ಯುಎಇ: ಭಾರತೀಯ ಪಾಸ್‌ಪೋರ್ಟ್ ನವೀಕರಣದ ಕೋವಿಡ್ ನಿರ್ಬಂಧ ತೆರವು
ಅಬುಧಾಬಿ (ಯುಎಇ), ಜ. 18: ವಾಯಿದೆ ಮುಗಿದ ಪಾಸ್‌ಪೋರ್ಟ್‌ಗಳ ನವೀಕರಣದ ಮೇಲೆ ವಿಧಿಸಲಾಗಿರುವ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ಇನ್ನು ಮುಂದೆ ಕೋವಿಡ್ ಪೂರ್ವದ ವಿಧಿವಿಧಾನಗಳು ಅನ್ವಯಿಸುತ್ತವೆ ಎಂದು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ ಪ್ರಕಟಿಸಿದೆ.
‘‘ಕೊರೋನ ವೈರಸ್ ಪೂರ್ವದ ದಿನಗಳಲ್ಲಿ ಮಾಡಿರುವಂತೆ, ಹಾಲಿ ಪಾಸ್‌ಪೋರ್ಟ್‌ನ ವಾಯಿದೆ ಮುಗಿಯುವ ಒಂದು ವರ್ಷದ ಮೊದಲು, ಪಾಸ್‌ಪೋರ್ಟ್‌ಗಳನ್ನು ನವೀಕರಿಸುವಂತೆ ಕೋರಿ ಅಬುಧಾಬಿಯಲ್ಲಿರುವ ಸಮೀಪದ ಬಿಎಲ್‌ಎಸ್ ಸೆಂಟರ್‌ಗಳಲ್ಲಿ ಜನರು ಅರ್ಜಿ ಸಲ್ಲಿಸಬಹುದಾಗಿದೆ’’ ಎಂದು ಇತ್ತೀಚೆಗೆ ನೀಡಿದ ಹೇಳಿಕೆಯೊಂದರಲ್ಲಿ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಆದರೆ, 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯರು, 12 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು, ಗರ್ಭಿಣಿಯರು ಮತ್ತು ಭಿನ್ನ ಸಾಮರ್ಥ್ಯದ ವ್ಯಕ್ತಿಗಳಿಗೆ ದೈಹಿಕ ಉಪಸ್ಥಿತಿಯಿಂದ ನೀಡಲಾಗಿರುವ ವಿನಾಯಿತಿಯು ಮುಂದಿನ ಸೂಚನೆಯವರೆತೆ ಮುಂದುವರಿಯುತ್ತದೆ. ಅವರ ಅರ್ಜಿಗಳನ್ನು ಕಂಪೆನಿಗಳ ಸಾರ್ವಜನಿಕ ಸಂಪರ್ಕ ಕಚೇರಿ (ಪಿಆರ್‌ಒ)ಗಳಿಂದಲೇ ಸ್ವೀಕರಿಸಲಾಗುವುದು ಎಂದು ಅದು ಹೇಳಿದೆ.
ಅಬುಧಾಬಿಯಲ್ಲಿ ಇನ್ನೊಂದು ಸೇವಾ ಕೇಂದ್ರ
ಭಾರತೀಯ ಪಾಸ್‌ಪೋರ್ಟ್ ಅರ್ಜಿಗಳನ್ನು ಸ್ವೀಕರಿಸಲು ಅಬುಧಾಬಿಯಲ್ಲಿ ಶೀಘ್ರವೇ ಇನ್ನೊಂದು ಸೇವಾ ಕೇಂದ್ರವೊಂದನ್ನು ತೆರೆಯಲಾಗುವುದು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಇದು ಯುಎಇ ರಾಜಧಾನಿ ಅಬುಧಾಬಿಯಲ್ಲಿ ಸ್ಥಾಪನೆಯಾಗಲಿರುವ ಮೂರನೇ ಬಿಎಲ್‌ಎಸ್ ಸೆಂಟರ್ ಆಗಿದೆ.
ನೂತನ ಬಿಎಲ್‌ಎಸ್ ಸೆಂಟರ್ ಅಬುಧಾಬಿ ಕಾರ್ಮಿಕ ನ್ಯಾಯಾಲಯದ ಹಿಂಭಾಗದಲ್ಲಿರುವ ಮುಸಾಫಾ ಕೈಗಾರಿಕಾ ಪ್ರದೇಶ (ಎಂ25)ದಲ್ಲಿ ಸ್ಥಾಪನೆಯಾಗಲಿದೆ.