಂಚಿತ ವಿಶೇಷ ಗುಂಪು’ ಎಂದು ಕರೆದಿದ್ದು, ಅವರಿಗೆ ಮೀಸಲಿಟ್ಟ ಸೌಲಭ್ಯಗಳನ್ನು ಕಡಿತಗೊಳಿಸುವ ಕೇಂದ್ರ ಸರಕಾರದ ಹುನ್ನಾರ ಸ್ಪಷ್ಟವಾಗಿದೆ’ ಎಂದು ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ದೂರಿದ್ದಾರೆ. ’ಸಂವಿಧಾನಾತ್ಮಕ ಮೀಸಲಾತಿ ಕಲ್ಪಿಸಿರುವ ಕಾರಣಕ್ಕೆ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತ ಮತ್ತು ಒಬಿಸಿ ವಿದ್ಯಾರ್ಥಿಗಳಿಂದು ಉನ್ನತ ಶಿಕ್ಷಣದಲ್ಲಿದ್ದಾರೆ. ಆದರೆ, ಕೇಂದ್ರದ ನೂತನ ಶಿಕ್ಷಣ ನೀತಿಯಿಂದ ಖಾಸಗಿ ವಿವಿಗಳು ಮತ್ತು ಡೀಮ್ಡ್ ವಿವಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ‘ಉಳ್ಳವರಿಗೆ ಶಿಕ್ಷಣ’ ಎಂದು ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ’ ಎಂದು ನಿರಂಜನಾರಾಧ್ಯ ಟೀಕಿಸಿದರು.

ನೂತನ ಶಿಕ್ಷಣ ನೀತಿ ಅನುಷ್ಠಾನಗೊಳಿಸುವ ಸಂಬಂಧದ ನೀಲನಕ್ಷೆಯೇ ಕೇಂದ್ರ ಸರಕಾರದ ಮುಂದಿಲ್ಲ. ಎಪ್ಪತ್ತು ವರ್ಷಗಳಿಂದ ಕಲ್ಪಿಸಿದ್ದ ಸಂವಿಧಾನಿಕ ಸೌಲಭ್ಯಗಳು ಮತ್ತು ಗಳಿಸಿದ್ದ ಮೌಲ್ಯಗಳನ್ನು ನೂತನ ಶಿಕ್ಷಣ ನೀತಿ ಕಸಿದುಕೊಳ್ಳಲಿದೆ. ಉನ್ನತ ಶಿಕ್ಷಣದಲ್ಲಿ ವಿದೇಶಿ ನೇರ ಹೂಡಿಕೆ ಬರಲಿದೆ. ಹೀಗಾಗಿ ಎಸ್ಸಿ-ಎಸ್ಟಿ, ಒಬಿಸಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಅವಕಾಶಗಳನ್ನು ಕಳೆದುಕೊಳ್ಳುವುದಲ್ಲದೆ, ಆಧುನಿಕ ಅಸ್ಪಶ್ಯತೆ ಬೆಳೆಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ನಿರಂಜನಾರಾಧ್ಯ ಆರೋಪಿಸಿದ್ದಾರೆ.

ವಿದ್ಯಾರ್ಥಿ ವೇತನ ಹೆಚ್ಚಳ ಅಗತ್ಯ: ’ಕೇಂದ್ರ ಸಾಮಾಜಿಕ ಮತ್ತು ನ್ಯಾಯ ಸಚಿವಾಲಯದ ಅಡಿಯಲ್ಲೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಮುಂದುವರಿಸಬೇಕು. ಅಲ್ಲದೆ, ಪ್ರತಿ ಮೂರು ವರ್ಷಕ್ಕೊಮ್ಮೆ ವಿದ್ಯಾರ್ಥಿ ವೇತನ ಪರಿಷ್ಕರಣೆ ಮಾಡಬೇಕು. ಅಲ್ಲದೆ, ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಳ ಮಾಡುವ ಮೂಲಕ ಶೋಷಿತ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಕ್ರಮ ವಹಿಸಬೇಕು ಎಂದು ಮಾಜಿ ಸಂಸದ ಧ್ರುವನಾರಾಯಣ ಆಗ್ರಹಿಸಿದರು.

