ಒಮಾನ್ ಶಿಲ್ಪಿ ಸುಲ್ತಾನ್ ಖಾಬುಸ್ ಸ್ಮರಣಾರ್ಥ ಕೊಂಕಣಿ ವೀಡಿಯೋ ಹಾಡು ಇಂದು ಬಿಡುಗಡೆ
ಒಮಾನ್: ‘ಒಮಾನ್’ ದೇಶವನ್ನು ಕಟ್ಟಿ ಬೆಳೆಸಿದ, ಭಾರತ ದೇಶದೊಂದಿಗೆ ಅಭೂತಪೂರ್ವ ಸ್ನೇಹ ಸಂಬಂಧ ಹೊಂದಿದ್ದ ಒಮಾನ್ ದೊರೆ ದಿ.ಸುಲ್ತಾನ್ ಖಾಬುಸ್ ಬಿನ್ ಸಯೀದ್ ಅಲ್ ಸಯೀದ್‌ರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಕ್ಲೆರೆನ್ಸ್ ಪಿಂಟೊ ಕೈಕಂಬ ಹಾಗೂ ಮಸ್ಕತ್‌ನಲ್ಲಿರುವ ಜೇನ್ ಐಡ ಪಾಯ್ಸ್ ಪಿಂಟೊ ಜೋಡಿ ರಚಿತ ‘ಅಮರ್ ತುಂ ಸುಲ್ತಾನ್ ಖಾಬುಸ್’ ಕೊಂಕಣಿಯಲ್ಲಿ ವೀಡಿಯೊ ಹಾಡು ಜ.10ರಂದು ಸಂಜೆ 6 ಗಂಟೆಗೆ (ಭಾರತೀಯ ಕಾಲಮಾನ) ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.
'ಅಮರ್ ತುಂ ಸುಲ್ತಾನ್ ಖಾಬುಸ್' ಕೊಂಕಣಿ ಭಾಷೆಯಲ್ಲಿಯ ಒಂದು ಭಾವನಾತ್ಮಕ ಹಾಡು. ಈ ಹಾಡಿಗೆ ಕೊಂಕಣಿಯ ಹೆಸರಾಂತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ರೋಶನ್ ಡಿಸೋಜ, ಆಂಜೆಲೊರ್ ಸಂಗೀತ ಸಂಯೋಜಿಸಿದ್ದಾರೆ. ಮಂಗಳೂರಿನ ಖ್ಯಾತ ವಿಡಿಯೋ ಎಡಿಟರ್ ನಾರಾಯಣ ರಾಜ್ ಈ ಹಾಡಿನ ವಿಡಿಯೋ ಮಾಡಿದ್ದಾರೆ. ಎಲ್ಲ ಭಾಷಿಕರಿಗೆ ಈ ಹಾಡಿನ ಅರ್ಥ ಪರಿಪೂರ್ಣವಾಗಿ ಸಿಗುಂತಾಗಲು ಹಾಡಿಗೆ ಇಂಗ್ಲಿಷ್ ಹಾಗೂ ಅರಬಿಕ್ ಸಬ್ ಟೈಟಲ್ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಸುಲ್ತಾನ್ ಖಾಬುಸ್ ಒಮಾನ್ ದೇಶದ ಪ್ರವಾಸೋದ್ಯಮಕ್ಕೆ ಹಾಗೂ ಇಲ್ಲಿನ ನೈಜ ಪರಿಸರಕ್ಕೆ ಬಹಳ ಒತ್ತು ಕೊಟ್ಟಿದ್ದರು. ಅದರಂತೆ ಈ ಹಾಡನ್ನು ಚಿತ್ರೀಕರಿಸುವಾಗ ಒಮಾನ್ ದೇಶದ ಪ್ರಕೃತಿ ಸೌಂದರ್ಯ ಚಾಚೂ ತಪ್ಪದ ಹಾಗೆ ಇರುವಂತೆ ನೋಡಿಕೊಳ್ಳಲಾಗಿದೆ.
