ಭಾರತದಲ್ಲಿ ಏರುತ್ತಲೇ ಇದೆ ಗೋವುಗಳ ಸಂತತಿ!

Update: 2020-12-25 19:30 GMT

ನಿದು ಲೈವ್‌ಸ್ಟಾಕ್ ಸಮೀಕ್ಷೆ? ಭಾರತ ಸರಕಾರದ ಪಶುಸಂಗೋಪನಾ ಇಲಾಖೆಯು ಪ್ರತಿ 5 ವರ್ಷಕ್ಕೊಮ್ಮೆ ದೇಶದಲ್ಲಿರುವ ಎಲ್ಲಾ ರೀತಿಯ ಜಾನುವಾರುಗಳ ಕುರಿತು ನಡೆಸುವ ಬೃಹತ್ ಪ್ರಮಾಣದ ಸಮೀಕ್ಷೆ ಇದು. ಈ ಹಿಂದೆ 2012ರಲ್ಲಿ 19ನೇ ರಾಷ್ಟ್ರೀಯ ಸಮೀಕ್ಷೆಯನ್ನು ನಡೆಸಲಾಗಿತ್ತು. 2019ರಲ್ಲಿ ನಡೆಸಿದ 20ನೇ ಸಮೀಕ್ಷೆಯ ವರದಿ ಇದೀಗ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.


2020ರ ಡಿಸೆಂಬರ್ 7ರಿಂದ 15ರವರೆಗೆ ನಿಗದಿಯಾಗಿದ್ದ ಕರ್ನಾಟಕ ವಿಧಾನಸಭಾ ಅಧಿವೇಶನವು ಐದು ದಿನ ಮುಂಚಿತವಾಗಿಯೇ ಕೊನೆಗೊಂಡಿದೆ. ಹೀಗೆ ಕೊನೆಗೊಳ್ಳುವ ಎರಡು ದಿನಗಳ ಮೊದಲೇ ಕಾರ್ಯಸೂಚಿಯಲ್ಲಿ ನಮೂದಿಸಲಾಗದ ಗೋಹತ್ಯೆ ನಿಷೇಧ ಮಸೂದೆಯನ್ನು ಇದ್ದಕ್ಕಿದ್ದಂತೆ ಸಭಾಧ್ಯಕ್ಷರ ಅನುಮತಿಯೊಂದಿಗೆ ಪಶು ಸಂಗೋಪನಾ ಸಚಿವರು ಮಂಡಿಸಿ ಯಾವುದೇ ಚರ್ಚೆಗೆ ಅವಕಾಶ ನೀಡದೆ ಸದನದ ಒಪ್ಪಿಗೆಯನ್ನು ಪಡೆದು ಬಿಟ್ಟರು.! ಆದರೆ ವಿಧಾನ ಸಭೆಯಲ್ಲಿ ಬಹುಪರಾಕ್‌ನೊಂದಿಗೆ ಪಾಸು ಮಾಡಿಕೊಂಡ ಬಿಜೆಪಿ ಸರಕಾರ ಪರಿಷತ್‌ನಲ್ಲಿ ಮಾತ್ರ ಅದನ್ನು ಸೋಲುವ ಭಯದಿಂದ ಮಂಡಿಸದೆ ನುಣುಚಿಕೊಂಡಿತು. ಈಗ ಅದಕ್ಕಿರುವ ಏಕೈಕ ದಾರಿ ಎಂದರೆ ಸುಗ್ರೀವಾಜ್ಞೆ ಮಾತ್ರ.