ಉದ್ದೇಶಿತ ಯೋಜನೆ ಬದಲಾವಣೆ ಮಾಡಿದರೆ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಗಗನ ಕುಸುಮವಾಗಲಿದೆ. ಈ ಹಿಂದೆ ನಾನು ಸಂಸದನಾಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ಹೆಚ್ಚಳ ಮಾಡಲಾಗಿತ್ತು. ಇದೀಗ ಆ ಹಣದಲ್ಲಿ ವಿದ್ಯಾರ್ಥಿಗಳಿಗೆ ಊಟ, ವಸತಿ ಸಹಿತ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಈ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂದು ಧ್ರುವನಾರಾಯಣ ಒತ್ತಾಯಿಸಿದರು.

ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನ: ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರವಿಡುವ ಹುನ್ನಾರ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಅದರ ಭಾಗವಾಗಿಯೇ ಸ್ಕಾಲರ್ಶಿಪ್ ಯೋಜನೆ ಬದಲಾವಣೆಗೆ ಕೇಂದ್ರ ಸರಕಾರ ಮುಂದಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಸ್‌ಎಫ್‌ಐ ಮಾಜಿ ಅಧ್ಯಕ್ಷ ಅಂಬರೀಶ್ ಆಕ್ರೋಶ ಹೊರಹಾಕಿದ್ದಾರೆ.

ಯೋಜನೆ ಬದಲಾವಣೆ ವಿರುದ್ಧ ರೈತರ ಹೋರಾಟದ ಮಾದರಿಯಲ್ಲೇ ವಿದ್ಯಾರ್ಥಿಗಳ ಐಕ್ಯ ಹೋರಾಟ ಅಗತ್ಯವಿದೆ. ವಿದ್ಯಾರ್ಥಿ ವೇತನ ಪರಿಷ್ಕರಣೆ, ವಾರ್ಷಿಕ ಆದಾಯ ಮಿತಿ ಹೆಚ್ಚಳಕ್ಕೆ ಚಳವಳಿ ರೂಪಿಸಬೇಕಿದೆ. ಅಲ್ಲದೆ, ಕೇಂದ್ರ ಸರಕಾರ ತನ್ನ ಜವಾಬ್ದಾರಿಯನ್ನು ರಾಜ್ಯಗಳಿಗೆ ಹೇರದೆ ತನ್ನ ಅನುದಾನದಲ್ಲೆ ವಿದ್ಯಾರ್ಥಿ ವೇತನ ಭರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಂಬರೀಶ್ ಕೋರಿದರು.

ಸಂಶಯಾಸ್ಪದ ನಡೆ: ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತ ಮತ್ತು ಹಿಂ.ವರ್ಗಗಳ ಮೀಸಲಾತಿ ಸೇರಿದಂತೆ ಇನ್ನಿತರ ಸಂವಿಧಾನಾತ್ಮಕ ಸೌಲಭ್ಯಗಳನ್ನು ಕಡಿತ ಮಾಡುತ್ತದೆ ಎಂಬ ಆರೋಪ ನಿಜವಾಗುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರಕಾರ ಮೀಸಲಾತಿ ಸೌಲಭ್ಯಗಳ ಕಡಿತಕ್ಕೆ ಧೈರ್ಯ ಮಾಡಿರಲಿಲ್ಲ. ಇದೀಗ ಬಿಜೆಪಿ ಸರಕಾರ ಮುಂದಾಗಿರುವುದು ಅಕ್ಷಮ್ಯ ಎಂದು ಭಾರತೀಯ ವಿದ್ಯಾರ್ಥಿ ಸಂಘ(ಬಿವಿಎಸ್)ದ ರಾಜ್ಯ ಸಂಚಾಲಕ ಡಾ.ಶ್ರೀನಿವಾಸ್ ಟೀಕಿಸಿದ್ದಾರೆ. ಪರಿಶಿಷ್ಟ ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಉಚಿತ ಲ್ಯಾಪ್‌ಟಾಪ್, ಶೈಕ್ಷಣಿಕ ಯೋಜನೆಗಳ ಸಬ್ಸಿಡಿ ಕಡಿತ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಸಿದುಕೊಳ್ಳಲು ಬಿಡುವುದಿಲ್ಲ. ಇದರ ವಿರುದ್ಧ ಶೀಘ್ರದಲ್ಲೆ ನಮ್ಮ ಸಂಘಟನೆಯಿಂದ ದೊಡ್ಡ ಮೊಟ್ಟದ ಹೋರಾಟ ರೂಪಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಶ್ರೀನಿವಾಸ್ ತಿಳಿಸಿದರು.

