ಯುಎಇ : 10.88 ಲಕ್ಷ ಮಂದಿಗೆ ಕೋವಿಡ್ ಲಸಿಕೆ
ದುಬೈ,ಜ.17: ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 84,852 ಮಂದಿಗೆ ಕೋವಿಡ್ ಸೋಂಕು ನಿಯಂತ್ರಣ ಲಸಿಕೆ ನೀಡಲಾಗಿದೆಯೆಂದು ಯುಎಇ ಶನಿವಾರ ತಿಳಿಸಿದೆ.
ಇದರೊಂದಿಗೆ ಯುಎಇನಲ್ಲಿ ಈವರೆಗೆ ಕೋವಿಡ್ ಲಸಿಕೆ ಪಡೆದವರ ಸಂಖ್ಯೆ 10.88 ಲಕ್ಷಕ್ಕೆ ತಲುಪಿದೆಯೆಂದು ಆರೋಗ್ಯ ಹಾಗೂ ರೋಗ ತಡೆ ಸಚಿವಾಲಯ (ಎಂಓಎಚ್‌ಪಿ) ತಿಳಿಸಿದೆ. ದೇಶದಲ್ಲೀಗ ಪ್ರತಿ 100 ಮಂದಿಗೆ 19.03 ಮಂದಿ ಲಸಿಕೆಯನ್ನು ಪಡೆದುಕೊಂಡಂತಾಗಿದೆಯೆಂದು ಅದು ಹೇಳಿದೆ.
ಕೋವಿಡ್-19 ಸೋಂಕಿನ ವಿರುದ್ಧ ವೈದ್ಯಕೀಯವಾಗಿ ಅರ್ಹರಾದವರಿಗೆ ಲಸಿಕೆ ನೀಡಿಕೆಯ ಪ್ರಮಾಣದಲ್ಲಿ ಯುಎಇ ಜಗತ್ತಿನಲ್ಲೇ ನಂ.1 ಸ್ಥಾನದಲ್ಲಿದೆಯೆಂದು ಆರೋಗ್ಯಾಧಿಕಾರಿಗಳು ಶನಿವಾರ ಘೋಷಿಸಿದ್ದಾರೆ.
ಈ ಮಧ್ಯೆ ಅಬುಧಾಬಿಯಲ್ಲಿ, ಸಂದರ್ಶನ ವೀಸಾದ ಅವಧಿ ಮುಗಿದ ವ್ಯಕ್ತಿಗಳಿಗೂ ಸಿನೋಫಾರ್ಮ್ ಲಸಿಕೆಯನ್ನು ನೀಡಲು, ಅಲ್ಲಿನ ಭಾರತೀಯ ಸಂಘಕ್ಕೆ ಅನುಮತಿ ನೀಡಲಾಗಿದೆ. ವಾರಾಂತ್ಯದಲ್ಲಿ 12 ತಾಸುಗಳವರೆಗೆ ನಡೆದ ಲಸಿಕೆ ಅಭಿಯಾನದಲ್ಲಿ ಈವರೆಗೆ ಸಂದರ್ಶನ ವೀಸಾದ ಅವಧಿ ಮುಗಿದಿರುವ 50ಕ್ಕೂ ಅಧಿಕ ಮಂದಿ ಸೇರಿದಂತೆ ಸುಮಾರು 4,200 ಮಂದಿಗೆ ಲಸಿಕೆಯನ್ನು ಪಡೆದುಕೊಂಡಿದ್ದಾರೆಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಯುಎಇನ ವೈದ್ಯಕೀಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆಗೆ ಭಾರೀ ಬೇಡಿಕೆಯಿದ್ದು, ಹಲವಾರು ವಾರಗಳವರೆಗೆ ಲಸಿಕೆ ಆಕಾಂಕ್ಷಿಗಳು ವೇಟಿಂಗ್ ಲಿಸ್ಟ್‌ನಲ್ಲಿ ಇರುವುದಾಗಿ ಮೂಲಗಳು ತಿಳಿಸಿವೆ. ಮಾರ್ಚ್‌ವರೆಗೆ ಲಸಿಕೆಗಾಗಿ ಶೇ.100ರಷ್ಟು ಬುಕ್ಕಿಂಗ್ ಆಗಿರುವುದಾಗಿ ಕೆಲವು ಆರೋಗ್ಯಕೇಂದ್ರಗಳು ತಿಳಿಸಿವೆ.
ಆದಾಗ್ಯೂ ಗರ್ಭಿಣಿಯರು ಹಾಗೂ ಎದೆಹಾಲುಣಿಸುವ ತಾಯಂದಿರು ಹೆಚ್ಚಿನ ಅಧ್ಯಯನ ವರದಿಗಳು ಲಭ್ಯವಾಗುವವರೆಗೆ ಕೋವಿಡ್19 ಲಸಿಕೆ ಪಡೆಯದಂತೆ ಯುಎಇ ಕೆಲವು ವೈದ್ಯರು ಸಲಹೆ ನೀಡಿದ್ದಾರೆ.
ಯುಎಇನಲ್ಲಿ 3, 453 ಕೊರೋನ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿದ್ದು, ಐದು ಮಂದಿ ಸಾವನ್ನಪ್ಪಿದ್ದಾರೆಂದು ಆರೋಗ್ಯ ಹಾಗೂ ರೋಗ ನಿಯಂತ್ರಣ ಸಚಿವಾಲಯ ರವಿವಾರ ವರದಿ ಮಾಡಿದೆ. ದೇಶದಲ್ಲಿ ಈವರೆಗೆ ಒಟ್ಟು 2,53,261 ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 745 ಮಂದಿ ಅಸುನೀಗಿದ್ದಾರೆ ಹಾಗೂ ಒಟ್ಟು 2,25,374 ಮಂದಿ ಗುಣಮುಖರಾಗಿದ್ದಾರೆ.