ಅದಕ್ಕಾಗಿ ಪುನಃ ಅಧಿವೇಶನ ನಡೆಸಿ ಪಾಸು ಮಾಡಿಕೊಳ್ಳುವ ತಯಾರಿ ನಡೆಸಿದೆ. ಕಾನೂನಿನ ಮಾತು ಒಂದು ಕಡೆ ಇರಲಿ. ಕೇಂದ್ರದಲ್ಲಿ ಭಾರೀ ಬಹಮತದೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವು ಗೋಹತ್ಯೆಯನ್ನು ಹಾಗೂ ಗೋಮಾಂಸ ಮಾರಾಟವನ್ನು ದೇಶಾದ್ಯಂತ ನಿಷೇಧಿಸುವ ಮಾತು ಆರಂಭಿಸುತ್ತಿದ್ದಂತೆ ಅದೇ ಪಕ್ಷ ಅಧಿಕಾರದಲ್ಲಿರುವ ಕೆಲವು ರಾಜ್ಯಗಳು ಗೋಹತ್ಯೆ ಹಾಗೂ ಗೋಮಾಂಸ ಮಾರಾಟಕ್ಕೆ ನಿಷೇಧ ಹೇರಿದ್ದವು. ಇದಕ್ಕೆ ಆ ರಾಜ್ಯಗಳ ಸರಕಾರಗಳು ಮತ್ತು ಗೋಮಾಂಸ ನಿಷೇಧ ಮಾಡಬೇಕೆಂದು ವಾದಿಸುತ್ತಿರುವ ಆರೆಸ್ಸೆಸ್ ಹಾಗೂ ಇತರ ಬಲಪಂಥೀಯರು ಹೇಳುತ್ತಿರುವ ಕಾರಣವೆಂದರೆ ಗೋವು ಹಿಂದೂಗಳಿಗೆ ಪವಿತ್ರತೆಯ ಸಂಕೇತ ಮತ್ತು ಹೀಗೆ ಗೋವುಗಳನ್ನು ಆಹಾರಕ್ಕಾಗಿ ಹತ್ಯೆಗೈಯುತ್ತಾ ಹೋದರೆ ಮುಂದೊಂದು ದಿನ ಭಾರತದಲ್ಲಿ ಗೋವುಗಳ ಸಂಖ್ಯೆ ಕಡಿಮೆಯಾಗಿ ಅವುಗಳ ಸಂತತಿಯೇ ನಾಶವಾಗುತ್ತದೆ ಎಂಬುದು!

ಗೋವುಗಳ ಸಂತತಿ ಅಪಾಯದಲ್ಲಿದೆಯೇ?

ಎರಡನೇ ಅತಿ ಮುಖ್ಯ ಅಂಶವಾದ ಗೋವುಗಳ ಸಂತತಿ ನಾಶವಾಗುವ ಪ್ರಶ್ನೆಯ ಬಗ್ಗೆ ಚರ್ಚಿಸುವುದಾದರೆ ಭಾರತದಲ್ಲಿ ಗೋವುಗಳು ಅಪಾಯದ ಅಂಚಿನಲ್ಲಿಲ್ಲ.! ಮಾತ್ರವಲ್ಲ ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ..! ಆಶ್ಚರ್ಯವಾಗುತ್ತಿದೆಯಾ..? ಹೌದು ಇದು ಸತ್ಯ ಸಂಗತಿ. ಕೇವಲ ಗೋವುಗಳ ಬಗ್ಗೆ ಭಾವನಾತ್ಮಕವಾಗಿ ಮಾತನಾಡುವ ಜನರು ಈ ಬಗ್ಗೆ ವಾಸ್ತವಾಂಶಗಳನ್ನು ತಿಳಿದುಕೊಳ್ಳಬೇಕು.

ಕೇಂದ್ರ ಸರಕಾರದ ಪಶು ಸಂಗೋಪನಾ ಮತ್ತು ಹೈನುಗಾರಿಕೆ ಮತ್ತು ಮೀನುಗಾರಿಕಾ ಇಲಾಖೆಗಳ ಜಂಟಿ ಸಹಭಾಗಿತ್ವದಲ್ಲಿ ನಡೆಸಿದ 20ನೇ ಭಾರತೀಯ ಲೈವ್‌ಸ್ಟಾಕ್ ಸಮೀಕ್ಷೆಯ 2019ರ ಪ್ರಕಾರ ನಮ್ಮ ದೇಶದಲ್ಲಿರುವ ಹಸುಗಳ ಸಂಖ್ಯೆ 145.12 ದಶಲಕ್ಷ. 2012ರ ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಶೇ. 18ರಷ್ಟು ಗೋವುಗಳ ಪ್ರಮಾಣ ಹೆಚ್ಚಾಗಿದೆ.! ಇದು ಅಧಿಕೃತವಾಗಿ ಕೇಂದ್ರ ಸರಕಾರದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಅಪ್‌ಲೋಡ್ ಮಾಡಲಾಗಿದೆ 2019ರಲ್ಲಿ ನಡೆಸಿದ ಲೈವ್ ಸ್ಟಾಕ್ (ಜಾನುವಾರು ಗಣತಿ) ಸಮೀಕ್ಷೆಯ ಕೆಲ ವಿವರಗಳು ಇಲ್ಲಿವೆ