2020ರ ಜನವರಿ 10ರಂದು ನಿಧನರಾದ ಸುಲ್ತಾನ್ ಖಾಬುಸ್ ಬಿನ್ ಸಯೀದ್ ಅಲ್ ಸಯೀದ್ ಒಬ್ಬ ಶ್ರೇಷ್ಠ ನಾಯಕ, ದಿಟ್ಟ ವ್ಯಕ್ತಿತ್ವ, ಚಾಣಾಕ್ಷ ಆಡಳಿತಗಾರ ಹಾಗೂ ಶಾಂತಿದೂತ ಈ ಎಲ್ಲಾ ಸದ್ಗುಣಗಳಿಂದಾಗಿ ಪ್ರಸಿದ್ಧರಾಗಿದ್ದರು. ಬಹಳ ಕ್ಲಿಷ್ಟ ಹಾಗೂ ಒತ್ತಡದ ಸಮಯದಲ್ಲಿ ಆಡಳಿತವನ್ನು ಹತೋಟಿಗೆ ತೆಗೆದುಕೊಂಡ ಇವರು ಒಮಾನ್ ದೇಶವನ್ನು ಸರ್ವತೋಮುಖ ಅಭಿವೃದ್ಧಿಪಡಿಸಿ ಶಾಂತಿಯ ನೆಲೆಯನ್ನಾಗಿ ಹಾಗೂ ಅಭಿವೃದ್ಧಿಯ ಧ್ಯೋತಕವನ್ನಾಗಿ ಮಾರ್ಪಡಿಸಿದ್ದರು.
ಐವತ್ತು ವರ್ಷಗಳ ತನ್ನ ಆಡಳಿತದಲ್ಲಿ ಒಬ್ಬಂಟಿಯಾಗಿ ದೇಶವನ್ನು ಒಂದು ಸಾಧಾರಣ ದೇಶದಿಂದ ಇಂದಿನ ಸಶಕ್ತ, ಸದೃಢ, ಶ್ರೀಮಂತ ರಾಷ್ಟ್ರವನ್ನಾಗಿ ಪ್ರಪಂಚದಲ್ಲಿ ಮನ್ನಣೆ ಸಿಗುವಂತೆ ಮಾಡಿರುವ ಶ್ರೇಯಸ್ಸು ಇವರಿಗೆ ಸಲ್ಲುವಂಥದ್ದು. ಇದಕ್ಕಾಗಿಯೇ ಒಮಾನಿಗಳು ಇವರನ್ನು ಪ್ರೀತಿ ಆದರದಿಂದ 'ಬಾಬಾ' ಎಂದು ಕರೆಯುತ್ತಾರೆ. 'ಬಾಬಾ' ಎಂದರೆ 'ಅಪ್ಪ ಎಂದರ್ಥ. ನಿಜವಾಗಿಯೂ ದೇಶವಾಸಿಗಳನ್ನು ಅವರು ತನ್ನ ಮಕ್ಕಳಂತೆ ನೋಡಿಕೊಂಡಿದ್ದರು. ಕೆಲಸ ನಿಮಿತ್ತ ಒಮಾನ್ ನಲ್ಲಿ ವಾಸಿಸಿರುವ ಇತರ ದೇಶಗಳ ಅನಿವಾಸಿ ಪ್ರಜೆಗಳನ್ನು ಬಹಳ ಆದರದಿಂದ ನೋಡಿಕೊಂಡು ಅವರ ಪಾಲಿನ ರಕ್ಷಕ ಹಾಗೂ ಹಿತೈಷಿಗಳೂ ಆಗಿದ್ದರು.
ಸುಲ್ತಾನರು ನಿಧನರಾಗಿ ಸರಿಯಾಗಿ ಒಂದು ವರ್ಷ ತರುವಾಯ ಬಿಡುಗಡೆಗೊಳಿಸಲಾಗುವ ಈ ವಿಡಿಯೋ ಅವರಿಗೆ ಅರ್ಪಿಸುವ ಶ್ರದ್ಧಾಂಜಲಿ ಎಂದು ಹಾಡಿನ ನಿರ್ಮಾಪಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
.