ಶನಿವಾರದಿಂದ ಖತರ್ ಜೊತೆಗಿನ ಗಡಿ ಮುಕ್ತ: ಯುಎಇ
ದುಬೈ (ಯುಎಇ), ಜ. 8: ಯುಎಇಯು ಶನಿವಾರದಿಂದ ಖತರ್ ಜೊತೆಗಿನ ಎಲ್ಲ ಆಕಾಶ, ನೆಲ ಮತ್ತು ಸಮುದ್ರ ಗಡಿಗಳನ್ನು ತೆರೆಯುವುದು ಎಂದು ದೇಶದ ಸರಕಾರಿ ಸುದ್ದಿ ಸಂಸ್ಥೆ ಡಬ್ಲ್ಯುಎಎಮ್ ಶುಕ್ರವಾರ ವರದಿ ಮಾಡಿದೆ.
2017 ಜೂನ್ 5ರಂದು ಹೊರಡಿಸಲಾದ ಹೇಳಿಕೆಯಲ್ಲಿ ಖತರ್ ವಿರುದ್ಧ ತೆಗೆದುಕೊಳ್ಳಲಾಗಿರುವ ಎಲ್ಲ ಕ್ರಮಗಳನ್ನು ಕೊನೆಗೊಳಿಸುವ ಪ್ರಕ್ರಿಯೆಯನ್ನು ಯುಎಇ ಆರಂಭಿಸುತ್ತದೆ ಎಂದು ಯುಎಇ ವಿದೇಶ ವ್ಯವಹಾರಗಳ ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿಯಾಗಿರುವ ಖಾಲಿದ್ ಅಬ್ದುಲ್ಲಾ ಹೇಳಿದ್ದಾರೆ.
ಒಳ ಬರಲು ಮತ್ತು ಹೊರ ಹೋಗುವುದಕ್ಕಾಗಿ ಖತರ್ ಜೊತೆಗಿನ ಎಲ್ಲ ಆಕಾಶ, ನೆಲ ಮತ್ತು ಸಮುದ್ರ ಗಡಿಗಳನ್ನು ಯುಎಇ ಮರು ತೆರೆಯುವುದು ಎಂದು ಅವರು ನುಡಿದರು.
ಖತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ 2017 ಜೂನ್ 16ರಂದು ಅದರೊಂದಿಗಿನ ಎಲ್ಲ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಸೌದಿಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳು ತಕ್ಷಣದಿಂದ ಜಾರಿಗೆ ಬರುವಂತೆ ಏಕಪಕ್ಷೀಯವಾಗಿ ಕಡಿದುಕೊಂಡಿದ್ದವು.