* 2019ರಲ್ಲಿ ದೇಶದಲ್ಲಿ ಒಟ್ಟು ಜಾನುವಾರುಗಳ ಸಂಖ್ಯೆ 535.78 ದಶಲಕ್ಷ. 2012ರ ಸಮೀಕ್ಷೆಗಿಂತ ಶೇ. 4.6ರಷ್ಟು ಏರಿಕೆಕಂಡಿದೆ.

* ಎಮ್ಮೆ ಸೇರಿ ದನದ ಮಾದರಿಯ ಒಟ್ಟು ಜಾನುವಾರುಗಳ ಸಂಖ್ಯೆಯು 302.79 ದಶಲಕ್ಷವಾಗಿದ್ದು ಹಿಂದಿನ ಸಮೀಕ್ಷೆಗೆ (2012)ಹೋಲಿಸಿದರೆ ಶೇ. 1ರಷ್ಟು ಏರಿಕೆ ಕಂಡಿದೆ.

* ಇನ್ನು ಎಲ್ಲರ ಗಮನ ಸೆಳೆಯುವ ಮತ್ತು ಈಗ ದೇಶದ್ಯಾಂತ ಚರ್ಚೆಯ ವಿಷಯವಾಗಿರುವ ಆಕಳು(ಗೋವು) ಸಂಖ್ಯೆಯು 145.12 ದಶಲಕ್ಷವಾಗಿದ್ದು ಇದು 2012ರ ಸಮೀಕ್ಷೆಗೆ ಹೋಲಿಸಿದರೆ ಶೇ. 18.0ರಷ್ಟು ಏರಿಕೆ ಕಂಡಿದೆ.

* ಇನ್ನು ವಿದೇಶಿ ಮಿಶ್ರತಳಿ ಮತ್ತು ದೇಶೀಯ ಮತ್ತು ಹೆಸರಿಸಲಾಗದ ಜಾನುವಾರುಗಳ ಸಂಖ್ಯೆಯು ಕ್ರಮವಾಗಿ 50.42 ಹಾಗೂ 142.11 ದಶಲಕ್ಷದಷ್ಟಿದೆ.

* 2012ರ ಸಮೀಕ್ಷೆಗೆ ಹೋಲಿಸಿದರೆ 2019ರಲ್ಲಿ ದೇಶೀಯ ಮತ್ತು ಇತರ ಹೆಸರಿಸಲಾಗದ ಜಾನುವಾರುಗಳ ಸಂಖ್ಯೆಯಲ್ಲಿ ಶೇ. 10ರಷ್ಟು ಹೆಚ್ಚಳ ಕಂಡಿದೆ.

* ವಿದೇಶಿ ಮಿಶ್ರತಳಿ(ಎತ್ತು ಹೋರಿ ಇತ್ಯಾದಿ) ಮತ್ತು ದೇಶೀಯ ಮತ್ತು ಹೆಸರಿಸಲಾಗದ ಜಾನುವಾರುಗಳ ಸಂಖ್ಯೆಯು 2012ರ ಸಮೀಕ್ಷೆಗೆ ಹೋಲಿಸಿದರೆ ಶೇ. 26.9ರಷ್ಟು ಹೆಚ್ಚಳವಾಗಿದೆ. ಇದು ಕಳೆದ ಸಮೀಕ್ಷೆಯಲ್ಲಿ ಶೇ. 9ರಷ್ಟು ಇಳಿಕೆ ಕಂಡಿತ್ತು. ಆದರೆ ಈಗ ಅದರ ಪ್ರಮಾಣ ಶೇ. 6ಕ್ಕೆ ತಲುಪಿದೆ.