ಕೇಂದ್ರ ಸರಕಾರ ಪರಿಶಿಷ್ಟ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಯೋಜನೆ ಬದಲಾವಣೆ ಮಾಡಬಾರದು. ಮಾಸಿಕ 1,200 ರೂ. ಸ್ಕಾಲರ್‌ಶಿಪ್ ನೀಡುತ್ತಿದ್ದು, ಈ ಮೊತ್ತದಲ್ಲಿ ಇಂದಿನ ಬೆಲೆ ಏರಿಕೆಯ ನಡುವೆ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಈ ಮೊತ್ತವನ್ನು ಕನಿಷ್ಠ 8ಸಾವಿರ ರೂ.ಗಳಿಗೆ ಹೆಚ್ಚಳ ಮಾಡಬೇಕು. ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಿಸಬೇಕು’

ಡಾ.ಎಂ.ನಾರಾಯಣಸ್ವಾಮಿ,

ಉಪನ್ಯಾಸಕರು ಪಶುವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರು

ಕೊರೋನ ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರಕಾರ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಸ್ಕೀಮ್ ಅನ್ನು ನಿಲ್ಲಿಸುವ ಅಥವಾ ಬದಲಾವಣೆಯ ಮೂಲಕ ದಲಿತ ಸಮುದಾಯದ ವಿದ್ಯಾರ್ಥಿಗಳನ್ನು ಮತ್ತಷ್ಟು ಆತಂಕಕ್ಕೆ ತಳ್ಳುವ ಯತ್ನ ಅಕ್ಷಮ್ಯ. ಕೇಂದ್ರ ಸರಕಾರ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಯೋಜನೆ ಬದಲಾವಣೆಗೆ ಮೊದಲು ಈ ಬಗ್ಗೆ ಸಮುದಾಯದ ಸಂಸದರು, ಶಾಸಕರು, ದಲಿತ ಮುಖಂಡರ ಜೊತೆ ಚರ್ಚೆ ನಡೆಸಬೇಕು. ಈ ವರ್ಗದವರ ಅಭಿಪ್ರಾಯವನ್ನು ಆಧರಿಸಿ ಬದಲಾವಣೆ ತರಬೇಕೇ ಹೊರತು ಏಕಾಏಕಿ ಪ್ರಧಾನಿ ಮಂತ್ರಿ ಕಚೇರಿಯೇ ಬದಲಾವಣೆಗೆ ಮುಂದಾಗುವುದು ಸರಿಯಲ್ಲ. ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಮೊತ್ತವನ್ನು ಕಾಲ ಕಾಲಕ್ಕೆ ಪರಿಷ್ಕರಣೆ ಮಾಡಬೇಕು. ಇಂದಿನ ಅಗತ್ಯತೆಗೆ ಅನುಗುಣವಾಗಿ ಹೆಚ್ಚಳ ಮಾಡಬೇಕು. ಅಲ್ಲದೆ, ಆದಾಯದ ಮಿತಿಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು.

ಡಾ.ಎಲ್.ಹನುಮಂತಯ್ಯ,

ರಾಜ್ಯಸಭಾ ಸದಸ್ಯ

ಸಾವಿರಾರು ಮಂದಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅವಕಾಶವಾಗಿದ್ದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಯೋಜನೆ ನಿಲ್ಲಿಸುತ್ತಿರುವುದರ ಹಿಂದಿನ ದುರುದ್ದೇಶ ಸ್ಪಷ್ಟ. ಇವರಿಗೆ ದಲಿತ ಮತ್ತು ಹಿಂದುಳಿದ ಸಮುದಾಯದ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ. ಇದು ಶೋಷಿತ ಸಮುದಾಯಗಳನ್ನು ಸದೆಬಡಿಯುವ ಕೆಲಸ. ಸಾಮಾಜಿಕವಾಗಿ ಶೋಷಣೆಗೆ ಗುರಿಯಾಗಿರುವವರಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ, ಕೇಂದ್ರ ಸರಕಾರ ಸ್ಕಾಲರ್‌ಶಿಪ್ ಯೋಜನೆಯನ್ನು ನಿಲ್ಲಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಶೋಷಿತರಿಗೆ ಶಿಕ್ಷಣದ ಅವಕಾಶವನ್ನೇ ನಿಲ್ಲಿಸುವ ದಿನಗಳು ದೂರವಿಲ್ಲ.

ಡಾ.ಸಿ.ಎಸ್.ದ್ವಾರಕಾನಾಥ್,

ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ

Writer - ಪ್ರಕಾಶ್ ರಾಮಜೋಗಿಹಳ್ಳಿ

contributor

Editor - ಪ್ರಕಾಶ್ ರಾಮಜೋಗಿಹಳ್ಳಿ

contributor

Similar News