* ಕಳೆದ ಸಮೀಕ್ಷೆಗೆ ಹೋಲಿಸಿದರೆ ಎಮ್ಮೆಗಳ ಪ್ರಮಾಣದಲ್ಲಿ ಶೇ. 1ರಷ್ಟು ಹೆಚ್ಚಳವಾಗಿದೆ. ಅವುಗಳ ಸಂಖ್ಯೆ 2019ರಲ್ಲಿ 109.85 ದಶಲಕ್ಷ ತಲುಪಿದೆ.

* ಹಾಗೆಯೇ ಹಾಲು ಕರೆಯುವ ಹಸು ಮತ್ತು ಎಮ್ಮೆಗಳ ಒಟ್ಟಾರೆ ಸಂಖ್ಯೆ 2019ರಲ್ಲಿ 125.34 ದಶಲಕ್ಷ ಇದ್ದು ಕಳೆದ ಸಮೀಕ್ಷೆಗೆ ಹೋಲಿಸಿದರೆ ಶೇ. 6.0ರಷ್ಟು ಏರಿಕೆಯಾಗಿದೆ.

* ಅದೇ ರೀತಿ 2019ರ ಸಮೀಕ್ಷೆಯಲ್ಲಿ ಕುರಿಗಳ ಸಂಖ್ಯೆ 74.26 ದಶಲಕ್ಷ (ಶೇ. 14ರಷ್ಟು ಹೆಚ್ಚಳ), ಮೇಕೆಗಳು 148.88 ದಶಲಕ್ಷ(ಶೇ. 10.1ರಷ್ಟು ಏರಿಕೆ), ಹಂದಿಗಳ ಸಂಖ್ಯೆ 2019ರಲ್ಲಿ 9.06 ದಶಲಕ್ಷ ಇದ್ದು ಶೇ.12.03ರಷ್ಟು ಇಳಿಕೆ ಕಂಡಿದೆ.

ಕೇಂದ್ರ ಸರಕಾರದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು 2019ರಲ್ಲಿ ಬಿಡುಗಡೆ ಮಾಡಿರುವ ಈ 20ನೇ ಜಾನುವಾರು ಗಣತಿ ಸಮೀಕ್ಷೆ ವರದಿಯು ಜನಗಣತಿ ನೀತಿ ನಿರೂಪಕರು ಮಾತ್ರವಲ್ಲದೆ ಕೃಷಿಕರು, ವ್ಯಾಪಾರಿಗಳು, ಉದ್ಯಮಿಗಳು, ಹೈನುಗಾರಿಕೆ ಉದ್ಯಮ ಮತ್ತು ಜನಸಾಮಾನ್ಯರ ತಿಳುವಳಿಕೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಆದರೆ ಜಾನುವಾರಗಳಲ್ಲಿ ಕಡಿಮೆಯಾಗುತ್ತಿ ರುವುದು ಕೆಲವರು ತಲೆಬುಡವಿಲ್ಲದೆ ಪ್ರಚಾರ ಮಾಡುತ್ತಿರುವಂತೆ ಪವಿತ್ರ ಗೋವುಗಳಲ್ಲ, ಬದಲಾಗಿ ಹಂದಿಗಳು! ಇಂತಹ ವಿಷಯಗಳಲ್ಲಿ ಜನಸಾಮಾನ್ಯರು ಶಾಸಕರು, ಮಂತ್ರಿಗಳು ಮತ್ತು ರಾಜಕಾರಣದಲ್ಲಿ ಸಕ್ರಿಯವಾಗಿರುವ ಎಲ್ಲರೂ ಕೇವಲ ಭಾವನಾತ್ಮಕವಾಗಿ ಯೋಚಿಸದೆ ಲಭ್ಯವಿರುವ ಸರಕಾರದ ವಿವಿಧ ಇಲಾಖೆಗಳ ಸಮೀಕ್ಷೆಗಳನ್ನು, ಅಧ್ಯಯನ ವರದಿಗಳನ್ನು ಸ್ವಲ್ಪಸಮಯ ಮತ್ತು ಗಮನವಿಟ್ಟು ಓದುವುದು ತುಂಬಾ ಅವಶ್ಯವಿದೆ.

Writer - ಕೆ. ಮಹಾಂತೇಶ, ಬೆಂಗಳೂರು

contributor

Editor - ಕೆ. ಮಹಾಂತೇಶ, ಬೆಂಗಳೂರು

contributor

Similar News